Monday, April 13, 2020

ಯುಗಾದಿಯ ಶುಭ - ಆಶಯಗಳು (Ugadiya Subha - Ashayagalu)

ಲೇಖಕರು : ಡಾ. ಮೋಹನ್ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)



ಇಂದು ಚಾಂದ್ರಮಾನ ಯುಗಾದಿಯ ಹಬ್ಬ. ಶಾರ್ವರಿ ಹೊಸ ಸಂವತ್ಸರದ ನಾಂದಿ. ಪ್ರಕೃತಿಮಾತೆಯು ವಸಂತದ ಉತ್ಸವಕ್ಕಾಗಿ ಮುಡಿಹಾಸುತ್ತಿರುವಂಥಹ ಕಾಲ. ಲೋಕವೆಲ್ಲಾ ಹಸನಾದ ಚಿಗುರುಗಳಿಂದಲೂ ಪುಷ್ಪಗಳಿಂದಲೂ ತುಂಬಿ ತುಳುಕುತ್ತಿರುವ ಘಟ್ಟವಿದು. ಕಳೆದ ವರ್ಷದ ಕಷ್ಟ-ಕಾರ್ಪಣ್ಯಗಳನ್ನು  ಮರೆತು ಹೊಸ ವರ್ಷದ ಬೃಹತ್ಕಾರ್ಯಗಳಿಗೆ ನಡುವು ಬಿಗಿದು ಸಂಕಲ್ಪವನ್ನು ಕೈಗೊಳ್ಳುವ ಕಾಲವಿದು. ಜೀವನದ ಕಷ್ಟ-ಸುಖಗಳನ್ನು ಒಂದೇ ಸಮನಾಗಿ ಸ್ವೀಕರಿಸುತ್ತಾ ಬೇವು-ಬೆಲ್ಲಗಳನ್ನು ಸ್ವೀಕರಿಸುವ ದಿವಸವಿದು. 

ಕಾಲಪುರುಷನಿಗೆ ನಮನ
ಕಾಲಚಕ್ರವು ತಿರುಗುತ್ತಿರಲು ನಿರ್ದಿಷ್ಟ ಪರ್ವಕಾಲಗಳು  ಅಮೃತಸ್ರಾವ ಮಾಡುವ ಕಬ್ಬಿನ ಗಿಣ್ಣುಗಳಂತೆ ಎಂಬುದು ಸಂಸ್ಕೃತಿಯ ಅಂತರಾರ್ಥವನ್ನು ತಿಳಿದ ಮಹರ್ಷಿಗಳ ಅನುಭವ. ಕಾಲಕಾಲಕ್ಕೆ ಪರ್ವ-ಹಬ್ಬ ವೆಂಬೀ ಮಧುರಮಯವಾದ ರಸವನ್ನು ಜಿನುಗಿಸುವ ಕಾಲಪುರುಷನನ್ನು ಕೃತಜ್ಞತೆಯಿಂದ ಭಾವಿಸಿ ಪೂಜಿಸುವ ಹಬ್ಬ ಯುಗಾದಿ. ಜಗತ್ಸಂಹಾರಕ ಮಹಾಕಾಲ ರುದ್ರನೆಂಬುದು ಪ್ರಸಿದ್ಧ. ಆದರೆ ಇಲ್ಲಿ ಕಾಲಪುರುಷನೆಂದರೆ ಲಯದನಂತರ ಸೃಷ್ಟಿಯನ್ನು  ಕೈಗೊಳ್ಳುವ ಬ್ರಹ್ಮ- ಪ್ರಜಾಪತಿ. ಕಾಲಪುರುಷನು ನಮಗೆ ಕಾಣಿಸಿಕೊಳ್ಳುವುದು ತಿಥಿ, ವಾರ, ನಕ್ಷತ್ರ, ಯೋಗ, ಕರಣ, ಪಕ್ಷ, ಅಯನ, ಮಾಸ, ಸಂವತ್ಸರವೇ ಮುಂತಾದ ಅವಯವಗಳ ರೂಪದಲ್ಲಿ. ಈ ಅಂಗ-ಸಮೇತನಾದ ಕಾಲಪುರುಷನ ಅರಿವು, ಸ್ಮರಣೆಗಳನ್ನು ನಮಗೆ ಮಾಡಿಸಿಕೊಡಲು ಪಂಚಾಂಗ ಪಠನ-ಶ್ರವಣಗಳನ್ನು ಇಂದು ಕೈಗೊಳ್ಳುತ್ತೇವೆ. ಕಾಲವು ಈ ವರ್ಷದಲ್ಲಿ ಒದಗಿಸಲಿರುವ ಸೌಲಭ್ಯಗಳನ್ನು ಗಮನಿಸಿ ಗಾಳಿ ಬಂದಾಗ ತೂರಿಕೊಳ್ಳಲು ಯೋಜನೆಯನ್ನು ಹಾಕಿಕೊಳ್ಳುವ ಸಮಯವಿದು. ಆದರೆ ಪ್ರತಿವರ್ಷ ಜನವರಿ ಒಂದರಂದು ಹೊಸವರ್ಷದ " new year resolution" ಮಾಡುತ್ತೇವಲ್ಲ. ಯುಗಾದಿಯಂದು ತೆಗೆದುಕೊಳ್ಳುವ ಸಂಕಲ್ಪ ಅಂತಹದ್ದೇ ? ಎಂತಿರಬೇಕು ಸಂಕಲ್ಪ ? ಏನು ನಮ್ಮ ಕರ್ತವ್ಯ ?  "ಯುಗಾದಿ" ಎಂಬೀ ಹೆಸರಿನ ಹಬ್ಬದ ಹಿಂದಿರುವ ಮರ್ಮವೇನು ಎಂದು ವಿಚಾರಪರರಿಗೆ ಬರುವ ಈ ರೀತಿಯ ಪ್ರಶ್ನೆಗಳು ಅನೇಕವಾದರೂ ಉತ್ತರಗಳಿಗೆ ಬೀಗದಕೈ ಒಂದೇ - 'ಕಾಲ'. 

ಕಾಲಗಣನೆ - ಸೌರಮಾನ ಮತ್ತು ಚಾಂದ್ರಮಾನ 
ಭಾರತೀಯ ಕಾಲಗಣನೆಯು ಒಂದರೊಳಗೆ ಒಂದು ಬೆಸೆದುಕೊಂಡ ಅನೇಕ ಆವರ್ತಿಗಳಿಂದ ಕೂಡಿದೆ. ಹಗಲಿರುಳು ಸೇರಿದರೆ ಅಹೋರಾತ್ರವೆಂಬ ಒಂದು ಚಕ್ರ. ಅಂತೆಯೇ  ಪಕ್ಷ, ಮಾಸ, ವರ್ಷವೆಂಬ ಹದಿನೈದು, ಮೂವತ್ತು, ಮುನ್ನೂರ ಅರವತ್ತೈದು ಅಹೋರಾತ್ರಗಳ ಆವರ್ತಿಗಳುಂಟು. ಎರಡು ಮಾಸಗಳು ಕೂಡಿ ಒಂದು ಋತು, ಮೂರು ಋತುಗಳು ಕೂಡಿದರೊಂದು ಅಯನ. ದಕ್ಷಿಣಾಯಣ - ಉತ್ತರಾಯಣಗಳು ಕಳೆದರೆ ಒಂದುಸಂವತ್ಸರ. 

