Thursday, April 16, 2020

ಉಪನಿಷತ್ತಿನ ಕಥಾ ಸಾರ (Upanisattina Katha Sara)

ಲೇಖಕರು: ಡಾII ಯಶಸ್ವಿನೀ
ಆಯುರ್ವೇದ ವೈದ್ಯೆ
(ಪ್ರತಿಕ್ರಿಯಿಸಿರಿ lekhana@ayvm.in)


ಹಿಂದೊಮ್ಮೆ ಮಾನವರೆಲ್ಲಾ ಯಥೇಚ್ಛವಾಗಿ ಸಂಪಾದಿಸುತ್ತಿದ್ದರೂ, ಇನ್ನೂ ತೃಪ್ತಿಯಿಲ್ಲದಂತೆ ದುಡಿಯತೊಡಗಿದರು. ಇನ್ನೊಂದೆಡೆ ರಾಕ್ಷಸರು ಯಥೇಚ್ಛವಾಗಿ ದುಷ್ಟಕರ್ಮಗಳನ್ನು ಮಾಡತೊಡಗಿದ್ದರು. ಹಿಂಸಿಸುವುದು, ಅನ್ಯರನ್ನು ನೋಯಿಸುವುದು, ಅನ್ಯಾಯಗೈಯುವುದರಲ್ಲೇ ಸುಖಪಡುತ್ತಲಿದ್ದರು. ಮತ್ತೊಂದೆಡೆ ದೇವತೆಗಳು ಇಂದ್ರಿಯಗಳಿಗೆ ಕಡಿವಾಣವೇ ಇಲ್ಲದಂತೆ ವೈಭೋಗ ವ್ಯಸನಗಳಲ್ಲಿ ತಲ್ಲೀನರಾಗಿದ್ದರು. ಹೀಗೆ ದೇವತೆಗಳು, ರಾಕ್ಷಸರು, ಮಾನವರು ಮೂರು ವರ್ಗದವರೂ ಮನಸೋ ಇಚ್ಛೆಯಾಗಿ ವರ್ತಿಸಿದರೂ ಅವರಿಗೆ ನೆಮ್ಮದಿ ದೊರಕುತ್ತಿರಲಿಲ್ಲ. ಅತಿಯಾದ ಸುಖವೂ ದುಃಖಕ್ಕೆ ಕಾರಣವಂತೆ. ಹಾಗೆ ಯಥೇಚ್ಛ ಸುಖದ ಅನುಭವದಲ್ಲಿದ್ದರೂ, ದುಃಖತಪ್ತರಾಗಿ, ಮೂರೂ ವರ್ಗದವರು ಬ್ರಹ್ಮನಲ್ಲಿಗೆ ಹೋಗಿ ತಮ್ಮ ಸಮಸ್ಯೆಯನ್ನಿಟ್ಟರು.

ಬ್ರಹ್ಮನು ಇವರೆಲ್ಲರ ವಿಶೇಷತೆಗಳನ್ನು ಗಮನಿಸಿ ಪರಿಹಾರ ಸೂಚಕವಾಗಿ ಒಂದೇ ಒಂದು ಅಕ್ಷರವನ್ನು ಅರುಹಿದ. "ದ" ಎಂಬುದಾಗಿ. "ದ" ಎಂಬ ಒಂದೇ ಶಬ್ದವನ್ನು ಮೂವರೂ ಅವರ ಸಂಸ್ಕಾರಕ್ಕನುಗುಣವಾಗಿ ಗ್ರಹಿಸಿದರು. ದೇವತೆಗಳು “ದಾಮ್ಯತ” ಎಂದು ಬ್ರಹ್ಮನು ಹೇಳಿರಬೇಕೆಂದು ಭಾವಿಸಿದರು.(“ದಾಮ್ಯತ” ಎಂದರೆ ನೀವು ಸಂಯಮ ಮಾಡಿ ಎಂದರ್ಥ.) ಮನುಷ್ಯರು “ದತ್ತ” ಎಂದು ಬ್ರಹ್ಮನು ಸೂಚಿಸಿದುದು ಎಂದು ಭಾವಿಸಿದರು. (ದತ್ತ-ಎಂದರೆ ದಾನ ಮಾಡಿರಿ ಎಂದರ್ಥ.) ಅಸುರರು “ದಯಧ್ವಮ್” ಎಂದು ಬ್ರಹ್ಮನು ಹೇಳಿದುದು ಎಂದು ಅರ್ಥೈಸಿಕೊಂಡರು. (ದಯಧ್ವಮ್-ಎಂದರೆ ದಯಾ ತೋರಿರಿ ಎಂದರ್ಥ.)

ದೇವತಾಭಾವ, ಆಸುರೀ ಭಾವ, ಮಾನುಷೀ ಭಾವ ಎಲ್ಲವೂ ನಮಲ್ಲಿ ಆಗಾಗ ಆಡುವಂತಹದ್ದೇ.  ಇಂದ್ರಿಯ ಸುಖಕ್ಕೆ ಅಲ್ಲಲ್ಲಿ ಕಡಿವಾಣ ಹಾಕುತ್ತಾ, ಅನ್ಯರಿಗೆ ಹಿಂಸೆ ಮಾಡದೇ, ತಮಗೇ ತಾವು ಹಿಂಸೆಗೈದುಕೊಳ್ಳದೇ ದಯಾಪರರಾಗಿ, ಜೀವನೋಪಾಯಕ್ಕಾಗಿ ಮಾತ್ರವೇ ದುಡಿಯುತ್ತಾ, ಸಮಾಜದ ಒಳಿತಿಗಾಗಿ ನಿಯಮಾನುಸಾರ ದಾನವನ್ನು ಮಾಡುತ್ತಾ ಭಗವಂತನ ಸ್ಮರಣೆಯಲ್ಲಿ ತೊಡಗಬೇಕು ಎಂಬುದೇ ಈ ಉಪನಿಷತ್ತಿನ ಕಥೆಯ ಸಾರ. ಒಟ್ಟಿನಲ್ಲಿ ಜೀವನದಲ್ಲಿ ಅವಿನಾಶಿಯಾಗಿ ಉಳಿಯುವ ಬದುಕೇ ಸತ್ಯವಸ್ತುವಾಗಿದೆ. ಅದರ ಕಡೆಗೆ ಲಕ್ಷ್ಯವಿಟ್ಟು ಬಾಳಿದಾಗ ಸತ್ಯಸ್ವರೂಪವಾಗಿ ಜೀವನ ಉಳಿಯುತ್ತದೆ ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ.

ಸೂಚನೆ: 15/04/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.