Thursday, April 2, 2020

ಇದ್ದರೆ ಕಾಣಿಸಬೇಕಿತ್ತು (Iddare Kanisabekittu)

ಲೇಖಕರು: ಶ್ರೀಮತಿ ಮೈಥಿಲೀ ರಾಘವನ್ 
(ಪ್ರತಿಕ್ರಿಯಿಸಿರಿ lekhana@ayvm.in)


ಹಿಂದೊಮ್ಮೆ ಒಂದು ಪಟ್ಟಣ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಾಲರಾರೋಗ ಹರಡಿತ್ತು. ಹಳ್ಳಿಯ ಜನರಿಗೆ ಆರೋಗ್ಯದ ಬಗೆಗೆ ತಿಳಿವಳಿಕೆ ನೀಡಲು ವೈದ್ಯರೊಬ್ಬರು ಹಳ್ಳಿಗೆ ಬಂದರು. ಅಲ್ಲಿನ ಜನರನ್ನು ಕುರಿತು "ನೀವು ಉಪಯೋಗಿಸುತ್ತಿರುವ ಕೆರೆಯ ನೀರಿನಲ್ಲಿ ರೋಗಾಣುಗಳು ಹರಡಿವೆ. ಆದ್ದರಿಂದ ಈ ನೀರನ್ನು ಕುಡಿಯಬೇಡಿ" ಎಂದರು. ಕೆಲವರು ವೈದ್ಯರ ಮಾತನ್ನು ಒಪ್ಪಿದರು. ಆದರೆ ಒಬ್ಬ ವ್ಯಕ್ತಿ ಮಾತ್ರ ಪ್ರತಿಭಟಿಸಿದ "ರೋಗಾಣುಗಳು ಇರುವುದಾದರೆ ನಮ್ಮ ಕಣ್ಣಿಗೆ ಕಾಣಿಸಬೇಕಿತ್ತು. ಕೊನೆಯಪಕ್ಷ ಕುಡಿಯುವಾಗ ಗಂಟಲಿಗಾದರೂ ಸಿಕ್ಕಿಕೊಳ್ಳಬೇಕಿತ್ತು. ಹೀಗಿಲ್ಲದಿರುವುದರಿಂದ ನೀವು ಹೇಳುವುದನ್ನು ಒಪ್ಪಲಾಗುವುದಿಲ್ಲ" ಎಂದ. ವೈದ್ಯನು ರೋಗಾಣುಗಳು ಕಣ್ಣಿಗೆ ಕಾಣದಿರುವಷ್ಟು ಸಣ್ಣವೆಂಬುದನ್ನು ಪರಿಪರಿಯಾಗಿ ತಿಳಿಯಪಡಿಸಿದರೂ ಆತನು ಒಪ್ಪಲಿಲ್ಲ. ಕೊನೆಗೆ ವೈದ್ಯನು ಸ್ವಲ್ಪ ನೀರನ್ನು ತೆಗೆದುಕೊಂಡು ಆತನನ್ನು ಹತ್ತಿರದ ಪಟ್ಟಣಕ್ಕೆ ಕರೆದೊಯ್ದ. ಅಲ್ಲಿಯ ಪ್ರಯೋಗಶಾಲೆಯೊಂದರಲ್ಲಿ ಸೂಕ್ಷ್ಮದರ್ಶಕದ ಮೂಲಕ ಆ ನೀರಿನಲ್ಲಿದ್ದ ಕ್ರಿಮಿಗಳನ್ನು ಆತನಿಗೆ ತೋರಿಸಿದ. ಆಗ ನೀರಿನಲ್ಲಿ ನೂರಾರು ಕ್ರಿಮಿಗಳು ನರ್ತಿಸುವುದನ್ನು ಕಂಡ ಹಳ್ಳಿಗ ಮೂಖವಿಸ್ಮಿತನಾದ.

