Monday, August 30, 2021

ಶ್ರೀಕೃಷ್ಣಾಷ್ಟಮಿ (Shreekrishnashtami)

ಲೇಖಕಿ - ಸುರಭಿ ತಾತಾಚಾರ್. ಕೆ. ಎಂ.

(ಪ್ರತಿಕ್ರಿಯಿಸಿರಿ lekhana@ayvm.in)





ಯಾರು ಈ ಕೃಷ್ಣ?
ಆಷಾಢ ಮಾಸವು ಕಳೆದಂತೆ ಹಬ್ಬಗಳ ಸಂಭ್ರಮವು ಭಾರತದೆಲ್ಲೆಡೆ ಆರಂಭವಾಗುತ್ತದೆ. 'ಪರ್ವ' ಎಂಬ ಸಂಸ್ಕೃತ ಪದದ ಪ್ರಾಕೃತ ರೂಪವೇ 'ಹಬ್ಬ' ಎಂದಾಗಿದೆ. ಶ್ರಾವಣ ಮಾಸದಲ್ಲಿ ಬರುವ ದೇಶದೆಲ್ಲೆಡೆ  ಭಕ್ತಿ, ಸಂತೋಷಗಳಿಂದ ಆಚರಿಸಲ್ಪಡುವ ಮಹೋತ್ಸವವೇ ಶ್ರೀ ಕೃಷ್ಣಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ. 'ಕೃಷ್ಣ' ಎಂಬುದು  ಹಿಂದುಗಳೆಲ್ಲರ ಮನೆ-ಮನಗಳಲ್ಲಿ ನೆಲೆಸಿರುವ ಸ್ವಾಮಿಯ ಹೆಸರು. "ಕೃಷ್ಣಸ್ತು ಭಗವಾನ್ ಸ್ವಯಂ", "ಈಶ್ವರಃ ಪರಮಃ ಕೃಷ್ಣ:" ಎಂಬುದಾಗಿ ಯೋಗಿಗಳು ಶ್ರೀಕೃಷ್ಣನನ್ನು ಕೊಂಡಾಡುತ್ತಾರೆ. ಇವನು ನಾರಾಯಣನ ಒಂಭತ್ತನೆಯ ಅವತಾರನಾದ ಸಾಕ್ಷಾತ್ ಭಗವಂತನೇ ಆಗಿದ್ದಾನೆ. ಎಲ್ಲ ಲೋಕಗಳನ್ನೂ ರಕ್ಷಿಸುವ, ಎಲ್ಲ ಭೂತಕೋಟಿಗಳ ಒಡೆಯನಿವನು. ಮಹರ್ಷಿಗಳು, ಭಕ್ತರು, ಆಚಾರ್ಯರು, ದಾಸಶ್ರೇಷ್ಠರು, ಕವಿಗಳು, ಕೀರ್ತನಕಾರರು - ಎಲ್ಲರೂ ತುಂಬು ಹೃದಯದಿಂದ ಕೊಂಡಾಡಿರುವ ದೇವರ ದೇವನಿವನು. ಧರ್ಮೋದ್ಧಾರಕ, ಮಹಾಭಾರತದ ಸೂತ್ರಧಾರ ಮತ್ತು ಗೀತಾಚಾರ್ಯನೆಂದೇ ಇವನು ಪ್ರಸಿದ್ಧ. ರಾಸಕ್ರೀಡೆಯ ಮೂಲಕ ಗೋಪಿಯರ ಆತ್ಮೋದ್ಧಾರ ಮಾಡಿ, ಹಾಲು-ಬೆಣ್ಣೆಗಳನ್ನು ಚೌರ್ಯ ಮಾಡುವ ಮೂಲಕ ಅವುಗಳನ್ನು ಮಹಾಪ್ರಸಾದವನ್ನಾಗಿಸಿ, ಉಣಬಡಿಸಿದ ಧೀರನಿವನು. ವೇದ-ಶಾಸ್ತ್ರಗಳ ಸಾರರೂಪವಾದ ಶ್ರೀಮದ್ಭಗವದ್ಗೀತೆಯನ್ನು ಲೋಕಕ್ಕೆಲ್ಲಾ ಅನುಗ್ರಹಿಸಿರುವ ಜಗದ್ಗುರು. ಅದಕ್ಕಾಗಿಯೇ "ಕೃಷ್ಣಂ ವಂದೇ ಜಗದ್ಗುರುಮ್" ಎಂದು ಅವನನ್ನು ಸ್ತುತಿಸುತ್ತೇವೆ.

ಆಚರಣೆಯ ಕಾಲ
ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮೀ ತಿಥಿಯಲ್ಲಿ ರೋಹಿಣೀ ನಕ್ಷತ್ರದಲ್ಲಿ ಅರ್ಧರಾತ್ರಿಯಲ್ಲಿ ಶ್ರೀಕೃಷ್ಣನು ಅವತರಿಸಿದನೆಂದು ಪುರಾಣಗಳು ತಿಳಿಸುತ್ತವೆ. ಒಂದೇ ಹಬ್ಬದ ನಾನಾ ಪ್ರಕಾರದ ಆಚರಣೆಗಳನ್ನು ನಮ್ಮ ದೇಶದಲ್ಲಿ ಹೆಚ್ಚಾಗಿ ಕಾಣಬಹುದು. ಅಂತೆಯೇ, ಈ ಹಬ್ಬವನ್ನೂ ಎರಡು ವಿಧವಾಗಿ ಆಚರಿಸುತ್ತಾರೆ. ಜನ್ಮಾಷ್ಟಮಿಯಲ್ಲಿ ಅಷ್ಟಮೀ ತಿಥಿಗೆ ಪ್ರಾಧಾನ್ಯವಾದರೆ, ಶ್ರೀಜಯಂತಿಯಲ್ಲಿ ರೋಹಿಣೀ ನಕ್ಷತ್ರಕ್ಕೆ ಪ್ರಾಧಾನ್ಯ. ಈ ಪರ್ವಕಾಲವು ಸೋಮವಾರ/ಬುಧವಾರದ ದಿವಸಗಳಲ್ಲಿ ಕೂಡಿಬಂದರೆ ಅತ್ಯಂತ ಪ್ರಶಸ್ತವೆಂದು ಶಾಸ್ತ್ರಗಳು ಹೇಳುತ್ತವೆ. ಈ ದಿವಸಗಳಲ್ಲಿ ಶ್ರೀಕೃಷ್ಣನ ಸಾಕ್ಷಾತ್ಕಾರಕ್ಕೆ ಬೇಕಾದ ವಿಶೇಷವಾದ ಪ್ರಕೃತಿಯ ಆನುಕೂಲ್ಯವು ಒದಗಿ ಬರುವುದರಿಂದ ಒಳಕೇಂದ್ರಗಳು ಜಾಗರೂಕವಾಗುತ್ತವೆ ಎಂಬ ಶ್ರೀರಂಗಮಹಾಗುರುಗಳ ಅಭಿಪ್ರಾಯವನ್ನು ಇಲ್ಲಿ ಗ್ರಹಿಸಬಹುದು. ಅರ್ಧರಾತ್ರಿಯಲ್ಲಿ, ಅಂದರೆ, ಶ್ರೀಕೃಷ್ಣನ ಜನನ ಸಮಯದಲ್ಲಿ ಮಾಡುವ ಪೂಜೆಯು ಅತ್ಯಂತ ಶ್ರೇಷ್ಠವೆನಿಸುತ್ತದೆ.

ಅಲಂಕಾರ
ಶ್ರೀಕೃಷ್ಣನು ಶೃಂಗಾರ ಪ್ರಿಯನು. ಆದ್ದರಿಂದ ಅಲಂಕಾರಕ್ಕೆ ಹೆಚ್ಚಿನ ಪ್ರಾಧಾನ್ಯವನ್ನು ಈ ಹಬ್ಬದಲ್ಲಿ ಕಾಣಬಹುದು. ಚಪ್ಪರ, ಮಂಟಪಗಳನ್ನು ಯೋಗಶಾಸ್ತ್ರಕ್ಕೆ ಅನುಗುಣವಾದ ಚಿತ್ರಗಳಿಂದಲೂ, ರಂಗವಲ್ಲಿಗಳಿಂದಲೂ ವಿಶೇಷವಾಗಿ ಸಿಂಗರಿಸುತ್ತಾರೆ. ಭಕ್ತಿಯನ್ನು ತುಂಬುವಂತೆ ಕಣ್ಣು, ಮನಸ್ಸುಗಳಿಗೆ ರಂಜನೆಯಾಗುವಂತೆ ತಳಿರು, ತೋರಣ, ಹೂವಿನ ಮಾಲೆಗಳು, ಬಾಳೆಕಂಬಗಳು- ಇವುಗಳಿಂದ ಮಂಟಪವನ್ನು ಅಲಂಕರಿಸುತ್ತಾರೆ. ರಮಣೀಯವಾಗಿ, ರಸಪೂರ್ಣವಾಗಿರುವ ಬಗೆ ಬಗೆಯ ಹೂವು, ಹಣ್ಣು, ಕಾಯಿಗಳಿಂದಲೂ ಸಿಂಗರಿಸಲ್ಪಟ್ಟಿರುವ ಆ ಪೂಜೆಯ ಚಪ್ಪರವನ್ನು 'ಫಲವತ್ಸರ' ಎಂದು ಕರೆಯುತ್ತಾರೆ. ಮಳೆಗಾಲವು ಆಗಷ್ಟೇ ಪ್ರಾರಂಭವಾಗಿ ಪ್ರಕೃತಿಯಲ್ಲಿ ಹಸಿರು ಮೈದುಂಬಿಕೊಂಡು ಹಣ್ಣು, ಹೂವುಗಳೆಲ್ಲ ಸೊಂಪಾಗಿ ಬೆಳೆಯುವ ಸುಂದರಕಾಲವಿದು. ಇದೇ ಸಂದರ್ಭದಲ್ಲಿ ಈ ಪರ್ವವನ್ನು ಆಚರಿಸುತ್ತೇವೆಯಾದ್ದರಿಂದ ಭಗವಂತನ ವಿಭೂತಿಗಳೇ ಆಗಿರುವ ಈ ಎಲ್ಲವನ್ನೂ ಅಲಂಕಾರ ಪ್ರಿಯನಾದ ಶ್ರೀಕೃಷ್ಣನ ಸನ್ನಿಧಿಗೆ ಸಮರ್ಪಿಸಿ, ಪ್ರಸಾದ ರೂಪದಲ್ಲಿ ಪೂಜೆಯ ನಂತರ ಅದನ್ನು ಸ್ವೀಕರಿಸಿ ಧಾತುಪ್ರಸನ್ನತೆಯನ್ನು ಸಂಪಾದಿಸಲು ಅನುಕೂಲವಾಗುವಂತಹ ವೈಶಿಷ್ಟ್ಯಯುತವಾದ ಈ ಆಚರಣೆಯನ್ನು ಜ್ಞಾನಿಗಳು ಸೂಚಿಸಿದ್ದಾರೆ.

ಆಚರಣೆಯ ಕ್ರಮ
ಭಗವಂತನ ವಿಶೇಷಪೂಜೆ, ಕಥಾಸಂಕೀರ್ತನ, ಉಪವಾಸ, ಜಾಗರಣೆ, ದಾನ-ಧರ್ಮ ಇತ್ಯಾದಿಗಳು ಆಚರಣೆಯ ಮುಖ್ಯ ಅಂಶಗಳು. ಕೃಷ್ಣನ ಪೂಜಾಸಮಾಪ್ತಿಯವರೆಗೆ ಉಪವಾಸವ್ರತವನ್ನು ಆಚರಿಸುವುದು ರೂಢಿ. ಉಪವಾಸವನ್ನು ಕ್ರಮಬದ್ಧವಾಗಿ ಮಾಡಿದರೆ ದೈಹಿಕ ಮತ್ತು ಮಾನಸಿಕ  ಪ್ರಕೃತಿಗಳು ಶುದ್ಧವಾಗಿ ಪರಮಾತ್ಮನ ಪೂಜೆಗೆ ಅನುಕೂಲವಾಗುವಂತೆ ಧಾತುಪ್ರಸನ್ನತೆ ಉಂಟಾಗುತ್ತದೆ. ಆತ್ಮಸ್ಥೈರ್ಯವು ಹೆಚ್ಚುತ್ತದೆ. ರಾತ್ರಿಯಲ್ಲಿ ಪೂಜೆಯು ನೆರವೇರುವುದರಿಂದ ಜಾಗರಣೆ ಮಾಡುತ್ತಾ, ಆ  ಸಮಯವನ್ನು ಕೇವಲ ಭಗವಂತನ ಧ್ಯಾನ ಮತ್ತು ಸಂಕೀರ್ತನೆಗಳಿಗೆ ಮೀಸಲಾಗಿಡಬೇಕು. ಭಗವಂತನ ಪ್ರೀತ್ಯರ್ಥವಾಗಿ ಅವನ ಸ್ಮರಣೆಯೊಂದಿಗೆ ದಾನದಕ್ಷಿಣೆಗಳನ್ನು ಸತ್ಪಾತ್ರರಿಗೆ ಸಮರ್ಪಿಸಬೇಕು. ಪೂಜಾ ಸಮಾಪ್ತಿಯ ನಂತರ ರಾತ್ರಿಯಲ್ಲೇ ಶ್ರೀಕೃಷ್ಣನ ಮಹಾಪ್ರಸಾದವನ್ನು ಸ್ವೀಕರಿಸುವ ಪದ್ಧತಿಯಿದೆ. ಶ್ರೇಷ್ಠ ಗ್ರಂಥಗಳಾದ ಭಾಗವತ, ಹರಿವಂಶ, ವಿಷ್ಣುಪುರಾಣಗಳಲ್ಲಿ ಬರುವ ಶ್ರೀಕೃಷ್ಣನ ಕಥೆಯನ್ನು ಭಕ್ತಿಯಿಂದ ಪಾರಾಯಣ ಮಾಡುತ್ತಾರೆ. ಪಂಚೋಪಚಾರ, ಷೋಡಶೋಪಚಾರ ಪೂಜೆಗಳನ್ನು ನೆರವೇರಿಸಿ, ವೇದಘೋಷ, ಶಾಸ್ತ್ರವಾಕ್ಯ ಶ್ರವಣ, ನೃತ್ಯ, ಗೀತ ಗಾಯನ, ಅಷ್ಟೋತ್ತರಶತ ಮತ್ತು ಸಹಸ್ರನಾಮಗಳಿಂದ ಶ್ರೀಕೃಷ್ಣನನ್ನು ಆರಾಧಿಸುತ್ತಾರೆ.

ನೈವೇದ್ಯ
ಭಕ್ತಿಯೆಂಬ ಶ್ರೇಷ್ಠರಸದ ಮಿಶ್ರಣದೊಂದಿಗೆ ವಿಧ ವಿಧವೂ, ರಸಮಯವೂ ಆದ ಭಕ್ಷ್ಯ, ಭೋಜ್ಯ, ಪಾನೀಯಗಳನ್ನು ಅಚ್ಯುತನ ನೈವೇದ್ಯಕ್ಕೆ ಸಿದ್ಧಪಡಿಸುತ್ತಾರೆ. ಕೃಷ್ಣನಿಗೆ ಅತ್ಯಂತ ಪ್ರಿಯವಾದ ಗೋಕ್ಷೀರ, ಕ್ಷೀರಾನ್ನ, ಪರಮಾನ್ನ, ಬೆಲ್ಲದ ಅವಲಕ್ಕಿ, ಹಸನಾದ ಬೆಣ್ಣೆ (ನವನೀತ) ಮತ್ತು ಶುಂಠಿ- ಬೆಲ್ಲಗಳು ವಿಶೇಷವಾದ ನೈವೇದ್ಯ ಪದಾರ್ಥಗಳು. ಈ ರೀತಿಯಾದ ಬಗೆಬಗೆಯ ಪ್ರಸಾದಗಳನ್ನು  ಸ್ವೀಕರಿಸುವುದರಿಂದ, ಶುಂಠಿ-ಬೆಲ್ಲವು ಭಕ್ತರ ಆರೋಗ್ಯಕ್ಕೆ ಒಳ್ಳೆಯ ಔಷಧಿಯಾಗಿ ಕೆಲಸಮಾಡುತ್ತದೆ ಎಂಬ ಶ್ರೀರಂಗಮಹಾಗುರುಗಳ ವೈಜ್ಞಾನಿಕ ನೋಟವನ್ನಿಲ್ಲಿ ಕಾಣಬಹುದು.

ನಂತರದ ಪೂಜಾಕ್ರಮ
ಮಹಾಮಂಗಳಾರತಿಯ ನಂತರ ಕೃಷ್ಣನಿಗೂ ಮತ್ತು ಅವನ ಅವತಾರಕ್ಕೆ ಸಾಕ್ಷಿಯಾದ ಚಂದ್ರದೇವನಿಗೂ ಅರ್ಘ್ಯವನ್ನು ಸಮರ್ಪಿಸುತ್ತಾರೆ. ಇಡೀ ರಾತ್ರಿ ಶ್ರೀಕೃಷ್ಣನ ಸ್ತುತಿಗಳನ್ನು, ಕಥೆಗಳನ್ನು, ಸಂಗೀತಾದಿಗಳ ಮೂಲಕ ಕೊಂಡಾಡಿ ಸಂಭ್ರಮಿಸುತ್ತಾರೆ. ಮಹಾರಾಷ್ಟ್ರದಲ್ಲಿ ಜನ್ಮೋತ್ಸವದ ಮಾರನೆಯ ದಿನ ಮೊಸರು, ಮಜ್ಜಿಗೆಗಳು ತುಂಬಿರುವ ಮಡಕೆಯನ್ನು ನೇತುಹಾಕಿ, ಮಡಕೆಯಲ್ಲಿ ರಂಧ್ರಗಳನ್ನು ಮಾಡಿ, ಅದರಿಂದ ಸುರಿಯುವ ಮೊಸರು-ಮಜ್ಜಿಗೆಗಳಿಂದ ತಾವು ಅಭಿಷೇಕ ಮಾಡಿಕೊಂಡು ಸಂತೋಷದಿಂದ ಬಾಲಕರೆಲ್ಲರೂ ಆಡುತ್ತಾರೆ. ಶ್ರೀಕೃಷ್ಣನ ಜನ್ಮಸಮಯದಲ್ಲಿ ಗೋಪಾಲಕರು ಹಾಲು, ಮೊಸರು, ತುಪ್ಪಗಳನ್ನು ಒಬ್ಬರ ಮೇಲೊಬ್ಬರು ಸುರಿದಾಡಿ, ಸಿಂಪಡಿಸಿ, ಮೈಗೆ ಬಳಿದುಕೊಂಡು ಅವನ ಜನ್ಮದಿನೋತ್ಸವವನ್ನು ಆಚರಿಸಿದರು ಎಂದು ಶ್ರೀಮದ್ಭಾಗವತವು ಹೇಳುತ್ತದೆ. ಮಹಾರಾಷ್ಟ್ರದಲ್ಲಿ ಬಾಲಕರು ಮಾಡುವ ಆಚರಣೆಯು ಭಾಗವತದಲ್ಲಿನ ಆಚರಣೆಯ ನೆನಪನ್ನು ತರುವಂತಹದ್ದಾಗಿದೆ.

ಜನ್ಮೋತ್ಸವದ ಮಾರನೆಯ ದಿನ ದಕ್ಷಿಣ ದೇಶದಲ್ಲಿ ಬಾಲಕರು 'ಉರಿಯಡಿ' ಎಂಬ ಮಂಗಳ ಕರ್ಮವನ್ನು ಆಚರಿಸುತ್ತಾರೆ. ಇಲ್ಲಿ ಹಾಲು, ಮೊಸರುಗಳೊಂದಿಗೆ ಅಭಿಷೇಕ ಮಾಡಿಕೊಳ್ಳುವುದರ ಜೊತೆಗೆ, ಭಗವಂತನ 'ಫಲವತ್ಸರ' ಎಂಬ ಚಪ್ಪರದಲ್ಲಿ ಕಟ್ಟಲ್ಪಟ್ಟಿರುವ ಬಗೆಬಗೆಯ ಹಣ್ಣುಗಳನ್ನು ಮಕ್ಕಳು ತೆಗೆದುಕೊಳ್ಳುತ್ತಾರೆ. "ಮೇಲಕ್ಕೆ ಹಾರಿ ತೆಗೆದುಕೊಳ್ಳುವವರಿಗೆ ಆ ಹಣ್ಣುಗಳು" ಎಂದು ಹೇಳುತ್ತಾ ಹಿರಿಯರು ಬಾಲಕರನ್ನು ಪ್ರೋತ್ಸಾಹಿಸುತ್ತಾರೆ. "ಮೂರು ಲೋಕಗಳನ್ನೂ ದಾಟಿ ಉನ್ನತಸ್ಥಾನದಲ್ಲಿ ಇರುವ ಮಹಾಫಲವನ್ನು ಪಡೆಯಬೇಕಾದರೆ ಊರ್ಧ್ವಗತಿಯುಳ್ಳವನಾಗಿರಬೇಕು. ಅಂತಹ ದಿವ್ಯಫಲವನ್ನು ಪಡೆಯುವ ಸಂಸ್ಕಾರಕ್ಕಾಗಿ ಹಾಗೆ ಅವರು ಹಾರಬೇಕು" ಎಂಬ ಮೇಲ್ಕಂಡ ಸಂಪ್ರದಾಯದ ಅರ್ಥವನ್ನು ಶ್ರೀರಂಗಗುರುದೇವರು ತಮ್ಮ ಸಂದೇಶದಲ್ಲಿ ವಿವರಿಸಿದ್ದಾರೆ.

ಇಷ್ಟಲ್ಲದೇ, ಶಾಸ್ತ್ರವಿಹಿತವಾದ ಬೇರೆ ಕ್ರಮಗಳನ್ನು ಸೌರಾಷ್ಟ್ರ, ಬಂಗಾಳ, ಒರಿಸ್ಸಾ ಮುಂತಾದ ದೇಶಗಳಲ್ಲಿ ಆಚರಿಸುತ್ತಾರೆ. ಆಚರಣೆಯ ಕ್ರಮಗಳು ಅನೇಕವಾಗಿದ್ದರೂ, ಅವುಗಳ ಮುಖ್ಯ ತಾತ್ಪರ್ಯ ಒಂದೇ - ಶ್ರೀಕೃಷ್ಣ ಪರಮಾತ್ಮನನ್ನು ಪ್ರಸನ್ನಗೊಳಿಸುವುದು;  ಮನಸ್ಸು, ಮಾತು ಮತ್ತು ಕೃತಿಗಳಿಂದ ಆತನು ಸಂಪ್ರೀತನಾಗುವಂತೆ ಮಾಡುವುದು; ಆತನಲ್ಲಿ ತನ್ಮಯತೆಯನ್ನು ಹೊಂದಿ ಪರಮಾನಂದವನ್ನು ಅನುಭವಿಸುವುದು.