Monday, August 16, 2021

ಷೋಡಶೋಪಚಾರ - 13 ಪುಷ್ಪ (Shodashopachaara - 13 Pushpa)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)



ಹೂವು ಬಿಡುವ ಕಾಲವನ್ನು ಪ್ರಕೃತಿಮಾತೆಯ ಪ್ರಸವಕಾಲವೆಂದು ಕರೆಯುತ್ತಾರೆ. ಒಂದು ಮಗು ಹುಟ್ಟಿದರೆ ಮನೆಮಂದಿಗೆಲ್ಲಾ ಸಂಭ್ರಮ. ಅಂತೆಯೇ  ಪ್ರಕೃತಿಯಲ್ಲಿ ಹೂವುಗಳು ಬಿಟ್ಟಾಗ ಅವಳ ಮಕ್ಕಳಾದ ಎಲ್ಲಾ ಪ್ರಾಣಿಗಳಿಗೂ ಸಂಭ್ರಮ. ಮನಸ್ಸನ್ನು ಪ್ರಫುಲ್ಲಗೊಳಿಸುವ ಸಾಧನಗಳಲ್ಲಿ ಹೂವಿಗೆ ಪ್ರಥಮಸ್ಥಾನವಿದೆ. ಇದರ ದ್ಯೋತಕವಾಗಿ ಹೂವನ್ನು ಕೊಟ್ಟು ಬಂದ ಅತಿಥಿಗಳನ್ನು ಆದರಿಸುತ್ತೇವೆ, ವಿಶೇಷಪೂಜಾದಿ ಸಂದರ್ಭಗಳಲ್ಲಿ ಸುವಾಸಿನಿಯರನ್ನು ಮನೆಗೆ ಕರೆದು ಮುಡಿಯಲು ಹೂವನ್ನು ಕೊಡುತ್ತೇವೆ. ಮನಸ್ಸು ಎಂತಹದ್ದು! ಎಂದು ಹೇಳುವಾಗ 'ಮನಸ್ಸು ಹೂವಿನಷ್ಟು ಮೃದು' ಎಂದು ಹೂವನ್ನೇ ದೃಷ್ಟಾಂತವಾಗಿ ಕೊಡುತ್ತೇವೆ. ಇದಕ್ಕೆಲ್ಲ ಕಾರಣ- ಮನಸ್ಸನ್ನು ಮುದಗೊಳಿಸುವ ಶಕ್ತಿ ಹೂವಿಗೆ ಇದೆ ಎಂಬುದು.

ನಮ್ಮ ಜೀವನದ ಉದ್ದೇಶವೇ ಭಗವಂತನನ್ನು ಕಾಣುವುದಾಗಿದೆ. ಈ ಉದ್ದೇಶದಿಂದಲೇ ನಾವು ಭಗವಂತನನ್ನು ಅರ್ಚಿಸುತ್ತೇವೆ. ಈ ಅರ್ಚನೆಯಲ್ಲಿ ಭಗವಂತನ ಪುಷ್ಪೋಪಚಾರಕ್ಕೆ ವಿಶೇಷ ಆದ್ಯತೆ ಇದೆ. ಆಯಾ ಕಾಲದಲ್ಲಿ ಸಿಗುವ, ಮಾಸದಿರುವ, ನಿರ್ಮಲವಾದ ಹೂವುಗಳಿಂದ ಭಗವಂತನನ್ನು ಅರ್ಚಿಸಬೇಕು. ಹೂವಿನ ಸೌಗಂಧ್ಯ-ಸೌಕುಮಾರ್ಯ ಇರುವಾಗಲೇ ಅದನ್ನು ಬಳಸಬೇಕು. ಕೆಲವು ಹೂವುಗಳು ಕೆಲವು ಘಂಟೆಗಳಿಲ್ಲಿ ಬಾಡುತ್ತವೆ. ಇನ್ನು ಕೆಲವು ಕೆಲವು ದಿನಗಳಿರಬಹುದು. ಭಗವಂತನಿಗೆ ಶ್ರೇಷ್ಠವಾದ ಹೂವುಗಳಿಂದಲೇ ಅರ್ಚಿಸಬೇಕು. ತನ್ನ ಪರಿಶ್ರಮದಿಂದ ತನ್ನ ಭೂಮಿಯಲ್ಲಿ ಬೆಳೆದ ಹೂವು ಅತ್ಯಂತ ಶ್ರೇಷ್ಠ. ಮತ್ತೊಬ್ಬರ ಜಾಗದಲ್ಲಿ ತಾನು ಬೆಳೆದದ್ದು ಮಧ್ಯಮ. ಮತ್ತು ಖರೀದಿಸಿ ತಂದ ಹೂವೂ ಮಧ್ಯಮವೇ. ಬೇರೆಯವರ ಜಾಗದಲ್ಲಿರುವ ಹೂವನ್ನು ಅವರ ಅಪ್ಪಣೆಯಿಲ್ಲದೆ ಪಡೆಯುವುದು ಅಧಮ ಎಂಬುದಾಗಿ ಶಾಸ್ತ್ರದಲ್ಲಿ ಹೇಳಿದೆ. ಏಕೆಂದರೆ ಅದು ಕಳ್ಳತನದಿಂದ ಸಂಪಾದಿಸಿದ ಹೂವಷ್ಟೇ!


ದೇವತಾಭೇದದಿಂದ ಹೂವುಗಳ ಅರ್ಚನೆಯಲ್ಲೂ ಭಿನ್ನತೆಯುಂಟು. ಎಲ್ಲಾ ಹೂಗಳನ್ನು ಎಲ್ಲಾ

ದೇವರಿಗೆ ಬಳಸುವಂತಿಲ್ಲ. ಮನೆಗೆ ಬಂದ ಅತಿಥಿಗಳಿಗೆ ಅವರಿಗಿಷ್ಟವಾದದ್ದನ್ನು ಕೊಟ್ಟರೆ ತಾನೇ ಅವರು ಸಂತೋಷ ಪಡುತ್ತಾರೆ! ಅಂತೆಯೇ ದೇವತೆಗಳಿಗೆ ಇಷ್ಟವಾದ ಹೂವು ಯಾವುದು? ಎಂಬುದನ್ನು ತಿಳಿದು ಪೂಜಿಸುವುದು ಅತ್ಯಂತ ಶ್ರೇಷ್ಠ. ಪುಷ್ಪದಲ್ಲಿ ಸುಗಂಧ, ದುರ್ಗಂಧ ಮತ್ತು ನಿರ್ಗಂಧ ಎಂದು ಮೂರು ಬಗೆಗಳಿವೆ. ಸುಗಂಧವೂ, ಸುವರ್ಣವೂ ಮೃದುವೂ ಆದ ಹೂವು ಭಗವಂತನಿಗೆ ಶ್ರೇಷ್ಠ. "ಕಮಲವು ದೃಷ್ಟಿಯಿಂದಲೂ, ಪರಿಮಳ, ವರ್ಣ, ಮಾರ್ದವ ಎಲ್ಲಾ ಬಗೆಯಿಂದಲೂ ಶ್ರೇಷ್ಠವಾದ ಪುಷ್ಪ" ಎಂಬುದಾಗಿ ಶ್ರೀರಂಗ ಮಹಾಗುರುಗಳು ಹೇಳಿದ್ದನ್ನು ಜ್ಞಾಪಿಸಿಕೊಳ್ಳಬಹುದು. ಹೀಗೆ ಉತ್ತಮವಾದ ಪುಷ್ಪವನ್ನು ಭಗವಂತನಿಗೆ ಅರ್ಪಿಸಿ ನಮ್ಮ ಸಾತ್ತ್ವಿಕವಾದ ಇಷ್ಟಾರ್ಥವನ್ನು ಪಡೆಯೋಣ.

ಸೂಚನೆ : 14/8/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.