Saturday, August 28, 2021

ಯೋಗತಾರಾವಳಿ - 19 ಶಮನದತ್ತ ಮೆಲ್ಲಮೆಲ್ಲನೆ (Yogataravali - 19 Shamanadatta Mellamellane)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in) ಯೋಗತಾರಾವಳೀ (ಶ್ಲೋಕ 20))

ಪ್ರಸಹ್ಯ ಸಂಕಲ್ಪ-
ಚಿತ್ತಶಾಂತಿಯನ್ನು ಪಡೆಯುವುದು ಹೇಗೆಂಬುದನ್ನು ಪ್ರಕೃತ-ಶ್ಲೋಕದಲ್ಲಿ ಚಿತ್ರಿಸಿದೆ.

ಸಂಕಲ್ಪವೆಂಬ ಕ್ರಿಯೆ

ನಮ್ಮ ಮನಸ್ಸಿನಲ್ಲಿ ಸಂಕಲ್ಪ-ವಿಕಲ್ಪಗಳು ಸದಾ ಆಡುತ್ತಿರುತ್ತವೆ. ಸಂಕಲ್ಪವೆಂದರೇನು? "ಸಂಕಲ್ಪಃ ಕರ್ಮ ಮಾನಸಮ್". ಮಾನಸಿಕವಾದ ಕರ್ಮವು ಸಂಕಲ್ಪ. 'ಹೀಗೆ ಮಾಡುವೆ' ಎಂದುಕೊಳ್ಳುವುದು ಸಂಕಲ್ಪ.

ಶುಭಕರ್ಮಗಳನ್ನೋ ಪುಣ್ಯಕರ್ಮಗಳನ್ನೋ ಮಾಡಬೇಕಾದಲ್ಲಿ "ಇದೋ ನಾನು ,<ಇಂತಹ>  ದೇಶ-ಕಾಲಗಳಲ್ಲಿ <ಇಂತಹ> ಫಲಕ್ಕಾಗಿ <ಇಂತಹ> ಕರ್ಮವನ್ನು ಮಾಡುತ್ತೇನೆ. ಭಗವಂತನಿಗೆ ಪ್ರೀತಿಯಾಗಲಿ" ಎಂಬ ಪರಿಯಲ್ಲಿ, ವಿಶಿಷ್ಟ-ಭಂಗಿಯಲ್ಲಿ ಕುಳಿತು ಹೇಳಿಕೊಂಡು ಆಮೇಲೆ ಆ ಕರ್ಮದಲ್ಲಿ ತೊಡಗುತ್ತೇವೆ. ಶರೀರದ ಅಂಗಗಳಿಂದ ನಡೆಯಬೇಕಾದ ಚಟುವಟಿಕೆಗಳಿಗೆ ಪೂರ್ವಭಾವಿಯಾಗಿ (ಅಥವಾ ಅದರ ಮೊದಲ ಅಂಗವೇ ಆಗಿ) ನಡೆಯುವ ಈ ಮಾನಸಿಕ-ಕ್ರಿಯೆಯೇ "ಸಂಕಲ್ಪ".

ನಮ್ಮಲ್ಲಿ ದೈವೀಸಂಪತ್ತು ಇಲ್ಲದಿದ್ದಾಗ ನಮ್ಮ ಮನಸ್ಸು ಹೇಗಿರುತ್ತದೆ? ದುಷ್ಪೂರವಾದ (ಎಂದರೆ ಪೂರೈಸಲಾಗದ) ಕಾಮ, ಅಪರಿಮೇಯವಾದ (ಎಂದರೆ ಅಳೆಯಲಾಗದ) ಚಿಂತೆ, ಆಶಾ-ಪಾಶಗಳು, ಮೋಹ-ಜಾಲ - ಇವುಗಳಿಂದ ತುಂಬಿರುತ್ತದೆ. (ಗೀತೆಯ 16ನೇ ಅಧ್ಯಾಯದಲ್ಲಿ ಇವುಗಳ ವಿವರಣೆಯಿದೆ). "ನನಗಿದು ಸಿಕ್ಕಾಗಿದೆ, ಇದೋ ಇನ್ನಿದನ್ನು ಹೊಂದುವೆ" - ಎಂದು ಮುಂತಾಗಿ ಮನಸ್ಸಿಗೆ ತೋರುತ್ತಿರತಕ್ಕವೂ ಸಂಕಲ್ಪಗಳೇ.

