Sunday, December 1, 2024

ಯಕ್ಷ ಪ್ರಶ್ನೆ 116 (Yaksha prashne 116)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ –  115 ಯಾವುದು ಆಶ್ಚರ್ಯ?

ಉತ್ತರ - ಪ್ರತಿದಿನ ಭೂತಕೋಟಿಗಳು ಯಮನಿಲಯವನ್ನು ಸೇರಿತ್ತಿರುತ್ತಾರೆ. ಆದರೆ  ಉಳಿದ ಕೆಲವು ಶಾಶ್ವತವಾಗಿ ಈ ಭೂಮಿಯ ಮೇಲೇ ಇರಬೇಕೆಂದು ಇಚ್ಛಿಸುತ್ತಾರೆ. ಇದೇ ನಿಜವಾಗಿ ಆಶ್ಚರ್ಯ.

ಅತ್ಯಂತ ಆಶ್ಚರ್ಯಕರವಾದ ಸಂಗತಿ ಏನು? ಎಂಬುದಾಗಿ ಯಕ್ಷನು ಧರ್ಮರಾಜನಿಗೆ ಪ್ರಶ್ನಿಸುತ್ತಾನೆ. ಇಲ್ಲಿ ಧರ್ಮಜನ ಉತ್ತರ ಬಹಳ ವಿಚಿತ್ರವಾಗಿದೆ. ಈ ಪ್ರಪಂಚದಲ್ಲಿ ಅನೇಕ ಪ್ರಾಣಿ ಪಶು ಪಕ್ಷಿಗಳು ಪ್ರತಿನಿತ್ಯ ಮರಣವನ್ನು ಹೊಂದುತ್ತವೆ. ಅವು ಯಮಾಲಯವನ್ನು ಪ್ರವೇಶಿಸುತ್ತವೆ. ಮನುಷ್ಯನು ಕೂಡ ಈ ಭೂಮಿಗೆ ಬಂದ ಮೇಲೆ ಒಂದಲ್ಲ ಒಂದು ದಿನ ಸಾಯಲೇಬೇಕು. ಯಮಮಂದಿರವನ್ನು ಪ್ರವೇಶಿಸಲೇಬೇಕು. ಈ ಭೂಮಿಗೆ ಬಂದವರು ಯಾರೂ ಶಾಶ್ವತರಲ್ಲ; ಶಾಶ್ವತವಾಗಿ ಇರಲು ಸಾಧ್ಯವೂ ಇಲ್ಲ. ಹೀಗಿರುವಾಗ 'ನಾನು ಇಲ್ಲೇ ಇರುತ್ತೇನೆ; ಈ ಭೂಮಿಯನ್ನು ಬಿಟ್ಟು ಹೋಗುವುದೇ ಇಲ್ಲ' ಎಂಬ ರೀತಿಯಲ್ಲಿ ಮನುಷ್ಯನ ವರ್ತನೆ ಇರುತ್ತದೆ. ಇದಕ್ಕಿಂತಲೂ ಆಶ್ಚರ್ಯ ಇನ್ನೇನು! ಎಂಬುದಾಗಿ ಉತ್ತರವನ್ನು ನೀಡುತ್ತಾನೆ. ಆದ್ದರಿಂದ ಇಲ್ಲಿ ಚಿಂತಿಸಬೇಕಾದ ವಿಷಯ ಇಷ್ಟು - ಯಾವನೂ ಕೂಡ ಈ ಭೂಮಿಯಲ್ಲಿ ಶಾಶ್ವತನಲ್ಲ; ಆದರೆ ತಾನು ಶಾಶ್ವತ ಎಂದು ಭಾವಿಸಿ ಇರುತ್ತಾನಲ್ಲ; ಇದೇ ಆಶ್ಚರ್ಯ ಎಂಬುದಾಗಿ.

ಒಬ್ಬ ಮನೆಯನ್ನು ಕಟ್ಟಿ, ಈ ಮನೆಯಲ್ಲಿ ನಾನು ಶಾಶ್ವತವಾಗಿ ಉಳಿಯುತ್ತೇನೆ ಎಂದು ಭಾವಿಸಬಹುದು. ಒಬ್ಬ ರಾಜ್ಯದ ಅಥವಾ ದೇಶದ ಚುಕ್ಕಾಣಿಯನ್ನು ಹಿಡಿದವನು, ಇದೇ ನನ್ನ ಶಾಶ್ವತವಾದ ಸ್ಥಾನ ಎಂದು ಭಾವಿಸಬಹುದು. ಹೀಗೆ ತನಗೆ ಸಿಕ್ಕಿರುವ ಅವಕಾಶವನ್ನೇ ಅಳಿಸಲಾಗದ ಅವಕಾಶ, ಮಣೆಯನ್ನು ಕೊಟ್ಟರೆ ಸಿಂಹಾಸನ ಎಂಬುದಾಗಿ ಭಾವಿಸಿ ಅಲ್ಲೇ ಮುಂದುವರಿಯಬಹುದು. ಆದರೆ ಒಂದಂತೂ ನಿಜ, ಎಷ್ಟೇ ದೊಡ್ಡ ಸಾಮ್ರಾಜ್ಯವನ್ನು ಕಟ್ಟಿದರೂ, ಎಷ್ಟೇ ಜನರನ್ನು ಸಂಪಾದಿಸಿದರೂ, ಯಾವುದೇ ರೀತಿಯ ಸಂಬಂಧವನ್ನು ಈ ಭೂಮಿಯಲ್ಲಿ ಸಂಪಾದಿಸಿದರೂ, ಎಲ್ಲವನ್ನು ಬಿಟ್ಟು ಒಂದು ದಿನ ಹೋಗಲೇಬೇಕು ಎಂಬುದು ಅಷ್ಟೇ ನಿಶ್ಚಿತವಾದ ವಿಷಯ. ಇಷ್ಟಿದ್ದರೂ ಇಲ್ಲೇ ಶಾಶ್ವತವಾಗಿ ನೆಲೆ ನಿಲ್ಲುತ್ತೇನೆ ಎಂಬ ಭ್ರಮೆಯಲ್ಲಿ ಬದುಕುವುದು ಎಂಬುದೇ ಅತ್ಯಂತ ವಿಚಿತ್ರವಾದ ಸಂಗತಿ. ಭೋಜ ಎಂಬ ಮಹಾರಾಜನ ಕಥೆ, ಭೋಜನಿಗೆ ಮುಂಜ ಎಂಬ ಚಿಕ್ಕಪ್ಪ ಇದ್ದ. ಭೋಜನ ತಂದೆ ಮರಣವಾದ ಅನಂತರದಲ್ಲಿ ಈ ಬಾಲಕನಾದ ಭೋಜನು 56 ವರ್ಷಕ್ಕಿಂತ ಹೆಚ್ಚು ವರ್ಷ ರಾಜ್ಯವನ್ನು ಆಳ್ವಿಕೆ ಮಾಡುತ್ತಾನೆ ಎಂಬ ವಿಷಯವನ್ನು ದೈವಜ್ಞರ ಮುಖಾಂತರ ಮುಂಜನು ತಿಳಿದುಕೊಳ್ಳುತ್ತಾನೆ. ಭೋಜನನ್ನು ಸಾಯಿಸಿದರೆ ಶಾಶ್ವತವಾಗಿ ತಾನೇ ರಾಜನಾಗಿ ಉಳಿಯಬಹುದು ಎಂಬುದು ಎಂಬುದನ್ನು ಚಿಂತಿಸಿ ಆತ ರಾಜನಾಗಲು ಬಯಸುತ್ತಾನೆ. ಆದರೆ ವಿಧಿಯು ಹೇಗಿರುತ್ತದೆ? ಎಂಬುದನ್ನು ನಾವು ನೋಡಬಹುದು. ಸಾಯಿಸಲು ಕರೆದುಕೊಂಡ ಹೋದಾಗ ಭೋಜನು ಒಂದು ಮಾತನ್ನು ಹೇಳುತ್ತಾ ಒಂದು ಪತ್ರವನ್ನು ರಕ್ತದಲ್ಲಿ ಬರೆದು ಕಳುಹಿಸುತ್ತಾನೆ. ಹೇ! ಮುಂಜನೆ! ಮಾಂಧಾತ ಧರ್ಮರಾಜ ಶ್ರೀರಾಮನಂತಹ ಅನೇಕ ಸಾಮ್ರಾಟರು ಈ ಭೂಮಿಯನ್ನು ಆಳಿದರು; ಆದರೆ ಯಾರ ಜೊತೆಯಲ್ಲೂ ಈ ಭೂಮಿ ಹೋಗಲಿಲ್ಲವಲ್ಲ; ಹಾಗಾಗಿ ನೀನು ಸತ್ತ ಮೇಲೆ ಈ ಭೂಮಿ ನಿನ್ನ ಜೊತೆ ಬರುತ್ತದೆ ಎಂದು ಭಾವಿಸಿರುವೆಯಾ? ಎಂಬುದಾಗಿ. ಮುಂದೆ ಭೋಜನ ವಧೆಯಾಗದೆ ಅವನೇ ರಾಜನಾಗುತ್ತಾನೆ. ಅಂದರೆ ಸಂಪತ್ತಾಗಲಿ ಭೂಮಿಯಾಗಲಿ ಅಧಿಕಾರವಾಗಲಿ ಯಾವುದೂ ಕೂಡ ಸತ್ತಮೇಲೆ ಅವರ ಜೊತೆಗೇ ಹೋಗಲಾರದು. ಇರುವಷ್ಟು ದಿನ ಅದನ್ನು ಅನುಭವಿಸಬೇಕು. ಒಂದು ದಿನ ನಾನು ಎಲ್ಲವನ್ನು ಬಿಡುತ್ತೇನೆ ಎಂಬಂತಹ ತ್ಯಾಗ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂಬುದು ಈ ಪ್ರಶ್ನೋತ್ತರದ ತಾತ್ಪರ್ಯವಾಗಿದೆ.

ಸೂಚನೆ : 01/12/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.  

ವ್ಯಾಸ ವೀಕ್ಷಿತ 113 ಅಭಿಮನ್ಯುವಿನ ಜನನ-ವರ್ಧನಗಳು (Vyaasa Vikshita 113)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಸುಭದ್ರಾರ್ಜುನವಿವಾಹವು ಅದ್ದೂರಿಯಾಗಿ ನೆರವೇರಿತಷ್ಟೆ. ಅಲ್ಲಿಗೆ ಬಂದಿದ್ದ ಕ್ಷತ್ರಿಯವೀರರು ಬಗೆಬಗೆಯಾಗಿ ವಿಹರಿಸಿದರು.

ವಿಹಾರಸಮಯದಲ್ಲಿ ವೀಣೆಗಳಿಂದ ಹೊಮ್ಮುತ್ತಿದ್ದ ಉತ್ತಮವಾದ ನಾದಗಳೂ ಅವರಿಗೆ ಸಂತೋಷತಂದವು. ಹೀಗೆಲ್ಲಾ ಸಂತೋಷಿಸುತ್ತ ಯಥೇಷ್ಟವಾಗಿ ಅವರೆಲ್ಲರೂ ವಿಹರಿಸಿದರು.

ಪರಾಕ್ರಮ-ಸಂಪನ್ನರಾದ ಯದುವೀರರು ಹೀಗೆ ಅನೇಕ ದಿನಗಳ ಕಾಲ ವಿಹಾರ ಮಾಡಿದವರಾಗಿ, ಕುರುವಂಶೀಯರಿಂದ ಆದರಿಸಲ್ಪಟ್ಟವರಾಗಿ, ಮತ್ತೆ ದ್ವಾರಾವತಿಗೆ ಹಿಂತಿರುಗಿದರು. ಬಲರಾಮನನ್ನು ಮುಂದಿಟ್ಟುಕೊಂಡು ಅವರು ನಡೆದರು. ಕುರು-ಶ್ರೇಷ್ಠರಿತ್ತ ಶುಭ್ರವಾದ ರತ್ನಗಳನ್ನು ಸ್ವೀಕರಿಸಿ ಹೊರಟರು.

ಆದರೆ ವಾಸುದೇವನು ಮಾತ್ರ ಮಹಾತ್ಮನಾದ ಪಾರ್ಥನೊಂದಿಗೆ ಆ ಸುಂದರವಾದ ಇಂದ್ರಪ್ರಸ್ಥನಗರದಲ್ಲಿಯೇ ಉಳಿದುಕೊಂಡನು. ಕಿರೀಟಿಯೊಂದಿಗೆ, ಎಂದರೆ ಅರ್ಜುನನೊಂದಿಗೆ, ಆ ಮಹಾಕೀರ್ತಿಶಾಲಿಯಾದ ಕೃಷ್ಣನು ಯಮುನಾ-ತೀರದಲ್ಲಿ ವಿಹರಿಸಿದನು; ಕ್ರೂರಮೃಗಗಳು, ಹಂದಿಗಳು - ಇವನ್ನು ಬೇಟೆಯಾಡಿದ್ದು ಸಹ ಆಯಿತು. ಹೀಗೆ ಕಾಲವು ಕಳೆಯುತ್ತಿತ್ತು.

ಕೆಲಕಾಲದ ನಂತರ, ಕೇಶವನ ಪ್ರಿಯಸೋದರಿಯಾದ ಸುಭದ್ರೆಯು ಸೌಭದ್ರನಿಗೆ ಜನ್ಮವಿತ್ತಳು. ಪೌಲೋಮಿಯು, ಎಂದರೆ ಇಂದ್ರಪತ್ನಿಯಾದ ಶಚಿಯು, ಕೀರ್ತಿಪಾತ್ರನಾದ ಜಯಂತನಿಗೆ ಹೇಗೆ ಜನ್ಮವಿತ್ತಳೋ, ಹಾಗೆಯೇ ಸುಭದ್ರೆ ಜನ್ಮವಿತ್ತುದೂ. ಜನಿಸಿದವನೇ ವೀರನಾದ ಅಭಿಮನ್ಯು.

ಆತನು ಮುಂದೆ ಹೇಗಾದ! ದೀರ್ಘಬಾಹು – ಎಂದರೆ ನೀಳವಾದ ತೋಳುಗಳುಳ್ಳವನು, ಮಹೋರಸ್ಕ - ಎಂದರೆ ವಿಶಾಲವಾದ ಎದೆಯುಳ್ಳವನು, ವೃಷಭಾಕ್ಷ - ಎಂದರೆ ಎತ್ತುಗಳ ಕಣ್ಣುಗಳನ್ನು ಹೋಲುವ ಕಣ್ಣುಗಳುಳ್ಳವನು, ಹಾಗೂ ಅರಿಂದಮ - ಎಂದರೆ ಶತ್ರುಗಳನ್ನು ದಮನಮಾಡತಕ್ಕವನು  - ಹಾಗಾದ.

ಆತನು ಅಭಿ ಮತ್ತು ಮನ್ಯುಮಂತನಾಗಿದ್ದ - ಎಂಬ ಕಾರಣಕ್ಕೇ ಆತನಿಗೆ ಅಭಿಮನ್ಯುವೆಂಬ ಹೆಸರಾದುದು. ಏಕೆಂದರೆ ಅಭಿ ಎಂದರೆ ಭಯರಹಿತ; ಮನ್ಯುಮಂತ ಎಂದರೆ ಕ್ರೋಧದಿಂದ ರಣರಂಗದಲ್ಲಿ ಹೋರಾಡತಕ್ಕವನು. ಹಾಗಿರತಕ್ಕವನು ಈ ಪುರುಷ-ಶ್ರೇಷ್ಠನಾದ ಅರ್ಜುನಿ. ಅರ್ಜುನಿ ಎಂದರೆ ಅರ್ಜುನನ ಮಗ.

ಯಜ್ಞವನ್ನು ಮಾಡುವಾಗ ಅರಣಿಗಳನ್ನು ಮಥನ ಮಾಡುವರು. ಶಮೀ-ಗರ್ಭದಿಂದ ಆಗ ಅಗ್ನಿಯು ಉತ್ಪನ್ನವಾಗುವುದು. (ಶಮೀ ಎಂದರೆ ಬನ್ನಿಮರ). ಅದೇ ರೀತಿಯಲ್ಲಿ ಧನಂಜಯನಿಂದ ಎಂದರೆ ಅರ್ಜುನನಿಂದ, ಸಾತ್ವತಿಯಲ್ಲಿ ಎಂದರೆ ಸುಭದ್ರೆಯಲ್ಲಿ, ಜನ್ಮತಾಳಿದ ಅತಿರಥನೇ ಅಭಿಮನ್ಯು.

ಅಭಿಮನ್ಯುವು ಜನಿಸುತ್ತಲೇ ಯುಧಿಷ್ಠಿರನು ವಿಪ್ರರಿಗೆ ದಶಸಹಸ್ರ-ಗೋವುಗಳನ್ನು ದಾನವಿತ್ತನು. ಹಾಗೂ ಸುವರ್ಣ-ಮುದ್ರೆಗಳನ್ನೂ ಕೊಟ್ಟನು. ಎಳಸಿನಿಂದಲೇ ಅಭಿಮನ್ಯುವು ಶ್ರೀಕೃಷ್ಣನಿಗೆ ಅಚ್ಚುಮೆಚ್ಚಾದನು - ಸಮಸ್ತ-ಪಿತೃ-ದೇವತೆಗಳಿಗೂ ಹಾಗೂ ಪ್ರಜೆಗಳಿಗೂ ಚಂದ್ರನು ಹೇಗೆ ಪ್ರೀತಿ-ಪಾತ್ರನಾಗುವನೋ ಹಾಗೆ.

ಕುಮಾರನ ಹುಟ್ಟಿದಂದಿನಿಂದಲೇ ಆತನಿಗೆ ಎಲ್ಲ ಶುಭ-ಕರ್ಮಗಳನ್ನೂ ಶ್ರೀಕೃಷ್ಣನು ತಾನೇ ನೆರವೇರಿಸುತ್ತ ಬಂದನು. ಮತ್ತು ಆ ಬಾಲಕನಾದರೂ, ಶುಕ್ಲ-ಪಕ್ಷದಲ್ಲಿ ಚಂದ್ರನು ಅಭಿವೃದ್ಧಿಗೊಳ್ಳುವ ಹಾಗೆ ಬೆಳೆದನು.

ಮತ್ತು ಆತನಿಗೆ ಅರ್ಜುನನೇ ಹೇಳಿಕೊಟ್ಟನು - ನಾಲ್ಕು ಪಾದಗಳಿಂದ ಕೂಡಿದ ಹಾಗೂ ದಶ-ವಿಧವಾದ ಧನುರ್ವೇದವನ್ನು, ಅದರ ದಿವ್ಯ ಹಾಗೂ ಮಾನುಷವಾದ ಅಂಗಗಳೊಂದಿಗೆ. ಜೊತೆಗೇ ಅಸ್ತ್ರ-ವಿಜ್ಞಾನ ಹಾಗೂ ಅಸ್ತ್ರ-ಪ್ರಯೋಗ-ಪಟುತ್ವ, ಮತ್ತಿನ್ನೆಲ್ಲ ಕ್ಷತ್ರಿಯೋಚಿತ-ಕ್ರಿಯೆಗಳು - ಇವೆಲ್ಲದರ ವಿಷಯದಲ್ಲೂ ಅರ್ಜುನನೇ ಆತನಿಗೆ ಶಿಕ್ಷಣವನ್ನಿತ್ತನು. ಆಗಮದಲ್ಲೂ ಪ್ರಯೋಗದಲ್ಲೂ - ಎಂದರೆ ಶಾಸ್ತ್ರಭಾಗ ಹಾಗೂ ಶಸ್ತ್ರಗಳ ಬಳಕೆಯ ಬಗೆಗಳಲ್ಲೂ - ಎರಡರಲ್ಲೂ - ಅಭಿಮನ್ಯುವನ್ನು ಅರ್ಜುನನು ತನಗೆ ಸಮನನ್ನಾಗಿ ಮಾಡಿದನು. 

ಸೂಚನೆ : 01/12/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.   .

ಯಕ್ಷ ಪ್ರಶ್ನೆ 116 (Yaksha prashne 116)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ –  114 ಆನಂದಿಸುವವನು ಯಾರು?

ಉತ್ತರ - ಹಗಲಿನ ಐದು ಅಥವಾ ಆರನೆ ಮುಹೂರ್ತದಲ್ಲಿ ಯಾವನು ತನ್ನ ಮನೆಯಲ್ಲಿ ಅಡುಗೆ ಮಾಡಿ ಊಟ ಮಾಡುತ್ತಾನೋ ಅವನು ಆನಂದಿಸುತ್ತಾನೆ

ಯಕ್ಷನು ಕೇಳುವ ಪ್ರಶ್ನೆಗೆ ಧರ್ಮರಾಜನ ವಿಚಿತ್ರವಾದ ಉತ್ತರ ಇಲ್ಲಿದೆ. ಈ ಉತ್ತರದಲ್ಲಿ ಊಟದ ವಿಷಯವಿದೆ, ಊಟವನ್ನು ಯಾವ ಹೊತ್ತಿನಲ್ಲಿ ಮಾಡಬೇಕು ಎನ್ನುವ ವಿಷಯ ಇದೆ, ಯಾವ ರೀತಿಯಾದ ಊಟವನ್ನು ಮಾಡಿದರೆ ಅವನು ಸುಖಿಯಾಗಿರುತ್ತಾನೆ ಎಂಬುದರ ಬಗ್ಗೆ ಮಾಹಿತಿ ಇದೆ, ಊಟವು ಆನಂದವನ್ನು ಉಂಟುಮಾಡುವ ಸಾಧನ ಎಂಬ ವಿಷಯವೂ ಕೂಡ ಇಲ್ಲಿ ಅಡಕವಾಗಿದೆ. "ಆನಂದಿಸುವವನು ಯಾರು?" ಎಂಬುದು ಪ್ರಶ್ನೆ. ಯಾವ ವ್ಯಕ್ತಿ ಹಗಲಿನ ಐದು ಅಥವಾ ಆರನೇ ಮಹೂರ್ತದಲ್ಲಿ ತನ್ನ ಮನೆಯಲ್ಲಿ ಅಡುಗೆ ಮಾಡಿ ಊಟ ಮಾಡುತ್ತಾನೋ ಅವನು ಆನಂದಿಸುತ್ತಾನೆ ಎಂಬುದು ಉತ್ತರ. 

ಒಂದು ದಿನದ ಹಗಲಿನಲ್ಲಿ ಗಂಟೆಗೆ ಒಂದರಂತೆ ಹದಿನೈದು ಮುಹೂರ್ತಗಳು ಇರುತ್ತವೆ ಎಂಬುದಾಗಿ ಜ್ಯೌತಿಷಶಾಸ್ತ್ರ ತಿಳಿಸುತ್ತದೆ. ಅಂದರೆ ಹಗಲು ಹನ್ನೆರಡು ತಾಸು ಎಂಬುದಾಗಿ ಇಟ್ಟುಕೊಂಡರೆ ಒಂದು ಗಂಟೆ ಹದಿನೈದು ನಿಮಿಷಕ್ಕೆ ಸಾಮಾನ್ಯವಾಗಿ ಒಂದು ಮುಹೂರ್ತ ಎಂಬುದಾಗಿ ತಿಳಿಯಬೇಕು. ಆಗ ಐದು ಅಥವಾ ಆರನೇ ಮುಹೂರ್ತವು ಸಾಮಾನ್ಯವಾಗಿ ಅದು ಹನ್ನೊಂದರಿಂದ ಒಂದು ಗಂಟೆಯ ಅವಧಿಯಲ್ಲಿ ಬರುತ್ತದೆ. ಒಂದು ದಿನದಲ್ಲಿ ಎರಡು ಹೊತ್ತು ಮಾತ್ರ ಊಟವನ್ನು ಮಾಡಬೇಕು ಅಥವಾ ಹೊಟ್ಟೆ ತುಂಬಾ (ಮಿತವಾಗಿ) ಊಟಮಾಡಬೇಕು ಎಂಬುದಾಗಿ ಆಯುರ್ವೇದಶಾಸ್ತ್ರ ಹೇಳುತ್ತದೆ - ಅಂದರೆ ಮಧ್ಯಾಹ್ನದ ಒಂದು ಊಟ, ಸಂಜೆಯ ಒಂದು ಊಟ. ಇದರಲ್ಲಿ ಮಧ್ಯಾಹ್ನದ ಊಟಕ್ಕೆ ವಿಶೇಷ ಪ್ರಾಧಾನ್ಯ ಇದೆ. ಹಾಗಾಗಿ ಈ ಮಧ್ಯಾಹ್ನದ ಊಟವನ್ನು ಇಲ್ಲಿ ವಿಶೇಷವಾಗಿ ಪರಿಗಣಿಸಲಾಗಿದೆ. ಹಗಲಿನ ಐದು ಅಥವಾ ಆರನೇ ಮುಹೂರ್ತವನ್ನು ಮಧ್ಯಾಹ್ನದ ಊಟದ ಮುಹೂರ್ತ ಎಂಬುದಾಗಿ ಹೇಳಲಾಗಿದೆ. ಮನೆಯಲ್ಲಿ ಮಾಡಿದ ಅಡಿಗೆಯಿಂದಲೇ ಊಟವನ್ನು ಮಾಡಿ ಮಾಡಬೇಕು ಎಂಬುದನ್ನು ಇಲ್ಲಿ ಒತ್ತಿ ಹೇಳಿದೆ. 

ಯಾರು ಮನೆಯಲ್ಲಿ ಊಟ ಮಾಡುತ್ತಾನೋ ಅವನು ಅತ್ಯಂತ ಶುಚಿಯು ರುಚಿಯೂ ಆಗಿರುವ ಊಟವನ್ನು ಮಾಡಬಹುದು. ಬೇರೆ ಮನೆಯಲ್ಲಿ ಊಟ ಮಾಡಿದರೆ ಇದನ್ನು ನಿರೀಕ್ಷಿಸುವುದು ಕಷ್ಟವೆಂದರ್ಥ. ಅದಕ್ಕೆ ಒಂದು ಮಾತು ಕೂಡ ಇದೆ 'ಪರಾನ್ನಂ ಪ್ರಾಣಸಂಕಟಂ' ಎಂಬುದಾಗಿ. ಯಾರು ಬೇರೆಯವರ ಮನೆಯಲ್ಲಿ ಮಾಡುವ ಊಟವನ್ನೇ ಬಯಸುತ್ತಾರೋ ಅವರು ನರಕಭಾಜರಾಗುತ್ತಾರೆ ಎಂಬುದಾಗಿ ತಿಳಿಸುತ್ತದೆ ಧರ್ಮಶಾಸ್ತ್ರ. ಈ ಹಿಂದೆ ಸ್ವಪಾಕ ಎಂಬ ಒಂದು ವ್ಯವಸ್ಥೆ ಇತ್ತು. ಅಂದರೆ ತನ್ನ ಊಟಕ್ಕೆ ತಾನೇ ಪಾಕವನ್ನೂ ಮಾಡಿಕೊಳ್ಳಬೇಕು ಎಂಬುದಾಗಿ. ಅಂದರೆ ತನ್ನ ಮಡದಿ ಅಥವಾ ತಾಯಿ ಮಾಡಿದ ಅಡುಗೆಯಲ್ಲಿ ಕೇವಲ ರುಚಿ ಶುಚಿ ಮಾತ್ರವಿರದೆ, ಪ್ರೀತಿಯೂ ಸೇರಿರುವುದರಿಂದ ಇದಕ್ಕೆ ಬೆಲೆಯನ್ನು ಕಟ್ಟಲಾಗದು. ಆನಂದವು ಅನ್ನದಿಂದ ಸಿಗುತ್ತದೆ ಎಂಬುದನ್ನು ಉಪನಿಷತ್ತುಗಳು ಸಾರುತ್ತವೆ. ಇದು ಅನುಭವ ಸಿದ್ಧವೂ ಹೌದು. ಅನ್ನವನ್ನು ಊಟ ಮಾಡಿದರೆ ಯಾರಿಗೆ ತಾನೆ ತೃಪ್ತಿ ಸಿಗದು! ಆದ್ದರಿಂದ ಆನಂದಕ್ಕಾಗಿ ಎಂತಹ ಅನ್ನವನ್ನು? ಯಾವಾಗ? ಎಲ್ಲಿ ಸ್ವೀಕರಿಸಬೇಕು? ಎಂಬುದನ್ನು ಬಹಳ ಸೊಗಸಾಗಿ ವಿವರಿದ್ದಾನೆ ಧರ್ಮರಾಜ.

ಸೂಚನೆ : 01/12/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.   

ಅಷ್ಟಾಕ್ಷರೀ 71 ತಪಃಶ್ಲಾಘ್ಯೈಃ ಮಹರ್ಷಿಭಿಃ (Ashtakshari 71)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ತಮ್ಮನ್ನು ಕುರಿತು ಯಾರಾದರೂ ಒಳ್ಳೆಯ ಮಾತನ್ನಾಡಿದರೆ ಯಾರಿಗೆ ಸಂತೋಷವಾಗದು?

ತಾನು ಬರೆದ ಪದ್ಯವನ್ನೋ ಪುಸ್ತಕವನ್ನೋ ಹೆಚ್ಚು ಹೆಚ್ಚು ಜನ ಮೆಚ್ಚಬೇಕು, ತಾನಳಿದ ಮೇಲೂ ತನ್ನ ಕೃತಿಯುಳಿಯಬೇಕು - ಎನ್ನುವ ಆಸೆ ಲೋಕ-ಸಾಮಾನ್ಯ.


ವಾಲ್ಮೀಕಿಗಳ ಕಥೆಯೇ ಬೇರೆಯಷ್ಟೆ? ಬ್ರಹ್ಮನು ಅವರಿಗೆ ವರವಿತ್ತನಲ್ಲವೇ? ಎಲ್ಲಿಯ ತನಕ ಭೂತಲದಲ್ಲಿ ಗಿರಿಗಳಿರುವುವೋ ನದಿಗಳಿರುವುವೋ ಅಲ್ಲಿಯ ತನಕ ರಾಮಾಯಣ-ಕಥೆಯು ಲೋಕದಲ್ಲಿ ಪ್ರಚಾರವನ್ನು ಹೊಂದಿರುವುದು! - ಎಂದು.


ಇಲ್ಲೊಂದು ವಿಶೇಷವನ್ನೂ ಗಮನಿಸಬೇಕು. ರಾಮಾಯಣವನ್ನು ಬರೆದು ಮುಗಿಸಿದ ಮೇಲಲ್ಲ, ಬ್ರಹ್ಮನು ಈ ವರವಿತ್ತದ್ದು. ಬರೆಯುವ ಮುಂಚೆಯೇ! "ಏನೋ ಒಂದೆರಡು ಕಾಂಡಗಳಷ್ಟಾದರೂ ಸ್ಯಾಂಪಲ್ ಕಳಿಸಯ್ಯಾ, ಆಮೇಲೆ ಕಮಿಟಿಯ ಮುಂದೆ ಇಟ್ಟು ನೋಡೋಣ" - ಎನ್ನಲಿಲ್ಲ, ಬ್ರಹ್ಮ. ಒಂದೇ ಶ್ಲೋಕದ ಸ್ಯಾಂಪಲ್ ಸಾಕಾಯಿತು, ಬ್ರಹ್ಮನಿಗೆ: "ಮಾ ನಿಷಾದ …".


ಅದನ್ನಾದರೂ ವಾಲ್ಮೀಕಿಗಳು ಕುಳಿತು ಬರೆದದ್ದೇ? ಇಲ್ಲ. ಕಾಮಕೇಳಿಯಲ್ಲಿದ್ದ ಹಕ್ಕಿಯನ್ನು ಬೇಡನೊಬ್ಬನು ಹೊಡೆಯಲು, ಅದು ವಿಲವಿಲನೆ ಒದ್ದಾಡಿ ಸತ್ತಿತಲ್ಲವೇ? ಅದರ ಸಂಗಾತಿಯು ಅತ್ತಿತಲ್ಲವೇ? ಆ ಆರ್ತತೆ ಅವರಲ್ಲಿ ಶೋಕವುಕ್ಕಿಸಿತು. ಅವರ ಬಾಯಿಂದ ಆ ಪದ್ಯವನ್ನು ಹೊರಡಿಸಿತು.


ತನ್ನ ಬಾಯಿಂದ ಹೊಮ್ಮಿದ್ದೇನೆಂದು ಅವರಿನ್ನೂ ಆಶ್ಚರ್ಯಪಡುತ್ತಿರುವಷ್ಟರಲ್ಲಿಯೇ ಬ್ರಹ್ಮನೇ ಆವಿರ್ಭವಿಸಿದ. ನಸುನಕ್ಕು, "ನಿನ್ನ ಬಾಯಿಂದ ಬಂದದ್ದು ಶ್ಲೋಕವೇ. ಅದು ಬಂದದ್ದು ನನ್ನ ಪ್ರೇರಣೆಯಿಂದಲೇ. ನಾರದನಿಂದ ರಾಮನ ಕಥೆಯನ್ನು ಕೇಳಿರುವೆಯಲ್ಲಾ, ಅದನ್ನೇ ಬರೆ. ನಿನಗೆಲ್ಲವೂ ಗೋಚರವಾಗುವುದು - ಎಂದು ಹೇಳಿಯೇ, ಈ ವರವಿತ್ತದ್ದು!


ವಾಲ್ಮೀಕಿಗಳು ಅದೆಷ್ಟನೇ ಇಸವಿಯಲ್ಲಿ ಆ ಆದಿ-ಕಾವ್ಯವನ್ನು ರಚಿಸಿದರೋ ಬಲ್ಲವರಾರು? ಎಷ್ಟೋ ಸಹಸ್ರ-ವರ್ಷಗಳೇ ಕಳೆದಿರಬೇಕು. ಈವರೆಗಂತೂ ಬ್ರಹ್ಮನ ವರ ಸುಳ್ಳಾಗಿಲ್ಲ. ಸುಳ್ಳಾಗುವುದೇನು? "ತಿಣಿಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ" ಎಂದಿರುವಂತೆ, ಅದೆಷ್ಟು ಕವಿಗಳು ಅದೇ ಕಥೆಯನ್ನೇ ಅದೆಷ್ಟು ಪ್ರಕಾರಗಳಲ್ಲಿ ಮತ್ತೆ ಮತ್ತೆ ಚಿತ್ರಿಸಿದ್ದಾರೆಂದು ಎಣಿಸಿಟ್ಟವರಾರು? ಅವಲ್ಲೂ ಲಬ್ಧ-ಕೃತಿಗಳೆಷ್ಟೋ, ನಷ್ಟ-ಕೃತಿಗಳೆಷ್ಟೋ! ಅದೂ ಏನು ಒಂದೆರಡು ಭಾಷೆಗಳಲ್ಲೇ?


ಅಷ್ಟೊಂದು ಮಂದಿ ಕವಿಗಳಿಗೇ ಉಪಜೀವ್ಯವೂ ಅನುಕಾರ್ಯವೂ ಆಯಿತು, ಈ ಕೃತಿ - ಎಂದರೆ, ಅಷ್ಟೇ ಸಾಕು, ಅದರ ಹಿರಿಮೆ-ಗರಿಮೆಗಳನ್ನು ಹೇಳಲು!


ಏನು ಉಪಜೀವ್ಯವೆಂದರೆ? ತಮ್ಮ ಬದುಕಿಗೇ ಆಸರೆಯಾಗಬಲ್ಲದ್ದು ಯಾವುದೋ, ಅದು ಉಪಜೀವ್ಯ. ರಾಮಾಯಣ-ಮಹಾಭಾರತ ಕಥೆಗಳು ಎಷ್ಟೊಂದು ಕವಿ-ಮುಖ್ಯರಿಗೂ ಉಪಜೀವ್ಯವಾಗಿರುವುವಲ್ಲವೇ? ಕಾಳಿದಾಸನಿಗಿಂತಲೂ ಕವಿಯೇ? ಆತನ ಕೃತಿಗಳನ್ನುಪಜೀವಿಸಿಯೇ ಹಲವು ಕವಿಗಳು ಬೆಳಗಿದರಲ್ಲವೇ? ಕಾಳಿದಾಸನೇ ವಾಲ್ಮೀಕಿಗಳನ್ನು "ಪೂರ್ವ-ಸೂರಿ"ಯೆಂದು ಆದರಿಸಿದನಲ್ಲವೇ? ಅವರ ಕಥಾ-ವಸ್ತುವನ್ನೇ ಆಧರಿಸಿದನಲ್ಲವೇ?


ಏನು ಅನುಕಾರ್ಯವೆಂದರೆ? ಯಾವುದನ್ನು ಅನುಕರಿಸಲು ಇಷ್ಟವಾಗುವುದೋ ಅದು ಅನುಕಾರ್ಯ. ವೈದಿಕ-ಕವಿಯಾದ ಕಾಳಿದಾಸನೂ, ಬಳಿಕ ಬಂದ ಬೌದ್ಧ-ಕವಿಯಾದ ಅಶ್ವಘೋಷನೂ, ವಾಲ್ಮೀಕಿಗಳು ಬರೆದಂತೆಯೇ ತಾವೂ ಬರೆಯಬೇಕೆಂದು ಹಂಬಲಿಸಿದರಲ್ಲವೇ? "ಆಹಾ! ಬರೆದರೆ ಹಾಗೆ ಬರೆಯಬೇಕು!" - ಎಂದು ಆಸೆಪಡಲು ಯೋಗ್ಯವಾದದ್ದೇ ಅನುಕಾರ್ಯ.


ವಾಲ್ಮೀಕಿ-ರಚಿತವನ್ನು ಕೊಂಡಾಡಿರುವ ಪಾಶ್ಚಾತ್ತ್ಯ-ಕವಿಗಳೋ ವಿಮರ್ಶಕರೋ ಹಲವರಿರಬಹುದು. ಅದು ನಮಗೆ ಪ್ರಕೃತವಲ್ಲ. ಆಂದಿನಿಂದ ಇಂದಿನವರೆಗೆ ಕೋಟಿ ಕೋಟಿ ಮಂದಿಗೆ ರಾಮಾಯಣವು ಆಸ್ವಾದ್ಯವಾಗುಳಿದಿದೆ. ಈಗ ನವಮಾಧ್ಯಮಗಳಲ್ಲೂ ಮೂಡಿದೆ. ಜನರಿಗೆಂದಿಗೂ ದಾರಿದೀಪವಾಗಿದೆ. ಅವೆಲ್ಲವೂ ವಾಲ್ಮೀಕಿ-ಕೃತಿಯ ಹೆಗ್ಗಳಿಕೆಗಳೇ.


ಆದರೆ ಇವೆಲ್ಲಕ್ಕಿಂತಲೂ ಮಿಗಿಲಾದ ಅಳತೆಗೋಲೊಂದಿದೆ. ಯಾವುದದು?


ರಾಮಾಯಣ-ರಚನೆಯನ್ನು ಪೂರೈಸುತ್ತಿದ್ದಂತೆಯೇ ವಾಲ್ಮೀಕಿಗಳು ಚಿಂತಿಸಿದುದು, "ಇದನ್ನಾರು ಪ್ರಯೋಗ ಮಾಡುವವರು?" ಎಂಬುದು. ಪ್ರಯೋಗವೆಂದರೆ, ಗಾನವಾಗಿಯೋ ಅಭಿನಯವಾಗಿಯೋ ಪ್ರಜೆಗಳ ಮುಂದಿರಿಸುವುದು. ಅವರು ಹಾಗೆಂದುಕೊಳ್ಳುತ್ತಿರುವಾಗಲೇ ಅವರಲ್ಲಿಗೆ ಬಂದು ಅವರ ಪಾದಗಳನ್ನು ಹಿಡಿದವರು, ಪುಟ್ಟವರಾದ ಲವ-ಕುಶರು. ರಾಮಾಯಣದ ಮೊಟ್ಟಮೊದಲ ಅನುಗ್ರಹವಾದದ್ದು ಅವರಿಗೇ!


