Sunday, August 29, 2021

ಶ್ರೀರಾಮನ ಗುಣಗಳು - 19 ಸರ್ವಭೂತಹಿತೈಷೀ- ಶ್ರೀರಾಮ (Sriramana Gunagalu - 19 Sarvabhuthahitaishi - Shrirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)

ಸೃಷ್ಟಿಯಲ್ಲಿ ಎಂಭತ್ತನಾಲ್ಕುಲಕ್ಷ ಬಗೆಯ ಜೀವಜಾತಿಗಳಿವೆ. ಇವುಗಳಲ್ಲಿ ಯಾವುದೋ ಒಂದು ಬಗೆಯ ಸಾಮರಸ್ಯವಿದ್ದೇ ಇದೆ. ಸಮರಸಜೀವನವು ಎಷ್ಟು ಸಹಜವೋ ಪರಸ್ಪರ ವಿರಸವೂ ಅಷ್ಟೇ ಸಹಜ. ಕೆಲವು ಕಡೆ ಒಂದು ಜೀವಿಯು ಇನ್ನೊಂದು ಜೀವಿಯನ್ನು ಆಶ್ರಯಿಸಿ ಇರುತ್ತದೆ. ಕೆಲವು ಕಡೆ ಒಂದು ಜೀವಿಗೆ ಇನ್ನೊಂದು ಜೀವಿಯು ಆಜನ್ಮ ಶತ್ರುವೂ ಆಗಿರುತ್ತದೆ. ಇಂತಹ ವಿಚಿತ್ರ ಸೃಷ್ಟಿಯಲ್ಲಿ ಮಾನವನ ಸೃಷ್ಟಿಯೂ ಒಂದು. ಸಮಗ್ರವಾದ ಸೃಷ್ಟಿಯಲ್ಲಿ ಮಾನವನ ಪಾತ್ರ ಅತ್ಯಲ್ಪವೆಂದೇ ಹೇಳಬೇಕಾಗುತ್ತದೆ. ಆದರೆ ಈ ಸೃಷ್ಟಿಯಲ್ಲಿ ಮಾನವನ ನಿಯಂತ್ರಣವೂ ಅಷ್ಟೇ ಹಿರಿದು ಎನ್ನಬೇಕಾಗುತ್ತದೆ. ಹೇಗೆ ಮಾನವನು ತನ್ನ ಪ್ರಯತ್ನದಿಂದ, ಆಜನ್ಮಶತ್ರುಗಳನ್ನೂ ಕೂಡ, ಅವರಲ್ಲಿ ಶತ್ರುತ್ವ ಇಲ್ಲದಂತೆ ಮಾಡಬಹುದು ಎಂಬುದನ್ನು ಯೋಗಶಾಸ್ತ್ರ, ಪುರಾಣ ಮೊದಲಾದ ಭಾರತೀಯ ಸಾಹಿತ್ಯಗಳಲ್ಲಿ ಹೇರಳವಾಗಿ ಕಾಣಬಹುದು. ಭೂತಹಿತವೆಂಬ ಗುಣವನ್ನು ಋಷಿಮಹರ್ಷಿಗಳ, ಮಹಾಪುರುಷರ, ಅವತಾರಪುರುಷರ ವ್ಯಕ್ತಿತ್ವದಲ್ಲಿ ಕಾಣಬಹುದು. ಇದಕ್ಕೆ ಶ್ರೀರಾಮನ ಚರಿತೆ ಬಲು ಉತ್ತಮವಾದ ಉದಾಹರಣೆಯಾಗಿದೆ. ಪ್ರತಿಯೊಂದು ಜೀವಿಯೂ ಈ ಪ್ರಪಂಚದಲ್ಲಿ ನಿರ್ಭಯವಾಗಿ ವಾಸಿಸಲು ಅವಕಾಶವಿದೆ. ಹಾಗೆ ಬದುಕಲು ಬಿಡುವುದನ್ನೇ 'ಸರ್ವಭೂತ(ಜೀವಿ)ಹಿತ' ಎಂದು ಕರೆಯುತ್ತಾರೆ. ಹಿಂದೆ ಋಷ್ಯಾಶ್ರಮಗಳಲ್ಲಿ ಕಾಡುಪ್ರಾಣಿಗಳು ಭಯವನ್ನು ಬಿಟ್ಟು ವಿಹರಿಸುತ್ತಿದ್ದವು, ತಪಸ್ಸಿನ ಪ್ರಭಾವದಿಂದ ಆ ಪರಿಸರವು ಅಂತಹ ನಿರ್ಭೀತವಾದ ವಾತಾವರಣದಿಂದ ಕೂಡಿತ್ತು. ರಾಜನು ಇದಕ್ಕೆ ಬೇಕಾದ ಪೋಷಕವ್ಯವಸ್ಥೆಯನ್ನು ಮಾಡುತ್ತಿದ್ದನು. ಮಾನವರಲ್ಲಿ ಮುಖ್ಯನಾದ ರಾಜನ ಪಾತ್ರ ಅಷ್ಟೇ ಪ್ರಮುಖವಾದದ್ದು. 


ರಾಜನಾದವನಿಗೆ ತನ್ನ ರಾಜ್ಯದಲ್ಲಿರುವ ಪ್ರತಿಯೊಬ್ಬರೂ ನೆಮ್ಮದಿಯಿಂದ ಜೀವನ ಮಾಡಬೇಕು; ಯಾರಿಂದಲೂ ಭಯ, ಬೆದರಿಕೆ ಇರಬಾರದು ಎಂಬ ಜವಾಬ್ದಾರಿ ಇರಬೇಕು. ಹಾಗೇನಾದರೂ ಕಂಡುಬಂದಲ್ಲಿ ಅದನ್ನು ಹದ್ದುಬಸ್ತಿಗೆ ತರುವ ಜವಾಬ್ದಾರಿಯೂ ರಾಜನದ್ದೇ ಆಗಿರುತ್ತದೆ. ಎಲ್ಲಿ ಸಮಾಜಕ್ಕೆ ಅಥವಾ ಜೀವನಕ್ಕೆ ಆಘಾತ ಉಂಟಾಗುತ್ತದೆಯೋ, ಅಲ್ಲಿ ಆಘಾತಕ್ಕೆ ಒಳಗಾದವರಿಗೆ ರಕ್ಷಣೆ ಕೊಡುವುದು ರಾಜನ ಭೂತಹಿತವೆಂಬ ಮಹಾಗುಣ. ಒಮ್ಮೆ ಶ್ರೀರಂಗಮಹಾಗುರುಗಳಲ್ಲಿ ಅವರ ಶಿಷ್ಯರೊಬ್ಬರು ಪ್ರಶ್ನೆಯನ್ನು ಕೇಳಿದ್ದರು 'ಕಪಟಿಗಳಲ್ಲಿ ದಯೆ ತೋರಬಾರದೇ? ಕಪಟಿಗಳು ದಯಾರ್ಹರಲ್ಲವೇ?' ಎಂದು. ಆಗ ಮಹಾಗುರುಗಳು " 'ಭೂತದಯಾಂ ವಿಸ್ತಾರಯ' ಎನ್ನುತ್ತಾರಲ್ಲ! ಎಂದರೆ- ಅವಶ್ಯವಾಗಿ ಅವರಲ್ಲೂ ದಯೆ ತೋರಬೇಕು. ಏಕೆಂದರೆ ಅವರೂ ಕಪಟ ಬಿಟ್ಟು ಸತ್ಯವಂತರಾಗಬೇಕೆಂಬುದೂ ನಮ್ಮ ಗುರಿಯಷ್ಟೇ" ಎಂದು ನುಡಿದಿದ್ದರು. ದೇಶದಲ್ಲಿದ್ದ ಪ್ರತಿಯೊಬ್ಬರೂ ಸತ್ಯ, ಪ್ರಾಮಾಣಿಕತೆ ಮೊದಲಾದ ಸದ್ಗುಣಗಳನ್ನು ಆಪ್ತವಾಗಿಸಿಕೊಂಡು ಸತ್ಪ್ರಜೆಯಾಗಿ ಬೆಳೆಯುವಂತೆ ಒಂದು ವಾತಾವರಣವನ್ನು ಸೃಷ್ಟಿಸುವುದು ರಾಜನ ಕರ್ತವ್ಯವಾಗಿದೆ. ಅವತಾರಗಳ ಮೂಲ ಉದ್ದೇಶವೂ ಇದೇ ಆಗಿದೆ. ಎಲ್ಲಿ ಅಧರ್ಮವು ವಿಜೃಂಭಿಸುತ್ತದೆಯೋ ಎಲ್ಲಿ ಶಿಷ್ಟರು ಕಷ್ಟಪಡುವಂತಾಗುತ್ತದೆಯೋ ಅಲ್ಲಿ ಧರ್ಮಸ್ಥಾಪನೆಗಾಗಿ, ಶಿಷ್ಟರ ರಕ್ಷಣೆಗಾಗಿ ಭಗವಂತನು ತನ್ನ ಅವತಾರವನ್ನು ಎತ್ತುತ್ತಾನೆ ಅಲ್ಲವೇ. ಶ್ರೀರಾಮನೂ ತನ್ನ ಅವತಾರಕ್ಕೆ ಇದೇ ಉದ್ದೇಶವನ್ನು ಇಟ್ಟುಕೊಂಡಿದ್ದ. ಅವನ ಹಿರಿದಾದ ಭೂತಹಿತವೆಂಬ ಗುಣದಿಂದ ಶಾಂತಿ ಸಮೃದ್ಧವಾದ "ರಾಮರಾಜ್ಯ"ವನ್ನು ಸ್ಥಾಪಿಸಿದ. ಇಂತಹ ಶ್ರೀರಾಮನು ನಮಗೆಲ್ಲ ಆದರ್ಶ. ಅವನ ಜೀವನವೇ ಎಲ್ಲರಿಗೂ ಪ್ರೇರಕ.


ಸೂಚನೆ : 29/8/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ " ಶ್ರೀರಾಮನ ಗುಣಗಳು " ಅಂಕಣದಲ್ಲಿ ಪ್ರಕಟವಾಗಿದೆ.