Saturday, August 7, 2021

ಯೋಗತಾರಾವಳಿ - 17 ಮನೋನ್ಮನೀ( Yogataravali - 17 Manonmani)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಯೋಗತಾರಾವಳೀ (ಶ್ಲೋಕ ೧೭)


ನೇತ್ರೇ

ಎವೆಯಿಕ್ಕದ ನೋಟ!


ನಾವು ಎಚ್ಚರವಾಗಿರುವಾಗಲೆಲ್ಲ ಕಣ್ಣುಗಳು ರೆಪ್ಪೆಬಡಿಯುತ್ತಲೇ ಇರುತ್ತವೆ: ಸುಮ್ಮನಿದ್ದಾಗ ನಿಮಿಷಕ್ಕೆ ಹತ್ತಿಪ್ಪತ್ತು ಬಾರಿ, ಸಂಭಾಷಣೆಯಲ್ಲಿರುವಾಗ ಇಪ್ಪತ್ತು ಮೂವತ್ತು ಬಾರಿ. ಉದ್ದೇಶ-ಪೂರ್ವಕವಾಗಿ ರೆಪ್ಪೆಗಳನ್ನು ಬಡಿಯುವುದಕ್ಕಾಗುವುದಾದರೂ ಸಾಮಾನ್ಯವಾಗಿ ಯಾರೂ ರೆಪ್ಪೆ ಬಡಿಯಬೇಕೆಂದು ಪ್ರಯತ್ನಿಸುವುದಿಲ್ಲ. ಅದು ತಾನಾಗಿ ನಡೆಯುತ್ತಿರುವುದು.


ರೆಪ್ಪೆ ಬಡಿಯುವುದರಲ್ಲಿ ಎರಡು ಅಂಗಗಳಿವೆ: ಕಣ್ಣುಗಳನ್ನು ಬಿಡುವುದು, ಕಣ್ಣುಗಳನ್ನು ಮುಚ್ಚಿಕೊಳ್ಳುವುದು. ಮೊದಲನೆಯದು ಉನ್ಮೇಷ, ಎರಡನೆಯದು ನಿಮೇಷ: ಉನ್ಮೀಲನ-ನಿಮೀಲನಗಳೆಂದರೂ ಇವೇ. ನಿದ್ರಾವಸ್ಥೆಯಲ್ಲಿ ಕೇವಲ ನಿಮೇಷ/ನಿಮೀಲನವಷ್ಟೆ.

ಹಾಗೆಯೇ ನಾವು ಸಾಧಾರಣವಾಗಿಯೇ ಗಮನಿಸುವಂತೆ, ಉಸಿರಾಟವೂ ಸರ್ವದಾ ನಡೆಯುತ್ತಲೇ ಇರುತ್ತದೆ. ಉಸಿರನ್ನು ತೆಗೆದುಕೊಳ್ಳುವುದು, ಬಿಡುವುದು - ಇವು ಒಂದಾದಮೇಲೊಂದಾಗುತ್ತಲೇ ಇರತಕ್ಕವು. ನಿದ್ರೆಯಲ್ಲಿ ಸಹ ಈ ರೇಚ-ಪೂರಗಳು ನಿರಂತರವೇ.


ಮನಸ್ಸಿಗೂ ಕೆಲಸವಿಲ್ಲ!


ಹಾಗೆಯೇ ನಮ್ಮ ಮನಸ್ಸಿನಲ್ಲಿ ಸದಾ ಏನೋ ಚಟುವಟಿಕೆಯು ನಡೆಯುತ್ತಲೇ ಇರುತ್ತದೆ. ಕೈಕಾಲುಗಳನ್ನಾದರೂ ಕಟ್ಟಿಹಾಕಿ ನಿಶ್ಚೇಷ್ಟವನ್ನಾಗಿಸಬಹುದು; ಒಂದಿಷ್ಟು ಸೆಕೆಂಡುಗಳಷ್ಟು ಕಾಲ ರೇಚ-ಪೂರಗಳನ್ನೂ ನಿಲ್ಲಿಸಿ ಉಸಿರಾಟವನ್ನು ಸ್ತಬ್ಧವಾಗಿಸಬಹುದು; ಆದರೆ ಮನಸ್ಸಿನ ಚಟುವಟಿಕೆಗೆ ತಡೆಹಾಕುವುದಾದೀತೇ! 


ಕರ್ಮೇಂದ್ರಿಯಗಳನ್ನು ಸಂಯಮಿಸಿ ಮನಸಾ ಇಂದ್ರಿಯಗಳ ವಿಷಯಗಳನ್ನು ಸ್ಮರಿಸುತ್ತಿರುವವನನ್ನು 'ಮಿಥ್ಯಾಚಾರ' ಎನ್ನುತ್ತಾರೆ - ಎನ್ನುತ್ತದೆಯಲ್ಲವೆ, ಭಗವದ್ಗೀತೆ? ಒಂದು ಕ್ಷಣವಾದರೂ ಒಬ್ಬರಾದರೂ ಕರ್ಮವನ್ನು ಮಾಡದೇ ಎಂದೂ ಇರರು - ಎಂದೂ ಗೀತೆಯೇ ಹೇಳುತ್ತದೆ. ಮನಸ್ಸೆಂದರೆ ಕಾರ್ಯಯೋಚನೆ-ಯೋಜನೆಗಳ ಕಾರ್ಖಾನೆ, ಬಿಡುವೇ ಇಲ್ಲದ ಕಾರ್ಖಾನೆಯೇ!


ಆದರೆ ನಿದ್ರಾವಸ್ಥೆಯಲ್ಲಿ ಮನಸ್ಸು ನಿಶ್ಚೇಷ್ಟವಾಗಿರುವುದಲ್ಲವೇ? - ಎಂದು ಕೇಳಬಹುದು. ಇಲ್ಲ, ಆಗಲೂ ಕೆಲಸವೇ. ಏಕೆ? ಕನಸು ಬರದೇ? ಕನಸೂ ಮನಸ್ಸಿನ ಕೆಲಸವೇ. ಇನ್ನು ಕನಸೇ ಇಲ್ಲದ ತನಿನಿದ್ರೆಯೆಂದರೆ? ಆಗಲೂ ಮನಃಕಾರ್ಯವಿರತಕ್ಕದ್ದೇ. ಏಕೆ? ಹೇಗೆ? ರೇಚಕ-ಪೂರಕವೆಂಬ ಉಸಿರಾಟದ ಗತಿಯೂ ಮನಸ್ಸಿನ ಕಾರ್ಯವೆಂದೇ ಸಾಂಖ್ಯ-ಯೋಗ-ಶಾಸ್ತ್ರಗಳೆನ್ನುತ್ತವೆ.


ಮನಸ್ಸಿನಲ್ಲಾಗುವ ಕೆಲಸವೇನು? ಆಗಾಗ್ಗೆ, ಮತ್ತು ಬಹುಪಾಲು, "ಇದನ್ನು ಹೀಗೆ ಮಾಡಲೋ, ಹಾಗೆ ಮಾಡಲೋ?" ಎಂಬ ಪರಿಯ ಆಲೋಚನಾ-ತರಂಗಗಳು ಏಳುತ್ತಿರುವುದು. "ಹೀಗೋ, ಹಾಗೋ, ಮತ್ತೊಂದು ಬಗೆಯೋ?" ಎಂದು ಮುಂತಾದ ಯೋಚನೆಗಳಿಗೆ ವಿಕಲ್ಪವೆಂದು ಹೆಸರು. ವಿಕಲ್ಪಗಳಿಲ್ಲವೋ, ಸಂಕಲ್ಪವೆಂಬ ಮತ್ತೊಂದು ಮನಃಕಾರ್ಯವು ನಡೆಯುತ್ತಿರುವುದು. ಸಂಕಲ್ಪವೆಂದರೆ ನಿಶ್ಚಯ. "ಓಹೋ, ಇದನ್ನು ಹೀಗೆಯೇ ಮಾಡುವೆ, ಮಾಡಿಯೇಬಿಡುವೆ" ಎಂದುಕೊಳ್ಳುವಂತಹುದು.


ಒಟ್ಟಿನಲ್ಲಿ ಹೇಳುವುದಾದರೆ ದೃಷ್ಟಿ-ಪ್ರಾಣ-ಮನಸ್ಸು - ಇವು ಮೂರರಲ್ಲೂ ಎರಡೆರಡು ಅವಸ್ಥೆಗಳು: ಕ್ರಮವಾಗಿ ಉನ್ಮೇಷ-ನಿಮೇಷಗಳು, ರೇಚ-ಪೂರಗಳು, ಸಂಕಲ್ಪ-ವಿಕಲ್ಪಗಳು. ಎರಡರ ಸಮೂಹವು ದ್ವಂದ್ವವೆನಿಸಿಕೊಳ್ಳುತ್ತದೆ. ಹೀಗಾಗಿ ಇಲ್ಲಿ ಮೂರು ದ್ವಂದ್ವಗಳಿವೆ. ನಾವು ಸದಾ ಸದ್ವಂದ್ವರೇ.


ಮನೋನ್ಮನಿಗೆ ಸ್ವಾಗತ!


ಆದರೆ ಇಲ್ಲಿ ಹೇಳಿರುವ ಈ ದ್ವಂದ್ವಗಳನ್ನು ಮೀರಿರುವ ಸ್ಥಿತಿಯೊಂದುಂಟು. ಅದರ ಹೆಸರು "ಮನೋನ್ಮನೀ" ಎಂದು. ಅದು ನನಗೆ ಒದಗಿ ಬರಲಿ - ಎಂದು ಈ ಶ್ಲೋಕವು ಕೇಳಿಕೊಳ್ಳುತ್ತಿದೆ.


ಉತ್ - ಎಂದರೆ ಮೇಲಕ್ಕೆ. (ಉತ್-ತಮ ಎಂದರೆ ಎಲ್ಲರಿಗಿಂತಲೂ ಮೇಲಿರುವವ. ಉತ್-ಹರಣ ಅಥವಾ ಉದ್-ಧರಣವೆಂದರೆ ಮೇಲಕ್ಕೆತ್ತುವುದು, ಮೇಲೆ ಹಿಡಿದುಕೊಳ್ಳುವುದು). ಮನಸ್ಸಿನ ಹರಿವು ಸಾಧಾರಣರಿಗೆ ಕೆಳಮುಖ, ಆದರೆ ರಾಜ-ಯೋಗಿಗಳಿಗೆ ಮೇಲ್ಮುಖವಾಗಿರುವಂತಹುದು (ಉತ್+ಮನ=ಉನ್ಮನ). 

ಮನೋನ್ಮನ್ಯವಸ್ಥೆಯಲ್ಲಿ ನೇತ್ರ-ಸ್ಪಂದನವಿರುವುದಿಲ್ಲ, ಎಂದರೆ ರೆಪ್ಪೆಯ ಬಡಿತವಿಲ್ಲ. ಕಣ್ಣಿಗೆ ಮಿಸುಕಾಟವಿಲ್ಲ, ಮೂಗಿಗೆ ಉಸಿರಾಟವಿಲ್ಲ: ರೇಚ-ಪೂರಗಳು ಸ್ಥಗಿತ. ಮನಸ್ಸಿಗೆ ಸಂಕಲ್ಪ-ವಿಕಲ್ಪಗಳೆಂಬ ಮಿಡಿತವೂ ಇಲ್ಲ.

ಸಾಧಾರಣವಾಗಿ ನಾವು ಈ ವರ್ಣನೆಗೆ ಸ್ವಲ್ಪಮಟ್ಟಿಗೆ ನಿಲುಕುವವರನ್ನು ನೋಡುವುದೆಂದರೆ ಯಾರಾದರೂ ಸತ್ತಾಗಲೇ! ಅಲ್ಲಿಗೆ, "ಸತ್ತುಹೋಗಿರುವವರ" ಲಕ್ಷಣಗಳು ಬದುಕಿನ ಶ್ರೇಷ್ಠ-ಸ್ಥಿತಿಯಾದ ರಾಜಯೋಗದಲ್ಲಿ ಕಾಣುತ್ತವೆಂದಂತಾಯಿತು! ಸಾಧಾರಣರ ನೋಟಕ್ಕೆ ಇದು ಉನ್ಮತ್ತ-ಪ್ರಲಾಪದಂತೆ ಕಂಡುಬರಬಹುದು. ಆದರೆ ಶ್ರೇಷ್ಠರ ದೃಷ್ಟಿಗೆ ಇದು ಮನೋನ್ಮನೀ-ಸ್ಠಿತಿಗೇರಿದವರ ಲಕ್ಷಣ.

ಶಿವನಿಗೆ ಮನೋನ್ಮನನೆಂದೇ ಹೆಸರುಂಟಲ್ಲವೇ?!

 ನೇತ್ರೇ ಯಯೋನ್ಮೇಷ-ನಿಮೇಷ-ಶೂನ್ಯೇ

      ವಾಯುರ್ ಯಯಾ ವರ್ಜಿತ-ರೇಚ-ಪೂರಃ |

ಮನಶ್ ಚ ಸಂಕಲ್ಪ-ವಿಕಲ್ಪ-ಶೂನ್ಯಂ

      ಮನೋನ್ಮನೀ ಸಾ ಮಯಿ ಸಂನಿಧತ್ತಾಮ್ || ೧೭ ||


ಸೂಚನೆ : 7/8/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.