Wednesday, April 8, 2020

ಗಂಗಾವತರಣದ ಪಾಠ (Gangavataranada Patha)

ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)ಗರ ಚಕ್ರವರ್ತಿಯ ಅಶ್ವಮೇಧದ ಕುದುರೆಯು ಕಳೆದು ಹೋಯಿತು. ಕುದುರೆಯನ್ನು ಕರೆತರದೇ ಯಜ್ಞವು ಪೂರ್ಣವಾಗದು. ಸಗರನು ತನ್ನ ಅರವತ್ತುಸಾವಿರ ಪುತ್ರರನ್ನು ಕುದುರೆಯನ್ನು ಹುಡುಕಲು ಕಳಿಸಿದನು. ಕುದುರೆಯು ಮಹಾತ್ಮನಾದ ಕಪಿಲ ಮಹರ್ಷಿಗಳ ಆಶ್ರಮದಲ್ಲಿ ನಿಂತಿರುವುದನ್ನು ಆ ರಾಜಕುಮಾರರು ನೋಡಿದರು. ಕಪಿಲರು ಗಾಢವಾದ ತಪಸ್ಸಿನಲ್ಲಿ ಮುಳುಗಿದ್ದರು. ಅವರಿಗೆ ಇದ್ಯಾವುದರ ಪರಿವೆಯೂ ಇರಲಿಲ್ಲ. ಆದರೆ ಮದೊನ್ಮತ್ತರಾದ ರಾಜಕುಮಾರರು ಕಪಿಲರನ್ನೇ ಕುದುರೆಯ ಕಳ್ಳ ಎಂದು ಭ್ರಮಿಸಿ ಈ ಪಾಪಿಯನ್ನು ಕೊಂದುಹಾಕಿರಿ ಎಂದು ಅವರೆಡೆಗೆ ರಬಸದಿಂದ ಬಂದರು. ಮಹಾ ತಪಸ್ವಿಗಳೂ, ಪರಮ ಸಾತ್ವಿಕರೂ ಆದ ಕಪಿಲರನ್ನು ಹೀಗೆ ವಿನಾ ಕಾರಣ ಅವಮಾನಿಸಿದ್ದರಿಂದ ನಿಸರ್ಗವೇ ಅವರೆಲ್ಲರ ಶರೀರದಲ್ಲಿ ಅಗ್ನಿ ಉದ್ದೀಪನಗೊಳ್ಳುವಂತೆ ಮಾಡಿತು. ಕಪಿಲರು ಕಣ್ಣು ತೆರೆದೊಡನೆಯೇ ಅವರೆಲ್ಲರೂ ಭಸ್ಮೀಭೂತರಾದರು. 

ಇತ್ತ ಸಗರನು ತನ್ನ ಮಕ್ಕಳು ಬಾರದಿರಲು ತನ್ನ ಮೊಮ್ಮಗನಾದ, ಮಹಾತ್ಮನಾದ ಅಂಶುಮಂತನನ್ನು ಹುಡುಕಲು ಕಳಿಸಿದನು.ಅಂಶುಮಂತನು ಕಪಿಲರ ಆಶ್ರಮದ ಮುಂದೆ ಕುದುರೆಯನ್ನೂ, ಬೂದಿಯ ರಾಶಿಯನ್ನೂ ನೋಡಿ, ಮಹಾತ್ಮರಾದ ಕಪಿಲರನ್ನು ಅತ್ಯಂತ ಗೌರವದಿಂದ ಸ್ತುತಿಸಲಾಗಿ, ಕಪಿಲರು ನಡೆದುದನ್ನು ಅರುಹಿ ಅಮ್ಶುಮಂತನ ಚಿಕ್ಕಪ್ಪಂದಿರ ಸದ್ಗತಿಗಾಗಿ ಗಂಗೆಯನ್ನು ಭೂಮಿಗೆ ತರುವುದೊಂದೇ ಉಪಾಯವೆಂದು ಸೂಚಿಸಿದರು. ಅಂಶುಮಂತನು ಕಪಿಲರ ಅನುಮತಿಯನ್ನು ಪಡೆದು ಕುದುರೆಯನ್ನು ಕರೆದೊಯ್ದನು. ಅಶ್ವಮೇಧ ಯಜ್ಞಪೂರ್ಣಗೊಂಡಿತು. ಕಪಿಲರ ಆದೇಶದಂತೆ ಅನೇಕ ವರ್ಷಗಳ ಪರ್ಯಂತ ಗಂಗೆಯನ್ನು ತರಲು ತಪಸ್ಸು ಮಾಡಿದನಾದರೂ ಅವನ ಜೀವಿತಕಾಲದಲ್ಲಿ ಅದು ಈಡೇರಲಿಲ್ಲ,ಅವನ ನಂತರ ಅವನ ಮಗ ದಿಲೀಪನೂ ಗಂಗೆಗಾಗಿ ತಪಸ್ಸನ್ನಾಚರಿಸಿದನು. ನಂತರ ದಿಲೀಪನ ಮಗ ಭಗೀರಥನ ಘೋರ ತಪಸ್ಸಿನ ಕಾರಣ ಗಂಗಾವತರಣ ಸಾಧ್ಯವಾಯಿತು.ವಿಷ್ಣು ಪಾದೊದ್ಭವೆಯಾಗಿ ನಂತರ ಹರಜಟೋದ್ಭವೆಯಾಗಿ ಈರ್ವರ ಶಕ್ತಿಯನ್ನೂ, ಪಾವಿತ್ರ್ಯವನ್ನೂ ತನ್ನಲ್ಲಿಟ್ಟುಕೊಂಡು ಭಾಗೀರಥಿಯಾಗಿ ದೇವಗಂಗೆಯು ಭಗೀರಥನ ಪುರ್ವಜರನ್ನೂ, ಈ ಭೂಮಿಯನ್ನೂ ಪಾವನಗೊಳಿಸಿದಳು. 

ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು-ಭಗೀರಥನ ತಪಸ್ಸಿನಿಂದ ಗಂಗೆ ಇಳಿದುಬಂದರೂ ಹಿಂದಿನ ಮೂರು ತಲೆಮಾರುಗಳ ತಪಸ್ಸು ಭಗೀರಥನ ತಪಸ್ಸಿಗೆ ಕೂಡಿಕೊಂಡು ಬಂದಿದೆ ಎಂಬುದನ್ನು ಮರೆಯಲಾಗದು. ಒಂದು ದಪ್ಪದ ಸೌದೆಯನ್ನು ಸೀಳಲು ಕೊಡಲಿಯಿಂದ ೨೦ ಏಟನ್ನು ಹಾಕುತ್ತೇವೆ. ಒಂದೊಂದು ಏಟೂ ಅದರ ಸಾಂದ್ರತೆಯನ್ನು ಸಡಿಲಗೊಳಿಸಿ ಕಡೆಯ ಏಟಿಗೆ ಸೌದೆ ಸೀಳುತ್ತದೆ. ಹಾಗೆಯೇ ಅಂಶುಮಂತ,ದಿಲೀಪ ಇವರ ತಪಸ್ಸು ಭಗೀರಥನನ್ನು ಮಹತ್ಕಾರ್ಯಸಾಧನೆಗೆ ರೂಪಿಸಿದ್ದವು. ಜೊತೆಗೆ ಅವನ ತಪಸ್ಸೂ ಸೇರಿಕೊಂಡು ಗಂಗಾವತರಣದಂತಹ ಮಹತ್ಕಾರ್ಯ ಸಾಧ್ಯವಾಯಿತು. 

ಈ ಕಥೆಯಿಂದ-ಅಹಂಕಾರವೇ ಅವನತಿಗೆ ಕಾರಣ,ಎಂದೇ ಸಗರ ಪುತ್ರರು ಶಾಪಗ್ರಸ್ಥರಾದರು.ಮಹಾತ್ಮರಲ್ಲಿ ಮಾಡುವ ಅಪಚಾರಕ್ಕೆ ನಿಸರ್ಗವೇ ಶಿಕ್ಷೆಕೊಡುತ್ತದೆ. ಮಹಾತ್ಮರ ಕರುಣೆ, ಸಂಸ್ಕಾರಿಗಳಿಗೆ ಅಸಾಧ್ಯವೆನಿಸುವುದನ್ನೂ ಸಾಧ್ಯವಾಗಿಸುವ ಪ್ರೇರಣೆ ನೀಡುತ್ತದೆ. ಕಪಿಲರ ಆದೇಶ ಆ ಕೆಲಸವನ್ನು ಮಾಡಿದೆ. ತಲೆತಲೆಮಾರುಗಳ ಅವಿರತ ತಪಸ್ಸಿನಿಂದ ಅಪೂರ್ವವಾದ ಮಹತ್ಕಾರ್ಯವನ್ನು ಸಾಧಿಸಬಹುದು- ಎಂಬ ಎಷ್ಟೊಂದು ಪಾಠಗಳನ್ನು ಕಲಿಯಬಹುದಲ್ಲವೇ? ಕಪಿಲರು,ಅಂಶುಮಂತ,ದಿಲೀಪ , ಭಗೀರಥ,ಕಡೆಯಲ್ಲಿ ಪುಣ್ಯ-ಪಾವನೆಯಾದ ಭಾಗೀರಥಿ ಎಲ್ಲರೂ ನಮ್ಮ ಮನೋಬುದ್ಧಿಗಳನ್ನು ಪವಿತ್ರಗೊಳಿಸಿ ಶ್ರೇಷ್ಠ ಕಾರ್ಯಗಳಿಗಾಗಿ ಪ್ರೇರಿಸಲಿ ಎಂದು ಪ್ರಾರ್ಥಿಸೋಣ.

ಸೂಚನೆ: 8/04/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.