Sunday, April 26, 2020

ನಮ್ಮಂಗಳದಲ್ಲೊಂದು ಅಮರಾವತಿ ನಿರ್ಮಿಸಬಲ್ಲೆವೇ ? (Nammangaladallondu Amaravati Nirmisaballeve ?)

ಲೇಖಕರು : ಡಾII ಮೋಹನ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)



ಇಂದ್ರನು ಕಾಡಿನಲ್ಲಿ ಅಪ್ಸರೆಯರೊಡನೆ  ವಿಹರಿಸುತ್ತಿದ್ದನು. ಜಲಕ್ರೀಡೆಯ ರಂಗು, ಮಾದಕ ದ್ರವ್ಯಗಳ ಹಂಗು ಆವರಿಸಿತು.  ದುರ್ವಾಸರ ಆಗಮನದಿಂದ ಕ್ರೀಡೆಯು ಭಂಗವಾಯಿತು. ಶ್ರೀಮನ್ನಾರಾಯಣನ ಪ್ರಸಾದವಾಗಿ ಒಂದು ಕಮಲದ ಹೂವನ್ನು ಪ್ರಸಾದವಾಗಿ ಇಂದ್ರನಿಗೆ ಕೊಟ್ಟು ಹೇಳಿದರು-"ಯಾರು ಇದನ್ನು ಶಿರದಲ್ಲಿ ಮುಡಿದಿರುತ್ತಾರೋ, ಶ್ರೀದೇವಿಯ ಕೃಪಾಕಟಾಕ್ಷ ಸದಾ ಅವರಮೇಲಿರುತ್ತೆ". ಮದಿಸಿದ ಇಂದ್ರನು ಅವರ ಮಾತನ್ನು ಹಗುರವಾಗಿ ಭಾವಿಸಿ ಪ್ರಸಾದವನ್ನು ಆನೆಯ ನೆತ್ತಿಯಲ್ಲಿಟ್ಟನು. ಆನೆಯು, ಹೂವನ್ನು ಕೆಡವಿ ಮದೊನ್ಮತ್ತವಾಗಿ ಅರಣ್ಯವನ್ನು ಪ್ರವೇಶಿಸಿತ್ತು. ಇಂದ್ರನ  ನಡತೆಯಿಂದ ಲಕ್ಷ್ಮೀದೇವಿಯು ಇಂದ್ರನಿಂದ ವಿಮುಖಳಾದಳು. ಇಂದ್ರನ ಸಂಪತ್ತು, ವಿಲಾಸಿತ್ವವೆಲ್ಲ ಏಕಾಏಕಿ ನಷ್ಟವಾಯಿತು. ಆರ್ತನಾಗಿ ಬ್ರಹ್ಮದೇವರ ಮೊರೆಹೊಕ್ಕನು. ಅವರ ಸಲಹೆಯಂತೆ ಪುಷ್ಕರವೆಂಬ  ತೀರ್ಥಕ್ಷೇತ್ರದಲ್ಲಿ ನಾರಾಯಣನ ಪೂಜೆ, ತಪಸ್ಯೆಯಿಂದ  ತನ್ನ ಐಶ್ವರ್ಯವನ್ನು ಮತ್ತೆ ಪಡೆದನು. 

