Monday, August 23, 2021

ಲೋಕಹಿತಕ್ಕಾಗಿ ಬಂದ ಶಾಸ್ತ್ರಗಳು (Lokahitakkagi Bamda Shastragalu)

ಲೇಖಕರು:ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)
ಒಬ್ಬ ಗುರುವಿಗೆ ಇಬ್ಬರು ಶಿಷ್ಯರು. ಇಬ್ಬರಿಗೂ ಪರಸ್ಪರ ವೈಮನಸ್ಯ. ಒಬ್ಬ ಗುರುಗಳ ಬಲಗಾಲನ್ನು ಒತ್ತಿ ಸೇವೆ ಮಾಡುತ್ತಿದ್ದರೆ ಇನ್ನೊಬ್ಬ ಎಡಗಾಲನ್ನು ಒತ್ತುತ್ತಿದ್ದ. ಇದು ನಿತ್ಯದ ಅವರ ಗುರುಸೇವೆಯಾಗಿತ್ತು. ಒಮ್ಮೆ ಎಡಗಾಲನ್ನು ಒತ್ತಿ ಸೇವೆಮಾಡುತ್ತಿದ್ದ ಶಿಷ್ಯ ಊರಿಗೆ ಹೋಗಿದ್ದ. ಬಲಗಾಲಿನ ಸೇವೆಮಾಡುತ್ತಿದ್ದ ಶಿಷ್ಯನಿಗೆ ಗುರುಗಳು ಹೇಳಿದರು- ಎಡಗಾಲು ನೋಯುತ್ತಿದೆ. ಅದನ್ನೂ ಸ್ವಲ್ಪ ಒತ್ತಪ್ಪಾ ಎಂದು. ಆಗ ಆ ಶಿಷ್ಯ- ಅದು ಕಾಲೇ? ನನ್ನ ಪ್ರಾಣ ಹೋದರೂ ಅದನ್ನು ನಾನು ಮುಟ್ಟುವುದಿಲ್ಲ. ನನ್ನ ವೈರಿಯು ಮುಟ್ಟಿದ ಕಾಲದು ಎಂದುಬಿಟ್ಟ. ಗುರುಗಳ ಬಗ್ಗೆ ಏಕನಿಷ್ಠೆ, ಇದ್ದಿದ್ದರೆ ಗುರುಗಳ ಪವಿತ್ರವಾದ ಚರಣಗಳಿವು ಎಂಬ ಅರಿವಿನಿಂದ ಸೇವೆ ಮಾಡುತ್ತಿದ್ದ. ಉಳಿದೆಲ್ಲವೂ ಗೌಣವಾಗುತ್ತಿತ್ತು. ಕಥೆ ತಮಾಷೆಯಾಗಿದೆ. ಆದರೆ ಇದು ಲೋಕದ ನಿತ್ಯದ ಕಥೆ. ಋಷಿಗಳು ಲೋಕಹಿತಕ್ಕಾಗಿ ತಂದ ಶಾಸ್ತ್ರಗಳ ವಿಷಯದಲ್ಲೂ ಹೀಗೆಯೇ ಆಗಿದೆ. ಅನೇಕರು ತಾವು ಓದಿದ, ನಂಬಿದ ಶಾಸ್ತ್ರವೇ ಮೇಲು, ಉಳಿದುದೆಲ್ಲವೂ ನಿಷ್ಪ್ರಯೋಜಕ ಎಂದು ವಾದಿಸುವುದನ್ನು ಕಾಣುತ್ತೇವೆ. ನಮ್ಮ ಜೀವನದ ಧ್ಯೇಯ ಒಳ-ಹೊರ ಜೀವನವನ್ನು ಸಮೃದ್ಧಗೊಳಿಸಿ ಬಾಳುವುದೆಂದಾದರೆ ಅದಕ್ಕೆ ಸಂಬಂಧಿಸಿದ ಎಲ್ಲಾ ಶಾಸ್ತ್ರಗಳ ಬಗ್ಗೆಯೂ ಗೌರವ ಮೂಡುತ್ತದೆ. ಅದಿಲ್ಲದಿದ್ದಾಗ ನಾವು ಹಿಡಿದುಕೊಂಡ ದಾರಿಯೇ ಸರಿಯೆಂಬ ಸಂಕುಚಿತ ಮನೋವೃತ್ತಿ ಇನ್ನೊಬ್ಬರ ಮೇಲೆ ದ್ವೇಷ ಕಾರುವಂತೆ ಮಾಡುತ್ತದೆ.


ದೇಹದಲ್ಲಿ ಬಗೆಬಗೆಯ ಅಂಗಾಂಗಗಳೆಲ್ಲ ಕೆಲಸ ಮಾಡುತ್ತಿದ್ದರೂ ಅವುಗಳಿಗೆ ಪರಸ್ಪರ ವೈರವಿಲ್ಲ. ಕಣ್ಣು, ಕಿವಿ, ಹೃದಯ, ಇತ್ಯಾದಿ ಅಂಗಾಂಗಗಳ ಶಾಸ್ತ್ರಗಳೆಲ್ಲವೂ ದೇಹಿಗಾಗಿ ಬಂದಿವೆ ಎಂದು ಚಿಂತಿಸದೇ ಕಣ್ಣಿನ ವೈದ್ಯರು ಕೇವಲ ಕಣ್ಣಿಗೆ ಹಿತವಾದುದನ್ನು ಮಾತ್ರವೇ ನೋಡಿ ಉಳಿದೆಲ್ಲವನ್ನೂ ಕಡೆಗಣಿಸಲಾದೀತೇ? ಒಬ್ಬ ರೋಗಿಗೆ ಒಂದು ಶಸ್ತ್ರಚಿಕಿತ್ಸೆ ಮಾಡಬೇಕಾದಲ್ಲಿ ಆಯಾ ವಿಷಯಗಳಲ್ಲಿ ಪರಿಣಿತರಾದ ವೈದ್ಯರೆಲ್ಲರೂ ಒಟ್ಟಿಗೆ ಸೇರಿ ಎಲ್ಲಿ ಕತ್ತರಿ ಹಾಕಿದರೆ ಇನ್ನೆಲ್ಲಿ ಸಮಸ್ಯೆ ಆಗುವುದೋ ಎಂದು ಚಿಂತಿಸಿ ಜೀವಹಿತವನ್ನು ಲಕ್ಷ್ಯದಲ್ಲಿರಿಸಿ ಚಿಕಿತ್ಸೆ ನಡೆಸಬೇಕಲ್ಲವೇ? ಹಾಗೆಯೇ ಪ್ರತಿಯೊಬ್ಬರ ಪ್ರಕೃತಿಯೂ ಭಿನ್ನ ಭಿನ್ನ. ಅವರವರ ಪ್ರಕೃತಿಗೆ ಹಿತವಾಗುವಂತೆ, ಎಲ್ಲರೂ ತಮ್ಮ ಐಹಿಕ-ಪಾರಮಾರ್ಥಿಕ ಜೀವನವನ್ನು ಚೆನ್ನಾಗಿಸಿಕೊಳ್ಳಲೆಂದೇ ನೂರಾರು ಶಾಸ್ತ್ರಗಳನ್ನೂ, ಜೀವನ ಪದ್ಧತಿಗಳನ್ನೂ ಈ ದೇಶದಲ್ಲಿ ನಮ್ಮ ಮಹರ್ಷಿಗಳು


ತಂದುಕೊಟ್ಟಿದ್ದಾರೆ. ಎಲ್ಲವೂ ನಮ್ಮ ಹಿತಕ್ಕಾಗಿಯೇ ಬಂದವುಗಳು. ಶ್ರೀರಂಗ ಮಹಾಗುರುಗಳು ಮಾತು ಇಲ್ಲಿ ಸ್ಮರಣೀಯ  "ಸೃಷ್ಟಿ, ಸ್ಥಿತಿ, ಲಯಗಳು ಎಲ್ಲಿಯವರೆಗೆ ನಡೆಯುತ್ತಿರುತ್ತವೆಯೋ ಅಲ್ಲಿಯವರೆಗೂ ಸೃಷ್ಟಿವಿದ್ಯಾರಹಸ್ಯರೂಪಗಳಾದ ವೇದಶಾಸ್ತ್ರಗಳೂ ನಿತ್ಯವಾಗಿಯೇ ಇರುತ್ತವೆ ". ಸೃಷ್ಟೀಶನ ಶಾಸನವೇ ಶಾಸ್ತ್ರ. "ಶಾಸನಾತ್ ತ್ರಾಣನಾತ್ ಚೈವ" ಎಂಬಂತೆ ನಮ್ಮನ್ನು ಶಾಸನ ಮಾಡುತ್ತಾ ಕಾಪಾಡಲು ಇರುವುದೇ ಶಾಸ್ತ್ರಗಳು. ಅವು ಕೇವಲ ಗ್ರಂಥಗಳಲ್ಲ. ನಿಸರ್ಗದ ಸಹಜವಾದ ವಿಷಯಗಳು. ಅದನ್ನು ತಮ್ಮ ತಪಸ್ಯೆಯಿಂದ ಆಮೂಲಾಗ್ರವಾಗಿ ಕಂಡುಕೊಂಡು ಲೋಕಹಿತಕ್ಕಾಗಿ ಕರುಣಿಸಿದವರು ನಮ್ಮ ಮಹರ್ಷಿಗಳು.


ನಮಗೆ ಈ ಅರಿವು ಮೂಡಿದಾಗ ಮಾತ್ರವೇ ಸಮಾಹಿತ ಮನಸ್ಸಿನಿಂದ ನಾವು ಎಲ್ಲವನ್ನೂ ಕಾಣಲು ಸಾಧ್ಯವಾಗುತ್ತದೆ. ಅಂತಹ ಮಹರ್ಷಿಗಳ ಧೀರೋದಾತ್ತವಾದ ಮನಸ್ಸನ್ನು ಬೆಳೆಸಿಕೊಳ್ಳೋಣ.


ಸೂಚನೆ: 23/8/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.