Saturday, April 18, 2020

ವ್ಯಕ್ತಿಯ ಸ್ವಭಾವ (Vyaktiya Svabhava)

ಲೇಖಕರು: ಶ್ರೀ ನರಸಿಂಹ ಭಟ್ಟ 
(ಪ್ರತಿಕ್ರಿಯಿಸಿರಿ lekhana@ayvm.in)




ಪ್ರಾರಭ್ಯತೇ ನ ಖಲು ವಿಘ್ನಭಯೇನ ನೀಚೈಃ ಪ್ರಾರಭ್ಯ ವಿಘ್ನವಿಹತಾ ವಿರಮಂತಿ ಮಧ್ಯಾಃ |
ವಿಘ್ನೈಃ ಪುನಃ ಪುನರಪಿ ಪ್ರತಿಹನ್ಯಮಾನಾಃ ಪ್ರಾರಬ್ಧಮುತ್ತಮಗುಣಾ ನ ಪರಿತ್ಯಜಂತಿ || - ಸುಭಾಷಿತ ನೀತಿಶತಕ  ೭೨


ಅರ್ಥ-
ಅಧಮಸ್ವಭಾವದ ಜನರು ವಿಘ್ನದ ಭಯದಿಂದ ಕಾರ್ಯವನ್ನು ಆರಂಭ ಮಾಡುವುದಿಲ್ಲ. ಮಧ್ಯಮಸ್ವಭಾವದವರು ವಿಘ್ನಗಳಿಂದ ಮಧ್ಯದಲ್ಲೇ ಕಾರ್ಯವನ್ನು ಸ್ಥಗಿತಗೊಳಿಸುತ್ತಾರೆ. ಆದರೆ ಉತ್ತಮರು ಎಷ್ಟೇ ವಿಘ್ನಗಳು ಮತ್ತೆ ಮತ್ತೆ ಎರಗಿದರೂ ಪ್ರಾರಂಭ ಮಾಡಿದ ಕಾರ್ಯವನ್ನು ಬಿಡುವುದಿಲ್ಲ. ಮುಗಿಸುತ್ತಾರೆ.

ವಿವರಣೆ-
ಈ ಸುಭಾಷಿತದಲ್ಲಿ ಮೂರು ಬಗೆಯ ಜನರ ಸ್ವಭಾವವನ್ನು ವಿವರಿಸಿದ್ದಾರೆ. ಉತ್ತಮ ಮಧ್ಯಮ ಮತ್ತು ಅಧಮ ಎಂದು. ಮನುಷ್ಯನ ಮನಸ್ಸಿನ ಸ್ಥಿರತೆಯನ್ನು ಅನುಸರಿಸಿ ಈ ಮೂರು ವಿಭಾಗವನ್ನು ಮಾಡಲಾಗಿದೆ. ಯಾವುದೇ ಕಾರ್ಯವನ್ನು ಮಾಡಬೇಕಾದರೂ ಮನಸ್ಸು ಕಾರಣ. ಮಾಡುವವನ ಮನಸ್ಸನ್ನು ಅವಲಂಬಿಸಿ ಕಾರ್ಯದ ಗುಣಮಟ್ಟ ಸಫಲತೆಯನ್ನು ಅಳೆಯಬಹುದು. ಮನಸ್ಸೇ ಎಲ್ಲದಕ್ಕೂ ಕಾರಣ. ಯಾವನು ತನ್ನ ಮನಸ್ಸನ್ನು ಎಷ್ಟರ ಮಟ್ಟಿಗೆ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾನೆ ಎಂಬುದರ ಮೇಲೆ ವ್ಯಕ್ತಿಯ ಗುಣಮಟ್ಟವು ತೀರ್ಮಾನವಾಗುವುದು. ಆರಂಭಿಸಿದ ಕಾರ್ಯವು ಫಲಿಸಲು ಮನಸ್ಸು ಏಕಾಗ್ರದಿಂದ ಕೂಡಿದಾಗ ಮಾತ್ರ ಸಾಧ್ಯ. ಆಗ ಆತ ಎಂತಹ ತೊಂದರೆ ಬಂದರೂ ಅದನ್ನು ಲೆಕ್ಕಿಸದೇ ಸಮಾಪ್ತಿಪರ್ಯಂತವೂ ಕಾರ್ಯಮಗ್ನನಾಗುತ್ತಾನೆ. ಇವನನ್ನು 'ಧೀರ' ಎಂದೂ ಕರೆಯಬಹುದು. ಹೇಗೆ ಧೀರನಾದ ಸೈನಿಕ ಎಂತಹ ಬಿಗಿ ವಾತಾವರಣದಲ್ಲೂ ಎದೆಗೊಂದದೇ ಶತ್ರುಸೈನ್ಯವನ್ನು ಬಡಿದೇ ಬರುತ್ತಾನೆ. ಹಾಗೇ ಆರಂಭಿಸಿದ ಕಾರ್ಯವನ್ನು ಧೀರನಾದವನು ಮುಗಿಸಿಯೇ ಸಿದ್ಧ. ಅದೇ ಪುಕಲನು ಬಂದ ವಿಘ್ನಗಳಿಂದ ಹೆದರಿ ಆರಂಭಿಸಿದ ಕಾರ್ಯವನ್ನು ಮಧ್ಯದಲ್ಲೇ ಬಿಡುತ್ತಾನೆ. ಇನ್ನೂ ಕೆಲವರು 'ಯಾವುದಾರೂ ತೊಂದರೆ ಬಂದು ಶುರು ಮಾಡಿದ ಕೆಲಸ ನಿಂತುಬಿಟ್ಟರೆ!' ಎಂಬ ಆತಂಕದಿಂದ ಯಾವುದೇ ಕಾರ್ಯವನ್ನು ಶುರು ಮಾಡುವ ಮನಸ್ಸನ್ನೇ ಮಾಡುವುದಿಲ್ಲ. 'ಏನೇ ಬರಲಿ. ಬಂದಿದ್ದನ್ನು ಸಾಧಿಸಿಯೇ ಸಿದ್ಧ' ಎಂಬ ಧೈರ್ಯದಿಂದ ಕಾರ್ಯವನ್ನು ಆರಂಭಿಸಿದರೆ ಫಲಕೊಡದಿರಲು ಹೇಗೆ ಸಾಧ್ಯ ! ಎಂಬುದು ಈ ಸೂಕ್ತಿಯ ಸಾರ.

ಸೂಚನೆ:  18/04/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ .