Saturday, April 18, 2020

ರಂಗನನ್ನು ಆಶ್ರಯಿಸುವ ರಂಗವಲ್ಲಿ (Ranganannu Ashrayisuva Rangavalli)

ಲೇಖಕರು: ಶ್ರೀಮತಿ ಮೈಥಿಲೀ  ರಾಘವನ್
(ಪ್ರತಿಕ್ರಿಯಿಸಿರಿ : lekhana@ayvm.in)

ರಂಗವಲ್ಲಿ (ರಂಗೋಲಿ) ಎಂಬುದು ಒಂದು ಜನಪ್ರಿಯ ಕಲೆಯಾಗಿದೆ. ವಿವಿಧ ಚಿತ್ರಗಳನ್ನು ಬರೆದು ಬಣ್ಣದ ಪುಡಿಗಳಿಂದಲೂ, ಬಣ್ಣಬಣ್ಣದ ಹೂವಿನದಳಗಳಿಂದಲೂ ಅವುಗಳನ್ನು ತುಂಬಿ ಅಲಂಕರಿಸುವುದು ಪ್ರಚಲಿತವಾಗಿದೆ. ಕೆಲವೆಡೆ ದೇವತಾಮೂತಿಗಳನ್ನು ಬಣ್ಣದ ಪುಡಿಯಿಂದ ರಚಿಸುವುದೂ ಸಹ ಕಾಣಸಿಗುತ್ತದೆ. ಇವೆಲ್ಲವೂ  ಅತ್ಯಂತ ಆಕರ್ಷಕವಾಗಿದ್ದು ಕಣ್ಮನಗಳನ್ನು ಸೆಳೆಯುತ್ತವೆ.

ನಮ್ಮದೇಶದಲ್ಲಿ ಮನೆಯ ಬಾಗಿಲಲ್ಲಿ, ಪೂಜಾಗೃಹದಲ್ಲಿ, ಉತ್ಸವಗಳಲ್ಲಿ, ಶುಭಸಮಾರಂಭಗಳಲ್ಲಿ ರಂಗವಲ್ಲಿಯ ಅಲಂಕಾರವು ಅವಿಭಾಜ್ಯ ಅಂಗವಾಗಿದೆ. ಈ ಪದ್ಧತಿಯು ಮೇಲೆಹೇಳಿದಂತೆ ಕಣ್ಣಿಗೆ ಹಬ್ಬವಾಗುವ ಉದ್ದೇಶಮಾತ್ರದಿಂದ ಬಂದದ್ದಲ್ಲ. ಭಾರತೀಯ ಸಂಸ್ಕೃತಿಯಲ್ಲಿ ರಂಗವಲ್ಲಿಯನ್ನು ಕಲೆಯಾಗಿ ತಂದಿದ್ದಾರೆ. 'ಕಲೆ' ಎನ್ನುವ ಪದ ಇಂದು 'Art' ಎನ್ನುವುದರ ಭಾಷಾಂತರವಾಗಿ ಬಳಸಲ್ಪಡುತ್ತಿದೆ. ಆದರೆ ಮಹರ್ಷಿ ಸಾಹಿತ್ಯದಲ್ಲಿ ಈ ಪದಕ್ಕೆ 'ಅಂಶ'-'ಪೂರ್ಣವಾದ ವಸ್ತುವಿನ ಒಂದು ಭಾಗ' ಎಂಬರ್ಥವಿದೆ. ಭಾರತೀಯವಾದ ಕಲೆಗಳೆಲ್ಲವೂ ಕೂಡ ಪೂರ್ಣಪುರುಷನಾದ ಪರಮಾತ್ಮನ ಭಾಗಗಳಾಗಿ ವಿಸ್ತಾರವಾಗಿವೆ ಎಂಬುದು ಜ್ಞಾನಿಗಳ ಮತ. ಶರೀರದ ಭಾಗವಾದ ಕೈಯನ್ನು ಹಿಡಿದೆಳೆದರೆ ಆಸಾಮಿಯೇ ಹತ್ತಿರಬರುತ್ತಾನಲ್ಲವೇ? ಆದ್ದರಿಂದ ಯಾವುದನ್ನು ಹಿಡಿದಾಗ ಪೂರ್ಣನಾದ ಭಗವಂತನು ಹತ್ತಿರನಾಗುವನೋ ಅಂತಹದ್ದನ್ನು ಮಾತ್ರವೇ ಋಷಿಸಂಸ್ಕೃತಿಯು 'ಕಲೆ' ಎಂದು ಗುರುತಿಸಿದೆ. 'ನೆಲೆ'ಯಲ್ಲಿ ನಿಲ್ಲಿಸುವುದೇ 'ಕಲೆ'. ಮೇಲೆ ಸೂಚಿಸಿರುವ ಅರ್ಥದಲ್ಲಿ ಭಾರತೀಯಸಂಸ್ಕೃತಿಯು ೬೪ ಕಲೆಗಳನ್ನು  ಗುರುತಿಸಿದೆ. ಅವುಗಳಲ್ಲಿ ಚಿತ್ರಕಲೆಯ ಒಂದು ಪ್ರಕಾರವೇ ರಂಗವಲ್ಲಿ.

