Sunday, August 15, 2021

ಸ್ವತಂತ್ರ ಭಾರತ - ಋಷಿದೃಷ್ಟಿ (Svatantra bharata - Rusidrushti)

ಲೇಖಕಿ ; ಮೈಥಿಲೀ ರಾಘವನ್

 (ಪ್ರತಿಕ್ರಿಯಿಸಿರಿ lekhana@ayvm.in)




ಭಾರತ - ಅತ್ಯಂತ  ವೈಭವದಿಂದ ಮೆರೆದ ಭಾರತ; ಮೊಗಲಾಯರ ಧಾಳಿಯಿಂದ ತನ್ನ ಧನ  ಸಂಪತ್ತನ್ನಷ್ಟೇ ಅಲ್ಲದೆ, ಗುಡಿಗೋಪುರಗಳ ಸಂಪತ್ತನ್ನೂ ಕಳೆದುಕೊಂಡು, ಕ್ರಮೇಣ  ಅವರ ಆಡಳಿತದಿಂದಾಗಿ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡ ಭಾರತ; ಶತಮಾನಗಳ ಕಾಲ ಅವರಿಗೆ ಗುಲಾಮಗಿರಿಯನ್ನು ಮಾಡಿ, ನಂತರ  ವ್ಯಾಪಾರಕ್ಕಾಗಿ ಬಂದ ಬ್ರಿಟೀಷರಿಗೆ ಮೋಸಹೋಗಿ ತನ್ನನ್ನೇ ಅವರಿಗರ್ಪಿಸಿಕೊಂಡ ಭಾರತ…. ಹೀಗೆ ತನ್ನ ಧನಕನಕಗಳನ್ನಲ್ಲದೆ ತನ್ನ ಸಂಸ್ಕೃತಿ ಸಂಪತ್ತನ್ನೂ ಕಳೆದುಕೊಂಡ ಭಾರತವು ಎಷ್ಟೋ ಕಾಲದ ನಂತರ, ನೂರಾರು ವೀರ ದೇಶಭಕ್ತರ ಪ್ರಯತ್ನದಿಂದಾಗಿ ಪರಕೀಯರ ಹಿಡಿತದಿಂದ ತನ್ನನ್ನು ಬಿಡಿಸಿಕೊಂಡಿತು. ಸ್ವತಂತ್ರ ಭಾರತವಾಯಿತು. ಭಾರತೀಯರು ತಮ್ಮನ್ನು ತಾವೇ ತಮ್ಮಿಚ್ಛೆಯಂತೆ ಆಳುವುದೇ ಸ್ವಾತಂತ್ರ್ಯವೆಂಬ ಅಭಿಪ್ರಾಯವು ಇಲ್ಲಿ ದೃಢವಾಗುತ್ತದೆ.  ಆ ದಿನದ, 75ನೆಯ ವರ್ಷದ ಸವಿನೆನಪಿನ ಸಮಾರಂಭದಲ್ಲಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲ ದೇಶಭಕ್ತರನ್ನೂ ಕೃತಜ್ಞತೆಯಿಂದ ಸ್ಮರಿಸಿ ಗೌರವಿಸೋಣ. 

ಸ್ವತಂತ್ರ ಭಾರತವು ತನ್ನ 75ನೆಯ ವರ್ಷದಲ್ಲಿ ಪ್ರಗತಿಯ ಪಥದಲ್ಲಿ ತ್ವರಿತ ಗತಿಯಿಂದ ಮುನ್ನಡೆಯುತ್ತಿರುವುದು ನಮ್ಮೆಲ್ಲರ ಹೆಮ್ಮೆಯ ವಿಚಾರ. 'ಆತ್ಮನಿರ್ಭರ ಭಾರತ'ವಾಗುವುದನ್ನು ಧ್ಯೇಯವನ್ನಾಗಿಟ್ಟುಕೊಂಡು ಶ್ರಮಿಸುತ್ತಿರುವುದು ಸ್ವಾತಂತ್ರ್ಯದ ಹೆಗ್ಗುರುತಾಗಿದೆ. ಆಧುನಿಕ ವಿಜ್ಞಾನಕ್ಕೆ ದೊರೆಯುತ್ತಿರುವ ಪೋಷಣೆಯೊಂದಿಗೆ, ಭಾರತೀಯವಾದ ಗುಡಿ-ಕೈಗಾರಿಕೆಗಳಿಗೂ ಬೆಂಬಲ ದೊರೆಯುತ್ತಿರುವುದು ಸಂತಸದ  ಸುದ್ದಿ. ತನ್ನ ಗತವೈಭವವನ್ನು  ಪುನರುಜ್ಜೀವನ ಗೊಳಿಸುವಲ್ಲಿ, ತನ್ನ ಸಂಪತ್ಸಮೃದ್ಧಿಯನ್ನು ಮತ್ತೆ ಪಡೆಯುವಲ್ಲಿ ಭಾರತವು ಸರ್ವಪ್ರಯತ್ನವನ್ನೂ ಎಸಗುತ್ತಿರುವುದು ಕಂಡು ಬರುತ್ತಿದೆ. 

ಈ  ಸಂದರ್ಭದಲ್ಲಿ  ಸ್ಥಿತವೈಭವವನ್ನಾಗಿ ಮಾಡಿಕೊಳ್ಳಬೇಕಾಗಿರುವ ಸನಾತನಾರ್ಯ ಭಾರತದ ಗತವೈಭವದ ಮತ್ತೊಂದು ಪ್ರಮುಖ ಅಂಶವಿದೆ. ಅದರ ಬಗೆಗೂ ಚಿಂತನೆಯನ್ನು  ಹರಿಸಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ ಎನಿಸುತ್ತದೆ. 

ಭಾರತದ ವೈಭವಕ್ಕೆ ಧನ-ದಾನ್ಯಗಳ ಸಮೃದ್ಧಿಯಷ್ಟೇ ಕಾರಣವಾಗಿರಲಿಲ್ಲ. ಇನ್ನೆಲ್ಲೂ ಕಾಣಸಿಗದ ಶಾಂತಿ ಸಮೃದ್ಧಿಯೂ ಸಹ ಭಾರತದ ಐಶ್ವರ್ಯವಾಗಿದ್ದಿತು. 'ಸ್ವತಂತ್ರ' ಎಂಬ ಪದವೇ ಆ ಕಡೆಗೆ ನಮ್ಮನ್ನು ಸೆಳೆಯುವ ದಿಕ್ಸೂಚಿಯಾಗಿದೆ.

'ಸ್ವತಂತ್ರ'- ಭಾರತ ಮಹರ್ಷಿಗಳ ಪರಿಕಲ್ಪನೆ 

ಸನಾತನಾರ್ಯ ಭಾರತ ಮಹರ್ಷಿಗಳ 'ಸ್ವತಂತ್ರ' ಪದದ ಪರಿಕಲ್ಪನೆ, ಅದರಿಂದ ದೊರಕಬಹುದಾದ ನೆಮ್ಮದಿ-ಶಾಂತಿಗಳ ಬಾಳಾಟ- ಇವುಗಳ ಬಗೆಗೆ ಶ್ರೀರಂಗಮಹಾಗುರುಗಳ ವಿವರಣೆಯು ಇಲ್ಲಿ ಉಲ್ಲೇಖಾರ್ಹವಾಗಿದೆ - 'ಸ್ವ' ಎಂದರೆ 'ತನ್ನ'; 'ತಂತ್ರ' ಎಂದರೆ ಯೋಜನೆ. ತನ್ನದೇ ಆದ ಯೋಜನೆ ಏನುಂಟೋ ಅದರಂತೆ ನಡೆಯುವುದೇ ಸ್ವತಂತ್ರ. 

