Saturday, April 4, 2020

ಫಲ ಬದಲಿಸಲಾಗದು (Phala Badalisalagadu)

ಲೇಖಕರು: ಶ್ರೀ ನರಸಿಂಹ ಭಟ್ಟ 
(ಪ್ರತಿಕ್ರಿಯಿಸಿರಿ lekhana@ayvm.in)



ನೈವಾಕೃತಿಃ ಫಲತಿ ನೈವ ಕುಲಂ ನ ಶೀಲಂ ವಿದ್ಯಾಪಿ ನೈವ ನ ಚ ಯತ್ನಕೃತಾಪಿ ಸೇವಾ |
ಭಾಗ್ಯಾನಿ ಪೂರ್ವತಪಸಾ ಖಲು ಸಂಚಿತಾನಿ ಕಾಲೇ ಫಲಂತಿ ಪುರುಷಸ್ಯ ಯಥೈವ ವೃಕ್ಷಾಃ ||-ಸುಭಾಷಿತ ನೀತಿಶತಕ ೯೭ 

ಅರ್ಥ-
ಮನುಷ್ಯನ ಆಕೃತಿ-ರೂಪಸಂಪತ್ತಿಯಾಗಲಿ ಕುಲವಾಗಲಿ, ಒಳ್ಳೆಯ ಗುಣವಾಗಲಿ, ವಿದ್ಯೆಯಾಗಲಿ, ಕಷ್ಟಪಟ್ಟು ಮಾಡಿದ ಸೇವೆಯಾಗಲಿ, ಫಲವನ್ನು ಕೊಡದು. ಹೇಗೆ ವೃಕ್ಷವು ಕಾಲಕ್ಕೆ ಸರಿಯಾಗಿ ಫಲವನ್ನು ನೀಡುವುದೋ ಅಂತೆಯೇ ಹಿಂದೆ ಮಾಡಿದ ತಪಸ್ಸಿನಿಂದ ಸಂಚಿತವಾದ ಭಾಗ್ಯಗಳು ಕಾಲಸನ್ನಿಹಿತವಾದ ಕ್ಷಣವೇ ಫಲವನ್ನು ನೀಡುತ್ತವೆ. 

ವಿವರಣೆ- 
ಒಂದು ಒಳ್ಳೆಯ ಬೀಜವನ್ನು ಒಂದು ಸಮೃದ್ಧವಾದ ಭೂಮಿಯಲ್ಲಿ ನೆಡುತ್ತೇವೆ. ಅದಕ್ಕೆ ಬೇಕಾದ ಗೊಬ್ಬರ ನೀರು ಕೃಷಿಕಾರ್ಯ ಎಲ್ಲವನ್ನೂ ಸಮಯಕ್ಕೆ ಸರಿಯಾಗಿ ಮಾಡುತ್ತೇವೆ. ಉತ್ತಮವಾದ ಫಸಲು ಬಿಡಲು ಬೇಕಾದ ಎಲ್ಲಾ ಬಗೆಯ ಕಾರ್ಯವೂ ಸಮರ್ಪಕವಾಗಿಯೇ ಸಂಪನ್ನವಾಗಿದೆ. ಆದರೂ ನಮಗೆ ಯಾವಾಗ ಬೇಕೋ ಆಗಲೆಲ್ಲ ಅದು ಫಲವನ್ನು ನೀಡದು. ಫಲ ಬಿಡಲು ಅದಕ್ಕೇ ಆದ ಕಾಲವಿದೆ. ನಮ್ಮ ಅನಿವಾರ್ಯಕ್ಕೆ ವೃಕ್ಷವು ತನ್ನ ನಿಯಮವನ್ನು ಬದಿಗೆ ತಳ್ಳಿ ಫಲವನ್ನು ನೀಡುವಿದಿಲ್ಲ. ಹಾಗೆಯೇ ಒಬ್ಬ ವ್ಯಕ್ತಿ ಎಲ್ಲ ಬಗೆಯ ಶಕ್ತಿಸಾಮರ್ಥ್ಯದಿಂದ ಕೂಡಿದ್ದಾನೆ. ಭುವಿಯಲ್ಲಿ ಅವನಷ್ಟು ಉತ್ತಮ ವ್ಯಕ್ತಿ ಬೇರೊಬ್ಬನಿಲ್ಲ. ರೂಪ, ಕುಲ, ವಿದ್ಯೆ, ಗುಣ ಹೀಗೆ ಎಲ್ಲದರಿಂದಲೂ ಆತನಿಗೆ ಸಮನಾದವನಿಲ್ಲ. ಏನೇ ಇದ್ದರೂ ಆತ ಮಾಡಿದ ತಪಸ್ಸು-ಸತ್ಕಾರ್ಯವು ಬೀಜರೂಪದಿಂದ ವೃಕ್ಷಾಕಾರವಾಗಿ ಬೆಳೆದು ಅದು ತನ್ನ ಕಾಲಕ್ಕೇ ಫಲವನ್ನು ನೀಡುತ್ತದೆಯೇ ಹೊರತೂ ನಮಗೆ ಬೇಕೆಂದಾಗ ನಮ್ಮ ವಿದ್ಯೆ ಗುಣ ಇತ್ಯಾದಿ ಬಲದಿಂದ ಆ ಕೂಡಿಟ್ಟ ಫಲವನ್ನು ನಾವು ಅನುಭವಿಸಲು ಆಗುವುದಿಲ್ಲ. ಅದು ಯಾರ ನಿಯಂತ್ರಣದಲ್ಲೂ ಇರುವುದಿಲ್ಲ. ಕೇವಲ ಅದರ ಕರ್ಮದಿಂದ ಮಾತ್ರ ನಿಯಂತ್ರಿತವಾಗಿರುತ್ತದೆ. ಅಂದರೆ ನಾವು ಮಾಡಿದ ಕರ್ಮ ಅದೆಷ್ಟು ಬಲಿಷ್ಠ! ಒಮ್ಮೆ ಮಾಡಿದರೆ ಆಯಿತು. ಅದು ಯಾವುದೋ ಫಲವನ್ನು ಕೊಟ್ಟೇ ಕೊಡುತ್ತದೆ. ಫಲವನ್ನು ಬದಲಿಸಲು ಸಾಧ್ಯವಿಲ್ಲ. ಹಾಗಾಗಿ ವಿವೇಕಿಯಾದವನು ಕರ್ಮವನ್ನು ಮಾಡುವ ಮೊದಲೇ ಸಾಕಷ್ಟು ಯೋಚಿಸಿ ಸರಿಯಾದ ರೀತಿಯಲ್ಲೇ ಕರ್ಮವನ್ನು ಮಾಡುವುದು ಒಳಿತು ಎಂಬುದು ಈ ಸೂಕ್ತಿಯ ಅರ್ಥ.

ಸೂಚನೆ:  4/04/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ .