Saturday, April 18, 2020

ಕಷ್ಟಗಳು ಬಂದಾಗ ಎದುರಿಸೋಣ (Kastagalu Bandaga Edurisona)


ಲೇಖಕರು : ಶ್ರೀ ರಾಜಗೋಪಾಲನ್. ಕೆ. ಎಸ್  
(ಪ್ರತಿಕ್ರಿಯಿಸಿರಿ lekhana@ayvm.in)


ಗವದ್ಗೀತೆಯಲ್ಲಿ ಶ್ರೀಕೃಷ್ಣನು ಸ್ಥಿತಪ್ರಜ್ಞನ ಲಕ್ಷಣಗಳನ್ನು ವಿವರಿಸುತ್ತಾ, "ದುಃಖದ ಪ್ರಸಂಗಗಳೊದಗಿದಾಗ ಸಾಮಾನ್ಯರ ಮನಸ್ಸು ಉದ್ವೇಗಕ್ಕೊಳಗಾಗುತ್ತದೆ. ಆದರೆ ಅಂತಹ ಸಂದರ್ಭಗಳಲ್ಲಿ ಸ್ಥಿತಪ್ರಜ್ಞನು ಉದ್ವೇಗ ಹೊಂದದ ರೀತಿಯಲ್ಲಿ ಮನಃಸ್ಥಿತಿಯನ್ನು ಕಾಪಾಡಿಕೊಳ್ಳುತ್ತಾನೆ" (ದುಃಖೇಷು ಅನುದ್ವಿಗ್ನಮನಾಃ) ಎನ್ನುತ್ತಾನೆ.

ಹೇಳುವುದು ಸುಲಭ; ಆಚರಣೆ ಸಾಧ್ಯವೇ? ಎಂಬ ಪ್ರಶ್ನೆ ಸಹಜ. ಶ್ರೀಮದ್ರಾಮಾಯಣದ ಒಂದು ಪ್ರಸಂಗ- ರಾಮನಿಗೆ ಪಟ್ಟಾಭಿಷೇಕ ನಿಶ್ಚಯವಾಗಿರುತ್ತದೆ. ಕೈಕೇಯಿಯ ದೆಸೆಯಿಂದಾಗಿ ರಾಮನು ಕಾಡಿಗೆ ಹೊರಡಬೇಕಾಗುತ್ತದೆ. ರಾಜನಾಗುವುದಿರಲಿ; ಎಲ್ಲವನ್ನೂ ಬಿಟ್ಟು ಕಾಡಿಗೆ ಹೋಗಬೇಕೆಂದಾಗ ಯಾರಿಗೆ ತಾನೇ ಹತಾಶೆ ಉಂಟಾಗದು ! ಆದರೆ ಆಗ  ಇದ್ದ ರಾಮನ ಸ್ಥಿತಿಯನ್ನು ವಾಲ್ಮೀಕಿಗಳು, "ಎಲ್ಲ ಲೌಕಿಕಧರ್ಮಗಳನ್ನೂ ದಾಟಿದ ಯೋಗಿಯಂತೆ ಇತ್ತು, ಕಾಡಿಗೆ ಹೊರಟ ರಾಮನ ಮನಃಸ್ಥಿತಿ. ಅವನಲ್ಲಿ ಯಾವ ವಿಧವಾದ ಚಿತ್ತವಿಕಾರವೂ ಇರಲಿಲ್ಲ" ಎನ್ನುತ್ತಾರೆ.

