Thursday, August 5, 2021

ಜೀವನ ಮತ್ತು ರಸ (Jeevana Mattu Rasa)

ಡಾ. ಹಚ್.ಆರ್. ಮೀರಾ
ಪ್ರತಿಕ್ರಿಯಿಸಿರಿ lekhana@ayvm.in



ದೈನಂದಿನ ಜಂಜಾಟಗಳನ್ನು ಮೀರಿ, ಜೀವನವು ರಸಮಯವಾದ ಬಾಳಾಟವಾಗಬೇಕು. ಹಾಗಾಗಲು ನಾವು ಏನು ಮಾಡಬೇಕು? ದೇಹದ ಆರೋಗ್ಯವನ್ನು ನೋಡಿಕೊಳ್ಳಲು ನಾವು ತೆಗೆದುಕೊಳ್ಳುವ ಆಹಾರಕ್ಕೆ ಗಮನ ಕೊಡುತ್ತೇವಲ್ಲವೆ? ಹಾಗೆಯೇ, ಇಂದ್ರಿಯಗಳ ಮೂಲಕ ತೆಗೆದುಕೊಳ್ಳುವ ವಿಷಯಾಹಾರಕ್ಕೂ ಗಮನ ಕೊಡಬೇಕು. ಈ ಎಲ್ಲ ಆಹಾರಗಳು ದೇಹಕ್ಕೂ ಮನಸ್ಸಿಗೂ ಆತ್ಮಕ್ಕೂ ಪೂರಕವೇ ಮಾರಕವೇ ಎಂಬ ಎಚ್ಚರಿಕೆ ಇಟ್ಟಿರುವುದು ಒಳ್ಳೆಯದು.

ನಾವು ಕಿವಿ-ಕಣ್ಣುಗಳ ಮೂಲಕ ಒಳಬರಮಾಡಿಕೊಳ್ಳುವ ಸಾಹಿತ್ಯದಲ್ಲಿ ದೈನಂದಿನ ವಾರ್ತಾವಳಿಯಿಂದ ಆರಂಭಿಸಿ, ಹಲವಾರು ಧಾರಾವಾಹಿ-ಸಿನಿಮಾಗಳು, ಹಾಗೂ ಕಥೆ-ಕಾದಂಬರಿಗಳು ಸೇರಿಕೊಳ್ಳುತ್ತವೆ, ಹಾಗೂ ಅವುಗಳಿಂದಾಗಿ ವಿವಿಧ ಭಾವಗಳು ನಾನಾ ಪ್ರಮಾಣದಲ್ಲಿ ನಮಗೆ ಅನುಭವಕ್ಕೆ ಬರುತ್ತವೆ. ಕ್ರೋಧ-ಭಯ-ಜುಗುಪ್ಸೆ-ವಿಸ್ಮಯಗಳನ್ನು ಉಂಟುಮಾಡುವ ವಾರ್ತೆಗಳೋ, ಹಾಸ-ಶೋಕಗಳನ್ನುಂಟುಮಾಡುವ ಧಾರಾವಾಹಿಗಳನ್ನೋ ನೋಡಿ-ಕೇಳುವುದರಲ್ಲಿ ನಾವು ತಲ್ಲೀನರಾದರೆ, ಆ ಭಾವಗಳು ರಸದಲ್ಲೇ ಪರ್ಯವಸಾನವಾಗುವುವೆಂದು ಹೇಳಲಾಗದು. ಕೇವಲ ಕುತೂಹಲಕ್ಕಾಗಿ ಓದುವ ಸಾಹಿತ್ಯ ಕೂಡ ರಸವನ್ನು ಮೂಡಿಸಬೇಕೆಂದೇನೂ ಅಲ್ಲ.

ಹಾಗಾದರೆ ಯಾವ ರೀತಿಯ ಸಾಹಿತ್ಯದಲ್ಲಿ ನಮ್ಮ ಮನಸ್ಸನ್ನು ತೊಡಗಿಸಿಕೊಳ್ಳಬೇಕು? ಆ ಸಾಹಿತ್ಯವನ್ನು ನಾವು ಯಾವ ನಿರೀಕ್ಷೆಯಿಂದ ಓದಬೇಕು? ಒಳ್ಳೆಯ ಕಾವ್ಯವು ತಾನು ಮೂಡಿಸುವ ಭಾವಗಳನ್ನು ರಸದಲ್ಲಿ ಪರ್ಯವಸಾನ ಹೊಂದಿಸುವ ಸಾಮರ್ಥ್ಯವುಳ್ಳದ್ದು. ಒಳ್ಳೆಯ ಕಾವ್ಯವು ಜೀವನಕ್ಕೆ ಬೇಕಾದ ಉದಾರವಾದ ತತ್ತ್ವಗಳನ್ನು ಪ್ರಿಯಳಾದ ಹೆಂಡತಿ ಹೇಳುವಂತೆ ನಯವಾಗಿ ಹೇಳುವಂತಹದು. ರುಚಿಕರವೂ ಪುಷ್ಟಿಕರವೂ ಆದ ಷಡ್ರಸೋಪೇತವಾದ ಆಹಾರವನ್ನು ದೇಹಕ್ಕೆ ಕೊಡುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾದುದು ಇದು: ಒಂದು ಕಡೆ ರಸಾನುಭವವನ್ನೂ ಮತ್ತೊಂದೆಡೆ ಜೀವನಕ್ಕೆ ಬೇಕಾದ ತತ್ತ್ವಗಳನ್ನೂ ಕೊಡುವಂತಹ ಕಾವ್ಯಗಳತ್ತ ಮನಸ್ಸು ಹರಿಸುವುದು. ಇದರಿಂದ ದೇಹಸ್ವಾಸ್ಥ್ಯಕ್ಕೆ ಕೊಡುವಷ್ಟೇ ಪ್ರಾಶಸ್ತ್ಯವನ್ನು ಮಾನಸಿಕಸ್ವಾಸ್ಥ್ಯಕ್ಕೆ ಕೊಟ್ಟಂತಾಗುತ್ತದೆ.

ಶ್ರೀರಂಗಮಹಾಗುರುಗಳು ಹೇಳುತ್ತಿದ್ದಂತೆ, ರಸಭರಿತವಾದ ಆಹಾರದಲ್ಲಿ ಇರುವ ಷಡ್ರಸಗಳು ಸರಿಯಾಗಿ ಸೇರಿದ್ದೇ ಆದರೆ ನಮ್ಮ ದೇಹಕ್ಕೆ ಸೇರಿ ಅದು ಧಾತುಸಾಮ್ಯವನ್ನು ಉಂಟುಮಾಡುತ್ತದೆ. ಅದೇ ರೀತಿ ನವರಸೋಪೇತವಾದ ಉತ್ಕೃಷ್ಟವಾದ ಕಾವ್ಯಗಳೂ ನಮ್ಮ ಮನಸ್ಸಿಗೆ ವಿಷಯವಾದರೆ, ಅವುಗಳಿಗೆ ಕೂಡ ಧಾತುಸಾಮ್ಯವನ್ನು ಉಂಟುಮಾಡುವ ಶಕ್ತಿಯುಂಟು. ರಸಯುಕ್ತವಾದ ಒಳ್ಳೆಯ ಸಾಹಿತ್ಯವನ್ನು ಆಸ್ವಾದಿಸುತ್ತಾ, ರಸಮಯ-ಜೀವನವನ್ನೂ ಮನಸ್ಸ್ವಾಸ್ಥ್ಯವನ್ನೂ ಹೊಂದೋಣ.

ಸೂಚನೆ: 9/7/2021 ರಂದು ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.