ಪೂರ್ಣ-ಕೃತಿಯನ್ನು ವಾಚೋವಿಧೇಯವಾಗಿಸಿಕೊಂಡು ಅವರಿಬ್ಬರೂ ಹಾಡಿದರು. ಎಲ್ಲಿ? ಋಷಿಗಳು, ವಿಪ್ರರು, ಸಾಧುಗಳು ಸೇರುವೆಡೆಯಲ್ಲಿ. ಅವರೆಲ್ಲರೇನೆಂದರು? ಎನ್ನುವುದೇನು, ಅವರು ಮೆಚ್ಚಿ ಹರಿಸಿದ ಕಣ್ಣೀರಿಗಿಂತಲೂ ಪ್ರಶಂಸೆಯೇ? ಆದರೂ ಸಾಧು ಸಾಧು ಎಂದರು! ಅಹೋ ಎಂದರು! ಅವರ ಮೆಚ್ಚುಗೆ, ಈ ಜೋಡಿಗಾಗಿ: ಧರ್ಮ-ತತ್ತ್ವಕ್ಕೆ ಕನ್ನಡಿ ಹಿಡಿದ ಮಧುರ-ಮೂಲಕೃತಿಗಾಗಿ; ಅದಕ್ಕೆ ಮೆರುಗು ತರುವಂತೆ ಗಾನಮಾಡಿದ ಲವ-ಕುಶರ ಬಂಧುರ-ನಿರೂಪಣೆಗಾಗಿ.


ಹಾಗೆ ತಲೆದೂಗಿದವರು, ತಮ್ಮ ತಪಸ್ಸಿನಿಂದಾಗಿ ಪ್ರಶಂಸನೀಯರೆನಿಸಿದ್ದ ಮಹರ್ಷಿಗಳು! (ತಪಃಶ್ಲಾಘ್ಯೈಃ ಮಹರ್ಷಿಭಿಃ). ಶ್ರೀರಂಗಮಹಾಗುರುಗಳ ಮಾತಿನಲ್ಲಿ ಹೇಳುವುದಾದರೆ, "ಪ್ರಶಂಸೆಯು ದೊರೆತುದು ಋಷಿಗಳ ಸದಸ್ಸಿನಲ್ಲಿ, ಅತೀಂದ್ರಿಯವಾದ ಬ್ರಹ್ಮಾನಂದವನ್ನು ಅನುಭವಿಸುತ್ತಿರುವ ಮುನಿಗಳ ಸದಸ್ಸಿನಲ್ಲಿ!" ಸದಸ್ಸೆಂದರೆ ಸಭೆ.


ಮಹಾತ್ಮರು ಬೆಲೆಗೊಟ್ಟರೇ ಬೆಲೆ. ಸಾವಿರಮಂದಿ ಸಾಧಾರಣರು ಇತ್ತರೆ ಅಲ್ಲ, ಅಲ್ಲವೇ?


ಸೂಚನೆ: 30/11/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 41 ಬೆಟ್ಟವೆತ್ತಿ ಇಂದ್ರನ ಸೊಕ್ಕಡಗಿಸಿದ ಕೃಷ್ಣನು ತೋರಿದ ಬಗೆಗಳು (Krishakarnamrta 41 Bettavetti Indrana Sokkadagisida Krishnanu Torida Bagegalu)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಆನಂದೇನ ಯಶೋದಯಾ

ಇನ್ನೂ ಏಳು ವರ್ಷದ ಮಗುವಾದ ಕೃಷ್ಣನು ಹಲವು ಲೋಕೋತ್ತರ ಕಾರ್ಯಗಳನ್ನು ಮಾಡಿದ್ದನಷ್ಟೆ?

ಆರಂಭದಿಂದಲೇ ಅಸುರರ ಕಾಟ. ಎಳಸಿನಿಂದಲೇ ಸಾವಿನ ಸಾಧ್ಯತೆಗಳು! ಅಸುರರೋ, ಬಹುರೂಪಿಗಳು. ಅದೆಷ್ಟು ತೆರನಾಗಿ ಆತನನ್ನು ಸಂಹರಿಸಲು ಯತ್ನಿಸಿದರು! ಪೂತನೆ, ಶಕಟಾಸುರ, ತೃಣಾವರ್ತ, ಬಕಾಸುರ, ವತ್ಸಾಸುರ, ಧೇನುಕಾಸುರ - ಇವರುಗಳ ಸಂಹಾರ, ಹಾಗೂ ಕಾಳಿಯ-ಸರ್ಪ-ಮರ್ದನ - ಇವೆಲ್ಲವೂ ಸಾಧಾರಣ ಮನುಷ್ಯರಿಗೆ ಅಸಾಧ್ಯವೆನಿಸತಕ್ಕವು. ಇನ್ನು ಗೋವರ್ಧನೋದ್ಧರಣವಂತೂ ಹೇಳಲೇಬೇಕಿಲ್ಲ, ಅನೂಹ್ಯ-ಘಟನೆಯೇ ಅದು. ಯಾವುದನ್ನು ಊಹಿಸಿಕೊಳ್ಳಲೂ ಆಗದೋ ಅದು ಅನೂಹ್ಯ.

ಏನು ಗೋವರ್ಧನೋದ್ಧಾರವೆಂದರೆ? ಅದೇಕಾಯಿತು? ಅದರಿಂದಾದದ್ದೇನು? - ಇವು ಪ್ರಕೃತ-ಶ್ಲೋಕಕ್ಕೆ ಉಪಯುಕ್ತವಾದಂತಹವು. ಬೇರೆ ಬೇರೆಯವರಿಂದ ಅದಕ್ಕೆ ಬಂದ ನಾನಾ- ಪ್ರತಿಕ್ರಿಯೆಗಳೇನೆಂಬುದನ್ನು ಈ ಶ್ಲೋಕದಲ್ಲಿ ನಿರೂಪಿಸಿದೆ. ಕಥಾ-ಸಂದರ್ಭವು ಹೀಗಿದೆ:

ಒಮ್ಮೆ ಇಂದ್ರ-ಯಾಗವನ್ನು ನೆರವೇರಿಸಲು ಗೋಪರು ಆರಂಭಿಸಿದ್ದರು. ಅವರೇನನ್ನು ಮಾಡಲಿರುವರೆಂಬುದನ್ನು ಅರಿತ ಕೃಷ್ಣ ಆ ಬಗ್ಗೆ ಅವರಲ್ಲಿ ವಿಚಾರಿಸಿದ.

ಆಗ ನಂದ ಹೇಳಿದ: ಮಳೆಗೆ ಇಂದ್ರನೇ ಪ್ರಭುವಲ್ಲವೇ? ಮೋಡಗಳು ಆತನ ರೂಪಗಳೇ ತಾನೆ? ಪ್ರಾಣಿಗಳಿಗೆ ಮಳೆಯೇ ಜೀವನಾಧಾರ. ಎಂದೇ, ಅವನಿಂದಾಗುವ ಮಳೆಯಿಂದಾಗಿ ಜನಿಸುವ ದ್ರವ್ಯಗಳಿಂದಲೇ ಆತನಿಗೆ ಪೂಜೆ. ಪರಂಪರಾಗತವಾದ ಅದನ್ನು ಬಿಡಲಾಗದು. ಅದಕ್ಕೆ ಕೃಷ್ಣನು ಹೇಳಿದನು: "ನಿಮ್ಮ ನಿಮ್ಮ ಕರ್ಮಗಳನ್ನು ನೀವು ನಿಷ್ಠೆಯಿಂದ ಮಾಡುತ್ತಿದ್ದರಾಯಿತು. ಇಲ್ಲಿ ಇಂದ್ರನ ಪಾತ್ರವೇನಿದೆ?

ಬ್ರಾಹ್ಮಣನಿಗೆ ವೇದರಕ್ಷೆಯು ಮುಖ್ಯ; ಕ್ಷತ್ರಿಯನಿಗೆ ಭೂರಕ್ಷೆಯು ಮುಖ್ಯ; ವೈಶ್ಯನಿಗೆ ನಾಲ್ಕು ವೃತ್ತಿಗಳು - ಕೃಷಿ, ವಾಣಿಜ್ಯ, ಗೋರಕ್ಷೆ ಹಾಗೂ ಕುಸೀದ (ಲೇವಾದೇವಿ ವ್ಯವಹಾರ); ಶೂದ್ರನಿಗೆ ದ್ವಿಜಸೇವೆಯು ಮುಖ್ಯ. ವೈಶ್ಯರಾದ ನಮಗೆ ಗೋರಕ್ಷೆಯೇ ಜೀವಿಕೆ.

ರಜಸ್ಸು-ಸತ್ತ್ವ-ತಮಸ್ಸು - ಇವುಗಳಿಂದ ಕ್ರಮವಾಗಿ ಸೃಷ್ಟಿ-ಸ್ಥಿತಿ-ಲಯಗಳಾಗುವುವು. ಮೇಘಗಳು ಮಳೆಗರೆಯಲು ರಜಸ್ಸು ಕಾರಣ, ಮಹೇಂದ್ರನಲ್ಲ. ಆದ್ದರಿಂದ ಇಂದ್ರ-ಯಾಗಕ್ಕೆಂದು ಶೇಖರಿಸಿಕೊಂಡಿರುವ ವಸ್ತುಗಳಿಂದಲೇ ಗೋ-ಬ್ರಾಹ್ಮಣ-ಪೂಜೆ, ಗಿರಿ-ಪೂಜೆಗಳನ್ನು ನೆರವೇರಿಸಿರಿ. ಎಲ್ಲರಿಗೂ ಸಂತರ್ಪಣೆಯಾಗಲಿ. ಕೆಳಜಾತಿಯೆನಿಸಿದವರಿಗೂ ಸತ್ಕಾರವಾಗಲಿ. ಗೋ-ಅಶ್ವಗಳಿಗೂ ಯಥಾರ್ಹವಾದ ಸಂತರ್ಪಣವಾಗಲಿ. ಎಲ್ಲರೂ ಚೆನ್ನಾಗಿ ಅಲಂಕರಿಸಿಕೊಂಡು, ರುಚಿಯಾಗಿ ಉಂಡುತಿಂದು, ಸೊಗಸಾಗಿ ಸುಗಂಧ-ಲೇಪನ ಮಾಡಿಕೊಂಡು, ಒಳ್ಳೆಯ ಬಟ್ಟೆಯುಟ್ಟು ಗೋ-ವಿಪ್ರ-ಅಗ್ನಿ-ಶೈಲಗಳಿಗೆ ಪ್ರದಕ್ಷಿಣ ಮಾಡುವಿರಾದರೆ ನನಗೆ ಸಂತೋಷವಾಗುವುದು".

ಆತನ ಮಾತಿನಂತೆಯೇ ನಂದಾದಿಗಳು ನಡೆದುಕೊಂಡರು. ಗೋಪಿಯರು ಕೃಷ್ಣನ ಪರಾಕ್ರಮಗಳನ್ನು ಗಾನ-ರೂಪವಾಗಿ ಹಾಡಿದರು, ಆಡಿದರು. ಕೃಷ್ಣನೂ ತಾನೇ ಶೈಲನಾಗಿ ಬೃಹದಾಕಾರನಾಗಿ ನಿಂತು ಪೂಜೆಯನ್ನು ಸ್ವೀಕರಿಸಿ, ಜೊತೆಗೇ ಸಾಧಾರಣ-ರೂಪದಲ್ಲೂ ತೋರಿ, "ಓ ನೋಡಿ, ಪರ್ವತವು ಪೂಜೆಯನ್ನು ಸ್ವೀಕರಿಸಿದೆ! ಇದಕ್ಕೇ ನಮ್ಮ ನಮಸ್ಕಾರವಿರಲಿ" ಎಂದನು. ಪೂಜೆ ಮುಗಿಯಲು, ಎಲ್ಲರಿಗೂ ವ್ರಜಕ್ಕೆ ಹಿಂದಿರುಗಿದರು.

ಗೋಪರ ಮೇಲೂ, ಕೃಷ್ಣನ ನಾಯಕತ್ವ ಹೊಂದಿದ್ದ ನಂದ ಮೊದಲಾದವರ ಮೇಲೂ, ಇಂದ್ರನಿಗೆ ಕೋಪವುಕ್ಕಿತು. ಪ್ರಳಯ-ಕಾಲದ ಮೇಘಗಳನ್ನು ಪ್ರಚೋದಿಸಿದ, ಇಂದ್ರ: "ಆಹಾ! ವನವಾಸಿಗಳಾದ ಈ ಗೋಪರಿಗೆ ಅದೆಷ್ಟು ಗರ್ವ! ಕೃಷ್ಣನೊಬ್ಬ ಮರ್ತ್ಯ. ಆತನನ್ನು ನೆಚ್ಚಿಕೊಂಡು ದೇವತೆಗಳನ್ನೇ ನಿರ್ಲಕ್ಷ್ಯಮಾಡುವುದೇ? ಕೃಷ್ಣನು ವಾಚಾಳ (ಬರೀ ಮಾತಿನ ಮಲ್ಲ), ತನ್ನನ್ನೇ ಪಂಡಿತನೆಂದುಕೊಂಡಿರುವ ಅಜ್ಞ - ಆತನನ್ನು ನಂಬಿಕೊಂಡು ನನಗೆ ಅಪ್ರಿಯವೆಸಗಿರುವರು! ಅವರಿಗೆ ಗರ್ವ-ಭಂಗವಾಗಬೇಕು. ಅದಕ್ಕೇ ಅವರ ಗೋವುಗಳನ್ನು ನಾಶಪಡಿಸಿ! ನಾನೂ ಐರಾವತವನ್ನೇರಿ ಆಮೇಲೆ ಬರುತ್ತೇನೆ, ಗೋಕುಲ-ವಿಧ್ವಂಸವಾಗಲಿ!"

ಅದರಂತೆ ಮೋಡಗಳು ಧಾರೆಧಾರೆಯಾಗಿ ಮಳೆ ಸುರಿಸಿದವು. ಆಗಾದ ಗುಡುಗುಗಳೇನು, ಮಿಂಚುಗಳೇನು! ಝಂಝಾವಾತವೇನು, ಆಲಿಕಲ್ಲುಗಳೇನು! ಜಲಪ್ರವಾಹದಿಂದ ನೆಲವೇ ಕಾಣದಾಯಿತು! ಪಶುಗಳು ನಡುಗಿದವು, ಗೋಪ-ಗೋಪಿಯರಿಗೆ ಶೈತ್ಯವು ಹಿಡಿದುಕೊಂಡಿತು. ಎಲ್ಲರೂ ಕೃಷ್ಣನಿಗೆ ಶರಣಾದರು, ಗೋವುಗಳೂ ಕೃಷ್ಣನ ಪಾದದತ್ತಲೇ ಬಂದವು. "ಕೃಷ್ಣ, ಕೃಷ್ಣ! ಕಾಪಾಡು ಗೋಕುಲವನ್ನು! - ಎಂದು ಎಲ್ಲರೂ ಬೇಡಿಕೊಂಡರು.

ಇಂದ್ರನ ಚೇಷ್ಟೆಯಿದು - ಎಂದು ಕೃಷ್ಣನರಿತನು. ಅಕಾಲವೃಷ್ಟಿ-ಅತಿವಾತ – ಶಿಲಾವರ್ಷಗಳಿಗೆ ಕಾರಣನಾದ ಇಂದ್ರನ ಗರ್ವವನ್ನು ಮುರಿಯಬೇಕೆಂದು ಯೋಚಿಸಿದನು. ಹೀಗೆ ಹೇಳಿದವನೇ, ಒಂದೇ ಹಸ್ತದಿಂದಲೇ ಲೀಲೆಯಿಂದಲೇ ಗೋವರ್ಧನ-ಗಿರಿಯನ್ನು ಎತ್ತಿಹಿಡಿದನು - ಅದೇನೋ ನಾಯಿಕೊಡೆಯೆಂಬಂತೆ!