ಕಳೆದ ಶತಮಾನದಲ್ಲಿ ಎಲೆಮರೆಯ ಕಾಯಿಯಂತೆ ಜೀವನ ಸಾಗಿಸಿದ ಶ್ರೀರಂಗಮಹಾಗುರುಗಳ ಜೀವನದಲ್ಲಿನ ಒಂದು ಪ್ರಸಂಗವೂ ರಾಮನ ಇಂತಹ ಮನಃಸ್ಥಿತಿಯನ್ನೇ ನೆನಪಿಗೆ ತರುತ್ತದೆ. ಹಳ್ಳಿಯಲ್ಲಿದ್ದ ಅವರ ಗೃಹದಲ್ಲಿ ಭಕ್ತ ಸಮ್ಮೇಳನವೊಂದು ಆರಂಭಗೊಳ್ಳುವುದರಲ್ಲಿತ್ತು. ಆ ಊರಿನಲ್ಲಿ ಆಗಷ್ಟೇ ಹರಿದ ಹುಚ್ಚುಹೊಳೆಯ ಪ್ರವಾಹದಿಂದ ಅವರ ಇಡೀ ವರ್ಷದ ಆದಾಯಕ್ಕೆ ಆಧಾರಭೂತವಾದ ಪೈರೆಲ್ಲ ಧ್ವಂಸವಾದ ವಾರ್ತೆಯನ್ನು ಆಳೊಬ್ಬನು ಬಂದು ಉಸುರುತ್ತಾನೆ. "ಆಗಲಿ, ಆಮೇಲೆ ನೋಡೋಣ" ಎಂದಷ್ಟೇ ಹೇಳಿ ಆ ಆಳನ್ನು ಕಳುಹಿಸಿ, ನೆರೆದಿದ್ದ ಭಕ್ತರಿಗೆ ಅದರ ಸುಳಿವು ಕೊಡದೆ ತಮ್ಮ ಕಾರ್ಯಕ್ರಮವನ್ನು ನಿರ್ವಿಕಾರವಾಗಿ ಜರುಗಿಸಿದರೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದುಂಟು. ಜೀವನದಲ್ಲಿ ಮಹಾಮೌಲ್ಯಗಳನ್ನು ಕಂಡುಕೊಂಡಿರುವ ಮಹಾತ್ಮರಿಗೆ ಸಹಜವಾಗಿಯೇ ಇಂತಹ ಧೃತಿಯುಂಟಾಗುತ್ತದೆ. ಅಂತಹವರ ನಡೆಯನ್ನು ಗಮನಿಸಿ ನೋಡುತ್ತಿದ್ದರೆ, ಆದರ್ಶದ ಪಾಠ ನಮಗೆ ದೊರಕುತ್ತದೆ.
ಕೆಲವು ಭಕ್ತರು "ಭಗವಂತ ನನಗೆ ಕಷ್ಟಗಳನ್ನು ಕೊಡು; ಆಗಲಾದರೂ ನಿನ್ನ ಸ್ಮರಣೆ ಮಾಡುವಂತಾಗುತ್ತದೆ" ಎಂದು ಒಂದು ಸ್ಥಿತಿಯಲ್ಲಿ ದೇವರನ್ನು ಬೇಡುವುದುಂಟು. ಹೇಗಾದರೂ ಭಗವಂತನಲ್ಲಿ ಭಕ್ತಿಯುಂಟಾಗಲಿ ಎಂಬ ಉದ್ದೇಶವನ್ನಿಟ್ಟುಕೊಂಡು ಭಕ್ತರು ಬಗೆ ಬಗೆಯ ವಿಧಾನಗಳಿಂದ ಪರಮಾತ್ಮನನ್ನು ಪ್ರಾರ್ಥಿಸುವುದುಂಟು. "ನಿನ್ನನ್ನು ಕರುಣಾಕರನೆಂಬುದೇತಕೋ?" ಎಂದು ಭಗವಂತನನ್ನು ಛೇಡಿಸುವುದುಂಟು. ಒಟ್ಟಿನಲ್ಲಿ ಭಕ್ತರ ಬಗೆ ಬಗೆಯ ಭಾಷೆಯ ಹಿಂದಿನ ಧ್ವನಿ, ಭಗವಂತನಲ್ಲಿ ಭಕ್ತಿಯನ್ನು ಪ್ರಾರ್ಥಿಸುವುದೊಂದೇ; ಹೇಗಾದರೂ ಭಗವಂತ ನಮಗೆ ಒಲಿದಾನೇ ಎಂಬ ಕಳಕಳಿಯಷ್ಟೇ. ಕಷ್ಟಗಳು ಬಂದಾಗಷ್ಟೆ ಭಗವಂತನನ್ನು ಸ್ಮರಿಸುತ್ತೇವೆ ಎಂದು ತಿಳಿದು ಕಷ್ಟಗಳನ್ನು ನಾವು ಆಹ್ವಾನಿಸಬೇಕಾಗಿಲ್ಲ.    

ಕೆಲವು ಮಹಾತ್ಮರನ್ನು ನೋಡಿದವರಿಗೆ ಒಂದಂಶ ಸ್ಪಷ್ಟವಾಗುತ್ತದೆ- ಮಹಾಪುರುಷರಿಗೆ ಎಷ್ಟೋಬಾರಿ ಜನಸಾಮಾನ್ಯರಿಗೆ ಬರುವ ಕಷ್ಟಗಳಿಗಿಂತ ಎಷ್ಟೋ ಪಟ್ಟು ಹೆಚ್ಚಿನ ಕಷ್ಟಗಳೇ ಬಂದಿವೆ. ಆಗ ಕಷ್ಟಪರಿಹಾರಕ್ಕಾಗಿ ದೇವರನ್ನು ಬೇಡದೆ ಸಮಾಧಾನ, ಧೈರ್ಯ ಹಾಗೂ ವಿವೇಕಗಳಿಂದ ಇದ್ದು ಪೌರುಷದಿಂದ ಕಷ್ಟಗಳನ್ನು ಎದುರಿಸಿರುವುದೇ ಅವರ ವೈಶಿಷ್ಟ್ಯ. ಕಷ್ಟಗಳು ಬರದಂತೆ ಮುಂಜಾಗ್ರತೆಯ ಕೆಲಸಗಳನ್ನು ಮಾಡಲೇಬೇಕು. ಕೈಮೀರಿ  ಕಷ್ಟಗಳು ಬಂದಾಗ ಧೃತಿಗೆಡಬಾರದು. ಕಷ್ಟಗಳು ಬಂದಾಗ ಕುಗ್ಗಿ ಕೈಚೆಲ್ಲಿ ಕುಳಿತುಬಿಟ್ಟರೆ, ಮುಂದೆ ಮಾಡಬಹುದಾದ ಪರಿಹಾರೋಪಾಯಗಳು ಹೊಳೆಯಲಾರವು. ಮಹಾತ್ಮರ ಸಹವಾಸವು ನಮಗೆ ಜೀವನಾದರ್ಶವನ್ನು ಕೊಡುವುದೆಂದೇ ದಾಸರು "ಸಜ್ಜನರ ಸಂಗದಲಿ ಇರಿಸೆನ್ನ ಮನವ" ಎಂದು ಭಗವಂತನನ್ನು ಪ್ರಾರ್ಥಿಸುತ್ತಾರೆ.  


ಸೂಚನೆ: 18/04/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.