Tuesday, April 7, 2020

ತ್ರಿಪುರಾಸುರ ಸಂಹಾರದ ಅಂತರಾರ್ಥ (Tripurasura Samharada Antarartha)

ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)ತ್ರಿಪುರಾಸುರ ಸಂಹಾರದ ಪುರಾಣದ ಕಥೆ ಬಹಳ ಪ್ರಸಿದ್ಧ. ಅಸುರರ ಶಿಲ್ಪಿ ಮಯನು ಅಸುರರಿಗಾಗಿ ಮೂರು ಅದ್ಭುತವಾದ ನಗರಗಳನ್ನು ನಿರ್ಮಿಸಿ ಕೊಡುತ್ತಾನೆ. ಚಿನ್ನ, ಬೆಳ್ಳಿ, ಕಬ್ಬಿಣದ ನಗರಗಳು. ವಿಶೇಷವೆಂದರೆ ಅವು ಬೇರೆಯವರ ಕಣ್ಣಿಗೆ ಕಾಣದೇ ತಮಗೆ ಬೇಕಾದೆಡೆಗೆ ಸಕಲ ಭೋಗ ಭಾಗ್ಯಗಳೊಡನೆ ಸಂಚರಿಸಬಲ್ಲ ಸಂಚಾರಿ ನಗರಗಳು. ಸಮಾನಾಂತರದಲ್ಲಿ ಬಂದಾಗ ಮಾತ್ರ ನಾಶಮಾಡಲು ಸಾಧ್ಯ ಎನ್ನುವ ವರ ಬೇರೆ. ಈ ಅಸುರರು ವಾಸ್ತವವಾಗಿ ಶಿವಭಕ್ತರು. ಆದರೂ ತಮಗೆ ಸಿಕ್ಕಿದ ವರದಿಂದ ಮದೋನ್ಮತ್ತರಾಗಿ ಈ ನಗರಗಳನ್ನು ಬಳಸಿ ತಮ್ಮ ಮನಸೋ ಇಚ್ಛೆ ಸಂಚರಿಸುತ್ತಾ ದೇವತೆಗಳ ಲೋಕಗಳನ್ನೆಲ್ಲಾ ನಾಶಮಾಡತೊಡಗಿದರು. ದೇವತೆಗಳು ಬೇರೆ ದಾರಿ ಕಾಣದೇ ಪರಶಿವನನ್ನು ಮೊರೆಹೋದರು. ಶಿವನು ಬ್ರಹ್ಮ, ವಿಷ್ಣು ಮತ್ತು ಇತರ ದೇವತೆಗಳ ಸಹಾಯದಿಂದ ರಥವನ್ನೇರಿ ಆ ನಗರಗಳು ಸಮಾನಾಂತರದಲ್ಲಿ ಬಂದಾಗ ಬಾಣವನ್ನು ಹೂಡಿ ಧ್ವಂಸಗೊಳಿಸುತ್ತಾನೆ. ಹೀಗೆ ತ್ರಿಪುರಗಳನ್ನು ಅಲ್ಲಿನ ಅಸುರರನ್ನು ಸಂಹರಿಸಿದ್ದರಿಂದ ಅವನು ತ್ರಿಪುರಾರಿ ಎನ್ನಿಸಿಕೊಳ್ಳುತ್ತಾನೆ.
ಶ್ರೀರಂಗಮಹಾಗುರುಗಳು ಹೇಳುವಂತೆ ಇದೊಂದು ತತ್ತ್ವಮಯವಾದ ಕಥೆ. ನಮ್ಮೊಳಗೇ ಇರುವ ಸತ್ತ್ವಗುಣ, ರಜೋಗುಣ ಮತ್ತು ತಮೋಗುಣಗಳೇ ತ್ರಿಪುರಗಳು. ಅವು ನಮ್ಮ ಹೊರಗಣ್ಣಿಗೆ ಕಾಣುವುದಿಲ್ಲ, ಆದರೆ ಒಳಗೇ ಇದ್ದು ನಮ್ಮೆಲ್ಲ ಪ್ರವೃತ್ತಿಗಳನ್ನು ನಿಯಮನ ಮಾಡುತ್ತವೆ. ಶರೀರವ್ಯಾಪಿಯಾಗಿ ಸಂಚರಿಸುವಂತಹವು. ಈ ಗುಣಗಳ ವೈಷಮ್ಯವೇ ನಮ್ಮಲ್ಲಿಯ ಆಸುರೀ ಪ್ರವೃತ್ತಿಗೆ ಕಾರಣ. ಈ ವೈಷಮ್ಯದಿಂದ ಕೇವಲ ಇಂದ್ರಿಯ ಜೀವನವನ್ನಷ್ಟೇ ಮಾಡುತ್ತಿರುತ್ತೇವೆ. ಈ ಗುಣಗಳು ಯಾವುದು ಎಷ್ಟು ಇರಬೇಕೋ ಅಷ್ಟಿದ್ದಾಗ ಸಮಸ್ಥಿತಿ. ಹಾಗೆ ಸಮಸ್ಥಿತಿಗೆ ಬಂದಾಗ ನಮ್ಮಲ್ಲೂ ಇಂದ್ರಿಯಾತೀತವಾದ ಸಮಾಧಿ ಸ್ಥಿತಿಯ ಸಮಾಧಾನ ನೆಮ್ಮದಿಗಳು ನೆಲೆಸುತ್ತವೆ. ಆಗ ಆಸುರೀ ಪ್ರವೃತ್ತಿಗಳು ಧ್ವಂಸವಾಗುತ್ತವೆ.
ಸತ್ವ ಗುಣದಿಂದ ಸಾತ್ವಿಕತೆ, ಋಜು ಸ್ವಭಾವ. ರಜೋಗುಣದಿಂದ ನಿರಂತರ ಕ್ರಿಯಾ ಶೀಲತೆ. ತಮೋಗುಣ ಆಲಸ್ಯ, ವಿಶ್ರಾಂತಿಪ್ರಧಾನ. ಜೀವನಕ್ಕೆ ಇವೆಲ್ಲವೂ ಅವಶ್ಯಕ. ಈ ಗುಣಗಳ ತಾರತಮ್ಯವೇ ಮಾನವರ ಸ್ವಭಾವ ಭಿನ್ನತೆಗೆ ಕಾರಣ. ಅವನ್ನು ಸಮಸ್ಥಿತಿಯಲ್ಲಿಡುವಂತಾದರೆ ಇಹ-ಪರ ಜೀವನಗಳೆರಡೂ ಶಾಂತಿ ಸಮೃದ್ಧಿಯಿಂದ ಕೂಡಿರುತ್ತದೆ ಎಂಬುದು ಅಂತಹ ಜೀವನವನ್ನು ನಡೆಸಿದ ಈ ದೇಶದ ಜ್ಞಾನಿಗಳ ಅನುಭವದ ಮಾತು. ರಜಸ್ಸು, ಸತ್ವ, ತಮಸ್ಸು ಈ ಮೂರು ಗುಣಗಳು ಕ್ರಮವಾಗಿ ಬ್ರಹ್ಮ.ವಿಷ್ಣು, ಮಹೇಶ್ವರರ ಅಧೀನ. ತ್ರಿಮೂರ್ತಿ ದೇವತೆಗಳ ಅನುಗ್ರಹದಿಂದಲೇ ಅವನ್ನು ಸಮಸ್ಥಿತಿಗೆ ತರಲು ಸಾಧ್ಯ.ಅದಕ್ಕಾಗಿಯೇ ನಮ್ಮ ಸಾಧನೆ, ತಪಸ್ಸು ಎಲ್ಲವೂ.
ಇನ್ನೊಂದು ದೃಷ್ಟಿಯಿಂದ-ನಮ್ಮ ಮೂಲಾಧಾರದಿಂದ ನಾಭಿಯವರೆಗಿನ ಕ್ಷೇತ್ರ ಭೂ:  ನಾಭಿಯಿಂದ ಕಂಠಪ್ರದೇಶದವರೆಗಿನ ಕ್ಷೇತ್ರವನ್ನು ಭುವಃ ಮತ್ತು ಕಂಠದ ಮೇಲಿಂದ ಭ್ರೂಮಧ್ಯ ಪ್ರದೇಶದವರೆಗಿನ ಕ್ಷೇತ್ರವನ್ನು ಸುವಃ ಎಂಬುದಾಗಿ ಈ ಶರೀರವನ್ನು ತ್ರಿಪುರ ಎಂದಿದ್ದಾರೆ. ಇದರಲ್ಲಿ ಆರೋಗ್ಯದ ಕ್ರಿಮಿಗಳೂ ಇವೆ. ರೋಗ ತರಿಸುವ ಕ್ರಿಮಿಗಳೂ ಇವೆ. ನಾವು ಆರೋಗ್ಯದಿಂದಿರಬೇಕಾದರೆ ಅನಾರೋಗ್ಯದ ಕ್ರಿಮಿಗಳನ್ನು ನಾಶ ಮಾಡಿ ಆರೋಗ್ಯದ ಕ್ರಿಮಿಗಳನ್ನು ಉಳಿಸಿ ಬೆಳೆಸಬೇಕಾಗುತ್ತದೆ.
ಸುರರು-ಎಂದಾಗ ಸುಷ್ಟು ರಾಂತಿ ಇತಿ ಸುರಾಃ ಭಗವಂತನ ಸೃಷ್ಟಿಯನ್ನು ಅವನ ಆಶಯದಂತೆ ಲೋಕಹಿತಕ್ಕೆ ಸಹಕಾರಿಯಾಗಿ ನಡೆಸುವ ಶಕ್ತಿಗಳು. ಅದಕ್ಕೆ ವಿರುದ್ಧವಾಗಿ, ಲೋಕಕಂಟಕವಾಗಿ ಭಗವಂತನ ಆಶಯವನ್ನು ಮುರಿಯುವ ಕೆಲಸ ಮಾಡಿದರೆ ಅಂತಹ ಶಕ್ತಿಗಳು ಅಸುರರು. ಅಂತಹ ಕೆಲಸ ಮಾಡಿದಾಗ ಅಂತಹವರನ್ನು, ಅಂತಹ ಶಕ್ತಿಗಳನ್ನು ನಿಗ್ರಹಿಸುವುದು ಅನಿವಾರ್ಯ. ಅದನ್ನೇ ಅಸುರ ಸಂಹಾರ ಎನ್ನುವುದು.ದೇವ-ಅಸುರ ಶಕ್ತಿಗಳೆರಡೂ ನಮ್ಮಲ್ಲಿಯೇ ಇವೆ. ನಮ್ಮ ಮನಸ್ಸು ಭಗವಂತನ ಆಶಯಕ್ಕೆ ಅಭಿಮುಖವಾಗಿದ್ದು ಅದರಂತೆ ಜೀವನ ನಡೆಸಲು ಸಂಕಲ್ಪ ಮಾಡಿದಾಗ  ಸಹಜವಾಗಿ ದೇವತಾ ಶಕ್ತಿ ಅದಕ್ಕನುಗುಣವಾಗಿ ಕೆಲಸ ಮಾಡುತ್ತದೆ. ಅದೇ ನಮ್ಮ ಮನಸ್ಸು ಕೇವಲ ಇಂದ್ರಿಯವಶವಾಗಿ ವಿವೇಚನೆ ಕಳೆದುಕೊಂಡು ದುಷ್ಟ ಸಂಕಲ್ಪವನ್ನು ಮಾಡಿದಾಗ ಆಸುರೀ ಪ್ರವೃತ್ತಿ ಇದೇ ಶಕ್ತಿಯನ್ನು ಉಪಯೋಗಿಸಿಕೊಂಡು ತನ್ನ ಕೆಲಸ ಆರಂಭಿಸುತ್ತದೆ. ಜೀವನಕ್ಕೆ ಆಸುರೀ ಪ್ರವೃತ್ತಿ ಅಸಹಜ. ನಮ್ಮ ನೆಮ್ಮದಿಯನ್ನು ಕೆಡಿಸುವಂತಹದ್ದು, ಅಲ್ಲದೇ ಲೋಕದ ನೆಮ್ಮದಿಯನ್ನೂ ಹಾಳುಮಾಡುತ್ತದೆ. ನಮ್ಮ ಪ್ರಾರ್ಥನೆಯಿಂದ ,ಸಂಯಮದಿಂದ, ಸಜ್ಜನ ಸಂಗದಿಂದ ಪರಮ ಗುರುವಿನ ಅನುಗ್ರಹದಿಂದ ನಮ್ಮಲ್ಲಿ ದೇವತಾ ಶಕ್ತಿಗಳು ಕೆಲಸ ಮಾಡುವಂತೆ ಆದಾಗ ಈ ತ್ರಿಪುರಗಳನ್ನೂ ಆಕ್ರಮಿಸಿರುವ ಅಸುರರ ಸಂಹಾರ ಸಾಧ್ಯವಾಗುವುದು. ಹೀಗೆ ಸತ್ವ-ರಜಸ್ಸು-ತಮಸ್ಸುಗಳು ಸಮಸ್ಥಿತಿಯಲ್ಲಿದ್ದಾಗ ಆರೋಗ್ಯ, ನೆಮ್ಮದಿ, ಶಾಂತಿ. ಅವುಗಳ ಸಮಸ್ಥಿತಿಯನ್ನು ಕಾಪಾಡುವ ಮನೋಧರ್ಮವನ್ನು ಬೆಳೆಸಿಕೊಳ್ಳುವುದರಲ್ಲಿ ಜೀವನದ ಸೌಖ್ಯ ಅಡಗಿದೆ.
ಭಾರತೀಯ ಜೀವನವಿಧಾನಗಳನ್ನು ಈ ಸಾಮ್ಯವನ್ನು ಕಾಪಾಡಿಕೊಂಡು ಬರಲೆಂದೇ ರೂಪಿಸಲಾಗಿದೆ ಎಂಬುದನ್ನು ಸದಾ ನೆನಪಿಡಬೇಕು. ತ್ರಿಮೂರ್ತಿಗಳು ಪರಬ್ರಹ್ಮನದೇ ಮೂರು ಕವಲುಗಳು. ಸೃಷ್ಟಿ, ಸ್ಥಿತಿ ಲಯಗಳ ಸ್ವಾಮಿತ್ವವನ್ನು ಕ್ರಮವಾಗಿ ವಹಿಸಿಕೊಂಡು ಲೋಕವನ್ನು ಕಾಪಾಡುತ್ತಿರುವ ನಮ್ಮೊಳಗೇ ಇರುವ ಶಕ್ತಿ ವಿಶೇಷಗಳು. ನಾಟಕದಲ್ಲಿ ಒಬ್ಬನೇ ಮೂರು ಪಾತ್ರಗಳನ್ನು ನಿರ್ವಹಿಸಿದಂತೆ, ಒಬ್ಬನೇ ಭಗವಂತನೇ ಮೂರು ಪಾತ್ರಗಳನ್ನು ನಿರ್ವಹಿಸುತ್ತಾನೆ ಎಂಬ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. ಆ ತ್ರಿಮೂರ್ತಿ ಶಕ್ತಿಗಳು ತಮ್ಮ ಆಶಯದಂತೆ ಕೆಲಸ ಮಾಡಲು ಅನುವು ಮಾಡಿಕೊಡುವುದು ನಮ್ಮ ಪ್ರಯತ್ನದಿಂದಲೇ ಆಗಬೇಕಾಗಿದೆ. ನಮ್ಮಲ್ಲೂ ತ್ರಿಪುರಾಸುರ ಸಂಹಾರ ನಿತ್ಯವೂ ನಡೆದು ಸಮಾಧಾನದ ಸ್ಥಿತಿ ಉಂಟಾಗಬೇಕಿದೆ.
ನಮ್ಮ ಶರೀರರೂಪವಾದ ಈ ಪಿಂಡಾಂಡದಲ್ಲೂ ಹೊರಗಿನ ಬ್ರಹ್ಮಾಂಡದಲ್ಲೂ ನಿರಂತರ ತಮ್ಮ ಸೃಷ್ಟಿ-ಸ್ಥಿತಿ-ಲಯ ವ್ಯಾಪಾರಗಳನ್ನು ನಡೆಸುತ್ತಾ ನಮ್ಮನ್ನೆಲ್ಲ ಸಲಹುತ್ತಿರುವ ತ್ರಿಮೂರ್ತಿಗಳ ಅನುಗ್ರಹ ಸದಾಕಾಲವೂ ನಮ್ಮಮೇಲಿರಲಿ ಎಂದು ಪ್ರಾರ್ಥಿಸೋಣ.
ಸೂಚನೆ: 7/04/2020 ರಂದು ಈ ಲೇಖನ ವಿಜಯವಾಣಿ ಲ್ಲಿ ಪ್ರಕಟವಾಗಿದೆ.