ಈ ಕಥೆಯ ಮೂಲಕ ಶ್ರೀರಂಗಮಹಾಗುರುಗಳು ಒಂದು ಪಾಠವನ್ನು ತಿಳಿಸಿದರು. ಮಹಾಗುರುಗಳು ನೀಡಿದ ವಿವರಣೆ - ಒಂದು ಗಾಜನ್ನು ಚೆನ್ನಾಗಿ ಉಜ್ಜಿ ಅದಕ್ಕೆ ಸೂಕ್ಷ್ಮದರ್ಶಕ(lens) ಆಗುವ ಯೋಗ್ಯತೆಯನ್ನು ಕೊಟ್ಟಾಗ (ಸೂಕ್ಷ್ಮದರ್ಶಕಯಂತ್ರದಲ್ಲಿನ)ಅದು ಸ್ಥೂಲದೃಷ್ಟಿಗೆ ಕಾಣದ ಅತಿಸೂಕ್ಷ್ಮವಸ್ತುಗಳನ್ನೂ ತೋರಿಸುತ್ತದೆ. ಅಂತೆಯೇ ನಮ್ಮ ಮನಸ್ಸಿಗೆ ಸುಸಂಸ್ಕಾರದಿಂದ ಹದಗೊಳಿಸಿದಾಗ ಅದು lensನಂತೆ ನಮ್ಮೊಳಗಿರುವ ಸೂಕ್ಷ್ಮಾತಿಸೂಕ್ಷ್ಮವಾದ ಪರಮಾತ್ಮನನ್ನು ತೋರಿಸಲು ಸಮರ್ಥವಾಗುತ್ತದೆ. ಹೀಗೆ ಹದಗೊಳಿಸುವಲ್ಲಿ ಮಹರ್ಷಿಗಳ ವಿದ್ಯಾಪದ್ಧತಿಯು ಅತ್ಯಂತ ಯಶಸ್ವಿಯಾಗಿದ್ದಿತು. ಶೈಶವದಲ್ಲಿ ಬ್ರಹ್ಮಚರ್ಯವನ್ನು ಸ್ವೀಕರಿಸಿ ಗುರುವಿನ ಬಳಿಸಾರಿ ಅಲ್ಲಿ ವೇದವಿದ್ಯಾಭ್ಯಾಸದಿಂದಲೂ ತಪಶ್ಚರ್ಯೆಗಳಿಂದಲೂ ಮನಸ್ಸನ್ನು ಪಕ್ವಗೊಳಿಸಿಕೊಂಡು ಒಳಬೆಳಗುವ ಪರಮಾತ್ಮನನ್ನು ಕಂಡು ನಲಿಯುತ್ತಿದ್ದರು. ನಂತರ ಗುರುವಿನ ಅದೇಶದಂತೆ ಗೃಹಸ್ಥಾಶ್ರಮವನ್ನು ಸ್ವೀಕರಿಸಿ ತಾವುಕಂಡ ಜ್ಞಾನವನ್ನು ಮುಂದೆ ಬೆಳೆಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದರು. ಇಂದು ಅಂತಹ ವಿದ್ಯಾಪದ್ಧತಿಯು ದೊರಕದಿದ್ದರೂ ಋಷಿಗಳಿಂದ ಅನುಗ್ರಹಿಸಲ್ಪಟ್ಟ ಸ್ತೋತ್ರಸಾಹಿತ್ಯಗಳು, ಪೂಜಾಕಾರ್ಯಗಳು ಮುಂತಾದವುಗಳನ್ನು ವಿಧಾನವರಿತು ಆಚರಿಸುವುದರಿಂದ ಮನಸ್ಸನ್ನು ಸುಸಂಸ್ಕೃತಗೋಳಿಸಬಹುದೆಂಬುದು ಜ್ಞಾನಿಗಳ ಆದೇಶ. ಆ ಆದೇಶವನ್ನು ಪಾಲಿಸಿ ಭಗವದನುಭವವನ್ನು ಪಡೆದು ನಲಿಯೋಣ.

ಸೂಚನೆ: 2/04/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.