Sunday, April 26, 2020

ಪೂಜ್ಯ ಶ್ರೀರಾಮಕೃಷ್ಣಗುರುದಾಸರು (ರಾಮಕೃಷ್ಣಭಟ್ಟರು) (Pujya Sriramakrishnagurudasaru [Ramakrshnabhattaru])

ಸಂಗ್ರಾಹಕರು: ಎ. ಕೃಷ್ಣಮೂರ್ತಿ
(ಪ್ರತಿಕ್ರಿಯಿಸಿರಿ lekhana@ayvm.in)
  
ಪೂಜ್ಯ ಶ್ರೀರಾಮಕೃಷ್ಣ ಗುರುದಾಸರು
  ಧನ್ಯಜೀವಿತದ ಕಾಲ 1926 ರಿಂದ 1978.  


ಶ್ರೀ ರಾಮಕೃಷ್ಣಭಟ್ಟರು ಬಸರೀಕಟ್ಟೆಯ ಶ್ರೀಲಕ್ಷ್ಮೀಕಾಂತ ಜನಾರ್ದನಸ್ವಾಮಿ ದೇವಾಲಯದಲ್ಲಿ ಅರ್ಚಕರಾಗಿದ್ದ ವೇ||ಬ್ರ|| ಶ್ರೀ ವೇಂಕಟರಮಣಭಟ್ಟರು ಮತ್ತು ಶ್ರಿಮತಿ ಕಾವೇರಮ್ಮನವರ ಸುಪುತ್ರರಾಗಿ ಶ್ರೀಅಕ್ಷಯ ನಾಮ ಸಂವತ್ಸರದ ಶ್ರಾವಣ ಬಹುಳ ಚತುರ್ದಶೀ ದಿನಾಂಕ 06-09-1926ರಂದು ಜನಿಸಿದರು. ಇವರಿಗೆ ಒಬ್ಬ ಅಣ್ಣ ಮತ್ತು ಐದು ಮಂದಿ ತಂಗಿಯರು.

ಶ್ರಿರಾಮಕೃಷ್ಣ ಭಟ್ಟರು ನಮ್ಮ ಕಣ್ಮುಂದೆಯೇ ಇದ್ದು ತಂಬೂರಿಯನ್ನು ಮೀಟಿಕೊಂಡು ಭವಾಬ್ಧಿಯನ್ನು ಮಹಾಗುರುವಿನ ಅನುಗ್ರಹದಿಂದ ತಾವು ದಾಟಿ, ಬಹು ಜನರಿಗೆ ಭವಾಬ್ಧಿಯನ್ನು ದಾಟಿಸುವ ಮಹಾ ನಾವಿಕನಾದ ಸದ್ಗುರುವಿನೆಡೆಗೆ ಒಯ್ದವರು. ಅವರೊಬ್ಬ ಅಪೂರ್ವ ಅದ್ಭುತ ಗಾಯಕರಾಗಿದ್ದರು. ಯೋಗ ಗಾಯನವನ್ನು ಬಲ್ಲವರಾಗಿದ್ದರು. ಅವರ ಸಂಗೀತವನ್ನು ಕೇಳಲು ಸುತ್ತಮುತ್ತಲಿನ ಹಳ್ಳಿಗಳಿಂದ ಜನರು ಬರುತ್ತಿದ್ದರು. ಅವರ ಸಂಗೀತವನ್ನು ಕೇಳುತ್ತಾ ಕೇಳುತ್ತಾ ತಡೆಯಲಾರದೆ ಆನಂದೊನ್ಮಾದದಿಂದ ಎಷ್ಟೋ ಮಂದಿ ನರ್ತಿಸಿದ್ದೂ ಉಂಟು.