ರಂಗವಲ್ಲಿಯು ಕಲೆಯಾಗುವುದು ಹೇಗೆ?
ಇದು ಸಾಮಾನ್ಯವಾಗಿ ಕಾಣಸಿಗುವ ಷಟ್ಕೋಣ-ರಂಗವಲ್ಲಿ. ಇದರಲ್ಲಡಗಿರುವ ತತ್ತ್ವವನ್ನು ನೋಡಿದಾಗ ಮಹರ್ಷಿಗಳ ಕುಶಲಮತಿಯ ಅರಿವಾಗುವುದು. ಸೃಷ್ಟಿಮೂಲದಲ್ಲಿ ಬಿಂದುರೂಪವಾದ (.) ಪುರುಷನೊಬ್ಬನೇ ಇದ್ದ. ಆತನು ತಾನು ವಿಸ್ತಾರವಾಗಬೇಕೆಂದು ಇಚ್ಚಿಸಿದಾಗ ತಾನೇ ಪುರುಷ-ಪ್ರಕೃತಿರೂಪವಾದದ್ದನ್ನು ವಿಸರ್ಗವು( . . ) ಸೂಚಿಸುತ್ತಿದೆ. ಇವೆರಡರ ಸೇರುವೆಯಿಂದ ವಿಸ್ತಾರವಾಗುವ ಸೃಷ್ಟಿಯಸಂಕೇತ ಅಧಸ್ತ್ರಿಕೋಣ. ಈ ಸೃಷ್ಟಿಯಲ್ಲಿ ಪುರುಷಾರ್ಥಮಯ-ಬಾಳಾಟದಿಂದ ಪುನಃ ನಮ್ಮ ಮೂಲಸ್ವರೂಪವಾದ ಭಗವಂತನನ್ನು ಸೇರಬಹುದು ಎಂಬುದನ್ನು ಸೂಚಿಸುವುದು ಊರ್ಧ್ವತ್ರಿಕೋಣ. ಯೋಗ-ಭೋಗಮಯವಾದ ಜೀವನದ ನಕ್ಷೆಯಾಗುವಂತೆ ಈ ಎರಡು ತ್ರಿಕೋಣಗಳನ್ನೂ ಜೋಡಿಸಿ ಷಟ್ಕೋಣಾಕೃತಿಯ ರಂಗವಲ್ಲಿಯನ್ನು ರಚಿಸಿದೆ ಜ್ಞಾನಿಗಳ ಮೇಧೆ. ಇದನ್ನು ಮನೆಬಾಗಿಲಲ್ಲಿ ಚಿತ್ರಿಸಿದಾಗ 'ಯೋಗ-ಭೋಗಮಯವಾದ ಜೀವನವನ್ನು ನಡೆಸುವ ಗೃಹಸ್ಥನ ಮನೆ' ಎಂಬುದರ ಸಂಕೇತವಾಗುತ್ತದೆ. ಮಧ್ಯಬಿಂದುವು ಜೀವನದ ಕೇಂದ್ರವಾದ ಪರಮಾತ್ಮಸೂಚಕವಾಗಿದೆ. ಇದು ಜೀವನದ ಮೂಲ-ವಿಸ್ತಾರ-ನೆಲೆ(ಗುರಿ) ಇಷ್ಟರ ಕಡೆಗೂ ನಮ್ಮನ್ನು ಕೊಂಡೊಯ್ಯುವ ವಿನ್ಯಾಸವಾಗಿದ್ದು 'ಕಲೆ'ಎಂಬ ಅನ್ವರ್ಥವಾದ ಹೆಸರನ್ನು ಪಡೆದಿದೆ.
ಯೋಗಿವೇದ್ಯವಾದ ದೇವತಾಶಕ್ತಿಗಳ ಪೂಜಾದಿಗಳಲ್ಲಿ ಒಳದರ್ಶನಕ್ಕೆ ಹೊಂದಿಕೊಂಡಂತೆ ಹೊರಗೆ ಮಂಡಲಗಳನ್ನು(ರಂಗವಲ್ಲಿಯಾಗಿ) ರಚಿಸುವುದುಂಟು. ಪೂಜಾಗೃಹದಲ್ಲಿ ಪ್ರತಿದಿನವೂ ಆಯಾ ವಾರಕ್ಕೆ ತಕ್ಕಂತೆ ನವಗ್ರಹ-ರಂಗವಲ್ಲಿಗಳನ್ನು ಚಿತ್ರಿಸಿ ಮಧ್ಯದಲ್ಲಿ ಸಂಬಂಧಪಟ್ಟ ಬೀಜಾಕ್ಷರಗಳನ್ನು ಬರೆಯುವ ರೂಢಿಯೂ ಉಂಟು.