ಪೌರಾಣಿಕ ಕಥೆಗಳನ್ನು  ತಾತ್ತ್ವಿಕವಾದ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕೆಂಬುದು ಶ್ರೀರಂಗಮಹಾಗುರುಗಳ  ಅನುಭವಸಿದ್ಧವಾದ ಮಾತು. ಬ್ರಹ್ಮವೈವರ್ತಪುರಾಣದ ಈ ಕಥೆಯು ಅಹಂಕಾರವನ್ನು ತೊರೆವ ಪಾಠವನ್ನೂ, ವಿನಯ, ವಿವೇಕಗಳ ಮಹಿಮೆಯನ್ನು ಸಾರುತ್ತಿದೆ ಎಂಬುದು ಸ್ಥೂಲ ದೃಷ್ಟಿಗೂ ಸ್ಪಷ್ಟ. ಆದರೆ ಇಂದ್ರನೇಕೆ ಇಲ್ಲಿ ನಾಯಕನಾಗಬೇಕು ? ಆನೆಯ ಬದಲಾಗಿ ಕುದುರೆ ಏಕೆ ಆಗಿರಬಾರದೆಂಬ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. ಸೂತ್ರರೂಪವಾದ ಉತ್ತರವೆಂದರೆ ಪುರಾಣಗಳು ಅಂತರಂಗದ ತಪೋ  ದೃಷ್ಟಿಗೆ ಕಾಣುವ ಸತ್ಯಗಳ ಕಾವ್ಯಾತ್ಮಕ ವರ್ಣನೆ. ಇಲ್ಲಿ ಇಂದ್ರ ಎಂದರೆ  ಇಂದ್ರಿಯಗಳ ರಾಜ. ಮನಸ್ಸು ಎಂಬುದಾಗಿಯೂ ಹೇಳುತ್ತಾರೆ. ಲಕ್ಷ್ಮೀನಾರಾಯಣರ ಪ್ರಸಾದರೂಪವಾದ ಪುಷ್ಪವನ್ನು ಶಿರದಲ್ಲಿ ಮುಡಿಯುವುದೆಂದರೆ ಸಹಸ್ರಾರವೆಂಬ ಕಮಲದಲ್ಲಿ ಯೋಗಿಯು ಅನುಭವಿಸುವ ಸಮಾಧಿ ಮತ್ತು ಅದರಿಂದ ಇಂದ್ರಿಯ, ಮನೋಬುದ್ಧಿಗಳಿಗೆ ಉಂಟಾಗುವ ಅಪಾರವಾದ  ತೃಪ್ತಿ-ನೆಮ್ಮದಿಗಳು. ಅಂತಹ ತೃಪ್ತ ಮನಸ್ಕನೊಬ್ಬನ ನಡೆ ಲೋಕಹಿತಕಾರಿ. ಅಯಾಚಿತವಾಗಿಯೇ ಸಂಪತ್ತು ಅವನನ್ನು ವರಿಸುತ್ತದೆ.  ಅಂತಹವನ  ನುಡಿಗಳು ಅಮರ ಸತ್ಯಗಳು. ಅವನಿರುವ ಜಾಗವೇ ಇಂದ್ರನ ರಾಜಧಾನಿಯೆಂದು ಪ್ರಸಿದ್ಧವಾದ ಅಮರಾವತಿ. ಯೋಗ-ಭೋಗಗಳ ನೆಲೆವೀಡು. ಸಿರಿಯ ಆವಾಸ. ಆದರೆ ಕಾಮ-ಕ್ರೋಧ-ಮದವೇ ಮೊದಲಾದ ದುಷ್ಪ್ರಕೃತಿಗಳು ತುಂಬಿದ ಅರಣ್ಯದಲ್ಲಿ, ಇಂದ್ರಿಯಗಳ ಸೆಳೆತಕ್ಕೆ ಸಿಕ್ಕಿ, ಮೋಜುಗಾರಿಕೆಯಲ್ಲಿ  ತಲ್ಲೀನನಾದ ಅವನ ನಡತೆಗೆ ತಕ್ಕ ಉಪಮಾನವೆಂದರೆ ಮದಿಸಿದ ಆನೆ. ಆನೆಯು ತನ್ನ  ಮದದಲ್ಲಿ ಸಂಪತ್ತಿಗೆ ಮೂಲವೇ ಸಹಸ್ರಾರದ ಅನುಭವ ಎಂಬುದನ್ನು ಮರೆತು, ಅದಕ್ಕೆ ವಿಮುಖವಾಗಿ ಆ ಕಮಲವನ್ನು ಕೆಡಹುವುದು. ಅಲ್ಲಿಗೆ ಪತನಾರಂಭ. ಕಾಮಕ್ರೋಧಾದಿ ಅಸುರರು ಅಮರಾವತಿಯನ್ನು ಲೂಟಿಹೊಡೆದು ಅಪಹರಿಸುವರು. ಮನೋರೂಪಿಯಾದ ಇಂದ್ರನು ಮತ್ತೆ ಆ ಸ್ವರ್ಗವನ್ನು ಪಡೆಯಬೇಕಾದರೆ, ಪುಷ್ಕರದಲ್ಲಿ ತಪವನ್ನಾಚರಿಸಬೇಕು. ಪುಷ್ಕರವೆಂಬುದು ಬ್ರಹ್ಮದೇವರಿಗೆ ಪ್ರಿಯವಾದ ತೀರ್ಥ. ಪರಬ್ರಹ್ಮಭಾವಕ್ಕೆ ಪೋಷಕ. ಪುಷ್ಕರವೆಂಬುದು ಅನೇಕ ದಳಗಳಿಂದ ಕೂಡಿದ ಹೂವಾಗಿ ಒಳ ಧ್ಯಾನವು ಜರುಗುವ ಹೃದಯ ಕಮಲವನ್ನು ಜ್ಞಾಪಿಸುತ್ತದೆ. ಆಯುರ್ವೇದದಲ್ಲಿ ಜ್ವರ ನಿವಾರಣೆಗೆ ಔಷಧಿಯಾಗಿ ಪುಷ್ಕರವನ್ನು ಬಳಸುವುದುಂಟು. ಇಲ್ಲಿ ಮದಜ್ವರವನ್ನು ಇಳಿಸುವ ಔಷಧಿಯಾಗಿ ಇಂದ್ರನಿಗೆ ಉಪಯುಕ್ತವಾಗಿದೆ . ನಮ್ಮೊಳಗಿನ ಮುಡಿಗುಸುಮವನ್ನು ಪೋಷಿಸಿ ರಕ್ಷಿಸಿ, ನಿಜಯೋಗದ ಅಭ್ಯಾಸವನ್ನು ಬೆಳಸಿಕೊಂಡು, ನಮ್ಮ ನಮ್ಮ ಮನದಂಗಳಗಳಲ್ಲಿ ಇಂದ್ರನ ಅಮರಾವತಿಯನ್ನೂ ರೂಪಿಸಿಕೊಂಡು ಸುಖಿಸುವಂತಾಗಲಿ.

ಸೂಚನೆ: 26/04/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.