ಶ್ರೀರಾಮಕೃಷ್ಣಭಟ್ಟರು ಸಂಸ್ಕೃತ, ಜ್ಯೋತಿಷ್ಯ ಮತ್ತು ಸಂಗೀತದಲ್ಲಿ ವಿದ್ವಾಂಸರು. ವಿಶೇಷವಾಗಿ ಸಂಗೀತದಲ್ಲಿ ಸಾಧನೆ ಮಾಡಿದವರು. ಸಂಗೀತವನ್ನು ಸಾಧಿಸಿ ತಮ್ಮ ಜ್ಞಾನದಾತರೂ, ಜ್ಞಾನವಿಜ್ಞಾನತೃಪ್ತಾತ್ಮರೂ, ನಾದಯೋಗಿಗಳೂ ಆಗಿದ್ದ ಶ್ರಿರಂಗಮಹಾಗುರುಗಳಿಗೆ ಸಮರ್ಪಿಸಿ, ಗುರುಗಳಿಂದಲೇ 'ಗುರುದಾಸರು' ಎಂಬ ಅಭಿದಾನವನ್ನು ಪಡೆದ ಧನ್ಯಾತ್ಮರು. ಮಹಾಗುರುಗಳು ಗುರುದಾಸರನ್ನು ಉದ್ದೇಶಿಸಿ 'ಇವರದು ಗಂಧರ್ವ ಕಂಠವಪ್ಪಾ. ಇವರು ಗಂಧರ್ವಗಾಯನ ಮಾಡುತ್ತಾರೆ' ಎಂದು ಶಿಷ್ಯರೊಬ್ಬರಿಗೆ ಹೇಳಿದ್ದರು.

  

ಶ್ರೀ ರಾಮಕೃಷ್ಣ ಭಟ್ಟರಿಗೆ ಸಿನಿಮಾರಂಗದಲ್ಲಿ ಬಹು ಬೇಡಿಕೆಯಿತ್ತು. ಲಕ್ಷ ಲಕ್ಷ ಸಂಪಾದನೆ ಮಾಡುವಷ್ಟು ಕಲಾಪ್ರೌಡಿಮೆಯೂ ಇವರಲ್ಲಿತ್ತು. ಹಿನ್ನೆಲೆ ಗಾಯಕರಾಗಲು ಬಹಳ ಒತ್ತಾಯವೂ ಇತ್ತು. ನಟನೆಯೂ ಚೆನ್ನಾಗಿ ಸಿದ್ಧಿಸಿತ್ತು. ಸಾಧಾರಣ ಸ್ಥಿತಿವಂತರಾಗಿದ್ದವರಿಗೆ ಈ ಆಮಿಷ ಬಹಳ ಆಕರ್ಷಣೀಯವೂ ಆಗಿದ್ದಿತು. ಇವರಿಗೆ ಸಿನಿಮಾರಂಗದ ಹಲವು ಪ್ರತಿಷ್ಠಿತ ವ್ಯಕ್ತಿಗಳ, ಸಿನಿಮಾ ನಟರ ನಿಕಟ ಪರಿಚಯವಿತ್ತು. ಚಿತ್ರಸಾಹಿತಿ ಕರೀಂಖಾನ್, ನಟ-ನಿರ್ದೇಶಕ-ನಿರ್ಮಾಪಕರಾದ ನಾಗೇಂದ್ರರಾಯರು, ಹೊನ್ನಪ್ಪ ಭಾಗವತರು ಮುಂತಾದವರು ಇವರ ಗಾನಪಾಂಡಿತ್ಯವನ್ನೂ ನಟನಾ ಸಾಮರ್ಥ್ಯವನ್ನೂ ಬಲ್ಲವರಾಗಿದ್ದರು. ಸುಂದರ ಶರೀರ ಮತ್ತು ಶಾರೀರ ಹೊಂದಿದ್ದ ಇವರು ನಟನೆಯೊಡನೆ ಗಾಯನವನ್ನೂ ಮಾಡುತ್ತಿದ್ದರು. ಇವರ ನಟನಾ ಸಾಮರ್ಥ್ಯವನ್ನು ನೋಡಿ ಮುಗ್ಧರಾದ ಮದರಾಸಿನ ಸಿನಿಮಾರಂಗದವರು ಇವರಿಗೆ ಕೈತುಂಬಾ ಸಂಬಳ, ವಾಸ್ತವ್ಯದ ಏರ್ಪಾಡು-ಸವಲತ್ತುಗಳನ್ನು ಕೊಡಲು ಸಿದ್ಧರಾಗಿದ್ದರು. ಇಷ್ಟೆಲ್ಲಾ ಹಿನ್ನಲೆಯಿದ್ದ ಇವರು ತಮಿಳುನಾಡಿಗೆ ಸಿನಿಮಾ ಪ್ರಪಂಚಕ್ಕೆ ಧುಮುಕಲು ಸಿದ್ಧರಾಗಿದ್ದರು.  

ಮೈಸೂರಿನ ಮಹಾರಾಜಾ ಸಂಸ್ಕೃತ ಪಾಠಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದಾಗ, 'ಗುರುದಾಸರು ಕಾಳಿದಾಸನ ಶಾಕುಂತಲಾ ನಾಟಕದಲ್ಲಿ ಮಾಡಿದ ದುಷ್ಯಂತನ ಪಾತ್ರವನ್ನೂ, ಭಾಸನ ಪ್ರತಿಮಾ ನಾಟಕದಲ್ಲಿ ಶ್ರೀರಾಮನ ಪಾತ್ರವನ್ನೂ ನೋಡಿದವರು ಯಾರೂ ಅವರನ್ನು ಮರೆಯುವ ಹಾಗಿಲ್ಲ. ಶ್ರೀರಾಮಕೃಷ್ಣಭಟ್ಟರು ಸಾಹಿತ್ಯ, ಸಂಗೀತ, ಪಾತ್ರಗಳರೂಪ, ವೇಷಭೂಷಣಗಳ ಅಭಿರೂಪ್ಯ, ಅಭಿನಯ ಕಲೆ ಎಲ್ಲದರಲ್ಲೂ ಅದ್ವಿತೀಯರಾಗಿದ್ದರು' ಎಂದು ಅದೇ ಪಾಠಶಾಲೆಯಲ್ಲಿ ಆಗ ಅಧ್ಯಯನ ಮಾಡುತ್ತಿದ್ದ ಶ್ರೀ ಶ್ರೀ ರಂಗಪ್ರಿಯ ಶ್ರೀಗಳು ನೆನೆಪಿಸಿಕೊಳ್ಳುತ್ತಿದ್ದರು. ಶ್ರೀ ರಂಗಪ್ರಿಯ ಶ್ರೀಗಳ ಸತ್ಸಂಗದಿಂದ ಗುರುದಾಸರಿಗೆ ಶ್ರೀರಂಗಮಹಾಗುರುಗಳ ಪರಿಚಯವಾಯಿತು. ಅದು ಅವರಿಗಿದ್ದ ಪ್ರಚಾರ, ಪ್ರಸಿದ್ಧಿ, ಪುರಸ್ಕಾರ ಇತ್ಯಾದಿ ಆಮಿಷಗಳ ಬಗ್ಗೆ ಆಳವಾಗಿ ಚಿಂತಿಸುವಂತೆ ಮಾಡಿತು. ಜೀವನದ ಪರಮಗುರಿ ಆತ್ಮಸಾಕ್ಷಾತ್ಕಾರ ಎಂಬ ಅರಿವು ಆಳವಾಗಿ ಬೇರೂರಿತು. ಇದರ ಫಲವಾಗಿ ಗುರುದಾಸರು ತಮಗಾಗಿ ಗೊತ್ತುಪಡಿಸಿದ್ದ ಸಂಭಾವನೆ, ಹೋಟೆಲು, ಸ್ಟುಡಿಯೋ ಸಂಪತ್ತು ಎಲ್ಲವನ್ನೂ ನಿರಾಕರಿಸಿದರು. ಗುರುಭಕ್ತರಾಗಿಯೇ ಉಳಿಯುವುದರಲ್ಲೇ ಧನ್ಯತೆಯನ್ನು ಕಂಡರು. ಇದು ತ್ಯಾಗರಾಜರು 'ನಿಧಿಚಾಲಸುಖಮಾ' ಎಂದು ಹಾಡಿದ ಘಟನೆಯನ್ನು ನೆನೆಪಿಗೆ ತರುತ್ತದೆ. ನಿರಂತರ ಸಾಧನೆಯಿಂದ ಪರಮಗುರುವಿನ ಅನುಗ್ರಹದಿಂದ ರಾಗರಾಗಿಣಿಯರ ಸಾಕ್ಷಾತ್ಕಾರ ಪಡೆದರು.