ಮಾಸ-ಸಂವತ್ಸರಗಳ  ಗಣನೆ ಇಬ್ಬಗೆಯಾಗಿರುತ್ತವೆ. ಭೂಮಿಯಸುತ್ತಲೂ ಚಂದ್ರನ ಒಂದು ಆವರ್ತಿಯ ಕಾಲ ಎರಡು ಪಕ್ಷಗಳು. ಎರಡೆರಡು ಪಕ್ಷಗಳಿಂದ ಕೂಡಿದ ಹನ್ನೆರಡು ಮಾಸಗಳು ಕೂಡಿ ಮುನ್ನೂರ ಅರವತ್ತು ದಿನಗಳ (ಅಹೋರಾತ್ರ) ಒಂದು ವರ್ಷ ಚಾಂದ್ರಮಾನದ ಲೆಕ್ಕದಲ್ಲಿ. ಅಂತೆಯೇ ಭೂಮಿಯು ಸೂರ್ಯನ ಸುತ್ತಲೂ ಪೂರೈಸುವ ಅವಧಿಯ ಲೆಕ್ಕವನ್ನು ತೆಗೆದುಕೊಂಡರೆ ಒಂದು ವರ್ಷದಲ್ಲಿ ಸುಮಾರು ಮುನ್ನೂರ ಅರವತ್ತೈದು ದಿನಗಳು. ಈ ಕಾಲಾವಧಿಯಲ್ಲಿ ಹನ್ನೆರಡನೆಯ ಒಂದು ಭಾಗ ಸೌರಮಾನದ ಪ್ರಕಾರವಾಗಿ ಒಂದು ಮಾಸವಾಗುತ್ತದೆ. ಚಾಂದ್ರಮಾನ ಮತ್ತು ಸೌರಮಾನಗಳ  ವರ್ಷದ ಅವಧಿಯಲ್ಲಿ ಸುಮಾರು ಐದು ದಿವಸಗಳ ವ್ಯತ್ಯಾಸವಿರುವುದರಿಂದ, ಅದನ್ನು ಸರಿಪಡಿಸುವುದಕ್ಕಾಗಿ ಅಧಿಕಮಾಸಗಳನ್ನು ಯೋಜಿಸಿರುವುದುಂಟು. ವರ್ಷಗಣನೆಗೆ ಎರಡು ಮಾನಗಳಿರುವುದರಿಂದ ವರ್ಷದಾರಂಭವನ್ನು ಸೂಚಿಸುವ ಯುಗಾದಿಯೂ ಸೌರಮಾನ ಮತ್ತು ಚಾಂದ್ರಮಾನವೆಂದು ಇಬ್ಬಗೆಯಾಗಿರುವುದುಂಟು. ಸೌರಮಾನ ಯುಗಾದಿಯನ್ನು ಚೈತ್ರ-ವಿಷು ಎಂದೂ ಕರೆಯುತ್ತಾರೆ. ವಿಷುವ ಎಂದರೆ ಹಗಲಿರುಳು ಸಮವಾಗಿರುವ ಕಾಲ. ಪ್ರಸ್ತುತ ನಾವು ಆಚರಿಸುತ್ತಿರುವುದು ಚಾಂದ್ರಮಾನದ ಯುಗಾದಿ.
ಒಂದು ಸಂವತ್ಸರವು ದೇವತೆಗಳ ಒಂದು ಅಹೋರಾತ್ರವೆಂದು ಹೇಳುತ್ತಾರೆ. ಉತ್ತರಾಯಣ ದೇವತೆಗಳ ಹಗಲೆಂದೂ, ದಕ್ಷಿಣಾಯನ ದೇವತೆಗಳ ರಾತ್ರಿ ಎಂದು ಹೇಳುವುದುಂಟು. ಆದ್ದರಿಂದ ಯುಗಾದಿಯ ಹಬ್ಬವು ದೇವತೆಗಳ ಸೂರ್ಯೋದಯವೆಂದು ಭಾವಿಸಬಹುದು. ಪಕ್ಷ-ಮಾಸ-ಸಂವತ್ಸರವೆಂಬ ಒಂದಕ್ಕಿಂತೊಂದು ಹಿರಿದಾದ ಕಾಲಾವಧಿಗಳು ಇರುವಂತೆ ಸಂವತ್ಸರ-ದೇವವತ್ಸರ-ಯುಗ-ಚತುರ್ಯುಗ-ಮನ್ವಂತರ-ಕಲ್ಪ ಎಂಬ ದೀರ್ಘ ಕಾಲಾವಧಿಗಳುಂಟು. ಕೃತ, ತ್ರೇತಾ, ದ್ವಾಪರ ಮತ್ತು ಕಲಿ ಎಂಬ ನಾಲಕ್ಕು ಯುಗಗಳು ಸೇರಿದರೆ ಒಂದು ಚತುರ್ಯುಗ. ದೇವತೆಗಳು, ಮನು, ಸಪ್ತರ್ಷಿಗಳ ಕಾರ್ಯವ್ಯಾಪ್ತಿ ಒಂದು ಮನ್ವಂತರವೆಂದು ಹೇಳುತ್ತವೆ ಪುರಾಣಗಳು. ಅಂತೆಯೇ ಕಲ್ಪವೆಂಬುದು ಬ್ರಹ್ಮನ ಒಂದು ಹಗಲಿರುಳು. 

ಸೃಷ್ಟಿಯಲ್ಲಿ ದ್ವಂದ್ವಗಳು - ಅಂತರಾರ್ಥ
ಹಗಲಿರುಳುಗಳು ಸೂರ್ಯನು ನಮ್ಮ ದೇಶದಲ್ಲಿ ಸಕ್ರಿಯ-ಗುಪ್ತವಾಗಿರುವ ಕಾಲಗಳು. ಶುಕ್ಲ-ಕೃಷ್ಣ ಪಕ್ಷಗಳು ಚಂದ್ರನು ವೃದ್ಧಿ-ಕ್ಷಯ ಹೊಂದುವ ಕಾಲ. ಅಂತೆಯೇ ಸೂರ್ಯನು ಉತ್ತರ-ದಕ್ಷಿಣಗಳಿಗೆ ಚಲಿಸುವ ಅಯನಗಳುಂಟು. ಉತ್ತರಾಯಣ-ದಕ್ಷಿಣಾಯನಗಳು ದೇವತೆಗಳ ಹಗಲು-ರಾತ್ರಿಗಳು. ವಸಂತದಿಂದ ಮೂರು ಋತುಗಳು ಉಷ್ಣಪ್ರಧಾನ. ಶರದೃತುವಿನಿಂದ ಮೂರು ಋತುಗಳು ಶೀತಪ್ರಧಾನ. ಒಟ್ಟಾರೆ ನೋಡುವುದಾದರೆ  ಎಚ್ಚರ-ನಿದ್ರೆ , ಹಗಲು-ಇರುಳು , ಮೇಲೆ-ಕೆಳಗೆ , ಉತ್ತರ-ದಕ್ಷಿಣ, ಹಿಗ್ಗುವುದು - ತಗ್ಗುವುದು, ಶೀತ-ಉಷ್ಣ ಎಂಬ ದ್ವಂದ್ವಗಳು ಸೂರ್ಯ, ಚಂದ್ರಾದಿ  ಸೃಷ್ಟಿ-ತತ್ತ್ವಗಳ ಏರಿಳಿತವನ್ನು ದರ್ಶಿಸುತ್ತಿವೆ. ಇವು ಪ್ರತ್ಯಕ್ಷವಾಗಿ ಖಗೋಳದಲ್ಲಿ ಕಾಣುವ ಸತ್ಯಗಳಾದರೂ ಇವು ಸೂಕ್ಷ್ಮವಾಗಿ ನಮ್ಮ ಶರೀರ-ಪ್ರಕೃತಿಯಮೇಲೆ ಆಗುತ್ತಿರುವ ಪರಿಣಾಮಗಳ ಸೂಚಕಗಳೂ ಹೌದು. ನಮ್ಮ ಶರೀರದಲ್ಲಿ ಹಗಲು ಇಂದ್ರಿಯ ಪಾಟವ, ರಾತ್ರಿಯು ತಮದ ಜಡತ್ತ್ವ ಆವರಿಸುವ ಕಾಲ. ಒಂದು ದಿನದಲ್ಲಿ ನಿಯಮೇಣ   ಪ್ರಾಣಸಂಚಾರವು ಇಡಾ-ಪಿಂಗಳಾ ನಾಡಿಗಳಲ್ಲಿ ಪರ್ಯಾಯವಾಗಿ ಪ್ರಾಧಾನ್ಯವನ್ನು ಹೊಂದುತ್ತವೆ. ಶುಕ್ಲ ಪಕ್ಷವು ಇಹ-ಪರ ಒಳಿತಿಗಾಗಿ ಮಾಡುವ ಮಂಗಲಕಾರ್ಯಗಳಿಗೆ ಪ್ರಶಸ್ತ. ಉತ್ತರಾಯಣ ದೇವತಾ ಶಕ್ತಿಗಳು ಸಕ್ರಿಯವಾಗಿ ಯಜ್ಞಾದಿ ಮಂಗಳ ಕರ್ಮಗಳನ್ನು ಫಲಿಸುವಂತೆ ಮಾಡುವ ಕಾಲ. ದಕ್ಷಿಣಾಯಣ ಅವರ ಶಕ್ತಿಗಳು ನಿಷ್ಕ್ರಿಯವಾಗಿರುವ ಕಾಲ. ಅದು ಪಿತೃದೇವತೆಗಳ ಪೂಜೆ ಕೈಗೊಳ್ಳುವ ಕಾಲ.

ದ್ವಂದ್ವಗಳ ಯೋಗ - ಸಂಧಿ ಕಾಲ 
ದ್ವಂದ್ವಗಳು ಒಂದಾದಮೇಲೊಂದು ಪರ್ಯಾಯವಾಗಿ ಬಂದರೆ ಆಗ ವೃತ್ತ ಪೂರ್ಣವಾಗುತ್ತವೆ. ಈ ದ್ವಂದ್ವಗಳ ಸಂಧಿಕಾಲವು ಪೂಜೆ-ಧ್ಯಾನ-ತಪಗಳಿಗೆ ಪವಿತ್ರವಾದ ಕಾಲಗಳೆಂದು ಮಹರ್ಷಿಗಳ ಅನುಭವವು ತಿಳಿಸುತ್ತದೆ. ಹಗಲಿರುಳುಗಳ ಸಂಧಿ ಪ್ರಾತಸ್ಸಾಯಂ ಸಂಧ್ಯೆಗಳು. ಪೂಜೆ ಆಹ್ನಿಕಗಳನ್ನು ಮಾಡುವ ಪವಿತ್ರಸಮಯ. ಈ ಸಮಯಗಳಲ್ಲಿ ಪ್ರಾಣಶಕ್ತಿಯು ಇಡಾ-ಪಿಂಗಳಾ ನಡುವೆ ಪರ್ಯಾಯವಾಗುವ ಸಮಯವಾಗಿದ್ದು, ಮಧ್ಯದಲ್ಲಿನ ಸುಷುಮ್ನಾ ನಾಡಿಯಲ್ಲಿ ಪ್ರವೇಶಿಸುತ್ತವೆ. ಆದ ಕಾರಣ ಇವು ಯೋಗಸಾಧನೆಗೆ ಪ್ರಶಸ್ತ ಕಾಲವಾಗುವುದು. ಪಕ್ಷಗಳ ಸಂಧಿ ಅಮಾವಾಸ್ಯೆ ಹುಣ್ಣಿಮೆಗಳು. ಸಂಕ್ರಮಣವು ಮಾಸಗಳ ಸಂಧಿ. ದಕ್ಷಿಣಾಯಣ ಮತ್ತು ಉತ್ತರಾಯಣ ಪುಣ್ಯಕಾಲಗಳು ಅಯನಗಳ ಸಂಧಿ. ಶರತ್ - ವಸಂತ ಋತುಗಳ ಪ್ರಾರಂಭ ಶೀತೋಷ್ಣಕಾಲಗಳ ಸಂಧಿ. ಯುಗಾದಿ ಪರ್ವವು ವರ್ಷಗಳ ಸಂಧಿ. 'ಯುಗ' ಎಂಬ ಪದವು ದ್ವಂದ್ವಗಳ ಯೋಗವನ್ನು ಸೂಚಿಸುತ್ತದೆ. ಒಂದುಗೂಡಿಸುವುದು, ಸೇರಿಸುವುದು ಎಂಬರ್ಥ ಕೊಡುತ್ತದೆ. ಆದ್ದರಿಂದ ಯುಗಾದಿ ಪರ್ವವು ಒಂದು ಅದ್ಭುತವಾದ ಪ್ರಾಕೃತಿಕ ಯೋಗವನ್ನು ಸಾರುತ್ತಿದೆ. ಇದು ಪುರುಷ-ಪ್ರಕೃತಿ ಎಂಬ ಎರಡು ತತ್ತ್ವಗಳ ಯೋಗ. ಭೌತಿಕವಾಗಿ ತೆಗೆದುಕೊಂಡರೆ ಈ ಯೋಗದಿಂದ ಸೃಷ್ಟಿ ವಿಸ್ತಾರ, ಪ್ರಜೋತ್ಪತ್ತಿ ಉಂಟಾಗುತ್ತದೆ. ಆಧ್ಯಾತ್ಮಿಕವಾಗಿ ನೋಡಿದರೆ, ಪುರುಷ ಪ್ರಕೃತಿಗಳ ಯೋಗದಿಂದ ಸಮಾಧಿ ಸಾಮ್ರಾಜ್ಯದ ಸಿದ್ಧಿ. ಪೂಜೆ ವ್ರತಾದಿಗಳಿಂದ ಸಂಪತ್ತು- ಸಮೃದ್ಧಿಗಳನ್ನು ಹೊಂದಿಸಿಕೊಳ್ಳುವ ಕಾಲವೂ ಆಗಿದೆ. ಅಂತೆಯೇ ಒಳಮುಖವಾಗಿ ಸಾಗಿ ಅಂತರ್ದರ್ಶನವನ್ನು ಮಾಡಿಕೊಳ್ಳುವ ಕಾಲವೂ ಆಗಿದೆ. 

ಬೇವು ಬೆಲ್ಲ          
ಈ ಸಂಧಿಕಾಲದಲ್ಲಿ ಬೇವು -ಬೆಲ್ಲದ ಸ್ವೀಕಾರ ತುಂಬಾ ಪ್ರಸಕ್ತವಾಗಿದೆ. ಹೇಗೆ ಹಗಲಿರುಳು, ಉಷ್ಣ -ಶೀತಗಳು , ಸಮವಾಗಿವೆಯೋ  ಅಂತೆಯೇ ಸುಖ-ದುಃಖಗಳನ್ನು ಸಮವಾಗಿ ಸ್ವೀಕರಿಸುವ ಸಂಕಲ್ಪ ಇಲ್ಲಿದೆ. ಇಂತಹ ಪ್ರವೃತ್ತಿಯು ಸಿದ್ಧಪುರುಷನ ಲಕ್ಷಣವಾಗಿದೆ. ಬೇವಿನ ಚಿಗುರೆಲೆಯ ಹೂವು , ಬೆಲ್ಲ , ಮೆಣಸು , ಉಪ್ಪು , ಜೀರಿಗೆ, ಇಂಗು , ಓಮಕ್ಕಿಗಳನ್ನು ಸೇರಿಸಿ ಕುಟ್ಟಿ  ಒಗ್ಗೂಡಿಸಿ ಸ್ವೀಕರಿಸಬೇಕೆಂದು ಶಾಸ್ತ್ರಗಳು ಹೇಳುತ್ತವೆ. ಇಲ್ಲಿ ಅನೇಕ ರಸಗಳೂ ಸೇರಿರುತ್ತವೆ. ಆಯುರ್ವೇದದ ದೃಷ್ಟಿಯಿಂದ ಇದು ತ್ರಿಗುಣಗಳ ಸಾಮ್ಯವನ್ನು ಮಾಡಿಸುತ್ತದೆ ಎಂದು ಹೇಳುತ್ತಾರೆ. ತ್ರಿಗುಣ ಸಾಮ್ಯವು ಆಯುರಾರೋಗ್ಯವನ್ನೂ ಆಧ್ಯಾತ್ಮಿಕ ಒಳಿತನ್ನೂ ಸಾಧಿಸಿಕೊಡುತ್ತದೆ. ವಿಶೇಷವಾಗಿ ಬೇವು ಸೃಷ್ಟಿಕರ್ತನಾದ ಪ್ರಜಾಪತಿಯನ್ನು ಓಲೈಸುವ ದ್ರವ್ಯವೆಂದು ಯೋಗಿವರೇಣ್ಯರ ಮಾತು.  


ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಾಚ ।
ಸರ್ವಾರಿಷ್ಟವಿನಾಶಾಯ ನಿಂಬಕದಳ ಭಕ್ಷಣಮ್  ।।

(ನೂರುವರ್ಷಗಳ ಆಯುಷ್ಯ, ಸದೃಢ ಅರೋಗ್ಯ , ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲಾರಿಷ್ಟ ನಿವಾರಣೆಗಾಗಿಯೂ ಬೇವು-ಬೆಲ್ಲ ಸೇವನೆ ಮಾಡುತ್ತೇನೆ ) ಎಂದು ಹೇಳಿ ಸೇವಿಸಬೇಕು.

