Wednesday, April 22, 2020

ಗುರುವಿನ ಗುಲಾಮನೇಕೆ ಆಗಬೇಕು ? (Guruvina Gulamanke Agabeku ?)

ಲೇಖಕಿ : ಶ್ರೀಮತಿ ಸುಮೇಧಾ 
 (ಪ್ರತಿಕ್ರಿಯಿಸಿರಿ lekhana@ayvm.in)


ನಾರದರು ಭಕ್ತಶಿರೋಮಣಿಗಳು, ಭಕ್ತಿಶಾಸ್ತ್ರಕ್ಕೆ ಆಚಾರ್ಯರೂ ಕೂಡ. ಅವರ ಪೂರ್ವಜನ್ಮದ ಆಖ್ಯಾನವು ಶ್ರೀಮದ್ಭಾಗವತದಲ್ಲಿ ಕಂಡುಬರುತ್ತದೆ. ನಾರದರು ಋಷಿಗಳ ಕುಟೀರದಲ್ಲಿ ಕೆಲಸ ಮಾಡುವಾಕೆಯ ಮಗನಾಗಿ ಹುಟ್ಟಿದ್ದರು. ೫ ವರ್ಷದ ಬಾಲಕನಾಗಿದ್ದಾಗಲೂ ಆಟಗಳಲ್ಲಿ ಮನಸ್ಸಿಲ್ಲದೆ, ವೇದ ವೇದಾಂತ ಹಾಗು ಭಗವದ್ಭಕ್ತಿಯಲ್ಲಿ ಮನಸ್ಸುಳ್ಳವರಾದರು. ಒಮ್ಮೆ ಚಾತುರ್ಮಾಸ್ಯದ ಸಮಯದಲ್ಲಿ ಕೆಲವರು ಸಾಧುಗಳು ಅವರಿರುವಲ್ಲಿಯೇ ವಾಸವಾಗಿದ್ದರು. ನಾರದರನ್ನು ಅವರ ಸಹಾಯಕ್ಕೆ ನೇಮಿಸಲಾಗಿತ್ತು.  ನಾರದರು ತೋರುತ್ತಿದ್ದ ಆಸಕ್ತಿ ಭಗವದ್ರಸದಿಂದಾಗಿ ಅವರಲ್ಲಿ ವಿಶೇಷ ಪ್ರೀತಿ ಉಂಟಾಯಿತು. ತ್ರಿಕಾಲದಲ್ಲೂ ಅವರು ಮಾಡುತ್ತಿದ್ದ ಭಜನೆ ಕೀರ್ತನೆಗಳಿಂದ ನಾರದರ ಮನಸ್ಸು ಇನ್ನೂ ಭಗವನ್ಮಯವಾಗಿ ಸತತವಾಗಿ ಅವರು ತೋರಿದ ದಾರಿಯಲ್ಲಿ ನಡೆಯತೊಡಗಿದರು. ಸಾಧುಗಳ ಶುಶ್ರೂಷೆಯಿಂದ ತಮ್ಮ ಪೂರ್ವಕರ್ಮಫಲಗಳನ್ನು ಕಳೆದುಕೊಂಡರು. ಚಾತುರ್ಮಾಸ್ಯದ ನಾಲ್ಕುತಿಂಗಳು ಕಳೆದಂತೆಯೇ ಸಂತರು ಅಲ್ಲಿಂದ ಹೊರಟರು. ಆದರೆ ನಾರದರು ಗುರುವಾಕ್ಯ-ಉಪದೇಶದ ಪರಿಪಾಲನೆಯನ್ನು ಹಾಗೆಯೆ ಮುಂದುವರಿಸಿದರು. ವಿಧಿವಶಾತ್ ಹಾವಿನ ವಿಷಕ್ಕೆ ಸಿಕ್ಕಿ ತಾಯಿಯನ್ನು ಕಳೆದುಕೊಂಡರು. ಆದರೆ ಅವರು ಧೃತಿಗೆಡಲಿಲ್ಲ. ವಿಧಿಯ ಆಟವನ್ನ ಸಹಜವಾಗಿ ಸ್ವೀಕರಿಸಿ, ಸಂಸಾರದ ಎಲ್ಲ ಬಂಧಗಳು ಕಳೆದವೆಂದುಕೊಂಡರು. ವೈರಾಗ್ಯದಿಂದ ಲೋಕಾಟನೆ ಮಾಡುತ್ತಾ ತಮಗೆ ಗುರುಗಳು ತೋರಿದ ಪಥದಲ್ಲಿ ಮುಂದುವರೆದರು. ಒಂದು ದಟ್ಟವಾದ ಅಡವಿಯನ್ನು ಪ್ರವೇಶಿಸಿ ನಿಶ್ಚಲವಾಗಿ ತಪಸ್ಸನ್ನು ಆಚರಿಸಿದರು. ದೀರ್ಘಕಾಲದ ತಪಸ್ಯೆ ನಂತರ ಶ್ರೀಹರಿಯನ್ನು ತಮ್ಮ ಧ್ಯಾನದಲ್ಲಿ ಸಾಕ್ಷಾತ್ಕಾರ ಮಾಡಿಕೊಂಡು ಧನ್ಯರಾದರು.

ಗುರುವಿನಲ್ಲಿ ನಿಶ್ಚಲ ಭಕ್ತಿ-ನಂಬಿಕೆಗಳು ಸಾಧಕನಿಗೆ ಅತ್ಯಾವಶ್ಯಕವೆಂದು ಶ್ರೀರಂಗಮಹಾಗುರುಗಳು ಒತ್ತಿ ಹೇಳುತ್ತಿದ್ದರು. ಎಲ್ಲರಿಗೂ ಗುರುವೆಂಬ ಮಾರ್ಗದರ್ಶಕ ಬೇಕೇಬೇಕು. ಗುರುಭಕ್ತಿಯು ಎಷ್ಟು ಶುದ್ಧವಾಗಿರುತ್ತದೆಯೋ ಅಷ್ಟು ಬೇಗ ಅದು ಫಲಿಸುತ್ತದೆ. ಅಲ್ಪಕಾಲದ ಸಂಗಡವಾದರೂ ಗುರುವಾಕ್ಯವನ್ನು ನಾರದರು ತನ್ಮಯತೆಯಿಂದ ಜೀವನಾದ್ಯಂತ ಪಾಲಿಸಿದರು. ಭೌತಿಕ ಏಳು ಬೀಳುಗಳನ್ನು ಲೆಕ್ಕಿಸದೆ ಸತತವಾಗಿ ತಮ್ಮ ಸಾಧನೆ ಮುಂದಿವರಿಸಿದರು. "ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ" ಎಂಬ ದಾಸರ ವಾಕ್ಯವು ಈ ಮನಸ್ಥಿತಿಯನ್ನು ತಿಳಿಸುತ್ತದೆ. ಇಲ್ಲಿ ಗುಲಾಮಗಿರಿ ಶೋಷಣೆಯಲ್ಲ. ಇಂದ್ರಿಯಗಳ ಸ್ವೇಚ್ಛೆಯನ್ನು ತೊರೆದು ಸಂಯಮದ ನಡತೆಯನ್ನು ಹೇಳುತ್ತದೆ. ಅಂತಹ ಮಧುರವಾದ ಸತ್ಪಥದ ಗುಲಾಮಗಿರಿ ಎಲ್ಲರಿಗೂ ದೊರೆಯುವಂತಾಗಲೆಂದು ಹಾರೈಸೋಣ.       

ಸೂಚನೆ: 21/04/2020 ರಂದು ಈ ಲೇಖನ  ಉದಯವಾಣಿ ದಲ್ಲಿ ಪ್ರಕಟವಾಗಿದೆ.