ಒಂದು ಮಾವಿನ ಬೀಜವನ್ನು ನೆಟ್ಟರೆ ಅದು ವೃಕ್ಷವಾಗಿ ವಿಸ್ತಾರಗೊಂಡು ಕೊನೆಗೆ ಹಣ್ಣಿನೊಳಗೆ ಮತ್ತೆ ಬೀಜ ರೂಪವಾದಾಗ ಅದರ ವಿಕಾಸ/ವಿಸ್ತಾರ ಪೂರ್ಣವೆನಿಸುತ್ತದೆಯೆನ್ನುವುದು  ಸಾಮಾನ್ಯಜ್ಞಾನ. ಇಂತಹ ವಿಸ್ತಾರದ ಪ್ಲಾನನ್ನು ಹೊರಗಿನಿಂದ ಯಾವ ಕೃಷಿಕನೂ ಅದಕ್ಕೆ ಅಂಟಿಸಿಲ್ಲವಷ್ಟೇ. ಸೃಷ್ಟಿಸಹಜವಾಗಿ ಬೀಜದಲ್ಲೇ ಇರುವ ಪ್ಲಾನ್ ಅದು. ಅದನ್ನರಿತು ಬೆಳೆಸಿದಾಗ ಪೂರ್ಣಬೆಳವಣಿಗೆ-ಪೂರ್ಣಫಲ. ಹಾಗೆ ಬೆಳೆಯಲುನುಗುಣವಾದ ಕ್ರಿಯೆ ನಡೆದಾಗ ತಾನೇ ಬೀಜಕ್ಕೆ ಸ್ವಾತಂತ್ರ್ಯವಿದೆಯೆನ್ನಬಹುದು.  ಹಾಗಿಲ್ಲದಿದ್ದಾಗ- ಅಂದರೆ, ಬದನಿಕೆಯಿಂದಾಗಿ ಅದರ ಬೆಳವಣಿಗೆಯು ಬೇರಾವುದೋ ಬೀಜದಲ್ಲಿ ನಿಂತರೆ, ಅದರ ಸ್ವಾತಂತ್ರ್ಯದ ಅಪಹರಣವಾಯಿತು ಎನ್ನಬೇಕಾಗುತ್ತದೆ.      

ಅಂತೆಯೇ, ಪ್ರತಿ ಜೀವಿಯಲ್ಲೂ ಸಹಜವಾಗಿಯೇ ಅದರ ಪ್ಲಾನ್ ಅಡಕವಾಗಿದ್ದು, ಅದರ ಜೊತೆಯಲ್ಲಿಯೇ ಬಂದಿದೆ ಎನ್ನುವುದನ್ನು ಜೀವದ ಮೂಲಸ್ವರೂಪವನ್ನು ಕಂಡ ಜ್ಞಾನಿಗಳು  ಅರಿತು ಸಾರಿದರು. ಅವರು ಕಂಡಂತೆ,  ಪರಂಜ್ಯೋತಿಯ ಕಿಡಿಯಾಗಿ ಹೊರಬಂದ ಜೀವಿಗೂ(ಮಾವಿನ ಬೀಜದಂತೆಯೇ) ತನ್ನ ಮೂಲನೆಲೆಯಾದ ಪರಂಜ್ಯೋತಿಯಲ್ಲೇ/ಪರಮಾತ್ಮನಲ್ಲೇ  ಸೇರುವ ಪ್ಲಾನ್ ಇದೆ - ಅದೇ ಅದರ 'ಸ್ವ-ತಂತ್ರ'. ಆ ದಾರಿಯಲ್ಲಿ ಜೀವಿಯ ಜೀವನವು ಸಾಗಿದಾಗ ಮಾತ್ರವೇ ಜ್ಞಾನಿಗಳ ದೃಷ್ಟಿಯಲ್ಲಿ ಸ್ವತಂತ್ರವಾದ ಜೀವನವಾಗುವುದು. ಅಂದರೆ ಪರಂಜ್ಯೋತಿಯ ಸಾಕ್ಷಾತ್ಕಾರವೇ ಜೀವನದ ಗುರಿಯಾಗಿದ್ದು, ಅ ಗುರಿಯನ್ನು ಸಾಧಿಸಿದರೆ ಮಾತ್ರವೇ ಸ್ವತಂತ್ರವಾದ ಬಾಳಾಟವೆನಿಸುತ್ತದೆ. ಅಂತಹ ಗುರಿಮುಟ್ಟಿದಾಗ  ಸಿಗುವುದೇ ಶಾಶ್ವತವಾದ ಶಾಂತಿಸಮೃದ್ಧಿ, ನೆಮ್ಮದಿಯ ನೆಲೆದಾಣ. ಇತರ ಸಾಧನಗಳಿಂದ ಎಷ್ಟೇ ಸಂತೋಷ ದೊರೆತರೂ ಅದು ಶಾಶ್ವತವಾಗಿ ಉಳಿಯದು. 


ಮಹರ್ಷಿಪ್ರಣೀತ 'ಸ್ವಾತಂತ್ರ್ಯ'ಕ್ಕೆ ದಾರಿ  

ಈ ಗುರಿಸಾಧಿಸಲು ಮಹರ್ಷಿಗಳು ಹಾಕಿಕೊಟ್ಟ ಜೀವನ ವಿಧಾನವು ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳನ್ನು ಸಾಧಿಸುವುದೇ ಆಗಿದೆ. ಅದರಲ್ಲಿ ಮೋಕ್ಷವೇ ಗುರಿ, ಧರ್ಮವೇ ದಾರಿ; ಅರ್ಥ ಕಾಮಗಳು ಈ ದಾರಿಯಲ್ಲಿ ತಾವಾಗಿಯೇ ಕೈಗೂಡಿ ಬರುವ ಫಲಗಳು. ಜೀವನ ಈ  ವಿಧಾನದಲ್ಲಿ ಸಾಗಿದಾಗ ಶಾಂತಿಸಮೃದ್ಧವಾದ ಬಾಳಾಟವು ಸಿದ್ಧಿಸುತ್ತದೆ. ಪ್ರಜೆಗಳ ವೈಯಕ್ತಿಕ ಜೀವನವು ಇಂತಹ ದಾರಿಯನ್ನು ಹಿಡಿಯಲು ಪೋಷಕವಾದ ವ್ಯವಸ್ಥೆಯನ್ನು ಮಾಡುವುದು ರಾಷ್ಟ್ರನಾಯಕನ ಕರ್ತವ್ಯವಾಗುವುದು. ಆದ್ದರಿಂದಲೇ ರಾಷ್ಟ್ರದ ಬಗೆಗೆ ಹೇಳುವಾಗ ಮಹರ್ಷಿಗಳು "ಧರ್ಮಾರ್ಥ ಕಾಮ ಮೋಕ್ಷ ಚತುರ್ವಿಧ ಪುರುಷಾರ್ಥ ಫಲಮಿದಂ ರಾಷ್ಟ್ರಮ್" ಎಂದು ಸಾರಿದರು.  ಜ್ಞಾನಿಗಳ ದೃಷ್ಟಿಯಲ್ಲಿ ಇಂತಹ ರಾಷ್ಟ್ರವೇ ಸ್ವತಂತ್ರ ರಾಷ್ಟ್ರವೆನಿಸಿಕೊಳ್ಳುತ್ತದೆ. ಸನಾತನಾರ್ಯ ಭಾರತದಲ್ಲಿ ರಾಜ್ಯವ್ಯವಸ್ಥೆಯು ಇಂತಹ ಸ್ವಾತಂತ್ರ್ಯವನ್ನು ಆಧರಿಸಿಯೇ ರೂಪುಗೊಂಡಿತ್ತು. ಆದ್ದರಿಂದಲೇ ಋಷಿಯುಗದ ಭಾರತವು ಧನಸಮೃದ್ಧಿಯೊಂದಿಗೆ ಶಾಂತಿಸಮೃದ್ಧಿಯಿಂದಲೂ ಶೋಭಿಸುತ್ತಿತ್ತು. 


ಹೀಗಿಲ್ಲದೆ ಅರ್ಥ-ಕಾಮಗಳೇ ಗುರಿಯಾಗಿಬಿಟ್ಟಾಗ ಅಶಾಂತಿ, ಅಸಂತುಷ್ಟಿಗಳೇ ಜೀವನವನ್ನು ತುಂಬುತ್ತವೆ. ಅಸಂತುಷ್ಟಿಯು  ಕಾಮ-ಕ್ರೋಧಗಳನ್ನು ಹುಟ್ಟಿಸಿ ವ್ಯಕ್ತಿಯ ಜೀವನವನ್ನು ಹಾಳುಮಾಡುತ್ತದೆ.  ಹಾಗೂ ತನ್ಮೂಲಕ ಸಮಾಜ, ರಾಷ್ಟ್ರಗಳ  ಸುಸ್ಥಿತಿಯನ್ನೂ  ಕೆಡಿಸಿಬಿಡುತ್ತದೆ. ಆಗ ವ್ಯಕ್ತಿಯ ಹಾಗೂ ರಾಷ್ಟ್ರದ ಸ್ವ-ತಂತ್ರವು ಕಸಿಯಲ್ಪಟ್ಟಿದೆ ಎನ್ನಬೇಕಾಗುವುದು.    


ಪ್ರಾಚೀನ (ಸ್ವ-ತಂತ್ರ)ಭಾರತದ ವೈಭವ 

ಮೈಥಿಲೀಶರಣ್ ಗುಪ್ತಾ ಎಂಬ  ಕವಿಯು  ತಮ್ಮ "ಜ್ಞಾನ ಹಮಾರಾ ಧ್ಯಾನ ಹಮಾರಾ ಮಸ್ತಕ್ ಮೇ ಮನ್ ಮೇ ಥಾ----" ಎಂಬ  ಹಿಂದಿ ಕವಿತೆಯಲ್ಲಿ ಪ್ರಾಚೀನ ಭಾರತದ  ವೈಭವವನ್ನು ವಿಶದವಾಗಿ  ತಿಳಿಸುತ್ತಾರೆ -  ಪ್ರಜೆಗಳಲ್ಲಿ ಶಮ-ದಮಾದಿ  ಗುಣಗಳೇ  ಜೀವನಸಾಧನಗಳಾಗಿದ್ದವು; ಎಲ್ಲೆಲ್ಲೂ ಹಚ್ಚಹಸಿರು, ಸ್ವಚ್ಛಜಲ, ತುಂಬಿ ಹರಿಯುವ ನದಿಗಳು; ಋಷ್ಯಾಶ್ರಮಗಳ ಪರಿಸರದಲ್ಲಿ ಮೃಗಗಳೂ ವೈರವನ್ನು ತೊರೆದು ಓಡಾಡುತ್ತಿದ್ದವು; ತಪೋನಿರತರಾದ ಋಷಿಗಳು ರಾಜರಿಗೆ ಮಾರ್ಗದರ್ಶಕರಾಗಿದ್ದರು; ಪರಹಿತವೇ/ಲೋಕಹಿತವೇ ಅವರ ಆಶಯವಾಗಿತ್ತು; ಗುರುಕುಲಗಳಲ್ಲಿ ಬ್ರಹ್ಮಚಾರಿಗಳಿಗೆ ವಿದ್ಯಾರ್ಜನೆ, ಶಾಸ್ತ್ರಪಾಠಗಳ   ಜೊತೆಗೆ ಬ್ರಹ್ಮಜ್ಞಾನ ಹಾಗೂ ಮುಕ್ತಿಗೆ ಬೇಕಾದ ಶಿಕ್ಷಣವೂ ದೊರೆಯುತ್ತಿತ್ತು; ಜೀವನದ ಪರಮಸತ್ಯದ ಅನ್ವೇಷಣೆಯೇ ಮುಖ್ಯ ಪಾಠವಾಗಿತ್ತು; ಪರಮಾತ್ಮಸಾಕ್ಷಾತ್ಕಾರವೆಂಬ ಗುರಿಯಿಂದಕೂಡಿದ ಯೋಗಾಭ್ಯಾಸವು  ಪ್ರಾಣಾಯಾಮಾದಿ  ಅಂಗಗಳ ಮೂಲಕ ನಡೆಯುತ್ತಿತ್ತು; ತನ್ಮೂಲಕ ಆಯುರ್ವೃದ್ಧಿಯೂ ಸಿದ್ಧಿಸುತ್ತಿತ್ತು; ತಪೋನಿರತರಾದ ಋಷಿಗಳ ಮುಂದೆ ರಾಜಾಧಿರಾಜರೂ ಗೌರವದಿಂದ ನತಮಸ್ತಕರಾಗುತ್ತಿದ್ದರು; ವೇದಾಧ್ಯಯನ, ಪೂಜಾದಿ  ಕರ್ಮಗಳಿಂದ ದೇವತೆಗಳನ್ನೂ ಒಲಿಸಿಕೊಳ್ಳುತ್ತಿದ್ದರು; ಜೀವನ್ಮುಕ್ತಿಯ ಪಥದಲ್ಲಿ ಸಾಗುತ್ತಿದ್ದರು. ಇಷ್ಟಿದ್ದರೂ, ಜೀವನದಲ್ಲಿ ಮೋದ-ವಿನೋದಗಳೆಲ್ಲವೂ ಇದ್ದವು; ಆದರೆ ಮೋಹವಿರಲಿಲ್ಲ.  ಕವಿಯು  ಸಾರಾಂಶವಾಗಿ ಹೇಳುವ ಮಾತೆಂದರೆ, ಎಲ್ಲೆಲ್ಲೂ ಅಮರಭಾವವು ತುಂಬಿ ತುಳುಕುತ್ತಿತ್ತು; ಭವಭಯದಿಂದ ಮುಕ್ತರಾಗುವ ಮಾರ್ಗವು  ತೆರೆದಿತ್ತು.   

  ಶಾಂತಿಸಮೃದ್ಧಿ  ಮುಂತಾದ ವೈಭವಗಳೆಲ್ಲವನ್ನೂ  ಹೇಳಿ,  ಕಡೆಗೆ  "ಅವೆಲ್ಲವೂ ಈಗ ಎಲ್ಲಿ ಮರೆಯಾಯಿತೋ" ಎಂಬುದಾಗಿ ತಮ್ಮ ದುಃಖವನ್ನೂ ತೋಡಿಕೊಂಡಿದ್ದಾರೆ ಕವಿಗಳು.  


ಋಷಿದೃಷ್ಟಿಯ 'ಸ್ವ-ತಂತ್ರ'ಕ್ಕಾಗಿ  ಶ್ರಮಿಸೋಣ   

ಶಾಂತಿಸಮೃದ್ಧಿಗೆ ಬೇಕಾದ ದಾರಿಯನ್ನು ಋಷಿಯಗವು ತೋರುತ್ತಿದೆ. ಆಧುನಿಕ ವಿಜ್ಞಾನದಿಂದ ದೊರೆಯುವ ಸುಖ, ಭೋಗಸಾಮಗ್ರಿಗಳು ಋಷಿಯುಗದಲ್ಲಿ ಇಲ್ಲದಿದ್ದಿರಬಹುದು. ಆದರೆ ಅವುಗಳಿಂದ ಪಡೆಯಬಹುದಾದ  ಆನಂದ, ನೆಮ್ಮದಿಗಳಿಗಿಂತ  ಕೋಟಿಕೋಟಿ ಪಾಲು ಹೆಚ್ಚಿನ ಆನಂದವನ್ನು ಪರಮಾತ್ಮನ ಸಾಕ್ಷಾತ್ಕಾರವು ಅವರಿಗೆ ನೀಡುತ್ತಿತ್ತು  ಎಂಬುದಕ್ಕೆ  ಉಪನಿಷತ್ತುಗಳಲ್ಲಿ ದಾಖಲೆಗಳು ಸಿಗುತ್ತವೆ. ಮನುಷ್ಯನು ಭೋಗಗಳ ಹಿಂದೆ ಓಡುವುದಾದರೂ  ಆನಂದಕ್ಕಾಗಿಯೇ ಅಲ್ಲವೇ? 


ವೈಯಕ್ತಿಕ ಜೀವನ, ಸಾಮಾಜಿಕ ಜೀವನ, ರಾಷ್ಟ್ರವ್ಯವಸ್ಥೆ-ಇವೆಲ್ಲದರಲ್ಲೂ 'ಶಾಂತಿಸಮೃದ್ಧಿ'ಯೆಂಬ ಏಕಸೂತ್ರತೆಯು ಇದ್ದಲ್ಲಿ,   ಜೀವದ ಸ್ವಾತಂತ್ರ್ಯವೂ ಉಳಿಯುವುದು, ರಾಷ್ಟ್ರದ ಸ್ವಾತಂತ್ರ್ಯವೂ ಉಳಿಯುವುದು. 

ಧನ-ದಾನ್ಯ ಸಮೃದ್ಧಿಗಾಗಿ ಶ್ರಮಿಸುವುದರ ಜೊತೆಗೆ ಋಷಿಗಳು ತೋರಿದ ಶಾಂತಿಸಮೃದ್ಧಿಗಾಗಿಯೂ  

ಶ್ರಮಿಸೋಣ. ನಾವೂ ಸ್ವತಂತ್ರರಾಗಿ, ಭಾರತವನ್ನೂ ಸ್ವತಂತ್ರಭಾರತವನ್ನಾಗಿ ಪರಿವರ್ತಿಸೋಣ.


ಸೂಚನೆ: 19/8/2021 ರಂದು ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.