ಯುಗದ ಆದಿ - ಮತ್ಸ್ಯಾವತಾರದ ಕಥೆ
ಯುಗಾದಿ ಎಂಬ ಪದವು ನೇರವಾಗಿ ಕೊಡುವ ಅರ್ಥವೆಂದರೆ 'ಯುಗದ ಆದಿ'. ಯುಗಾದಿಯು ಪ್ರಜಾಪತಿ-ಬ್ರಹ್ಮನು ಸೃಷ್ಟಿಕಾರ್ಯವನ್ನು ಪ್ರಾರಂಭಿಸಿದ ಸಮಯವೆಂದು ಪುರಾಣಗಳು ಹೇಳುತ್ತವೆ. ಯುಗದ ಆದಿಯಲ್ಲಿರುವ ಕೃತಯುಗದ  ಕಾಲಧರ್ಮವು ಅಂಶತಃ ಈ ಸಮಯದಲ್ಲಿ ವ್ಯಾಪಿಸಿರುತ್ತದೆ ಎಂಬ ಭಾವ. ಯುಗದ ಆದಿಯನ್ನು ಇತಿಹಾಸ-ಪುರಾಣಗಳಲ್ಲಿ ಸವಿವರವಾಗಿ ವರ್ಣಿಸಿದ್ದಾರೆ. ಅದರಲ್ಲಿ ಪ್ರಮುಖವಾದ ಒಂದು ಕಥೆಯೆಂದರೆ ಮತ್ಸ್ಯಾವತಾರದ ಕಥೆ. ಈ ಕಥೆಯು ಅನೇಕ ಪುರಾಣಗಳಲ್ಲಿ ಹೇಳಲ್ಪಟ್ಟಿದೆ. ಇಲ್ಲಿ ನಾವು ಶ್ರೀಮದ್ಭಾಗವತದಲ್ಲಿ ಹೇಳಿರುವಂತಹ ಕಥಾನಕವನ್ನು ಆಲಿಸೋಣ.

ಹಿಂದಿನ ಕಲ್ಪಾನ್ತದಲ್ಲಿ ನಡೆದ ಕಥೆಯಿದು. ದ್ರಾವಿಡ ದೇಶದ ರಾಜ ಸತ್ಯವ್ರತ ಅತ್ಯಂತ ಧರ್ಮಿಷ್ಠನೂ ಸಮರ್ಥನೂ ಆಗಿದ್ದ. ಅವನೊಮ್ಮೆ ಕೃತಮಾಲಾ  ನದಿಯಲ್ಲಿ ಆಹ್ನಿಕಾದಿಗಳನ್ನು ಮಾಡುತ್ತಿದ್ದನು. ಬೊಗಸೆ ನೀರು ತೆಗೆದುಕೊಂಡಾಗ, ಅಂಗೈಯಲ್ಲಿ ಒಂದು ಸಣ್ಣ ಮೀನು ಕಾಣಿಸಿಕೊಂಡಿತು. ನೀರಲ್ಲಿ ಬಿಡುವ ಪ್ರಯತ್ನ ಮಾಡಿದಾಗ "ರಾಜನ್, ನನ್ನನ್ನು ಕಾಪಾಡು, ಬಿಡಬೇಡ " ಎಂದಿತು. ಕರುಣಾಳುವಾದ ರಾಜನು ಅದನ್ನು ತನ್ನ ಕಮಂಡಲದಲ್ಲಿ ಇರಿಸಿಕೊಂಡನು. ಒಂದೇ ರಾತ್ರೆಯಲ್ಲಿ ಅದು ಹಿಗ್ಗಿ ಕಮಂಡಲದಲ್ಲಿ ಜಾಗವೇ ಇಲ್ಲದಂತಾಯಿತು. ಆಶ್ಚರ್ಯಚಕಿತನಾದ ಸತ್ಯವ್ರತ ಮೀನನ್ನು ಮತ್ತೊಂದು ದೊಡ್ಡ ಪಾತ್ರೆಗೆ ಸೇರಿಸಿದ. ದಿನೇದಿನೇ ಬೆಳೆಯುತ್ತಲೇ ಇದ್ದ ಆ ಮತ್ಸ್ಯವನ್ನು  ರಾಜಾ ಕ್ರಮಶಃ ದೊಡ್ಡದೊಡ್ಡ ಪಾತ್ರೆಗಳಿಗೆ ಹಾಕುತ್ತಾ ಬಂದ. ಕೊನೆಯಲ್ಲಿ ಸರೋವರ, ನದಿಗಳೂ ಮತ್ಸ್ಯದ ಗಾತ್ರಕ್ಕೆ ಸಾಲದಂತಾದವು. ಆಗ ಸತ್ಯವ್ರತ ಮತ್ಸ್ಯವನ್ನು ಸಮುದ್ರಕ್ಕೆ ಕರೆದೊಯ್ದನು. ಆಗ ಮತ್ತೆ ಮತ್ಸ್ಯವು "ರಾಜನ್ ! ನನ್ನನ್ನು ಬಿಟ್ಟು ಹೋಗಬೇಡ, ಇಲ್ಲಿ ತಿಮಿಂಗಿಲಗಳು ನನ್ನನ್ನು ನುಂಗಿಬಿಡುತ್ತವೆ" ಎಂದಿತು. ಆಗ ರಾಜನು ನಮಸ್ಕರಿಸಿ "ಬೃಹದಾಕಾರವಾಗಿ ಕ್ಷಣಮಾತ್ರದಲ್ಲಿ ಬೆಳೆವ ನೀನು ಸಾಮಾನ್ಯ ಮತ್ಸ್ಯವಲ್ಲ. ನೀನು ಸಾಕ್ಷಾತ್ ಭಗವಾನ್ ನಾರಾಯಣನೇ ಹೌದು. ನನ್ನನ್ನು ಅನುಗ್ರಹಿಸು !" ಎಂದ. ಸುಪ್ರೀತನಾದ ಮತ್ಸ್ಯರೂಪೀ ಮಹಾವಿಷ್ಣು ಸತ್ಯವ್ರತನಿಗೆ ಗಂಭೀರವಾದ ಸೂಚನೆಯೊಂದನ್ನು ತಿಳಿಸಿದ. "ಇಂದಿನಿಂದ ಏಳನೆಯ ದಿನವು ಪ್ರಳಯದ ಆಗಮನವಾಗುವುದು. ಸಮುದ್ರಗಳು ಉಕ್ಕಿ ಮೂರು ಲೋಕಗಳನ್ನೂ ನುಂಗಿಬಿಡುತ್ತವೆ. ಆ ಸಮಯಕ್ಕೆ ಸರಿಯಾಗಿ ನೀನು ಭುವಿಯಲ್ಲಿರುವ ಶ್ರೇಷ್ಷ್ಠವಾದ ವೃಕ್ಷ ವನಸ್ಪತಿಗಳ ಬೀಜವನ್ನು ಶೇಖರಿಸಿ, ಸಪ್ತರ್ಷಿಗಳ ಜೊತೆಗೂಡಿ ಸಮುದ್ರತೀರಕ್ಕೆ ಬರುವಂತಾಗಲಿ ". ಸತ್ಯವ್ರತನು ನಮಸ್ಕರಿಸಿ ಭಗವದಾಜ್ಞೆಯನ್ನು ಶಿರಸಾವಹಿಸಿ ಅಂತೆಯೇ ನಿರ್ವಹಿಸಿದನು. ಏಳನೆಯ ದಿನ ಮೋಡಗಳು ಗರ್ಜಿಸಲಾರಂಭಿಸಿದವು. ಧಾರಾಕಾರವಾದ ಮಳೆ ಮೇಲಿಂದ ಆವರಿಸುತ್ತಿದ್ದಂತೆಯೇ ಭೋರ್ಗರೆಯುತ್ತಿರುವ ಘೋಷದೊಂದಿಗೆ ಸಮುದ್ರವು ಭೂಮಿಯನ್ನು ನುಂಗಲಾರಂಭಿಸಿತು. ಆಗ ಒಂದು ವಿಶಾಲವೂ ಭವ್ಯವೂ ಆದ ನೌಕೆಯೊಂದು ಕಾಣಿಸಿಕೊಂಡಿತು. ಅಲ್ಲಿ ಸತ್ಯವ್ರತ ಮತ್ತು ಸಂಗಡಿಗರು ನೌಕೆಯನ್ನು ಹತ್ತುತ್ತಿರುವಾಗ ಮತ್ಸ್ಯರೂಪೀ ಮಹಾವಿಷ್ಣು ಅಲ್ಲಿ ಆಗಮಿಸಿದನು. ಈಗ ಆ ಮತ್ಸ್ಯವು ಸುವರ್ಣಮಯವಾದ ಒಂದು ತೇಜಸ್ಸಿನಿಂದ ಕೂಡಿದ್ದು ಒಂದು ಕೊಂಬನ್ನೂ ಹೊಂದಿದ್ದನು. ನಾರಾಯಣನ ಆಣತಿಯಂತೆ ಒಂದು ಮಹಾಸರ್ಪದಿಂದ ನೌಕೆಯನ್ನು ಮತ್ಸ್ಯದ ಶೃಂಗಕ್ಕೆ ಬಂಧಿಸಲಾಯಿತು. ಆಗ ಬ್ರಹ್ಮರಾತ್ರಿ ಎಂದು ಕರೆಯಲ್ಪಡುವ ಆ ದೀರ್ಘ ಪ್ರಳಯಕಾಲದ ವರೆವಿಗೂ ಮತ್ಸ್ಯವು ನೌಕೆಯ ಸಾರಥ್ಯವನ್ನು ಮಾಡುತ್ತಾ ಪ್ರಳಯಜಲದಲ್ಲಿ ಲೀಲಾಜಾಲವಾಗಿ ವಿಹರಿಸಿತು. ನಾಲ್ಕೂ ದಿಕ್ಕುಗಳು, ಆಕಾಶ, ಭೂಮಿ ಎಲ್ಲವೂ ಭಯಂಕರವಾದ ನೀರಿನ ರಭಸದಿಂದ ಆವರಿಸಿರುವಾಗ, ಎಲ್ಲೆಡೆ ಕತ್ತಲೆ ಕವಿದಿದ್ದಾಗ, ಸತ್ಯವ್ರತ ನಿರ್ಲಿಪ್ತನಾಗಿದ್ದ. ಸಪ್ತರ್ಷಿಗಳ ಸತ್ತ್ವವೇ ಸಂಗಡ, ಹಿರಣ್ಮಯ ಮತ್ಸ್ಯದ ಹೊಂಗಿರಣದಲ್ಲಿ ಅಭಿಷಿಕ್ತನಾಗಿ ರಾರಾಜಿಸುತ್ತಿದ್ದ. ಆಗ ಸತ್ಯವ್ರತನ ಪ್ರಾರ್ಥನೆಯ ಮೇರೆಗೆ ನಾರಾಯಣನು ಅವರಿಗೆ ಜ್ಞಾನದ ಸಾರವನ್ನು ಬೋಧಿಸಿದನು. ಬ್ರಹ್ಮನ ರಾತ್ರಿಯು ಕಳೆಯುತ್ತಲೇ ಪುನಃ ನೀರು ಹಿಂದೆ ಸರಿದು ಬೆಳಗಾಯಿತು. ಅಲ್ಲಿಂದ ಬ್ರಹ್ಮನ ಸೃಷ್ಟಿಯು ಪುನಃ ಪ್ರಾರಂಭವಾಯಿತು. 

ಸತ್ಯವ್ರತ ದಡಸೇರಿ ಬೀಜಗಳನ್ನು ಬಿತ್ತಿ ಸಪ್ತರ್ಷಿಗಳ ಮಾರ್ಗದರ್ಶನದಲ್ಲಿ ವೈವಸ್ವತ ಮನುವಾಗಿ ಭೂಮಿಯಲ್ಲಿ ಸೃಷ್ಟಿಕಾರ್ಯವನ್ನು ಪುನಃ ಪ್ರಾರಂಭಿಸಿದನು. ಆದರೆ ಒಂದು ಸಮಸ್ಯೆ ಇನ್ನ ಉಳಿದಿತ್ತು. ಬ್ರಹ್ಮನು ರಾತ್ರಿ  ಆಕಳಿಸಿದಾಗ ವೇದಗಳು ಅವನ ಬಾಯಿನಿಂದ ತಪ್ಪಿಸಿಕೊಂಡವು. ಅವನ್ನು ಒಬ್ಬ ರಾಕ್ಷಸನು ಕದ್ದುಕೊಂಡುಹೋಗಿದ್ದನು. ಸೃಷ್ಟಿ ಪುನಃ ಪ್ರಾರಂಭಿಸಿದೊಡನೆಯೇ ಮತ್ಸ್ಯವು ಆ ರಾಕ್ಷಸನೊಡನೆ ಯುದ್ಧಮಾಡಿ ವೇದಗಳನ್ನು ಪುನಃ ಪಡೆದು ಸತ್ಯವ್ರತನಿಗೆ ಒಪ್ಪಿಸಿತು.

ಯುಗಾದಿಯ ತಾತ್ವಿಕ ಭೂಮಿಕೆ
ಮತ್ಸ್ಯಾವತಾರದ ಕಥೆಯು ಯುಗದ ಆದಿಯ ತಾತ್ತ್ವಿಕ ಭೂಮಿಕೆಯನ್ನು ಸ್ಪಷ್ಟಪಡಿಸುತ್ತದೆ. ಇಡೀ ಲೋಕವೇ ಪ್ರಳಯದಲ್ಲಿ ಮುಳುಗುವಾಗ ಉಳಿಯುವವನೊಬ್ಬನೇ - ಸತ್ಯವ್ರತ. ಸತ್ಯವನ್ನೇ ವ್ರತವನ್ನಾಗಿ ಹೊಂದಿದವನು.  ಇರುವುದನ್ನು ಅಂತೆಯೇ ಗ್ರಹಿಸಿ ಹೇಳುವುದು ಸತ್ಯ ಎಂಬುದು ವ್ಯವಹಾರ. ಹಗ್ಗವನ್ನು ಹಾವೆಂದು ಭ್ರಮಿಸಿದರೆ ಅವನು ಗ್ರಹಿಸಿದ್ದೇ ಸುಳ್ಳು. ಸರಿಯಾಗಿ ಗ್ರಹಿಸಿದರೂ ಕುಚೋದ್ಯಕ್ಕಾಗಿ ಹಾವೆಂದರೂ ಸುಳ್ಳು. ಅಂತೆಯೇ ಈ ಜಗತ್ತಿನ ಸಾರ ಪರಬ್ರಹ್ಮವಸ್ತು ಎಂಬುದನ್ನು ಅರಿತು ಅಂತೆಯೇ ನುಡಿಯುವವನೇ ಸತ್ಯವಾಕ್. ಇದೇ ಜಗತ್ತಿನ ಧ್ರುವ, ಸತ್ಯ. ಉಳಿದೆಲ್ಲ ಸತ್ಯಗಳೂ ಅಂಶತಃ ಸತ್ಯಗಳಷ್ಟೇ. ಅಂತಹ ಸತ್ಯವ್ರತನೇ ಮುಂದಿನ ಕೃತಯಾಗಾದಿಯ ಬೀಜಾವಾಪನ ಮಾಡಬಲ್ಲ. 

ಲಯ-ಪ್ರಳಯ ಎಂದರೆ ಎಲ್ಲವೂ ಲೀನವಾಗಿರುವುದು. ಒಂದು ಬೀಜದಲ್ಲಿ ಇಡೀ ವೃಕ್ಷವೇ ಸೇರಿಹೋಗಿದೆ. ಅದು ಲಯ. ಕಾಲವಿಶೇಷದಲ್ಲಿ ಬೀಜವು ಸೂಕ್ತ ಕ್ಷೇತ್ರದಲ್ಲಿ ಸೇರಿದಾಗ ಅಲ್ಲಿಂದ ಪುನಃ ಸೃಷ್ಟಿಯ ಪ್ರಾರಂಭ. ಸೃಷ್ಟಿಯಲ್ಲಿರುವ ಎಲ್ಲ ಶ್ರೇಷ್ಠವಾದ ವೃಕ್ಷ-ವನಸ್ಪತಿಗಳ ಬೀಜಗಳನ್ನು ಸತ್ಯವ್ರತ ಶೇಖರಿಸಿ ಮುಂದಿನ ಕೃತ ಯುಗಾದಿಯಲ್ಲಿ ಬೆಳೆಸುತ್ತಾನೆ. ಲಯ ಎಂಬುದು ಪ್ರಾಕೃತಿಕವಾಗಿ ಬರಬಹುದು ಅಥವಾ ತಾತ್ವಿಕವಾದ ಸಂಗತಿಯಾಗಬಹುದು. ಪ್ರಳಯದ ನೀರಿನಲ್ಲಿ ಸಮಸ್ತ ಭೂತಗಳೂ ಲೋಕಗಳೂ ಲಯಹೊಂದುತ್ತವೆ. 