ಸಮುದ್ರತೀರದಲ್ಲೊಮ್ಮೆ ನಿಂತರೆ ಅಲೆಗಳು ಬಂದು ದಡಕ್ಕಪಳಿಸುವುದನ್ನು ನೋಡಬಹುದು. ಎಷ್ಟು ಅಲೆಗಳು! ಒಂದೇ ಎರಡೇ? ಅಲೆಗಳ ಪರಂಪರೆಯೇ ತೋರುತ್ತದೆ! ಒಂದಾದ ಮೇಲೆ ಮತ್ತೊಂದು, ಮತ್ತೊಂದಾದ ಮೇಲೆ ಮಗದೊಂದು: ಇವಕ್ಕೆಲ್ಲಾದರೂ ಕೊನೆಯುಂಟೆ? ಹಾಗೆಯೆ ನಮ್ಮ ಮನಸ್ಸೂ. ಸಂಕಲ್ಪ-ಪರಂಪರೆಗಳೇ ನಮ್ಮ ಮನಸ್ಸಿನಲ್ಲಿ ಉಕ್ಕಿ ಉಕ್ಕಿ ಬರುತ್ತಿರುತ್ತವೆ. ಹೀಗಿರುವಾಗ ಮನಸ್ಸಿಗೆ ಶಾಂತಿಯಾದರೂ ಹೇಗೆ ಬಂದೀತು?

ಹಾಗಿದ್ದಲ್ಲಿ, ಹೇಗಾದರೂ ಮಾಡಿ ಈ ನಿರಂತರ-ಸಂಕಲ್ಪ-ಪರಂಪರೆಯನ್ನು ಭೇದಿಸಬೇಕು. ಚೆನ್ನಾಗಿಯೇ ಭೇದಿಸಬೇಕು: ಇದುವೆ ಸಂಭೇದನ. ಈ ಕಾರ್ಯದಲ್ಲಿ ಮನಸ್ಸು ತೊಡಗಬೇಕು. ಸಂಕಲ್ಪ-ಸಂಭೇದನದ ಸಂಕಲ್ಪ ಮಾತ್ರ ಬೇಕಾದ ಸಂಕಲ್ಪವೇ!

ಸಾವಧಾನತೆಯಿಂದಲೇ ಸಾಧ್ಯ

ಇದರಲ್ಲಿ ತೊಡಗುವಿಕೆಯಾದರೂ ಆಗೊಮ್ಮೆ ಈಗೊಮ್ಮೆ ಆದರೆ ಸಾಲದು. ಎಚ್ಚರಿಕೆಯಿಂದಲೇ ಇದು ಆಗತಕ್ಕದ್ದು. ಎಡೆಬಿಡದ ಎಚ್ಚರವುಳ್ಳ ಮನಸ್ಸನ್ನು ಸಂತತ-ಸಾವಧಾನವೆನ್ನುತ್ತಾರೆ. ಅವಧಾನವೆಂದರೆ ಮನಸ್ಸಿನ ಗಮನಕೊಡುವಿಕೆ, ಐಕಾಗ್ರ್ಯ; ಅವಧಾನದಿಂದ ಕೂಡಿರುವುದು ಸಾವಧಾನ.

ಮನಸ್ಸು ಏನೇನನ್ನೋ ತುಂಬಿಸಿಕೊಂಡು ಉಬ್ಬಿಹೋಗಿರುತ್ತದೆ. ಉಪಚಯವೆಂದರೆ ತುಂಬಿರುವಿಕೆ. ಉಪಚಯವನ್ನು ಹೊಂದಿರುವ ಮನಸ್ಸನ್ನು ಪಳಗಿಸುವುದು ಸುಲಭವಲ್ಲ. ಹೀಗೆ ಉಪಚಿತವಾದ ಮನಸ್ಸು ಅಪಚಿತವಾಗಬೇಕು. ಉಪಚಿತಕ್ಕೆ ವಿರುದ್ಧವಾದದ್ದು ಅಪಚಿತ. ಅರ್ಥಾತ್, ಕೊಬ್ಬಿದ ಮನಸ್ಸು ಕೃಶವಾಗಬೇಕು. ಅದು ಹೇಗೆ ಸಾಧ್ಯವೆಂಬುದೇ ಪ್ರಶ್ನೆ.

ಅದಕ್ಕಿರುವ ಕ್ರಮವೆಂದರೆ ಅದರ "ಆಲಂಬ-ನಾಶ"ವೇ ಸರಿ. ಆಲಂಬ ಅಥವಾ ಆಲಂಬನ ಎಂದರೆ ಆಶ್ರಯ. ಅದರ ನಾಶವಾಗಬೇಕು. ಬಳ್ಳಿಯೊಂದು ತಾನೇ ಎತ್ತರಕ್ಕೆ ಹತ್ತಿ ನಿಲ್ಲಲಾರದಷ್ಟೆ? ಅದಕ್ಕೊಂದು ಆಲಂಬವು ಬೇಕು. ಆಲಂಬವಿಲ್ಲದಿದ್ದರೆ ಅದು ಬರಬರುತ್ತಾ ಬಡವಾಗುವುದು, ಕೊನೆಗೆ ಕುಸಿಯುವುದು.

ಹಾಗೆಯೇ ಮನಸ್ಸೂ: ಆಲಂಬವು ನಾಶವಾಗುತ್ತಲೂ ಮನಸ್ಸೂ ಮೆಲ್ಲಮೆಲ್ಲನೆ ಅಪಚಯವನ್ನು ಹೊಂದುವುದು. ಮನಸ್ಸು ಕೃಶವಾದ ಸ್ಥಿತಿಗೆ ತನು-ಮಾನಸಾ ಎನ್ನುವರು. ತನುವೆಂದರೆ ಶರೀರ, ಹೌದು. ಇನ್ನೊಂದು "ತನು"ವಿದೆ. ಅದಕ್ಕೆ ತೆಳುವಾದ ಎಂಬ ಅರ್ಥ.ಇಂತಹ "ತೆಳು"ಮನಸ್ಸೇ ಶಮನವನ್ನು ಹೊಂದುವುದು.

ಮೆಲ್ಲನೆ ಸಾಗು

ಧೃತಿಯೊಂದಿಗಿರುವ ಬುದ್ಧಿಯಿಂದ ಮೆಲ್ಲಮೆಲ್ಲನೆ ಉಪರತಿಯನ್ನು (ಎಂದರೆ ಶಾಂತಿಯನ್ನು) ಹೊಂದಬೇಕು - ಎಂಬುದನ್ನು ಗೀತೆಯೂ ಹೇಳುತ್ತದೆ. (6ನೇ ಅಧ್ಯಾಯ). ಸಂಕಲ್ಪದಿಂದ ಕಾಮಗಳು ಉಂಟಾಗುತ್ತವೆ; ಅವನ್ನು ನಿಃಶೇಷವಾಗಿ ತ್ಯಜಿಸಬೇಕು. ಇಂದ್ರಿಯ-ಸ್ತೋಮದ ಸಂಯಮವನ್ನು ಎಲ್ಲೆಡೆಗಳಿಂದಲೂ ಮನಸ್ಸಿನಿಂದಲೇ ಮಾಡಬೇಕೆಂದು ಗೀತೆಯೂ ಹೇಳುತ್ತದೆ. ಅಲ್ಲೂ "ಶನೈಃ ಶನೈಃ" "ಮೆಲ್ಲಮೆಲ್ಲನೆ" ಎಂದೇ ಹೇಳಿದೆ.

ಸಂಕಲ್ಪಪರಂಪರೆಯನ್ನು ಬಲಪ್ರಯೋಗದಿಂದಲೇ ಭೇದಿಸಬೇಕು. ಹಾಗೆ ಭೇದಿಸುವಿಕೆಯಲ್ಲಿ ನಿರಂತರವಾದ ಸಾವಧಾನತೆಯು ಬೇಕು. ಇಂತಹ ಸಂಭೇದನದಿಂದಾಗಿ ಮನಸ್ಸಿನ ಆಲಂಬನವು ನಾಶವಾಗುತ್ತದೆ. ಇದರಿಂದಾಗಿ ಮೆಲ್ಲಮೆಲ್ಲನೆ ಅಪಚಯಹೊಂದಿದ ಮನಸ್ಸು ಶಮವನ್ನು ಹೊಂದುತ್ತದೆ.

ಪ್ರಸಹ್ಯ ಸಂಕಲ್ಪ-ಪರಂಪರಾಣಾಂ

   ಸಂಭೇದನೇ ಸಂತತ-ಸಾವಧಾನಮ್ |

ಆಲಂಬ-ನಾಶಾದ್ ಅಪಚೀಯಮಾನಂ

   ಶನೈಶ್ ಶನೈಶ್ ಶಾಂತಿಮ್ ಉಪೈತಿ ಚೇತಃ || 20||


ಸೂಚನೆ : 28/8/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.