Monday, August 2, 2021

ಆರ್ಯಸಂಸ್ಕೃತಿ ದರ್ಶನ - 51 ಜನ್ಮಾಂತರ (Arya Samskruti Darshana -51 Janmaantara)

ಲೇಖಕರು : ಚಾಮುಗಳು



ನಚಿಕೇತನು ಯಮಧರ್ಮರಾಯನನ್ನು 'ಮನುಷ್ಯನು ಸಾಯಲಾಗಿ ಅವನು ಇರುತ್ತಾನೆ ಎಂಬುದಾಗಿ ಕೆಲವರೂ, ಇರುವುದಿಲ್ಲ ಎಂಬುದಾಗಿ ಕೆಲವರೂ ಹೇಳುತ್ತಾರೆ. ಇದರಲ್ಲಿ ಯಾವುದು ನಿಜ ಎಂಬುದನ್ನು ನಿನ್ನಿಂದ ನಾನು ಕೇಳಿ ತಿಳಿಯ ಬಯಸುತ್ತೇನೆ' ಎಂದು ಕೇಳುತ್ತಾನೆ. ಇಂದಿಗೂ ಆ ಪ್ರಶ್ನೆಯು ಹಾಗೆಯೇ ಉಳಿದಿದೆ. ಹಳೆಯ ಕಾಲದ ಚಾರ್ವಾಕರಂತೆ ಶರೀರವು ಭಸ್ಮಿಭೂತವಾದ ನಂತರ ವ್ಯಕ್ತಿಯ ಅಸ್ತಿತ್ವವು ಸದಾಕಾಲಕ್ಕೂ ನಾಶವಾಗಿ ಬಿಡುತ್ತದೆ ಎಂದು ಯೋಚಿಸುವವರು ಪ್ರಪಂಚದಲ್ಲಿ ಇಂದೂ ಅನೇಕ ಮಂದಿ ಇರುತ್ತಾರೆ. ಆದರೆ ಅನೇಕರಿಗೆ 'ನಾನು' ಎಂದು ಹೇಳಿಕೊಳ್ಳುವ ವಸ್ತುವು ಸಂಪೂರ್ಣವಾಗಿ ನಾಶವಾಗಿ ಬಿಡುತ್ತದೆ ಎಂಬುದನ್ನು ನಂಬುವುದು ಸಹ್ಯವಾಗುವುದಿಲ್ಲ. ಆದರೆ ಅವರಿಗೂ ಸಹ ಅದರಿಂದ ಉಂಟಾಗುವ ಪ್ರಶ್ನೆಗಳಿಗೆ ಉತ್ತರ ಹೇಳುವುದು ಸುಲಭವೇನೂ ಅಲ್ಲ. ಶರೀರವು ಹೋದ ನಂತರ 'ನಾನು' ಎಂಬ ಶಬ್ದಕ್ಕೆ ಲಕ್ಷ್ಯವಾದ ವಸ್ತುವು ಯಾವ ರೀತಿಯಾಗಿ ಉಳಿಯುತ್ತದೆ, ಅದು ತನ್ನ ಹಿಂದಿನ ಜನ್ಮದೊಡನೆ ಸಂಬಂಧವಿರಿಸಿಕೊಂಡಿರುತ್ತದೆಯೇ ಇಲ್ಲವೇ ಮುಂತಾದ ಪ್ರಶ್ನೆಗಳಿಗೆ ಅವರು ಉತ್ತರ ಹೇಳಲಾರರು. ಹೋದವನು ಹೋದಂತೆಯೇ. ಅವನೊಡನೆ ಪುನಃ ಸಂಪರ್ಕಿಸುವುದು ಅಸಂಭವ. ಅವನು ಬದಕಿರುವವರ (ಅಸ್ಪಷ್ಟವಾದ) ನೆನಪಿನಲ್ಲಿರಬಹುದು ಅಷ್ಟೆ. ಪ್ರತ್ಯಕ್ಷ ಪ್ರಮಾಣದಿಂದಾಗಿಲಿ ಅಥವಾ ತರ್ಕದಿಂದಾಗಲಿ ಅವನ ಮುಂದಿನ ಸ್ಥಿತಿಗತಿಗಳನ್ನು ಸಿದ್ಧಪಡಿಸಲಾಗುವುದಿಲ್ಲ.

ಆದರೆ ಪ್ರತ್ಯಕ್ಷವಾಗಿ ತಿಳಿಯಲಾಗದುದನ್ನು ತಿಳಿಯಲು ಮನುಷ್ಯರು ಎಲ್ಲೆಲ್ಲಿಯೂ ಶಾಸ್ತ್ರಗಳ ಕಡೆಗೆ ತಿರುಗಿರುತ್ತಾರೆ. ದೇವವಾಣಿಗಳೆಂದು ಕರೆಸಿಕೊಳ್ಳುವ ಧಾರ್ಮಿಕ ಗ್ರಂಥಗಳು ಈ ವಿಷಯದಲ್ಲಿ ಹೇಳುವ ಮಾತುಗಳನ್ನು ಸತ್ಯವೆಂದು ನಂಬಿ, ತಮ್ಮ ದೃಷ್ಟಿ, ವಿಚಾರ ಮತ್ತು ಆಚರಣೆಗಳನ್ನು ಬೆಳೆಸಿಕೊಂಡಿರುತ್ತಾರೆ. ಇದಕ್ಕೆ ನಮ್ಮ ಧರ್ಮವೂ ಅಪವಾದವೇನಲ್ಲ. ಸತ್ಯ ಪ್ರಕಾಶಕವಾದ ನಮ್ಮ ದೈವೀ ಗ್ರಂಥಗಳೆಂದರೆ ವೇದಗಳು. ಅವು ಹೇಳಿದ ಸತ್ಯಗಳನ್ನು ತೆಗೆದುಕೊಂಡು ವಿಸ್ತರಿಸಿ ವಿವರಿಸಿದುವು ಸ್ಮೃತಿಗಳು. ಜೀವನ ಸ್ವರೂಪ, ಅವನ ಗತಾಗತಿ ಮುಂತಾದ ವಿಷಯಗಳಲ್ಲಿ ಅವು ಕೊಡುವ ವಿವರಣೆಗಳು ನಮಗೆ ಮಾನ್ಯ. ಅವೇ ನಮ್ಮ ಯಾವತ್ತೂ ನಂಬಿಕೆಗಳಿಗೆ ತಳಹದಿ.

ಆತ್ಮ (ಜೀವನು) ನಿತ್ಯ, ಶರೀರವು ನಾಶವಾದರೂ ಅವನು ನಾಶವಾಗುವುದಿಲ್ಲ ಎಂಬುದು ಅವು ಹೇಳುವ ಒಂದು ಮೂಲಭೂತವಾದ ಸತ್ಯ.

ಅಜೋ ನಿತ್ಯಃ ಶಾಶ್ವತೋಯಂ ಪುರಾಣೋ ನ ಹನ್ಯತೇ ಹನ್ಯಮಾನೇ ಶರೀರೇ। 

ಅದನ್ನು ಆರಂಭ ಬಿಂದುವಾಗಿಟ್ಟುಕೊಂಡು ಶಾಸ್ತ್ರಗಳು ಜೀವನ ಗತಾಗತಿಗಳ ವಿಷಯದಲ್ಲಿ ಋಷಿಗಳು ಕಂಡ ಸತ್ಯಾಂಶಗಳನ್ನು ವ್ಯಕ್ತಪಡಿಸುತ್ತವೆ. ಅವನು ಪುನಃ ಪುನಃ ಹುಟ್ಟುತ್ತಾನೆ. ಕರ್ಮಾನುಗುಣವಾಗಿ ಅವನಿಗೆ ವೃಕ್ಷಾದಿಗಳ ಜನ್ಮವೋ ಅಥವಾ ತಿರ್ಯಕ್ಕು, ಮನುಷ್ಯ, ದೇವತೆ, ರಾಕ್ಷಸ ಮುಂತಾದ ಜನ್ಮಗಳೋ ಉಂಟಾಗುತ್ತವೆ ಎಂಬ ದೃಷ್ಟಿಯನ್ನು ಅವುಗಳಲ್ಲಿ ನೋಡುತ್ತೇವೆ. ಉದಾಹರಣೆಗೆ ಕಠೋಪನಿಷತ್ತು,

ಯೋನಿಮನ್ಯೇ ಪ್ರಪದ್ಯಂತೇ ಶರೀರತ್ವಾಯ ದೇಹನಃ ।

ಸ್ಥಾಣುಮನ್ಯೇಽನುಸಂಯಂತಿ ಯಥಾಕರ್ಮ ಯಥಾಶ್ರುತಂ ॥ 

(ಅವರವರ ಕರ್ಮ ಮತ್ತು ತಿಳಿವಳಿಕೆಗೆ ಅನುಗುಣವಾಗಿ ಕೆಲವರು ಮರಣಾನಂತರ ಯೋನಿಯನ್ನು ಪ್ರವೇಶಿಸಿ ಶರೀರವನ್ನು ಹೊಂದುತ್ತಾರೆ; ಬೇರೆ ಕೆಲವರು ವೃಕ್ಷಾದಿಗಳ ಜನ್ಮವನ್ನೇ ಎತ್ತುತ್ತಾರೆ) ಎಂದು ನುಡಿಯುತ್ತದೆ. ಮನುಷ್ಯನ ಮುಂದಿನ ಜನ್ಮವು ಅವನ ಕರ್ಮಗಳನ್ನು ಅವಲಂಬಿಸಿರುತ್ತದೆ ಎಂಬುದು ಋಷಿಗಳ ಮತ. ಅದನ್ನು ಛಾಂದೋಗವು ಈ ರೀತಿ ಹೇಳುತ್ತದೆ -

ತದ್ಯ ಇಹ ರಮಣೀಯಚರಣಾಃ ಅಭ್ಯಾಶೋ ಹ ಯತ್ತೇ ರಮಣೀಯಾಂ ಯೋನಿಮಾಪದ್ಯೇರನ್। … ಅಥ ಯ ಇಹ ಕಪೂಯಚರಣಾಃ ಅಭ್ಯಾಶೋ ಹ ಯತ್ತೇ ಕಪೂಯಾಂ ಯೋನಿಮಾಪದ್ಯೇರನ್ । ಅಥ ಏತಯೋಃ ಪಥೋರ್ನಕತರೇಣ ಚ ನ ತಾನೀಮಾನಿಕ್ಷುದ್ರಾಣ್ಯಸಕೃದಾವರ್ತೀನಿ ಭೂತಾನಿ ಭವಂತಿ ಜಾಯಸ್ವಮ್ರಿಯಸ್ವೇತ್ಯೇತತ್॥

(ಯಾರು ಇಲ್ಲಿ ರಮಣೀಯವಾದ ಆಚರಣೆಯನ್ನು ಅನುಸರಿಸುತ್ತಾರೆಯೋ ಅವರು ಕ್ಷಿಪ್ರದಲ್ಲಿಯೇ ರಮಣೀಯವಾದ ಯೋನಿಯನ್ನು ಹೊಂದುತ್ತಾರೆ… ಯಾರು ಇಲ್ಲಿ ಕುತ್ಸಿತವಾದ ಆಚರಣೆಯನ್ನು ಅನುಸರಿಸುತ್ತಾರೆಯೋ ಅವರು ಕುತ್ಸಿತವಾದ ಯೋನಿಯನ್ನು ಹೊಂದುತ್ತಾರೆ. ಯಾರು ಇವೆರಡು ದಾರಿಗಳಲ್ಲಿ ಒಂದರಲ್ಲಿಯೂ ಇರುವುದಿಲ್ಲವೋ ಅವರು ಕ್ಷುದ್ರವೂ, ಮತ್ತೆ ಮತ್ತೆ ಆವರ್ತವಾಗುವಂತಹವೂ,  "ಹುಟ್ಟು ಸಾಯಿ" ಎಂಬುದಕ್ಕೆ ವಿಷಯವೂ ಆದ ಸೊಳ್ಳೆ, ನೊಣ ಇತ್ಯಾದಿ ಕ್ರಿಮಿ ಕೀಟಗಳ ಜನ್ಮವನ್ನು ತಾಳುತ್ತಾರೆ)

ಈ ರೀತಿ ಜನ್ಮ ತಾಳುವುದರಲ್ಲಿ ಕರ್ಮದ ಪ್ರಾಮುಖ್ಯತೆಯನ್ನು ಉಪನಿಷತ್ತುಗಳು ಒತ್ತಿ ನುಡಿಯುತ್ತವೆ. ಅದಕ್ಕೆ ಒಂದು ಉತ್ತಮವಾದ ಉದಾಹರಣೆಯನ್ನು ಬೃಹದಾರಣ್ಯಕದಲ್ಲಿ ನೋಡುತ್ತೇವೆ - "ಕರ್ಮ ಚೈವತದೂಚತುಃ ಅಥ ಯತ್ಪ್ರಶಂಸತುಃ ಕರ್ಮಹೈವ ತತ್ಪ್ರಶಂಸತುಃ ಪುಣ್ಯೋ ವೈ ಪುಣ್ಯೇನ ಕರ್ಮಣಾ ಭವತಿ ಪಾಪಃ ಪಾತೇನೇತಿ" ("ಅವರಿಬ್ಬರೂ ಕರ್ಮವನ್ನೇ ಕುರಿತು ಹೇಳಿದರು;  ಆರ್ತ ಭಾಗ ಮತ್ತು ಯಾಜ್ಞವಲ್ಕ್ಯರಿಬ್ಬರೂ ಕರ್ಮವನ್ನೇ ಹೊಗಳಿದರು, ಪುಣ್ಯಕರ್ಮದಿಂದ ಪುಣ್ಯ ಜನ್ಮವನ್ನೇ ಹೊಂದುತ್ತಾನೆ, ಪಾಪದಿಂದ ಪಾಪ ಜನ್ಮವನ್ನೇ ಹೊಂದುತ್ತಾನೆ ಎಂದು ಅವರಿಬ್ಬರೂ ಮಾತನಾಡಿಕೊಂಡರು.)

ಈ ವಿಷಯವನ್ನು ಯಾಜ್ಞವಲ್ಕ್ಯನಷ್ಟು ಸಮರ್ಪಕವಾಗಿ ನಿರೂಪಿಸಿರುವವರು ಬೇರೆ ಯಾರೂ ಇಲ್ಲ. ಮಹಾ ಮೇಧಾವಿಯೂ, ಬಹುಶ್ರುತನೂ ಮತ್ತು ಆತ್ಮ ಜ್ಞಾನಿಯೂ ಆಗಿದ್ದ ಅವನು ಜನ್ಮಾಂತರದ ವಿಷಯದಲ್ಲಿ ಕೊಟ್ಟಿರುವ ಅಚ್ಚುಕಟ್ಟಾದ ವಿವರಣೆಯು ಸರ್ವ ಕಾಲಕ್ಕೂ ನಮ್ಮ ಜನರ ಮನಸ್ಸನ್ನು ಪ್ರಭಾವ ಗೊಳಿಸಿರುತ್ತದೆ. ಅವನು ಸ್ಪಷ್ಟವಾದ, ಓಜಸ್ವಿಯಾದ ಮತ್ತು ತರ್ಕಬದ್ಧವಾದ ಶೈಲಿಯಲ್ಲಿ ಮರಣ, ಪುನರ್ಜನ್ಮ ಮತ್ತು ಜ್ಞಾನದಲ್ಲಿ ಶರೀರವನ್ನು ಬಿಡುವವನ ಗತಿ ಮುಂತಾದವುಗಳನ್ನು ನಿರೂಪಿಸಿರುತ್ತಾನೆ. ಅವನು ಹೇಳುವುದನ್ನು ಇಲ್ಲಿ ಉಲ್ಲೇಖಿಸುತ್ತೇವೆ.

"ಸ ಯತ್ರಾಯಮಾತ್ಮಾ ಅಬಲ್ಯಂನ್ಯೇತ್ಯ ಸಂಮೋಹಮಿವನ್ಯೇತಿ ಅಥೈನಮೇಕೇ ಪ್ರಾಣಾ ಅಭಿಸಮಾಯಾಂತಿ ಸ ಏತಾಸ್ತೇಜೋಮಾತ್ರಾಃ ಸಮಭ್ಯಾದದಾನೋ ಹೃದಯುಮೇವ ಅನ್ವವಕ್ರಾಮತಿ ಸ ಯತ್ರೈಷ ಚಾಕ್ಷುಷಃ ಪುರುಷಃ ಪರಾಂಗ್ ಪರ್ಯಾವರ್ತತೇ ಅಥ ಅರೂಪಜ್ಞೋ ಭವತಿ ॥"

(ಯಾವಾಗ ಈ ಆತ್ಮನು ಮರಣಕಾಲದಲ್ಲಿ ಅತ್ಯಂತ ದುರ್ಬಲತೆಯನ್ನು ಹೊಂದಿ ಸಂಮೋಹವನ್ನು ಹೊಂದುತ್ತಾನೆಯೋ ಆಗ ವಾಕ್ಕು ಮೊದಲಾದ ಪ್ರಾಣಗಳು ಅವನಲ್ಲಿ ಹೋಗಿ ಸೇರುತ್ತವೆ. ಅವುಗಳನ್ನು ತೆಗೆದುಕೊಂಡು ಅವನು ಹೃದಯವನ್ನೇ ಪ್ರವೇಶಿಸುತ್ತಾನೆ. ಯಾವಾಗ ಈ ಚಾಕ್ಷುಷ ಪುರುಷನು ಹಿಂದಿರುಗುತ್ತಾನೆಯೋ ಆಗ ಆತ್ಮನು ರೂಪಗಳನ್ನು ತಿಳಿಯುವುದಿಲ್ಲ).

"ಏಕೀ ಭವತಿ ನ ಪಶ್ಯತೀತ್ಯಾಹುಃ ಏಕೀ ಭವತಿ ನ ಜಿಘ್ರತೀತ್ಯಾಹುಃ ಏಕೀ ಭವತಿ ನ ರಸಯತೀತ್ಯಾಹುಃ ಏಕೀ ಭವತಿ ನ ವದತೀತ್ಯಾಹುಃ ಏಕೀ ಭವತಿ ನಶ್ರುಣೋತೀತ್ಯಾಹುಃ ಏಕೀ ಭವತಿ ನಮನುತ ಇತ್ಯಾಹುಃ ಏಕೀ ಭವತಿ ನ ಸ್ಪೃಶತೀತ್ಯಾಹುಃ ಏಕೀ ಭವತಿ ನವಿಜಾನಾತೀತ್ಯಾಹುಃ ತಸ್ಯ ಹ್ಯೇತಸ್ಯ ಹೃದಯಸ್ಯಾಗ್ರಂ ಪ್ರದ್ಯೋತತೇ ತೇನ ಪ್ರದ್ಯೋತೇನ ಏಷ ಆತ್ಮಾ ನಿಷ್ಕ್ರಾಮತಿ ಚಕ್ಷುಷೋ ವಾ ಮೂರ್ಧ್ನೋವಾ ಅನ್ಯೇಭ್ಯೋ ವಾ ಶರೀರ ದೇಶೇಭ್ಯಃ  ತಮುತ್ಕ್ರಾಮಂತಂ  ಪ್ರಾಣೋsನೂತ್ಕ್ರಾಮಂತಂ ಸರ್ವೇ ಪ್ರಾಣಾಃ ಅನೂತ್ಕ್ರಾಮಂತಿ ಸ ವಿಜ್ಞಾನೋ ಭವತಿ ಸ ವಿಜ್ಞಾನಮೇವ ಅನ್ವವಕ್ರಾಮತಿ ತಂ ವಿದ್ಯಾಕುರ್ಮಣೀ ಸುಮನ್ವಾರಭೇತೇ ಪೂರ್ವ ಪ್ರಜ್ಞಾ ಚ ॥"

(ಕಣ್ಣಿನಲ್ಲಿರುವ ಪುರುಷನು ಆತ್ಮನಲ್ಲಿ ವಿಲೀನನಾಗುತ್ತಾನೆ. ಆಗ ಪಕ್ಕದಲ್ಲಿರುವವರು (ಇವನ ದೃಷ್ಟಿಯು ಹೋಯಿತು) ಇವನು ನೋಡುತ್ತಿಲ್ಲ ಎಂದು ಹೇಳುತ್ತಾರೆ; ವಿಲೀನನಾಗುತ್ತಾನೆ. ಇವನು ಮೂಸಿ ನೋಡುವುದಿಲ್ಲ ಎಂದು ಹೇಳುತ್ತಾರೆ; ವಿಲೀನನಾಗುತ್ತಾನೆ. ಇವನು ರಸಾಸ್ವಾದನೆ ಮಾಡುವುದಿಲ್ಲ ಎಂದು ಹೇಳುತ್ತಾರೆ; ವಿಲೀನನಾಗುತ್ತಾನೆ. ಇವನು ಮಾತನಾಡುವುದಿಲ್ಲ ಎಂದು ಹೇಳುತ್ತಾರೆ; ವಿಲೀನನಾಗುತ್ತಾನೆ. ಇವನು ಕೇಳುವುದಿಲ್ಲ ಎಂದು ಹೇಳುತ್ತಾರೆ; ವಿಲೀನನಾಗುತ್ತಾನೆ. ಇವನು ಅರಿಯುವುದಿಲ್ಲ ಎಂದು ಹೇಳುತ್ತಾರೆ; ವಿಲೀನನಾಗುತ್ತಾನೆ. ಇವನು ಸ್ಪರ್ಶವನ್ನರಿಯುವುದಿಲ್ಲ ಎಂದು ಹೇಳುತ್ತಾರೆ ವಿಲೀನನಾಗುತ್ತಾನೆ. ಇವನು ತಿಳಿಯುತ್ತಿಲ್ಲ ಎಂದು ಹೇಳುತ್ತಾರೆ. ಇವನ ಹೃದಯದ ಅಗ್ರವು ಬೆಳಗುತ್ತದೆ. ಆ ಬೆಳಕಿನಿಂದ ಈ ಆತ್ಮನು ಕಣ್ಣಿನ ಮೂಲಕವಾಗಲಿ, ಶಿರಸ್ಸಿನ ಮೂಲಕವಾಗಲಿ ಅಥವಾ ಶರೀರದ ಯಾವುದಾದರೂ ಪ್ರದೇಶದಿಂದಾಗಲಿಹೊರಬರುತ್ತಾನೆ. ಹೊರ ಬರುತ್ತಿರುವಾಗ ಅವನನ್ನು ಪ್ರಾಣವು ಹಿಂಬಾಲಿಸುತ್ತದೆ. ಹೊರ ಬರುತ್ತಿರುವ ಪ್ರಾಣವನ್ನು ಇತರ ಪ್ರಾಣಗಳು ಹಿಂಬಾಲಿಸುತ್ತವೆ. ಆಗ ಆತ್ಮನು ವಿಜ್ಞಾನದಿಂದ ಒಂದುಗೂಡುತ್ತಾನೆ. ವಿಜ್ಞಾನದೊಂದಿಗೆ ಅವನು ಹೊರಬರುತ್ತಾನೆ. ಅವನನ್ನು ವಿದ್ಯೆ ಮತ್ತು ಕರ್ಮಗಳು ಬಂದು ಕೂಡಿಕೊಳ್ಳುತ್ತವೆ. ಜೊತೆಗೆ ಪೂರ್ವ ಪ್ರಜ್ಞೆಯೂ ಸಹ).

ಮರಣದಲ್ಲಿ ಚಕ್ಷುರಾದಿ ಇಂದ್ರಿಯಗಳು ತಮ್ಮ ತಮ್ಮ ಸ್ಥಾನಗಳನ್ನು ಬಿಟ್ಟು ಆತ್ಮನಲ್ಲಿ ಒಂದಾದನಂತರ ಅವನು ಹೇಗೆ ಅವುಗಳೆಲ್ಲವನ್ನೂ ತೆಗೆದುಕೊಂಡು ಶರೀರದಿಂದ ಹೊರಬಂದು ಬೇರೊಂದು (ಶರೀರ ರೂಪವಾದ) ಅವಲಂಬನೆಯನ್ನು ಹಿಡಿದುಕೊಳ್ಳುತ್ತಾನೆ ಎಂಬುದನ್ನು ಋಷಿಯು ಈ ರೀತಿ ವರ್ಣಿಸುತ್ತಾನೆ:

"ತದ್ಯಥಾ ತೃಣಜಲಾಯುಕಾ ತೃಣಸ್ಯಾಂತಂ ಗತ್ವಾನ್ಯಮಾಕ್ರಮಮಾಕ್ರಮ್ಯ ಆತ್ಮಾನಂ ಉಪಸಂಹರತಿ ಏವಮೇವಾಯಮಾತ್ಮಾ ಇದಂ ಶರೀರಂ ನಿಹತ್ಯ ಅವಿದ್ಯಾಂ ಗಮಯಿತ್ವಾನ್ಯಮಾಕ್ರಮಮಾಕ್ರಮ್ಯ ಆತ್ಮಾನಮುುಪಸಂಹರತಿ॥"

(ಹೇಗೆ ಒಂದು ಹುಲ್ಲು ಜಿಗಣೆಯು ಹುಲ್ಲಿನ ತುದಿಯನ್ನು ಮುಟ್ಟಿ ಬೇರೊಂದು ಅವಲಂಬನೆಯನ್ನು ಹಿಡಿದುಕೊಂಡು ತನ್ನ ಶರೀರವನ್ನು ಮುಂದಕ್ಕೆ ಎಳೆದುಕೊಳ್ಳುತ್ತದೆಯೋ ಹಾಗೆಯೇ ಈ ಆತ್ಮನು ಈ ಶರೀರವನ್ನು ಬೀಳಿಸಿ ಅವಿದ್ಯೆಯನ್ನು ಕೊಡಹಿ ಬೇರೊಂದು ಅವಲಂಬನೆಯನ್ನು ಹಿಡಿದುಕೊಂಡು ತನ್ನನ್ನು ಎಳೆದುಕೊಳ್ಳುತ್ತಾನೆ).

ಶರೀರವನ್ನು ಬಿಟ್ಟುಹೋದಾಗ ಅವನಿಗೆ ಬೇರೊಂದು ಶರೀರವು ಬರುತ್ತದೆ. ಅದನ್ನು ಋಷಿಯು ಮುಂದಿನ ಶಬ್ದಗಳಲ್ಲಿ ವರ್ಣಿಸುತ್ತಾನೆ:

"ತದ್ಯಥಾ ಪೇಶಸ್ಕರೀ ಪೇಶಸೋಮಾತ್ರಾಮುಪಾದಾಯ ಅನ್ಯತ್ ನವತರಂ ಕಲ್ಯಾಣತರಂ ರೂಪಂ ತನುತೇ ಏವಮೇವಾಯಮಾತ್ಮಾ ಇದಂ ಶರೀರಂ ನಿಹತ್ಯ ಅವಿದ್ಯಾಂ ಗಮಯಿತ್ವಾನ್ಯತ್ ನವತರಂ ಕಲ್ಯಾಣತರಂ ರೂಪಂ ಕುರುತೇ ಪಿತ್ರ್ಯಂ ವಾ ಗಾಂಧರ್ವಂ ವಾ ದೈವಂ ವಾ ಪ್ರಾಜಾಪತ್ಯಂ ವಾ ಬ್ರಾಹ್ಮಂ ವಾ ಅನ್ಯೇಷಾಂ ವಾ ಭೂತಾನಾಂ॥"

( ಹೇಗೆ ಸ್ವರ್ಣಕಾರನು ಚಿನ್ನದ ಪದಾರ್ಥವೊಂದನ್ನು ತೆಗೆದುಕೊಂಡು ಅದಕ್ಕೆ ಬೇರೊಂದು ಹೊಸದಾದ, ಸುಂದರತರವಾದ ರೂಪವನ್ನು ಕೊಡುತ್ತಾನೋ ಹಾಗೆಯೇ ಈ ಆತ್ಮನು ಈ ಶರೀರವನ್ನು ಕೆಡವಿ ಅವಿದ್ಯೆಯನ್ನು ಹೋಗಲಾಡಿಸಿ ಅದಕ್ಕಿಂತ ಹೊಸದಾದ, ಅದಕ್ಕಿಂತ ಹೆಚ್ಚು ಕಲ್ಯಾಣಮಯವಾದ ರೂಪವನ್ನುಂಟು ಮಾಡುತ್ತಾನೆ. ಅದು ಪಿತೃದೇವತೆಗಳದಾಗಿರಬಹುದು ಅಥವಾ ಗಂಧದ್ವರದಾಗಿರಬಹುದು, ದೇವತೆಗಳದಾಗಿರಬಹುದು, ಪ್ರಜಾಪತಿಯದಾಗಿರಬಹುದು ಅಥವಾ ಇತರ ಯಾವುದಾದರೂ ಭೂತ (ಜೀವಿ) ಗಳದಾಗಿರಬಹುದು).

ವಾಸ್ತವದಲ್ಲಿ ಸೃಷ್ಟಿಯೆಲ್ಲವೂ ಆತ್ಮನ ಮುಂದಿರುತ್ತದೆ. ಅನಂತವಾದ ಸೃಷ್ಟಿಯಲ್ಲಿ ಅವನು ಯಾವ ರೀತಿಯಾದ ಶರೀರವನ್ನು ಬೇಕಾದರೂ ಧರಿಸಬಹುದು. ಆತ್ಮನ ಸಾಮರ್ಥ್ಯವೇ ಅಂತಹದ್ದು. ಅವನಲ್ಲಿ ಎಲ್ಲವೂ ಇದೆ. ಆದರೆ ಅವನೇನಾಗುತ್ತಾನೆಂಬುದು ಅವನ ಆಚರಣೆಯ ಮೇಲೆ, ಅವನ ಕರ್ಮದ ಮೇಲೆ ನಿಂತಿದೆ. ಅದನ್ನು ಋಷಿಯು ಈ ರೀತಿ ವರ್ಣಿಸುತ್ತಾನೆ -

"ಸ ವಾ ಅಯಮಾತ್ಮಾ ಬ್ರಹ್ಮವಿಜ್ಞಾನಮಯೋ ಮನೋಮಯಃ ಪ್ರಾಣಮಯಃ ಚಕ್ಷುರ್ಮಯಃ ಶ್ರೋತ್ರಮಯಃ ಪೃಥಿವೀಮಯ ಆಪೋಮಯೋ ವಾಯುಮಯ ಆಕಾಶಮಯಸ್ತೇಜೋಮಯೋಽತೇಜೋಮಯಃ ಕಾಮಮಯೋಽಕಾಮಮಯಃ ಕ್ರೋಧಮಯೋಽಕ್ರೋಧಮಯೋ ಧರ್ಮಮಯೋಽಧರ್ಮಮಯಃ ಸರ್ವಂಮಯಃ ತದ್ಯದೇತತ್ ಇದಂಮಯೋಽದೋಮಯ ಇತಿ ಯಥಾಕಾರೀ ಯಥಾಚಾರೀ ತಥಾ ಭವತಿ ಸಾಧುಕಾರೀ ಸಾಧುರ್ಭವತಿ ಪಾಪಕಾರೀ ಪಾಪೋ ಭವತಿ ಪುಣ್ಯಃ ಪುಣ್ಯೇನ ಕರ್ಮಣಾ ಭವತಿ  ಪಾಪಃ ಪಾಪೇನ। ಅಥೋಖಲ್ವಾಹುಃ ಕಾಮಮಯ ಏವಾಯಂ ಪುರುಷ ಇತಿ ಸ ಯಥಾ ಕಾಮೋ ಭವತಿ ಯತ್ಕ್ರತುರ್ಭವತಿ ತತ್ ಕರ್ಮ ಕುರುತೇ ಯತ್ಕರ್ಮ ಕುರುತೇ ತದಭಿಸಂಪದ್ಯತೇ॥"

(ಈ ಆತ್ಮನು ವಸ್ತುತಃ ಬ್ರಹ್ಮ. ಅವನು ವಿಜ್ಞಾನಮಯ, ಮನೋಮಯ, ಪ್ರಾಣಮಯ, ಚಕ್ಷುರ್ಮಯ, ಶ್ರೋತ್ರಮಯ, ಪೃಥಿವೀಮಯ, ಆಪೋಮಯ, ವಾಯುಮಯ, ಆಕಾಶಮಯ, ತೇಜೋಮಯ ಮತ್ತು ಅತೇಜೋಮಯ, ಕಾಮಮಯ ಮತ್ತು ಅಕಾಮಮಯ, ಕ್ರೋಧಮಯ ಮತ್ತು ಅಕ್ರೋಧಮಯ, ಧರ್ಮಮಯ ಮತ್ತು ಅಧರ್ಮಮಯ;  ಅವನು ಸರ್ವಮಯ. ಅವನು ಈಮಯನೂ ಆಗಿದ್ದಾನೆ, ಆಮಯನೂ ಆಗಿದ್ದಾನೆ. ಏನು ಮಾಡುತ್ತಾನೆಯೋ ಏನು ಆಚರಿಸುತ್ತಾನೆಯೋ ಹಾಗೆ ಅವನು ಅಗುತ್ತಾ ನೆ. ಒಳ್ಳೆಯದನ್ನು ಮಾಡುವವನು ಒಳ್ಳೆಯದಾಗಿ ಆಗುತ್ತಾನೆ. ಪಾಪವನ್ನು ಮಾಡುವವನು ಪಾಪವಂತನೇ ಆಗುತ್ತಾನೆ. ಪುಣ್ಯಕರ್ಮದಿಂದ ಪುಣ್ಯವಂತನಾಗುತ್ತಾನೆ. ಪಾಪದಿಂದ ಪಾಪಯುಕ್ತನಾಗುತ್ತಾನೆ. ಮನುಷ್ಯನು ಕಾಮಮಯನೇ ಸರಿ ಎಂದು ಲೋಕದಲ್ಲಿ ಹೇಳುತ್ತಾರೆ. ಅವನು ಯಾವ ಕಾಮದಿಂದ ಕೂಡಿರುತ್ತಾನೆಯೋ ಅದಕ್ಕನುಗುಣವಾದ ಸಂಕಲ್ಪವನ್ನು ಮಾಡಿಕೊಳ್ಳುತ್ತಾನೆ. ಯಾವ ವಿಧವಾದ ಸಂಕಲ್ಪವನ್ನು ಮಾಡಿಕೊಳ್ಳುತ್ತಾನೆಯೋ ಅದಕ್ಕನುಗುಣವಾಗಿ ಕರ್ಮಮಾಡುತ್ತಾನೆ. ಎಂತಹ ಕರ್ಮಮಾಡುತ್ತಾನೆಯೋ ಅದಕ್ಕನುಗುಣವಾಗಿ ಹುಟ್ಟುತ್ತಾನೆ).

ಸಂಗಿಯಾದವನು ಅವನ ಮನಸ್ಸು ಯಾವುದರಲ್ಲಿ ಆಸಕ್ತವಾಗಿದೆಯೋ ಆ ಲಿಂಗ (ಶರೀರ)ವನ್ನೇ ಕರ್ಮಸಹಿತವಾಗಿ ಹೊಂದುತ್ತಾನೆ. ಆ ಲೋಕದಿಂದ ಕಾಮನೆಗಳಿಂದ ಕೂಡಿರುವವನು ಪುನಃ ಕರ್ಮ ಮಾಡಲು ಈ ಲೋಕಕ್ಕೇ ಬರುತ್ತಾನೆ. ಅದೇ ಕಾಮನೆಗಳಿಲ್ಲದಿರುವವನೂ, ಅಕಾಮನೂ, ನಿಷ್ಕಾಮನೂ, ಅಪ್ತಕಾಮನೂ ಆದವನಲ್ಲಿ ಪ್ರಾಣಗಳು ಉತ್ಕ್ರಮಣ ಮಾಡುವುದಿಲ್ಲ. ಬ್ರಹ್ಮನೇ ಆಗಿ ಅವನು ಬ್ರಹ್ಮನನ್ನೇ ಹೊಂದುತ್ತಾನೆ.

ಕಾಮ(ಇಚ್ಛೆ) ಮತ್ತು ಕರ್ಮಗಳು ಸೃಷ್ಟಿಯಲ್ಲಿ ಮಹತ್ತರವಾದ ಪ್ರೇರಕ ಶಕ್ತಿಗಳು. ಅವೇ ಜೀವಕೋಟಿಗಳನ್ನು ಸೃಷ್ಟಿಪ್ರವಾಹದೊಳಕ್ಕೆ ತಳ್ಳಿ ಅವುಗಳನ್ನು ಮುಂದು ಮುಂದಕ್ಕೆ ಸೆಳೆದೊಯ್ಯುತ್ತವೆ. ಅವೆರಡರಲ್ಲಿ ಕಾಮವು ಮೊದಲನೆಯದು ಕರ್ಮವು ಮುಂದಿನದು. ಕಾಮವು ಉಂಟುಮಾಡುವ ವಾಸನೆ (ಸಂಕಲ್ಪ)ಗಳಲ್ಲಿಯೇ ಜನ್ಮಾಂತರದ ರಹಸ್ಯವು ಅಡಗಿರುತ್ತದೆ. ಆದುದರಿಂದ ಜನನ ಮರಣಗಳಿಂದ ತಪ್ಪಿಸಿಕೊಳ್ಳಬೇಕಾದರೆ ಕಾಮದ ಬೇರನ್ನು ಕಿತ್ತು ಹಾಕಬೇಕು. ಆ ರೀತಿ ಮಾಡಿದಾಗ ಮರ್ತ್ಯನು ಅಮೃತತ್ವವನ್ನು ಹೊಂದುತ್ತಾನೆ. ಇದನ್ನೇ ಈಶಾವಾಸ್ಯದ ಮಂತ್ರವೊಂದು ತನ್ನದೇ ಆದ ಗಾಂಭೀರ್ಯದಿಂದ ಈ ರೀತಿ ಉಕ್ತಿಸುತ್ತದೆ:

ವಾಯುರನಿಲಮಮೃತಮಥೇದಂ ಭಸ್ಮಾಂತಂ ಶರೀರಂ ।

ಓಂ ಕ್ರತೋಸ್ಮರ ಕೃತಗ್ಂ ಸ್ಮರ ಓಂ ಕ್ರತೋಸ್ಮರ ಕೃತಗ್ಂ ಸ್ಮರ ॥ 

ಮಂತ್ರದದ ತಾತ್ಪರ್ಯವು ಹೀಗಿದೆ: ವಾಯು, ಪ್ರಾಣ ಮತ್ತು ಅಮೃತಗಳು (ಮೃತನಲ್ಲಿ ಉಳಿಯುತ್ತವೆ);  ಅವನ ಶರೀರವಾದರೋ ಬೂದಿಯಾಗಿ ಕೊನೆಗೊಳ್ಳುತ್ತದೆ. ಓಂ, ಎಲೆ ಸಂಕಲ್ಪಾತ್ಮಕನೇ, (ಮರಣ ಕಾಲದಲ್ಲಿ) ಸರಿಯಾದ ಭಾವಗಳನ್ನು ಸ್ಮರಿಸಿಕೋ, (ನೀನು ಮಾಡಿದ) ಕರ್ಮಗಳನ್ನು ಸ್ಮರಿಸಿಕೋ; ಓಂ, ಎಲೆ ಸಂಕಲ್ಪಾತ್ಮಕನೇ ಸರಿಯಾದ ಭಾವಗಳನ್ನು ಸ್ಮರಿಸಿಕೋ; ನಿನ್ನ ಕರ್ಮಗಳನ್ನು ಸ್ಮರಿಸಿಕೋ.

ಕೃಷ್ಣನು ಗೀತೆಯಲ್ಲಿ

ಯಂ ಯಂ ವಾಪಿ ಸ್ಮರನ್ ಭಾವಂ ತ್ಯಜತ್ಯಂತೇ ಕಳೇಬರಂ ।

ತಂ ತಮೇವೇತಿ ಕೌಂತೇಯ ಸದಾ ತದ್ಭಾವ ಭಾವಿತಃ ॥ 

(ಯಾವ ಯಾವ ಭಾವವನ್ನು ಸ್ಮರಿಸುತ್ತಾ ಕೊನೆಯಲ್ಲಿ ತನ್ನ ಕಳೇಬರವನ್ನು ಬಿಡುತ್ತಾನೆಯೋ ಆ ಭಾವದಿಂದ ಪ್ರಭಾವಿತನಾಗಿ ಆ ಭಾವವನ್ನೇ ಹೊಂದುತ್ತಾನೆ) ಎಂದು ಹೇಳಿ ಸರ್ವಕಾಲದಲ್ಲಿಯೂ ನನ್ನನ್ನೇ ಚಿಂತಿಸು ಎಂದು ಅರ್ಜುನನಿಗೆ ಆದೇಶ ಮಾಡುತ್ತಾನೆ. ಯಾಜ್ಞವಲ್ಕ್ಯನು ಕಾಮರಹಿತವಾದ ಬ್ರಹ್ಮನನ್ನು ಚಿಂತಿಸಲು ಹೇಳುತ್ತಾನೆ. ಪಶ್ಚಾತ್ತಾಪದಿಂದ ಕರ್ಮಗಳನ್ನು ನಾಶಮಾಡಿ, ಅಮೃತ ಮಯವಾದ ಆತ್ಮಭಾವವನ್ನೇ ಸ್ಮರಿಸಿಕೊಳ್ಳಬೇಕೆಂದು ಈಶಾವಾಸ್ಯ ಋಷಿಯು ಹೇಳುತ್ತಾನೆ. ವಾಸ್ತವದಲ್ಲಿ ಮೂವರು ಹೇಳುವುದೂ ಒಂದೇ.

ಯಾಜ್ಞವಲ್ಕ್ಯನು ಹೇಳುವ ದೈವ, ಪಿತೃ, ಗಾಂಧರ್ವ, ಪ್ರಾಜಾಪತ್ಯ ಮುಂತಾದ ಲೋಕಗಳ ಕಾಮನೆಯಿಂದ ಶರೀರಬಿಟ್ಟವನು ಅವುಗಳನ್ನು ಅನುಭವಿಸಿ ಇಲ್ಲಿಗೇ ಹಿಂದಿರುಗಿ ಬರುತ್ತಾನೆ. ಅವುಗಳಿಗೆ ಹೋಗುವ ದಾರಿಗೆ ಪಿತೃಯಾನವೆಂದು ಹೆಸರು. ಆತ್ಮನ ಬಳಿಗೆ ಹೋಗುವ ದಾರಿಗೆ ದೇವಯಾನ ಅಥವಾ ಅರ್ಚಿರಾದಿಮಾರ್ಗ ಎಂದು ಹೆಸರು. ಅದರಲ್ಲಿ ಹೋದವನು ಈ ಲೋಕಕ್ಕೆ ಹಿಂದಿರುಗುವುದಿಲ್ಲ. ಅದನ್ನೇ ಲಕ್ಷ್ಯವಾಗಿಟ್ಟುಕೊಂಡು ಭಾಗವತವು "ಅಂತೇ ನಾರಾಯಣಸ್ಮೃತಿಃ". ಕೊನೆಗಾಲದಲ್ಲಿ ನಾರಾಯಣನನ್ನು ಸ್ಮರಿಸಬೇಕು ಎಂದು ಹೇಳುತ್ತದೆ, ಏಕೆಂದರೆ ಅದು ಆಪುನರಾವೃತ್ತಿ ಮಾರ್ಗಕ್ಕೆ ಬೀಗದಕೈ. ಆ ದಾರಿಯಲ್ಲಿ ಹೋಗುವಂತೆ ಜೀವನ ವಿಧಾನವನ್ನು ರಚಿಸಿಕೊಟ್ಟಿದ್ದು ನಮ್ಮ ಹಿರಿಯರ ಹಿರಿಮೆ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ:೧೪ ಸಂಚಿಕೆ:೧೦, ಆಗಸ್ಟ್ ೧೯೯೧ ತಿಂಗಳಲ್ಲಿ  ಪ್ರಕಟವಾಗಿದೆ.