ನಮ್ಮೊಲ್ಲೇ  ನೋಡಿದರೆ ಇಂತಹ ಲಯ ಕಾಲಕಾಲಕ್ಕೆ ಬರುವುದುಂಟು. ನಾವು ಹಗಲಾದಂತೆಯೇ ಕಾರ್ಯಪ್ರವೃತ್ತರಾಗುತ್ತೇವೆ. ಜ್ಞಾನೇಂದ್ರಿಯಗಳಿಂದ ಲೋಕಸಮಾಚಾರವನ್ನು ಗ್ರಹಿಸಿ, ಮನಸ್ಸು-ಬುದ್ಧಿಗಳಿಂದ ಆಲೋಚಿಸಿ, ಕರ್ಮೇಂದ್ರಿಯಗಳಿಂದ ಕಾರ್ಯ ಜರುಗಿಸುತ್ತೇವೆ. ರಾತ್ರೆ ಈ ಎಲ್ಲ ಇಂದ್ರಿಯಗಳನ್ನು ಮುದುರಿಸಿಕೊಂಡು ನಿದ್ರೆಯ ತೆಕ್ಕೆಯಲ್ಲಿ ಮಲಗುತ್ತೇವೆ. ರಾತ್ರೆ ನಿದ್ರಿಸುವಾಗ ನಮ್ಮ ಇಂದ್ರಿಯಗಳು ಕೆಲಸಮಾಡುವುದಿಲ್ಲ. ಕಿವಿ ಕೇಳುವುದಿಲ್ಲ, ಕಣ್ಣು ನೋಡುವುದಿಲ್ಲ. ಎಲ್ಲವೂ ಕತ್ತಲೆಯಲ್ಲಿ ಮುಳುಗಿಹೋಗಿರುತ್ತವೆ. ಜಡತ್ತ್ವವನ್ನು ಹೊಂದುವ ಲಯವಿದು. ದೈನಂದಿನ ಲಯವಿದು. ಪ್ರತಿವರ್ಷವೂ ಎಲೆ-ಹಣ್ಣು ಮುಂತಾದ ಅವಯವಗಳನ್ನು ಕಳೆದುಕೊಂಡು ಶಿಶಿರಋತುವಿನಲ್ಲಿ ಹೊಂದುವ ಲಯವುಂಟು. ವಸಂತ ಬಂದಕೂಡಲೇ ಸೃಷ್ಟಿ ಪುನಃ ಪ್ರಾರಂಭ. ಶರೀರದ ಕೊನೆಯಲ್ಲೂ ಲಯವುಂಟು. ಹುಟ್ಟಿನ ಸೃಷ್ಟಿಯುಂಟು. ಅಂತೆಯೇ ಯುಗ, ಮನ್ವಂತರ, ಕಲ್ಪದ ಅಂತ್ಯದಲ್ಲಿ ಬರುವ ಲಯವುಂಟು. ಅನಂತರ ಸೃಷ್ಟಿ. ಈ ಸೃಷ್ಟಿ-ಸ್ಥಿತಿ-ಲಯದ ಚಕ್ರಗಳು ಪ್ರಕೃತಿಯಲ್ಲಿ ಸಹಜ. 

ಆದರೆ ಸತ್ಯವ್ರತನಂತಹ ಧರ್ಮಿಷ್ಠರಿಗೆ, ಜ್ಞಾನಿಗಳಿಗೆ ಮತ್ತೊಂದು ರೀತಿಯ ಲಯ ಉಂಟು. ಅದು ಧ್ಯಾನ ಸಮಾಧಿ. ಅಲ್ಲೂ ಇಂದ್ರಿಯಗಳು, ಮನಸ್ಸು ಬುದ್ಧಿಗಳು ಯಾವುವೂ ಕೆಲಸ ಮಾಡುವುದಿಲ್ಲ. ಆದರೆ ಅಲ್ಲಿ ನಿದ್ರೆಯ ಭಾರವಾದ ಜಾಢ್ಯವಿಲ್ಲ. ಸತ್ತ್ವದಿಂದ ಕೂಡಿದ ಒಂದು ಲಾಘವ, ಸಂತೋಷವನ್ನು ಒಳಗಿಂದ ಅನುಭವಿಸುತ್ತಾರೆ. ಸುವರ್ಣಮಯವಾದ ಜ್ಯೋತಿಯಲ್ಲಿ ಲಯಹೊಂದಿ ಅವರ್ಣನೀಯವಾದ ಆನಂದವನ್ನು ಹೊಂದುತ್ತಾರೆ. ಸತ್ಯವ್ರತನ ನೌಕೆ ಅಂತಹ ಜ್ಞಾನಿಯ ಶರೀರ. ಸತ್ಯವ್ರತನೇ ಶುದ್ಧವಾದ ಆತ್ಮನು.  ಸುವರ್ಣಮಯವಾದ ಜ್ಯೋತಿಯಲ್ಲಿ ಲೀನವಾದ ಪಂಚೇಂದ್ರಿಯಗಳು - ಮನಸ್ಸು - ಬುದ್ಧಿಗಳೇ ಸಪ್ತರ್ಷಿಗಳು. ಮತ್ಸ್ಯವೇ ಪರಮಾತ್ಮ. ಮತ್ಸ್ಯವು ನೀರಿನ ಹರಿವೆಯನ್ನು ಎದುರಿಸಿ ಈಜುವಂತೆ, ಆ ಭಗವಂತನ ಅವತಾರಗಳು ಪ್ರಕೃತಿಯಲ್ಲಿಳಿದರೂ ಪ್ರಕೃತಿಗೆ ವಿಮುಖವಾಗಿ ಮೂಲದ ಕಡೆಗೆ ಈಜುತ್ತವೆ. ಇಂತಹ ದಿವ್ಯವಾದ ಶರೀರ-ಹಡಗು ಮತ್ಸ್ಯರೂಪಿಯಾದ ಪರಮಾತ್ಮನೊಡನೆ ಮಹಾಸರ್ಪದ ಮೂಲಕ ಕಟ್ಟಲ್ಪಟ್ಟಿದೆ. ಯೋಗಸಾಧನೆಯಲ್ಲಿ ಪ್ರಕೃತಿ ಪುರುಷರ ಸಂಯೋಗವನ್ನು ಉಂಟುಮಾಡುವ ಕುಂಡಲಿನಿ ಸರ್ಪವಿದು. ಈಕೆಯನ್ನು ಕಾಳಸರ್ಪಿಣಿ ಎಂದೂ ಕರೆಯುತ್ತಾರೆ.  ಬೇರೆಲ್ಲಾ ಜೀವಿಗಳೂ ಭವಸಾಗರದಲ್ಲಿ ಮುಳುಗಿದ್ದಾಗ ಸತ್ಯವ್ರತನೊಬ್ಬನೇ ಎಚ್ಚರವಾಗಿದ್ದಾನೆ. ಸುತ್ತಲೂ ಅಲೆಗಳ ಆರ್ಭಟ ಅಲ್ಲೋಲ-ಕಲ್ಲೋಲ ಇದ್ದರೂ ಅವನು ನಿರ್ಲಿಪ್ತನಾಗಿಯೂ ಸಮಾಹಿತ ಮನಸ್ಕನಾಗಿಯೂ ಇದ್ದಾನೆ. ಎಲ್ಲರೂ ರಾತ್ರಿಯ ಕತ್ತಲೆಯಲ್ಲಿ ಮುಳುಗಿದ್ದಾಗ ಸತ್ಯವ್ರತನ ಪಾಲಿಗೆ ಅದು ಪರಬ್ರಹ್ಮ ರಾತ್ರಿ. ಜ್ಞಾನಸೂರ್ಯನು ಬೆಳಗುವ ಸುವರ್ಣಮಯ ರಾತ್ರಿ. ರಾತ್ರಿಯೂ ಕಳೆದು ಹಗಲಾಗುವುದೆಂದರೆ ಜ್ಞಾನಿಯು ಸಮಾಧಿಯಿಂದ ಈ ಲೋಕಕ್ಕೆ ಎಚ್ಚರಗೊಳ್ಳುವುದು. ಅಂತಹ ಜ್ಞಾನಿಯು ಪರಬ್ರಹ್ಮ ಭಾವದಲ್ಲಿ ಮುಳುಗೆದ್ದು ಬರುವುದರಿಂದ ಅವನ ನಡೆ, ನುಡಿ, ದೃಷ್ಟಿಗಳಲ್ಲಿ ಬ್ರಹ್ಮಾನುಭವದ ಕಂಪು ಕಂಡುಬರುತ್ತದೆ. ಆ ಪರಬ್ರಹ್ಮ ಬೀಜವನ್ನು ಈ ಲೋಕದಲ್ಲಿ ಬಿತ್ತರಿಸಿ ಬೆಳೆಸುತ್ತಾನೆ. ಈತನ ರಾಜ್ಯದಲ್ಲಿ ಪ್ರಜೆಗಳು ಆದರ್ಶವಾದ ಆತ್ಮಗುಣಗಳಿಂದ ಕೂಡಿರುತ್ತಾರೆ. ಬ್ರಹ್ಮಭಾವದ ಪ್ರಾಪ್ತಿಗೆ ಯಾವ ಅಡ್ಡಿಯೂ ಉಂಟಾಗದಂತೆ ಇಹಲೋಕದಲ್ಲಿ ಬಾಳುವುದೇ ಜೀವನಸೂತ್ರವಾಗಿತ್ತು. ಎಲ್ಲೆಡೆ ಸಹಜತೆ ಇದ್ದಕಾರಣ ಪ್ರಕೃತಿಯೂ ಶುದ್ಧವಾಗಿತ್ತು. ಕ್ಷಾಮವಿಲ್ಲ, ಬರವಿಲ್ಲ, ಭಯವಿಲ್ಲ, ಕಾಮ-ಕ್ರೋಧ-ಮತ್ಸರಗಳಿಲ್ಲ. ಜನರು ಇಂದ್ರಿಯಗಳ ತುಷ್ಟಿಯನ್ನು ಹೊಂದುವಂತೆಯೇ, ಯಥೇಚ್ಛವಾಗಿ ಅಂತರಂಗದಲ್ಲಿ ಮುಳುಗಿ ಸಮಾಧಿಸ್ಥರಾಗಬಲ್ಲರಾಗಿದ್ದರು. ಇದೇ ಸತ್ಯಯುಗ. ವೇದವು ಪ್ರತಿಪಾದಿಸುವ ಧರ್ಮರಾಷ್ಟ್ರವಿದು. ವೇದಗಳನ್ನು ದಾನವನಿಂದ  ಹಿಂತಂದು ಸತ್ಯವ್ರತನ ಕೈಗೆ ಒಪ್ಪಿಸಿದ ಮತ್ಸ್ಯಾವತಾರದ ಸಂಗತಿಯ ಒಳ ಅರ್ಥವಿದು. ಇದೇ ಯುಗಾದಿಯ ಆದರ್ಶ. 