ಅವರದು ಕಂಚಿನ ಕಂಠ. ಅವರು ಹಾಡುವಾಗ ನೂರಾರು ಜನರಿರುವ ಭಕ್ತರ ಸಭೆಗೆ ಧ್ವನಿವರ್ಧಕದ ಅಗತ್ಯವೇ ಇರುತ್ತಿರಲಿಲ್ಲ. ಅವರು ಭಕ್ತರ ಮನೆಯಲ್ಲಿ ಹಾಡುತ್ತಿದ್ದಾಗ ಅವರ ಕಂಠದ ಆಕರ್ಷಣೆಗೆ ಜನರು ತಾವಾಗೆ ಬಂದು ಸದ್ದಿಲ್ಲದೆ ನಿಂತೊ ಕುಳಿತೊ ಆಲಿಸುತ್ತಿದ್ದರು. ಅವರು ಹಾಡುವಾಗ ಗೋಕುಲವು ಧರೆಗಿಳಿಯುತ್ತಿತ್ತು. ಕೃಷ್ಣನ ಸಾನ್ನಿಧ್ಯ ಹಾಗೂ ಕೃಷ್ಣ ವಿರಹದ ಬೇಗೆ ಎರಡೂ ಉಂಟಾಗುತಿತ್ತು. ಕೃಷ್ಣನ ಸಾನ್ನಿಧ್ಯವನ್ನು ಅನುಭವಿಸಿದವರು ಎಷ್ಟೋ ಮಂದಿ. ಸತತ ಸಾಧನೆ ಮತ್ತು ಪರಮ ಗುರುವಿನ ಅನುಗ್ರಹದಿಂದ ಸುಲಲಿತವಾಗಿ ಯೋಗ ಚಕ್ರಗಳಲ್ಲಿ ಸಂಚಾರಮಾಡುತ್ತಿದ್ದರು. ಅವರು 'ಆತ್ಮದೀಪಂ' 'ಸ್ವಧಾಮ್ನಾಂ' ಮುಂತಾದ ಪದಗಳನ್ನು ಹಾಡುತ್ತಿರುವಾಗ ಆ ಪದವನ್ನು ಅನುಭವಿಸಿ ಮುಳುಗಿ ಮುಳುಗಿ ಯೋಗ ಗಾಯಕರಾಗಿ ಹಾಡುತ್ತಿದ್ದರು.ಯೌಗಿಕ ಪದಗಳನ್ನು ಹಾಡುತ್ತಿರುವಾಗ ಆಯಾ ಯೋಗ ಚಕ್ರಗಳಲ್ಲೇ ನೆಲೆಸಿ ಹಾಡುತ್ತಿದ್ದರು. ಇಂತಹ ದೈವೀಗಾಯನ ಪ್ರವೃದ್ಧಿಗೆ ಬಂದದ್ದು ಶ್ರೀರಂಗಮಹಾಗುರುಗಳ ಸಾನ್ನಿಧ್ಯ ಮತ್ತು ಮಾರ್ಗದರ್ಶನದಿಂದ. ಅವರಿಗೆ ಗುರುದೇವರು 'ಸ್ತೋತ್ರದ ಒಂದು ಸಾಹಿತ್ಯದ ಮೂಲಕ ಭಗವಂತನನ್ನು ನೋಡಬಹುದಪ್ಪಾ. ಎಲ್ಲಾ ಅರವತ್ನಾಲ್ಕು ಕಲೆಗಳ ಗುರಿಯೂ ಇದೇ ಆಗಿದೆ. ನಿನಗೆ ಅದರ ಮರ್ಮವನ್ನು ಸಂಗೀತದ ಮೂಲಕ ಹೇಳಿಕೊಟ್ಟಿದ್ದೇನೆ' ಎಂದು ಆಶೀರ್ವದಿಸಿದ್ದರು.