ಜೀವನಬಳ್ಳಿಯನ್ನು ಸೂಚಿಸುವ ಫಲ-ಪುಷ್ಪಭರಿತವಾದ ಬಳ್ಳಿಗಳನ್ನೂ ಚಿತ್ರಿಸುವುದುಂಟು. ಇಲ್ಲಿ ಶ್ರೀರಂಗಮಹಾಗುರುಗಳ ಮಾತೊಂದು ಸ್ಮರಣೀಯವಾಗಿದೆ -"ಜೀವಲತೆಯು ಕಾಮಕ್ರೋಧಗಳ ಮೇಲೆ ಹಬ್ಬಿಬಿಟ್ಟರೆ ಅಲ್ಲಿಂದ ಕೀಳುವುದು ಸಾಧ್ಯವಿಲ್ಲ. ಆದ್ದರಿಂದ ಅದರ ಒಂದು ಶಾಖೆಯನ್ನಾದರೂ ಪರಮಪುರುಷನೆಂಬ ಬೆಳಕಿನೆಡೆಗೆ ಹಬ್ಬಿಸಿ. ಅಲ್ಲಿ ಸುಖವಾಗಿ ಬೆಳೆದಾಗ ಉಳಿದ ಕಾಮಕ್ರೋಧಾದಿಗಳನ್ನು ಕತ್ತರಿಸ ಬಹುದು". ಬಳ್ಳಿಗಳ ವಿನ್ಯಾಸವು ಈ ಮಾತಿನೆಡೆಗೆ ನಮ್ಮನ್ನು ಒಯ್ಯಬಲ್ಲುದು.

ಹೀಗೆ ಅಂತ'ರಂಗ'ನನ್ನಾಶ್ರಯಿಸುವ ಜೀವ'ವಲ್ಲಿ'ಯ(ಬಳ್ಳಿಯ) ನಾನಾಮುಖದ ನಕ್ಷೆಗಳೇ 'ರಂಗವಲ್ಲಿ'ಗಳಾಗುತ್ತವೆ.  

ಸೂಚನೆ:  18/04/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ .