ಷೋಡಶೋಪಚಾರಗಳಲ್ಲಿ ಎಂಟನೆಯ ಉಪಚಾರ ಉಪವೀತ. ಭಗವಂತನಿಗೆ ಯಜ್ಞೋಪವೀತವನ್ನು ಸಮರ್ಪಿಸುವುದೂ ಹೇಗೆ ಒಂದು ಉಪಚಾರವಾಗುತ್ತದೆ? ಉಪಚಾರದ ಒಟ್ಟು ತಾತ್ಪರ್ಯವಿಷ್ಟೆ- ನಮ್ಮನ್ನು ಅಥವಾ ನಮ್ಮತನವನ್ನು ತ್ಯಾಗಮಾಡಿ ಭಗವದ್ಭಾವವನ್ನು ತುಂಬಿಕೊಳ್ಳುವುದು ಮತ್ತು ನಮ್ಮನ್ನು ನಾವು ಅರಿತುಕೊಳ್ಳುವುದು. ಹೇಗೆ ಈ ಸೃಷ್ಟಿಯು ಅನೇಕ ತತ್ತ್ವಗಳಿಂದ ಕೂಡಿದೆಯೋ, ಅದೇ ರೀತಿ ಸೃಷ್ಟಿಪ್ರತೀಕವಾದ ಈ ನಮ್ಮ ಶರೀರವೂ ಅದೇ ತತ್ತ್ವಗಳಿಂದ ಕೂಡಿದೆ. ಇಲ್ಲೇ ಭಗವಂತನೆಂಬ ತತ್ತ್ವವೂ ಅಡಕವಾಗಿದೆ. ಆ ತತ್ತ್ವರೂಪನಾದ ಭಗವಂತನನ್ನು ತಿಳಿಯಬೇಕಾದರೆ ಉಳಿದ ತತ್ತ್ವಗಳ ಜ್ಞಾನವನ್ನು ಪಡೆದಾಗ ಮಾತ್ರ ಸಾಧ್ಯವಷ್ಟೇ! ಹಾಗಾದರೆ ಆ ತತ್ತ್ವಗಳು ಯಾವುವು ? ಅವುಗಳನ್ನು ತಿಳಿದಾಗ ಪರಬ್ರಹ್ಮತತ್ತ್ವವನ್ನು ಕಾಣಲು ಹೇಗೆ ಸಾಧ್ಯ? ಎಂಬುದನ್ನು ತಿಳಿಯಬೇಕಲ್ಲವೇ! ನಮಗೆ ಕಾಣುವ ಯಾವ ಜನಿವಾರ ಅಥವಾ ಯಜ್ಞೋಪವೀತವುಂಟೋ ಅದು ಯಾವುದೋ ಒಂದು ಭೌತಕವಾದ ಪದಾರ್ಥದಿಂದ ಮಾಡಿದ್ದು ಎಂದಷ್ಟೇ ಭಾವಿಸಬಾರದು. ಅದು ಬ್ರಹ್ಮ ಮತ್ತು ಅದರ ವಿಸ್ತಾರವಾದ ಬ್ರಹ್ಮಾಂಡದ ಪ್ರತಿನಿಧಿ. ನಿಧಿಗೆ ಯಾವ ಬೆಲೆ ಉಂಟೋ ಅಷ್ಟೇ ಬೆಲೆ ಪ್ರತಿನಿಧಿಗೂ ಉಂಟು. ಸಾಮಾನ್ಯವಾಗಿ ಕಾಣುವಂತೆ ಈ ಜನಿವಾರದಲ್ಲಿ ಮೂರು ಎಳೆಯ ದಾರಗಳಿರುತ್ತವೆ. ಮೂರು ಮೂರರಂತೆ ಒಟ್ಟು ಒಂಬತ್ತು ತಂತುಗಳಿವೆ. ಒಂದೊಂದು ತಂತುವೂ ಒಂದೊಂದು ದೇವತೆಯನ್ನು ಪ್ರತಿನಿಧಿಸುತ್ತದೆ. 'ಓಂಕಾರ, ಅಗ್ನಿ, ನಾಗ, ಸೋಮ, ಪಿತೃ, ಪ್ರಜಾಪತಿ, ವಾಯು, ಸೂರ್ಯ, ವಿಶ್ವೇದೇವ ಎಂಬ ಆ ದೇವತೆಗಳು. ಮತ್ತೆ ಮೂರು ಸುತ್ತುಗಳಿಗೆ ಬ್ರಹ್ಮ, ವಿಷ್ಣು, ಮಹೇಶ್ವರ ಎಂಬ ದೇವತೆಗಳನ್ನು ಭಾವಿಸುತ್ತೇವೆ. ಇಷ್ಟೇ ಅಲ್ಲ, ಇಂತಹ ದೇವತೆಗಳನ್ನು ಪ್ರತಿನಿಧಿಸುವ ಯಜ್ಞೋಪವೀತವು ಒಟ್ಟು ೯೬ ಅಂಗುಲ ಉದ್ದವಿರುತ್ತದೆ. ಇದು ೯೬ ತತ್ತ್ವಗಳ ಪ್ರತೀಕವಾಗಿರುತ್ತದೆ. ಯಾರು ಯಜ್ಞೋಪವೀತವನ್ನು ಧಾರಣೆ ಮಾಡುತ್ತಾರೋ ಅವರವರ ಅಂಗುಲ ಪ್ರಮಾಣದ ಜನಿವಾರನ್ನು ಧರಿಸಬೇಕು. ಅಂದರೆ ಅವರ ಶರೀರದಲ್ಲಿರುವ ಆ ೯೬ ತತ್ತ್ವಗಳನ್ನು ಪ್ರತಿಕ್ಷಣ, ಪ್ರತಿದಿನ ಜ್ಞಾಪಿಸಿಕೊಳ್ಳುತ್ತಿರಬೇಕೆಂದರ್ಥ. "ಬ್ರಹ್ಮಸೂತ್ರವು ಭೌತಿಕ-ದೈವಿಕ-ಆಧ್ಯಾತ್ಮಿಕಗಳೆಂಬ ಮೂರು ಕ್ಷೇತ್ರಗಳನ್ನು ಸೂಚಿಸುತ್ತದೆ, ಬ್ರಹ್ಮಸಂಬಂಧವಾದ ಮೂರು ಕ್ಷೇತ್ರಗಳನ್ನು ವ್ಯಾಪಿಸಿದೆ" ಎಂದು ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ಪರಬ್ರಹ್ಮರೂಪವಾದ ತತ್ತ್ವವು ಈ ಸೃಷ್ಟಿಯಲ್ಲಿ ಓತಪ್ರೋತವಾಗಿ ಸೇರಿಕೊಂಡಿದೆ. ಅದನ್ನು ಪೃಥಕ್ಕರಿಸಿ(ಬೇರ್ಪಡಿಸಿ) ತಿಳಿದಾಗಲೇ ಬ್ರಹ್ಮತತ್ತ್ವದ ಸಾಕ್ಷಾತ್ಕಾರ ಸಾಧ್ಯ. ಯಾವುದು ಬ್ರಹ್ಮವಲ್ಲ? ಎಂದು ತಿಳಿಯಬೇಕಾದರೆ ಪ್ರತಿಯೊಂದು ತತ್ತ್ವದ ಅರಿವೂ ಬೇಕೇ ಬೇಕು. ಇಂತಹ ಅರಿವನ್ನು ಪಡೆಯುವ ವಿಧಾನವೇ ಈ ಉಪವೀತವೆಂಬ ಉಪಚಾರ.