ಯುಗ ಧರ್ಮ
ಸತ್ಯಯುಗದ ಲಕ್ಷಣಗಳನ್ನು ವಿವರಿಸುತ್ತಾ ಮಹಾಭಾರತವು ಹೀಗೆ ಹೇಳುತ್ತದೆ. ಅದು ಯುಗದ ಆದಿ, ಕೃತ ಯುಗಾದಿ ಅಥವಾ ಸತ್ಯ ಯುಗಾದಿ. ಆಗತಾನೇ ಬ್ರಹ್ಮನಿಂದ ಕೃತವಾಗಿತ್ತು ಈ ಜಗತ್ತು. ಆದ್ದರಿಂದ ಅದು ಕೃತಯುಗ. ಸತ್ಯಪರತೆಯ ಪರಾಕಾಷ್ಠೆಯದು, ಆದ್ದರಿಂದ ಸತ್ಯಯುಗವೆಂದು ಹೆಸರೂ ಉಂಟು. ಜನರು ನಿರ್ಲಿಪ್ತವಾಗಿ ಧ್ಯಾನ, ತಪದಲ್ಲಿ ನಿರತರಾಗಿದ್ದರು, ಅದರಿಂದಲೇ ಯೋಗದ ತುತ್ತತುದಿಯಾದ ಬ್ರಹ್ಮಾನುಭವವನ್ನು ಪಡೆಯುತ್ತಿದ್ದರು. ವ್ರತ, ಹೋಮ ಯಜ್ಞಗಳ ಅವಶ್ಯಕತೆಯೇ ಇರಲಿಲ್ಲ. ಕಾಮ-ಕ್ರೋಧಾದಿ ಅವಗುಣಗಳು ಅಲ್ಲಿಲ್ಲವಾಗಿದ್ದವು. ಜೀವನಕ್ಕೆ ಬೇಕಾದ ಅಲ್ಪಸ್ವಲ್ಪ ದ್ರವ್ಯಗಳನ್ನು ಪಡೆದು ತೃಪ್ತರಾಗಿದ್ದರು. ತ್ರೇತಾಯುಗ ಪ್ರಾರಂಭಿಸುತ್ತಿದ್ದಂತೆಯೇ ಸದಾಕಾಲ ಕೇವಲ ತಪದಲ್ಲೇ ಇರುವುದು ಅಸಾಧ್ಯವಾಯಿತು. ರಜೋಗುಣ ಜನರನ್ನು ಹೆಚ್ಚು ಕಾರ್ಯಪ್ರವೃತ್ತರನ್ನಾಗಿ ಮಾಡಿಸಿತು. ಆದರೆ ಧ್ಯೇಯ ಮಾತ್ರ ಬದಲಾಗಲಿಲ್ಲ. ಯಜ್ಞ ಯಾಗಾದಿ ಅನುಷ್ಠಾನಗಳನ್ನು  ಯೋಜಿಸಲಾಯಿತು. ಇದರಿಂದ ಕರ್ಮೇಂದ್ರಿಯಗಳಿಗೆ ಕೆಲಸವೂ ಆಯಿತು, ಕರ್ಮದಿಂದ ಯೋಗಸಿದ್ಧಿಯೂ ಇತ್ತು.  ದ್ವಾಪರಯುಗದಲ್ಲಿ ಕಾಮಕ್ರೋಧಗಳಿಂದ ಕೂಡಿದವರಾಗಿ ಧರ್ಮಮಾರ್ಗದಿಂದ ವಿಚಲಿತರಾಗ ತೊಡಗಿದರು. ವ್ಯಾಧಿಗಳು ಹೆಚ್ಚುತ್ತಿತ್ತು. ವೇದಗಳ ಅಧ್ಯಯನ ಅಸಾಧ್ಯವಾಗಿ ಅಂಶವನ್ನು ಮಾತ್ರ ಗ್ರಹಿಸಬಲ್ಲರಾಗಿದ್ದರು. ದ್ವಾಪರದಲ್ಲಿ ಪೂಜೆ-ಅರ್ಚನೆಗಳು ಹೆಚ್ಚು ಫಲಕಾರಿಯೆಂದು ಕೆಲವು ಪುರಾಣಗಳು ಹೇಳುತ್ತವೆ.

"ಕಲಿಯುಗದಲ್ಲಿ ಸ್ಥಿತಿ ಶೋಚನೀಯ. ಸತ್ಯ-ಧರ್ಮಗಳನ್ನು ನಿರ್ಲಕ್ಷಿಸಿ ವರ್ತಿಸುತ್ತಾರೆ ಜನರು. ತಾಮಸ ಪ್ರವೃತ್ತಿಗಳು ತಾಂಡವವಾಡುತ್ತವೆ". 

