Sunday, August 1, 2021

ಶ್ರೀರಾಮನ ಗುಣಗಳು - 15 ನಿಷ್ಪಕ್ಷಪಾತಿ - ಶ್ರೀರಾಮ (Sriramana Gunagalu - 15 - Nishpakshapaati - Sri Rama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)



ಎಲ್ಲರನ್ನು ಸಮಾನವಾಗಿ ನೋಡಿಕೊಳ್ಳುವುದು ನಿಷ್ಪಕ್ಷಪಾತದ ಹೊರ ರೂಪವೆಂದು ಭಾವಿಸಲಾಗುತ್ತದೆ. ಆದರೆ ಅದು ಹಾಗಲ್ಲ. ಪ್ರತಿಯೊಂದು ಪದಾರ್ಥಕ್ಕೂ ಅಥವಾ ಪ್ರತಿಯೊಂದು ವ್ಯಕ್ತಿಗೂ ಅದರದ್ದೇ ಆದ ಸ್ವಭಾವ ಅಥವಾ ಯೋಗ್ಯತೆ ಇರುತ್ತದೆ. ಇದನ್ನು ಅರಿತುಕೊಂಡು ಅದರ ಸ್ವಭಾವಕ್ಕೆ ಧಕ್ಕೆ ಬರದ ರೀತಿಯಲ್ಲಿ ವ್ಯವಹರಿಸುವುದೇ ನಿಷ್ಪಕ್ಷಪಾತ. ಶ್ರೀರಂಗಮಹಾಗುರುಗಳು ಹೀಗೆ ಹೇಳುತ್ತಿದ್ದರು – " ಒಂದರ ವೃತ್ತಿ ಇನ್ನೊಂದಕ್ಕಿಲ್ಲ. ಇದರಲ್ಲಿ ಪಕ್ಷಪಾತವಿಲ್ಲ. 'ಮೂಗು ನೋಡುತ್ತೇನೆ' ಎಂದರೆ, 'ಕಣ್ಣು ಊಟ ಮಾಡುತ್ತೇನೆ' ಎಂದರೆ; ಆ ಯೋಗ್ಯತೆ ಅವಕ್ಕಿಲ್ಲ" ಎಂದು. ಅಂದರೆ ಮೂಗಿಗೆ ವಾಸನೆಯನ್ನು ಗ್ರಹಿಸುವ ಯೋಗ್ಯತೆ ಇದೆ. ಕಣ್ಣಿಗೆ ವಸ್ತುವಿನ ರೂಪವನ್ನು ಗ್ರಹಿಸುವ ಯೋಗ್ಯತೆಯಿದೆ. ಹೀಗೆ ಶರೀರದ ಎಲ್ಲಾ ಅಂಗಗಳಿಗೂ ಅದರದ್ದೇ ಆದ ಯೋಗ್ಯತೆಯಿರುತ್ತದೆ. ಶರೀರಮರ್ಮಜ್ಞನು ಅದರದರ ಯೋಗ್ಯತೆಯನ್ನು ತಿಳಿದು ತಾನೇ ವ್ಯವಹರಿಸಬೇಕು! ಅಂದರೆ ಕಣ್ಣನ್ನು ಅದರ ನೋಡುವ ಯೋಗ್ಯತೆಯು ಉಳಿಸುವಂತೆ ನೋಡಿಕೊಳ್ಳಬೇಕು, ಮೂಗು ಸದಾ ವಾಸನೆಯನ್ನು ಆಘ್ರಾಣಿಸುವಂತೆ ವ್ಯವಹರಿಸಬೇಕು. 'ಕಣ್ಣು ಮಾತ್ರ ಯಾಕೆ ನೋಡಬೇಕು? ಮೂಗು ನೋಡಬಾರದೇ? ಎಂದು ಕಣ್ಣಿಗೆ ಹಾಕುವ ಕನ್ನಡಕವನ್ನು ಮೂಗಿಗೆ ಹಾಕುವುದಿಲ್ಲ. ಕಣ್ಣು, ನೋಡುವುದಕ್ಕೆ ಕನ್ನಡಕವನ್ನು ಧರಿಸಲು ಮೂಗಿನ ಸಹಾಯವನ್ನು ಬಳಸಿಕೊಳ್ಳುತ್ತದೆ. 'ಎಲ್ಲಕ್ಕೂ ಒಂದೇ ನಿಯಮ; ಪಕ್ಷಪಾತವಿರಬಾರದು; ನಾಲಿಗೆ ಮಾತ್ರ ಏಕೆ ಖಾರದ ಪುಡಿಯ ರಸವನ್ನು ಆಸ್ವಾದಿಸಬೇಕು? ಸ್ವಲ್ಪ ಕಣ್ಣೂ ಆಸ್ವಾದಿಸಲಿ' ಎಂದು ಕಣ್ಣಿಗೆ ಖಾರದ ಪುಡಿಯನ್ನು ಹಾಕಿದರೆ ಆಗುತ್ತದೆಯೇ? ಅದರದರ ಯೋಗ್ಯತೆಗೆ ತಕ್ಕಂತೆ ಮತ್ತು ಅದರ ವ್ಯಕ್ತಿತ್ವ ಹಾಳಾಗದಂತೆ ಶರೀರಮರ್ಮಜ್ಞನು ನೋಡಿಕೊಂಡಾಗ ಮಾತ್ರ ಶರೀರದ ಸೌಖ್ಯವನ್ನು ಕಾಪಾಡಬಹುದು, ಇದೇ ಸಮಾನತೆ; ಇದೇ ನಿಷ್ಪಕ್ಷಪಾತ. 

ಶರೀರವೇ ರಾಜ್ಯವ್ಯವಸ್ಥೆಗೆ ಮೂಲವೆಂಬ ನಮ್ಮ ಭಾರತೀಯ ಮಹರ್ಷಿಗಳ ನೋಟವೇ ಅತಿವಿಶಿಷ್ಟವಾದುದು. ಹೇಗೆ ಶರೀರದಲ್ಲಿರುವ ಪ್ರತಿಯೊಂದು ಅಂಗಾಂಗಗಳನ್ನು, ಅದರ ಗುಣಸ್ವಭಾವಗಳಿಗನುಗುಣವಾಗಿ ವ್ಯವಹರಿಸಿ, ಶರೀರಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುತ್ತೇವೋ; ಅಂತೆಯೇ ರಾಜ್ಯವ್ಯವಸ್ಥೆಯೂ ಕೂಡ. ರಾಜ್ಯದಲ್ಲಿ ರಾಜ, ಮಂತ್ರಿ, ದೂತರು, ಸೇವಕರು, ಯೋಧರು ಹೀಗೆ ಹತ್ತು ಹಲವು ಬಗೆಯ ಜನರಿರುತ್ತಾರೆ. ಆ ಒಂದೊಂದು ಬಗೆಯ ಜನರಲ್ಲಿರುವ ಯೋಗ್ಯತೆಯೂ ಭಿನ್ನಭಿನ್ನವಾದದ್ದೇ ಆಗಿರುತ್ತದೆ. ಮಂತ್ರಿಗಳು ಅನೇಕರು. ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ಎಂಬಂತೆ ಅವರವರಿಗೆ ಅದೇ ಸೆಳೆತ. ಎತ್ತಿಗೆ ನೀರಾಗದು, ಕೋಣಕ್ಕೆ ಏರಾಗದು. ಹೀಗೆ ಸಮಾಜ, ವ್ಯಕ್ತಿ, ರಾಜ್ಯ, ರಾಜ ಇವೆಲ್ಲವೂ ಭಿನ್ನಭಿನ್ನವಾದಾಗ ಅವರ ಯೋಗ್ಯತೆಯೂ ಭಿನ್ನವೇ. ರಾಜನ ವ್ಯವಹಾರ ಅದಕ್ಕನುಗುಣವಿರಬೇಕು. ಇಲ್ಲಿ ನಿಷ್ಪಕ್ಷಪಾತವೆಂದರೆ ಮಂತ್ರಿಯಂತೆ ರಾಜಭಟರಲ್ಲಿ, ಸೇವಕರಂತೆ ಪತ್ನಿಯರಲ್ಲಿ ನಡೆದುಕೊಂಡರೆ ರಾಜ್ಯದ ವ್ಯವಸ್ಥೆಯು ಹದಗೆಡುತ್ತದೆ. ಒಂದು ರಾಜ್ಯವು ಸಮತೋಲನವಾಗಿರಬೇಕೆಂದರೆ ರಾಜನಾದವನಿಗೆ ಇಂತಹ ಚಾಣಾಕ್ಷತೆ ಇರಬೇಕಾಗುತ್ತದೆ. ಶ್ರೀರಾಮನು ಇಂತಹ ನಿಷ್ಪಕ್ಷಪಾತವೆಂಬ ಚತುರಗುಣಸಂಪನ್ನನಾಗಿದ್ದ. ಇದರಿಂದ ರಾಮನ ರಾಜ್ಯವು ಸುಭಿಕ್ಷವಾಗಿತ್ತು. 'ಪ್ರಾಣಾಪಾನೌ ಸಮಾವಾಸ್ತಾಂ ರಾಮೇ ರಾಜ್ಯಂ ಪ್ರಶಾಸತಿ' ಎಂಬಂತೆ ಎಲ್ಲರ ಉಸಿರಾಟದಿಂದ ಹಿಡಿದು; ಬಾಳಾಟವೆಲ್ಲವೂ ಸಮಸ್ಥಿತಿಯಲ್ಲಿದ್ದವು.

ಸೂಚನೆ : 25/7/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ " ಶ್ರೀರಾಮನ ಗುಣಗಳು " ಅಂಕಣದಲ್ಲಿ ಪ್ರಕಟವಾಗಿದೆ.