ವಾಲ್ಮೀಕಿಮಹರ್ಷಿಗಳು ಶ್ರೀರಾಮನ ಗುಣಗಳನ್ನು ರಾಮಾಯಣದಲ್ಲಿ ತಿಳಿಸಿದ್ದಾರೆ. ಕೆಲವು ಗುಣಗಳನ್ನು ನೇರವಾಗಿ ಹೇಳಿದರೆ, ಇನ್ನು ಕೆಲವು ಗುಣಗಳನ್ನು, ದೃಷ್ಟಾಂತವನ್ನು ಕೊಡುವ ಮೂಲಕ ವಿವರಿಸಿದ್ದಾರೆ. ಇಂತಹ ಗುಣಗಳಲ್ಲಿ ಧೈರ್ಯವೆಂಬುದೂ ಒಂದು ಗುಣ. ಶ್ರೀರಾಮನು ಎಷ್ಟು ಧೈರ್ಯವುಳ್ಳವನಾಗಿದ್ದ? ಎಂಬುದಕ್ಕೆ, 'ಧೈರ್ಯೇಣ ಹಿಮವಾನ್ ಇವ' ಎಂಬುದಾಗಿ. ಶ್ರೀರಾಮನು ಹಿಮಾಲಯದಷ್ಟು ಧೈರ್ಯವುಳ್ಳವನಾಗಿದ್ದ. ಹಿಮಾಲಯವನ್ನು ಉದಾಹರಣೆಯಾಗಿ ಕೊಡುವುದಕ್ಕೆ ಕಾರಣವನ್ನು ತಿಳಿಯಬೇಕಾದರೆ ನಾವು ಒಮ್ಮೆ ಕಾಳಿದಾಸಮಹಾಕವಿ ರಚಿಸಿದ 'ಕುಮಾರಸಂಭವ' ಎಂಬ ಮಾಹಾಕಾವ್ಯವನ್ನು ಅನುಸಂಧಾನ ಮಾಡಬೇಕು. ಕಾಳಿದಾಸನು ಈ ಪರ್ವತವನ್ನು 'ಸ್ಥಿತಃ ಪೃಥಿವ್ಯಾ ಇವ ಮಾನದಂಡಃ' ಎಂಬುದಾಗಿ ಬಹಳ ಹೆಮ್ಮೆಯಿಂದ ಹೇಳಿದ್ದಾನೆ. ಹಿಮಾಲಯವನ್ನು ತಿಳಿದರೆ ಭೂಮಿಯ ಬಗ್ಗೆ ತಿಳಿದಂತಾಗುತ್ತದೆ ಎಂದರ್ಥ. ಹಿಮಾಲಯವು ಯಾವುದೇ ಪ್ರಾಕೃತಿಕವಾದ ಅಪಾಯವನ್ನು ತಡೆದುಕೊಳ್ಳುವ ಸಾಮರ್ಥವುಳ್ಳದ್ದು. ಅಷ್ಟೇ ಅಲ್ಲ; ತನ್ನನ್ನು ಆಶ್ರಯಿಸಿದವರನ್ನು ರಕ್ಷಿಸುವ ಸ್ವಭಾವವುಳ್ಳದ್ದು. ಶತ್ರುಗಳು ಸುಲಭವಾಗಿ ಆಕ್ರಮಣ ಮಾಡಲು ಆಗದ ರೀತಿಯಲ್ಲಿ ನಿಂತು ದೇಶವನ್ನು ರಕ್ಷಿಸುವ ಪ್ರಬಲಯೋಧನಂತೆ ಇರುವಂತಹದ್ದು. ಪ್ರತಿಸ್ಪರ್ಧಿಯೇ ಇಲ್ಲದಿರುವಾಗ ಬರುವ ಗುಣ ಅಥವಾ ಪ್ರತಿಸ್ಪರ್ಧಿಯನ್ನು ಇಲ್ಲದಾಗಿಸುವಾಗ ಬರುವ ಗುಣವಿದಾಗಿದೆ. 'ದ್ವಿತೀಯಾದ್ಧಿ ಭಯಂ ಭವತಿ' ಎಂಬ ಮಾತಿನಂತೆ ತನಗೆ ಸರಿಸಾಟಿಯಾದ ಮತ್ತೊಬ್ಬನಿದ್ದಾಗ ತಾನೆ ಭಯಕ್ಕೆ ಅವಕಾಶ. ಇಂತಹ ಅದ್ವಿತೀಯತ್ವವೇ ಧೈರ್ಯಗುಣ. ಈ ದೃಷ್ಟಿಯಿಂದ ಹಿಮಾಲಯಪರ್ವತಕ್ಕೆ ಈ ಪ್ರಪಂಚದಲ್ಲೇ ಸಮಾನವಾದ ಇನ್ನೊಂದು ಪರ್ವತವಿರಲು ಸಾಧ್ಯವಿಲ್ಲ. ಹೇಗೆ ಈ ಹಿಮಾಲಯಕ್ಕೆ ಪ್ರತಿಸ್ಪರ್ಧಿಯಾದ ಪರ್ವತ ಮತ್ತೊಂದು ಇಲ್ಲವೋ ಅಂತೆಯೇ ಶ್ರೀರಾಮನಿಗೆ ಸರಿಸಮನಾದ ಪುರುಷ ಇರಲು ಸಾಧ್ಯವಿಲ್ಲ ಎಂದು ಶ್ರೀರಾಮನ ಗುಣವನ್ನು ಈ ಬಗೆಯಾಗಿ ಮಹರ್ಷಿಗಳು ವರ್ಣಿಸಿದ್ದಾರೆ.
ಶ್ರೀರಾಮನು ಅಯೋಧ್ಯೆಯ ರಾಜನಾಗಿದ್ದ. ತನ್ನ ರಾಜ್ಯದಲ್ಲಿರುವ ಪ್ರಜೆಗಳ ರಕ್ಷಣೆ, ಲಾಲನೆ, ಪಾಲನೆ ಅವನ ಹೊಣೆ. ಎಂತಹ ಶತ್ರುವಿದ್ದರೂ ಅವನನ್ನು ಬಗ್ಗುಬಡಿದು ರಾಜ್ಯಕ್ಕೆ ಅಭಯವನ್ನು ಕೊಡಬೇಕಾಗುತ್ತದೆ. ಶತ್ರುವಾದ ರಾವಣನು ಅಸಮಾನ ಶೂರ. ವಾಲ್ಮೀಕಿಗಳು ಹೇಳುವಂತೆ ರಾವಣನಲ್ಲಿ 'ಒಂದು ವೇಳೆ ಅಧರ್ಮವೆಂಬುದು ಬಲಿಷ್ಠವಾಗಿಲ್ಲದಿದ್ದರೆ ಇವನು ರಾಕ್ಷಸೇಶ್ವರನಾಗಿದ್ದರೂ ಇಂದ್ರನಿಂದ ಕೂಡಿದ ದೇವಲೋಕಕ್ಕೆ ಒಡೆಯನಾಗುವುದೂ ಸರಿಯೇ ಆಗಿತ್ತಿತ್ತು! ಎಂದು ಉದ್ಗರಿಸುತ್ತಾರೆ. ಅಂತಹವನನ್ನು ಸದೆಬಡಿಯಲು ಅದೆಂತಹ ಧೈರ್ಯವಿರಬೇಕು! ರಣಾಂಗಣದಲ್ಲಿ ಸೋತು ಹಿಮ್ಮೆಟ್ಟುವ ಸ್ವಭಾವದವನಲ್ಲ ಶ್ರೀರಾಮ. ಕೊನೆತನಕ ನಿಂತು ಶತ್ರುವನ್ನು ಜಯಿಸಿ, ಪ್ರಜೆಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟು, ಜೀವನ ನಡೆಸುವಂತೆ ಮಾಡುವುದೇ ಧೈರ್ಯಶಾಲಿಯಾದ ಶ್ರೀರಾಮನ ಗುಣವಿಶೇಷತೆ.
ಈ ಧೈರ್ಯವು ಇಷ್ಟು ಶ್ರೇಷ್ಠವಾಗಲು ಕಾರಣ, ಸತ್ತ್ವಗುಣ. ರಜಸ್ಸು ಮತ್ತು ತಮಸ್ಸು ನಿಶ್ಚಲತೆಯನ್ನು ಸಾಧಿಸುವ ಗುಣಗಳಲ್ಲ. ಸತ್ತ್ವಗುಣದಿಂದ ಮಾತ್ರ ಅಚಲತೆ ಅಥವಾ ನಿಶ್ಚಲತೆ ಸಾಧ್ಯ. ಇಂತಹ ಸತ್ತ್ವಗುಣದ ಆಧಿಕ್ಯವೇ ಧೈರ್ಯವೆಂಬ ಗುಣಕ್ಕೆ ಮೂಲಕಾರಣ. ಶುದ್ಧಸಾತ್ತ್ವಿಕಗುಣವುಳ್ಳ ಶ್ರೀರಾಮನಿಗಲ್ಲದೆ ಇಂತಹ ವಿಶೇಷಣವನ್ನು ಬೇರೆಲ್ಲಿ ಹೇಳಲು ಸಾಧ್ಯ? ಹೀಗೆ ನಿಜವಾದ ಅರ್ಥದಲ್ಲಿ ಶ್ರೀರಾಮನು ಹಿಮಾಲಯದಷ್ಟು ಧೈರ್ಯವುಳ್ಳವನಾಗಿದ್ದಾನೆ.