ಗುರುದಾಸರು, 'ನಿಸರ್ಗವು ನಾದಮಯವಾಗಿದೆ, ಸಂಗೀತಮಯವಾಗಿದೆ. ಪ್ರತಿಯೊಂದು ವಾತಾವರಣಕ್ಕೂ ರಾಗವಿದೆ' ಎಂದು ಹೇಳುತ್ತಿದ್ದರು. ಸಂಗೀತ ಶಾಸ್ತ್ರದಲ್ಲೂ ಬೇರೆ ಬೇರೆ ಕಾಲಕ್ಕೆ ಬೇರೆ ಬೇರೆ ರಾಗಗಳನ್ನು ಅನುಮೋದನೆ ಮಾಡಿರುತ್ತಾರೆ. 'ಶಾಸ್ತ್ರವು ವೈಜ್ಞಾನಿಕವಾಗಿದೆ. ಪ್ರಯೋಗದಿಂದ ಅದನ್ನು ಸಿದ್ಧಪಡಿಸಬಹುದು. ಪ್ರಯೋಗಕ್ಕೆ ಬರದಿದ್ದರೆ ಅದೆಂತಾ ಶಾಸ್ತ್ರ?' ಎಂದು ಮಹಾಗುರುಗಳು ಹೇಳುತ್ತಿದ್ದರು. ಅವರು ವಾತಾವರಣಕ್ಕೆ ಅನುಸಾರವಾಗಿ ಬೀಸುವ ಗಾಳಿ, ಬೆಳಕು ಮತ್ತು ಆಗಿನ ರಸಕ್ಕೆ ಅನುಗುಣವಾಗಿ ರಾಗಗಳನ್ನು ಯೋಜಿಸುತ್ತಿದ್ದರು. ಇದರ ವಿಜ್ಞಾನವನ್ನು ಗುರುದಾಸರು ಮಹಾಗುರುಗಳಿಂದ ಪಡೆದಿದ್ದರು. ಉದಾಹರಣೆಗೆ ಮಹಾಗುರುಗಳು ಹಾಡುತ್ತಿದ್ದ ಭಜಗೋವಿಂದ ಸ್ತೋತ್ರದ 'ನಳಿನೀದಲಗತ ಜಲಮತಿತರಲಂ' ಎಂಬ ಸ್ತೋತ್ರಕ್ಕೆ ಗುರುಗಳು ಏಕೆ ಬಿಲಹರಿ ರಾಗ ಹಾಕಿದ್ದಾರೆ ಎಂಬುದನ್ನು ನೆನೆಸಿಕೊಂಡು ಭಾವುಕರಾಗುತ್ತಿದ್ದರು. ಬಿಲಹರೀ ಪ್ರಾತಃಕಾಲದ ರಾಗ. ಆಗ ಎಲೆಗಳ ಮೇಲೆ ನೀರಿನ ಬಿಂದುಗಳು ನಿಂತಿರುತ್ತವೆ. ಆ ರಾಗವು 'ದಲಗತಜಲಮ್'ಗೆ ಹೇಗೆ ಸರಿಯಾಗಿ ಹೊಂದಿಕೊಳ್ಳುತ್ತದೆ ಮತ್ತು ಭಾವಪುಷ್ಟಿಯನ್ನು ಕೊಡುತ್ತದೆ ಎಂದು ಅನುಭವಿಸುತ್ತಾ ಭಾವುಕರಾಗಿ ಹೇಳುತ್ತಿದ್ದರು. ಮಹಾಗುರುಗಳು ಗುರುದಾಸರಿಗೆ ಈ ರೀತಿ ಅನೇಕ ಪಾಠಗಳನ್ನು ಮಾಡಿದ್ದಾರೆ.

ಗುರುದಾಸರು ಮಾಡುತ್ತಿದ್ದ ಸ್ತೋತ್ರಗಾನವನ್ನು ಅವರ ಸಾನ್ನಿಧ್ಯದಲ್ಲೇ ಆಲಿಸಿದವರಿಗೆ ಅದರ ರಸ ಮತ್ತು ಸೊಬಗು ಅರಿವಾಗುತ್ತಿತ್ತು. ಹೆಸರಾಂತ ಕವಿ ಶಿವರುದ್ರಪ್ಪನವರ ಭಾವಗೀತೆಗಳನ್ನು ಗುರುದಾಸರು ಭಾವಪೂರ್ಣವಾಗಿ ಹಾಡುತ್ತಿದ್ದರು. ಗುರುದಾಸರು ಬಹು ಅಪರೂಪದ ಯೋಗ ಗಾಯಕರು. ಅವರು ಸಂಗೀತವನ್ನು ಕೇವಲ ಭಗವಂತನ ಸೇವೆಗಾಗಿಯೇ ವಿನಿಯೋಗಿಸಿದರು.  ಅವರ ಜೀವನದಲ್ಲಿ ಬಹಳವಾಗಿ ಹಣಕಾಸಿನ ತೊಂದರೆಗೆ ಒಳಗಾದರೂ ಸಂಗೀತವನ್ನು ಹಣಸಂಪಾದನೆಗೆ ಬಳಸಿಕೊಳ್ಳಲಿಲ್ಲ. ಇದು ಅವರ ಒಂದು ಮುಖ.

ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಬಸರೀಕಟ್ಟೆಯ ಸುತ್ತಮುತ್ತ ಇರುವ ಹಳ್ಳಿಗಾಡಿನಲ್ಲಿ ಬಡವರಿಗೆ ವಿದ್ಯಾಭ್ಯಾಸಕ್ಕೆ ಅವಕಾಶವೇ ಇಲ್ಲದಿದ್ದಾಗ, ಅದೂ ಹೆಣ್ಣುಮಕ್ಕಳ ವಿದ್ಯಾಭ್ಯಾಸವೇ ಅಸಾಧ್ಯವಾಗಿದ್ದಾಗ ಅಲ್ಲಿ 'ಶ್ರೀಸದ್ಗುರುವಿದ್ಯಾಶಾಲೆ' ಎಂಬ ವಸತಿಶಾಲೆಯನ್ನು ಶ್ರೀಲಕ್ಷ್ಮೀಜನಾರ್ದನಸ್ವಾಮಿ ದೇವಸ್ಥಾನದ ಆವರಣದಲ್ಲಿ ತೆರೆದು, ಪ್ರಾಚೀನ ಗುರುಕುಲ ಪದ್ಧತಿಯಂತೆ ವಾತ್ಸಲ್ಯಪೂರಿತವಾದ ಮನೋಭಾವದಿಂದ ಮಕ್ಕಳನ್ನು ಬೆಳಸಿ ಅವರ ಜೀವನವನ್ನು ರೂಪಿಸುವುದರಲ್ಲಿ ಮಹಾಪಾತ್ರವಹಿಸಿ ಜ್ಞಾನದಾನ ಮಾಡಿದ ಸಾಹಸಿಗಳಾದ ಪುಣ್ಯಾತ್ಮರು. ಲೌಕಿಕ ಹಾಗೂ ಆಧ್ಯಾತ್ಮಿಕ ವಿದ್ಯಾಭ್ಯಾಸದ ಜೊತೆಗೆ ಸಂಗೀತ ಸ್ತೋತ್ರಾದಿಕಲೆಗಳೂ, ಸಂಸ್ಕೃತ, ಹಿಂದಿ ಭಾಷೆಗಳೂ, ಧರ್ಮ, ಸಂಪ್ರದಾಯ, ಸಂಸ್ಕೃತಿ ಹಾಗೂ ದೈಹಿಕ ಶಿಕ್ಷಣಗಳ ಸುಂದರ ಸಮನ್ವಯಾತ್ಮಕವಾದ ವಿದ್ಯಾಪದ್ಧತಿಯನ್ನು ರೂಪಿಸಿದ್ದರು. ಈ ಶಾಲೆಯ ಕಾರ್ಯಕ್ಷೇತ್ರದಲ್ಲಿ ಇವರ ಧರ್ಮಪತ್ನಿ ಕಲ್ಯಾಣಮ್ಮ ಮತ್ತು ಅತ್ಯಂತ ಕ್ರಿಯಾಶೀಲರಾಗಿದ್ದ ದಿವಂಗತ ಶ್ರೀಜಿ.ಕೆ.ಶಂಕರರಾಯರ ಸಮರಸ ಸಹಯೋಗವನ್ನು ಮರೆಯುವಂತಿಲ್ಲ.

ಗುರುದಾಸರು ಉತ್ತಮ ಶಿಕ್ಷಣ ತಜ್ಞರು, ನಾಟಕ-ಗೀತ ರಚನಕಾರರು, ಅದ್ಭುತ ನಟರು ಮತ್ತು ಉತ್ತಮ ನಿರ್ದೇಶಕರು. ಊರಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಿಗೆ ನುಡಿಸಲು ಮಕ್ಕಳಿಗೆ ಚಂಡೆ, ಮೃದಂಗ, ಖಂಜಿರ ಮುಂತಾದ ತಾಳವಾದ್ಯಗಳನ್ನೂ ಕಲಿಸುತ್ತಿದ್ದರು. ಅವರು ರಚಿಸಿದ ದೇಶಭಕ್ತಿಗೀತೆ 'ಬೆಳಗಲೀ ಬೆಳಗಲೀ ಸನಾತನಾರ್ಯ ಭಾರತ' ಎಂಬುದು ಭಾರತದ ರಾಷ್ಟ್ರಗೀತೆಯಾಗುವ ಯೋಗ್ಯತೆಯನ್ನು ಹೊಂದಿದೆ.

ಶ್ರೀಗುರುದಾಸರು ಸರಳಸಜ್ಜನರು, ದೈವಭಕ್ತರು. ಧ್ಯಾನಶೂರರು ಮತ್ತು ದೈವದ ಸ್ವತ್ತಾಗಿದ್ದರು. ಜ್ಞಾನಪಿಪಾಸುಗಳಿಗೆ ತಿಳುವಳಿಕೆ ನೀಡಿ, ಆರ್ದ್ರರಾದವರಿಗೆ ಗುರುದ್ವಾರವಾಗಿ ಕೆಲಸ ಮಾಡಿದವರು. ಅತಿಥಿ ಸತ್ಕಾರವನ್ನು ಆದರದಿಂದ ಮಾಡುತ್ತಿದ್ದರು. ಅವರು ಉತ್ತಮ ಬಾಣಸಿಗರೂ ಆಗಿದ್ದರು. ಅವರ ಆತಿಥ್ಯವನ್ನು ಸವಿದ ಅತಿಥಿಗಳು ಇನ್ನೂ ಅದರ ರುಚಿಯನ್ನು ಮರೆತಿಲ್ಲ. ಅವರು ಸುತ್ತಮುತ್ತಲಿನ ಹಳ್ಳಿಗಳಿಗೆ, ಬಂಧುಗಳ ಮನೆಗೆ ನಡೆದೇ ಹೋಗುತ್ತಿದ್ದರು. ಅವರು ಅಲ್ಲಿರುವವರೆಗೂ ಸಮಯದ ಸದುಪಯೋಗ ಹೇಗೆ ಮಾಡಿಕೊಳ್ಳಬೇಕೆಂಬುದನ್ನು ಮೊದಲೇ ನಿರ್ಧರಿಸಿರುತ್ತಿದ್ದರು. ಅಲ್ಲಿರುವವರಿಗೆ ಜೀವನದ ಗುರಿ, ಅಧ್ಯಾತ್ಮಿಕತೆಯ ಕಡೆಗೆ ಒಲವು ಉಂಟಾಗುವಂತೆ ತಿಳುವಳಿಕೆ ನೀಡುತ್ತಿದ್ದರು.
ಅವರಿಗೆ ಪಾರಂಪರಿಕವಾಗಿ ಬಂದ ಆಸ್ತಿಗಳಾವುದನ್ನೂ ಇಟ್ಟುಕೊಳ್ಳಲಿಲ್ಲ. ಅವರ ಅಣ್ಣನವರಿಗೆ 'ನನಗೆ ಭೂಮಿಕಾಣಿ ಯಾವುದೂ ಬೇಡ. ನನಗೆ ಬರಬೇಕಾಗಿರುವ ಭೂಮಿಯನ್ನು ಧ್ಯಾನ ಮಂದಿರದ ಕಟ್ಟಡಕ್ಕೆ ಬಿಟ್ಟುಕೊಡಬೇಕು' ಎಂದು ತಾಕೀತು ಮಾಡಿದರು. ಅದರಂತೆಯೇ ಅವರ ಅಣ್ಣನವರಾದ ಹರಿದಾಸರು ಆ ಭೂಮಿಯನ್ನು ತುಲಸೀ ತೀರ್ಥದೊಡನೆ ಧಾರೆ ಎರೆದುಕೊಟ್ಟರು.

ಶ್ರೀಗುರುದಾಸರು ಮಹಾಗುರುಗಳ ನಿರ್ದೇಶನದಂತೆ ಶ್ರೀಸದ್ಗುರು ವಿದ್ಯಾಶಾಲೆಯ ಮುಂದುವರಿಕೆಯಾಗಿ ಶ್ರೀಸದ್ಗುರು ಪ್ರೌಢಶಾಲೆಯನ್ನು ಸ್ಥಾಪಿಸಿ ಅದರ ಪ್ರಥಮಾಧ್ಯಕ್ಷರಾಗಿದ್ದರು. ಅದು ಇಂದಿಗೂ ಚಿಕ್ಕಮಗಳೂರು ಜಿಲ್ಲೆಯಲ್ಲೇ ಉತ್ತಮ ಪ್ರೌಢಶಾಲೆಯೆಂಬ ಪ್ರಸಿದ್ಧಿ ಹೊಂದಿದೆ. ಆ ಪಾಠಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿದ್ದು ದೇಶ ಸೇವೆ ಮಾಡುತ್ತಿದ್ದಾರೆ. ರಾಜ್ಯಪ್ರಶಸ್ತಿ, ರಾಷ್ಟ್ರಪ್ರಶಸ್ತಿಗಳನ್ನು ಗಳಿಸಿದವರಿದ್ದಾರೆ.

ಗುರುದಾಸರು ಖಂಡಿತವಾದಿಗಳು; ಹಿಡಿದಕೆಲಸವನ್ನು ಬಿಡದೇ ಸಾಧಿಸುತ್ತಿದ್ದ ಛಲಗಾರರಾಗಿದ್ದರೂ ವಾತ್ಸಲ್ಯಮಯರು. ಇವರೊಬ್ಬ ಅದ್ಭುತ ಸಂಘಟನಾ ಚತುರರು ಮತ್ತು ಯೋಜಕರಾಗಿದ್ದರು. ವೇದಪಾಠಿಗಳಾಗಿದ್ದೂ ಅಲ್ಲದೆ ಉತ್ತಮ ಉಪನ್ಯಾಸಕಾರರೂ ಆಗಿದ್ದರು. 1962ರಿಂದ ಆಜೀವಪರ್ಯಂತ ಬಸರೀಕಟ್ಟೆಯ ಅಷ್ಟಾಂಗಯೋಗ ವಿಜ್ಞಾನಮಂದಿರದ ಶ್ರೀ ಕಾರ್ಯದರ್ಶಿಗಳಾಗಿದ್ದರು.

  

ಕೊನೆಯ ಬಾರಿ ಗುರುದಾಸರು ಬೆಂಗಳೂರಿಗೆ ಬಂದಿದ್ದಾಗ ವಿದ್ಯಾಶಾಲೆಯ ವಿದ್ಯಾರ್ಥಿಗಳೊಬ್ಬರ ಮನೆಗೆ ಬಂದಿದ್ದರು. ಆ ವಿದ್ಯಾರ್ಥಿಯ ತಂದೆಯವರೊಡನೆ ಇವರಿಗೆ ತುಂಬ ಗೆಳೆತನ. ಅವರು ಗುರುದಾಸರನ್ನು ಬೀಳ್ಕೊಡಲು ಹೋದಾಗ ಆಗಸದಲ್ಲಿ ಹಾರುತ್ತಿದ್ದ ಹಕ್ಕಿಯ ಸಾಲನ್ನು ತೋರಿಸಿ 'ರಾಮರಾಯರೇ, ಹಕ್ಕಿ ಹಾರುತಿದೆ ನೋಡಿದಿರಾ?' ಎಂದಿದ್ದರು. ರಾಮರಾಯರು ಅದು ಬೇಂದ್ರೆಯವರ ಕವನ' ಎಂದಿದ್ದರು. ಅದಕ್ಕೆ ಗುರುದಾಸರು 'ಎಲ್ಲಿ ಹಾರುತಿದೆ ನೋಡಿದಿರಾ?' ಎಂದಿದ್ದರು. ಇದಾದ ಕೆಲವು ದಿನಗಳ ನಂತರ ಗುರುದಾಸರು ಇಹಲೋಕವನ್ನು ತ್ಯಜಿಸಿ ಭಗವಂತನಪಾದಗಳನ್ನು ಸೇರಿದರು. ತಂಬೂರಿ ಮೀಟುತ್ತಲೇ ಭವಾಬ್ಧಿ ದಾಟಿಬಿಟ್ಟರು.