ಮತ್ತು ಗೋಪರಿಗೆ ಹೇಳಿದನು "ನಾನೆತ್ತಿರುವ ಗಿರಿಯಡಿಯಲ್ಲಿ ನಿಲ್ಲಿರಿ. ಹೆದರಬೇಡಿ!" ಅವರೂ ಅಂತೆಯೇ ಮಾಡಿದರು. ಏಳು ದಿನಗಳ ಕಾಲ ಕೃಷ್ಣನು ಅಲ್ಲಾಡಲಿಲ್ಲ. ಹಸಿವು-ಬಾಯಾರಿಕೆಗಳನ್ನು ಲೆಕ್ಕಿಸಲಿಲ್ಲ.

ಇಂದ್ರನಿಗೆ ಮಹಾ-ವಿಸ್ಮಯವಾಯಿತು, ಕೃಷ್ಣನ ಯೋಗ-ಶಕ್ತಿಯನ್ನು ಕಂಡು! ತನ್ನ ಗರ್ವವು ಭಗ್ನವಾಯಿತು. ಮೋಡಗಳನ್ನು ನಿಲ್ಲಿಸಿದನು. ಆಕಾಶವು ತಿಳಿಯಾಯಿತು. ಸೂರ್ಯನು ಗೋಚರಿಸಿದನು. ಮಳೆಗಾಳಿಗಳು ನಿಂತವು.

"ಎಲ್ಲರೂ ನಿಮ್ಮ ನಿಮ್ಮ ಮನೆಗಳಿಗೆ ಹೋಗಬಹುದು. ಇನ್ನು ಭಯವಿಲ್ಲ " - ಎಂಬ ಕೃಷ್ಣನ ಮಾತಿನಿಂದ ಎಲ್ಲರಿಗೂ ಭರವಸೆಯುಂಟಾಯಿತು. ಕೃಷ್ಣನೂ ಗೋವರ್ಧನವನ್ನು ಮೊದಲಿನಂತೆಯೇ ನಿಲ್ಲಿಸಿದನು.

ಪ್ರೇಮ-ವೇಗದಿಂದ ಗೋಪ-ಗೋಪಿಯರು ಕೃಷ್ಣನನ್ನು ಆಲಿಂಗಿಸಿಕೊಂಡರು, ಆತನನ್ನು ಅರ್ಚಿಸಿದರು. ದೇವತೆಗಳೂ ಗಂಧರ್ವರೂ ಕೃಷ್ಣ-ಸ್ತುತಿಯನ್ನು ಮಾಡಿದರು, ಹೂಮಳೆಗರೆದರು. ಶಂಖ-ದುಂದುಭಿಗಳು ನಾದ ಮಾಡಿದವು. ಗಾಂಧರ್ವ-ಗಾನವಾಯಿತು. ಎಲ್ಲರೊಂದಿಗೆ ಕೃಷ್ಣನು ಗೋಕುಲವನ್ನು ಸೇರಿಕೊಂಡನು.

ಹೀಗೆ ಗೋವರ್ಧನವನ್ನು ಕೃಷ್ಣನೆತ್ತಿಹಿಡಿದಾಗ ಯಾರಾರಿಗೆ ಹೇಗೆ ಹೇಗೆ ತೋರಿತು - ಎಂಬುದನ್ನು ಲೀಲಾಶುಕನು ಏಳೆಂಟುಬಗೆಯಾಗಿ ಚಿತ್ರಿಸಿದ್ದಾನೆ.

ತಾಯಿ ಯಶೋದೆಗೆ ಆನಂದವಾಯಿತು. ಸಾಕಿ ಸಲಹುವವಳಿಗೆ ಕೆಲವೊಮ್ಮೆ ಹೆತ್ತಮ್ಮನಿಗಿಂತಲೂ ಹೆಚ್ಚು ಆತಂಕವಾದೀತಲ್ಲವೆ! ಈಗ ಅಷ್ಟೇ ಸಂತೋಷ! ಇನ್ನು ಗೋಪ-ನಾರಿಯರ ಹೃದಯದಲ್ಲಿ ವೀರ-ಕೃಷ್ಣನ ಬಗ್ಗೆ ಪ್ರೀತಿಯುಕ್ಕಿತು.

ದಿವಿಯಲ್ಲಿದ್ದ ಇಂದ್ರನಿಗೆ ಆತಂಕ-ಆಶಂಕೆಗಳಾದುವು. ಆಕಾಶ-ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಿದ್ಧರು ಪುಷ್ಪಾರ್ಚನೆಗೈದರು. ಗೋಪ-ಕುಮಾರರಿಗೆ ಅತ್ತ ವ್ಯಾಕುಲತೆಯೂ ಆಯಿತು, ಇತ್ತ ಈರ್ಷ್ಯೆಯೂ ಆಯಿತು. ಪೌರರಿಗಂತೂ ಕಾರುಣ್ಯವುಕ್ಕಿತು - ಅಯ್ಯೋ ಈ ಹುಡುಗನ ಗತಿಯೇನು? - ಎಂದೆನಿಸಿತು. ಇನ್ನಿತರ ಜನರಿಗೆ ಆಶ್ಚರ್ಯವಾಯಿತು.

ಗೋವರ್ಧನಗಿರಿಯನ್ನು ಎತ್ತಿಹಿಡಿದಿದ್ದ ಕೃಷ್ಣನನ್ನು ಹೀಗೆಲ್ಲಾ ಬಗೆಬಗೆಯಾಗಿ ಕಂಡರು, ಅಲ್ಲಿಯ ಭುವಿ-ದಿವಿಗಳಲ್ಲಿಯ ಮಂದಿ! ಹೀಗೆಲ್ಲ ತೋರಿದ ಕೃಷ್ಣನು ನಿಮ್ಮನ್ನು ಕಾಪಾಡಲಿ - ಎನ್ನುತ್ತಾನೆ, ಲೀಲಾಶುಕ.

ಪ್ರಸಂಗವೊಂದನ್ನು ಬಹುಮಂದಿ ಬಹುಬಗೆಯಾಗಿ ಕಾಣುವಲ್ಲಿ ಉಲ್ಲೇಖಾಲಂಕಾರವೆನ್ನುತ್ತಾರೆ. ಅದಿಲ್ಲಿದೆ.

ಅಂತೂ ತಾಯಿ ಯಶೋದೆ ಹಾಗೂ ಗೋಪಿಯರೆಂಬ ನಾರಿಯರು, ದೇವಲೋಕ-ಅಂತರಿಕ್ಷಲೋಕಗಳ ಇಂದ್ರ-ಸಿದ್ಧರು, ಗೋಪಬಾಲರು, ಪುರಜನರು, ಇತರರು - ಇವರೊಬ್ಬೊಬ್ಬರಿಗೂ ಉಂಟಾದ ಮನಸ್ಸ್ಥಿತಿಗಳನ್ನು ಕವಿಯು ಚಿತ್ರಿಸಿದ್ದಾನೆ.

ಹೀಗೆ ವ್ಯಾಪಕವಾದ ನೋಟ, ಕವಿಯದು. ಬಗೆಬಗೆಯ ಮಂದಿಯ ಅಂತರಂಗವನ್ನು ಅಂತರ್ನೇತ್ರದಿಂದ ಕಂಡುಕೊಂಡ ಕವಿಯ ಪ್ರತಿಭೆಯೂ ಅಗಾಧವಾದದ್ದೇ ಸರಿ!

ಆನಂದೇನ ಯಶೋದಯಾ, ಸಮದನಂ ಗೋಪಾಂಗನಾಭಿಶ್ಚಿರಂ,

ಸಾಶಂಕಂ ಬಲವಿದ್ವಿಷಾ, ಸಕುಸುಮೈಃ ಸಿದ್ಧೈಃ, ಪಥಿ ವ್ಯಾಕುಲಂ |

ಸೇರ್ಷ್ಯಂ ಗೋಪಕುಮಾರಕೈಃ, ಸಕರುಣಂ ಪೌರೈಃ, ಜನೈಃ ಸಸ್ಮಿತಂ -

ಯೋ ದೃಷ್ಟಃ ಸ ಪುನಾತು ನೋ ಮುರರಿಪುಃ ಪ್ರೋತ್ಕ್ಷಿಪ್ತ-ಗೋವರ್ಧನಃ!! ||

ಸೂಚನೆ : 30/11/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.