ಕೃತದಿಂದ ಪ್ರಾರಂಭಿಸಿ ಮಾನವನ ಪತನ, ಅಧರ್ಮ ಹೆಚ್ಚುವಿಕೆ ಆಗುತ್ತಿದ್ದರೂ, ಕಾಲ-ಕಾಲಕ್ಕೆ ರಾಮ-ಕೃಷ್ಣಾದಿ ಮಹಾಪುರುಷರು, ಅವತಾರಪುರುಷರು ಆವಿರ್ಭವಿಸಿ ಧರ್ಮವನ್ನು ಎತ್ತಿಹಿಡಿಯುತ್ತಾರೆ. ಇದೂ ಸೃಷ್ಟಿಯ ನಿಯಮ ಹೌದು. ತಪದಲ್ಲಿ ರುಚಿಗೆಟ್ಟರೆ ಯಜ್ಞವನ್ನು ಯೋಜಿಸಿದರು. ಜನರ ರುಚಿ ಬದಲಾದಂತೆ ಹೊಸಪರಿಸ್ಥಿತಿಯಲ್ಲೂ ಹಳೆಯ ಗುರಿಸಾಧಿಸುವ ಯುಕ್ತಿಗಳನ್ನು ವಿದ್ಯೆ-ಕಲೆಗಳ ರೂಪದಲ್ಲಿ ತಂದರು ಋಷಿ-ಮುನಿಗಳು. ಜ್ಞಾನ, ಕರ್ಮ, ಭಕ್ತಿ, ಇತಿಹಾಸ, ಪುರಾಣ, ಕಾವ್ಯ, ನೃತ್ಯ, ಸಂಗೀತ, ಯೋಗ, ತಂತ್ರ, ಮಂತ್ರ, ಜಪ ಮುಂತಾದ ಅಸಂಖ್ಯಾತ ವಿದ್ಯೆಗಳು ಈ ಭಾರತಭೂಮಿಯಲ್ಲಿ ರೂಪಿತವಾದವು. ಧರ್ಮ, ಮೋಕ್ಷಗಳಿಗೆ ಅಡ್ಡಿ ಆಗದಂತೆ ಅರ್ಥಕಾಮಗಳನ್ನು ಅನುಭವಿಸುವ ಸಮಾಜ ಮತ್ತು ರಾಜ್ಯ ವ್ಯವಸ್ಥೆಯನ್ನು ಜ್ಞಾನ-ವಿಜ್ಞಾನಗಳ ಮೂಲಕ ತಂದುಕೊಟ್ಟರು. ಆದ್ದರಿಂದ ಸತ್ಯವ್ರತನಂತಹ ಜನರು ಕೆಲವರೇ ಉಳಿದರೂ ಕೂಡ ಸತ್ಯಬೀಜ ಅವರಹತ್ತಿರ ಇರುವುದರಿಂದ, ಕೃತವನ್ನು ಪುನಃ ತರಲು ಸಾಧ್ಯವಾಗುತ್ತದೆ. ಕಲಿಕೆಡಿಸಿತೆಂದು ವ್ಯಥೆಪಡಬೇಕಾಗಿಲ್ಲ. ಅಂತಹ ಕೃತ ಯಾಗಿದಿಯನ್ನು ಪುನಃ ಸಾಧಿಸುವ ಸಂಕಲ್ಪವನ್ನೂ, ಆ ನಿಟ್ಟಿನಲ್ಲಿ ಪರಿಶ್ರಮವನ್ನೂ ಅವಶ್ಯವಾಗಿ ಮಾಡತಕ್ಕದ್ದು. ಇದೇ  ಯುಗಾದಿಯ ಶ್ರೇಷ್ಠ ಸಂಕಲ್ಪ.

ಯುಗಾದಿಗೆ ಒಂದು ಸಂಕಲ್ಪ    
ಇಂದಿನ ಪರಿಸ್ಥಿತಿಯಲ್ಲಿ ಆ ಕೃತಯುಗವು ಮತ್ತೆ ಬರುವಂತೆ  ಮಾಡುವುದು ಹೇಗೆ ಎಂದರೆ, ಒಂದೇ ಉತ್ತರ 'ಸತ್ಯವ್ರತರು ಸತ್ಯನಿಷ್ಠರ ಸಂಖ್ಯೆ ಬೆಳೆಯ ಬೇಕು'. ಋಷಿಗಳ  ಅಂತರ್ದರ್ಶನ ನಾಡಿನಲ್ಲಿ ಬೆಳೆಯಬೇಕು. ಸಿದ್ಧಿಗೆ ಸಾಮಗ್ರಿಯಾದ ಶಮ, ದಮ, ತಪಗಳು ಕೂಡಿಬರಬೇಕು. ಭಾರತೀಯ ವಿದ್ಯೆಕಲೆಗಳು  ನಿಜವಾದ ಅರ್ಥದಲ್ಲಿ ವಿಜೃಂಭಿಸಬೇಕು. ಸತ್ಯಬೀಜದ ಬೆಳೆಯನ್ನು ಬೆಳೆಸಿ ಉಳಿಸುವುದಕ್ಕೆ ವ್ಯಕ್ತಿ-ಸಮಾಜ-ರಾಷ್ಟ್ರಗಳು ಬದ್ಧಕಂಕಣರಾಗಬೇಕು. ಬೆಳೆಯುತ್ತಿರುವ ಧರ್ಮದ ಅಂಕುರಗಳಿಗೆ ನೀರೆರೆದು ಬೇಲಿಕಟ್ಟಿ ಕಾಯುವ ಧರ್ಮರಕ್ಷಕರೂ ಬೇಕು.  ಇದಷ್ಟೂ ಸತ್ಯವಾಗಬೇಕಾದರೆ ಮೊದಲನೆಯ ಹೆಜ್ಜೆಯಾಗಿ ಭಾರತೀಯವಾದ ಒಂದು ಶಿಕ್ಷಣ ಪದ್ಧತಿಯ ನಿರ್ಮಾಣವಾಗಬೇಕು. ಶಾಲಾ ಕಾಲೇಜಿಗೆ ಹೋದರೂ ಮನದಲ್ಲಿ ಋಷ್ಯಾಶ್ರಮದ ಕಾಲ ದೇಶವನ್ನು ಮುಟ್ಟಬೇಕು. ಎ-ಬಿ-ಸಿ ಯ ಅಬ್ಬರವಿದ್ದರೂ ಭಾರತೀಯ ಕಲೆಯ ಬಳ್ಳಿಯು ಹಬ್ಬಬೇಕು. ಕೃತಯುಗಾದಿಯ ಬೀಜಾವಾಪನ ಮಾಡುವುದೇ ಜೀವನದ ಗುರಿಯಾಗಿ ಹೊಂದಿದ್ದ ಅಷ್ಟಾಂಗಯೋಗ ವಿಜ್ಞಾನಮಂದಿರದ ಅಧ್ಯಕ್ಷರಾದ ಶ್ರೀರಂಗಮಹಾಗುರುಗಳ ಒಂದು ಪದ್ಯದೊಂದಿಗೆ ಯುಗಾದಿಯ ಶುಭಾಶಯ-ಸಂಕಲ್ಪಗಳನ್ನು ಹಂಚಿಕೊಳ್ಳುತ್ತಿದ್ದೇವೆ.

ಕಲೆಯ ಪೆಣ್ಣಿಗೆ ರಂಗದೆಡೆಯಿದು 
ಸಲೆ ನಲಿವುದಕೆ, ಸಿರಿಗೆ ವಸಿಸಲು
ನೆಲೆಯ ಮನೆಯಿದು ವೇದ ಧರ್ಮದ ಮೊಳಕೆಗಳು ಬೆಳೆದು । 

ಫಲಿಸುವುದಕಿದು ಮೇಣ್ ಶಮದಮದ
ಮಲ ಶಾಂತಿಗೆ ಬೀಡೆನಿಸಿ ಮೆರೆದ
ಲಲಿತ ಭಾರತ ಮರಳಿ ಬೆಳಗಲಿ ಸಗ್ಗಕೆಣೆಯಾಗಿ ।। 

ಈ ಶಾರ್ವರಿ ಸಂವತ್ಸರದ ಯುಗಾದಿಯನ್ನು 'ಕೃತಯುಗದೆಡೆಗೆ ಹೆಜ್ಜೆಯಿಡಬೇಕು, ಅದಕ್ಕಾಗಿ ಶ್ರಮಿಸಬೇಕು' ಎನ್ನುವ ಸತ್ಯಸಂಕಲ್ಪದೊಂದಿಗೆ ಪ್ರಾರಂಭಿಸಿ, ಆ ಸಂಕಲ್ಪವು ಸಫಲವಾಗಲು ಕಾಲಾತೀತನಾದ ಪರಮಾತ್ಮನನ್ನು ಪೂಜಿಸೋಣ.