Monday, August 2, 2021

ಜೀವನದಲ್ಲಿ ತೃಪ್ತಿಯಿರಲಿ (Jeevanadalli Trptiyirali)

ಲೇಖಕರು : ಶ್ರೀ ರಾಜಗೋಪಾಲನ್. ಕೆ. ಎಸ್ 

ಪ್ರತಿಕ್ರಿಯಿಸಿರಿ lekhana@ayvm.in


ಪುರೋಹಿತರೊಬ್ಬರಿದ್ದರು. ಮನೆಗೆ ಬಂದು ವೈದಿಕ ಕರ್ಮಗಳನ್ನು ಅವರು ನಡೆಸಿಕೊಟ್ಟ ಬಳಿಕ ಅವರನ್ನು "ತಮಗೆಷ್ಟು ದಕ್ಷಿಣೆ ಕೊಡಬೇಕು" ಎಂದು ಕೇಳಿದರೆ, "ನನಗೆ ದೇವರು ತೃಪ್ತಿಯನ್ನು ಕೊಟ್ಟಿದ್ದಾನೆ; ನಿಮಗೆ ಎಷ್ಟು ಸಂಭಾವನೆ ಕೊಡುವುದು ಸೂಕ್ತವೆಂದು ತೋರುತ್ತದೋ ಅಷ್ಟೇ ಕೊಡಿ ಸಾಕು" ಎನ್ನುತ್ತಿದ್ದರು. ಹಾಗೆಂದು, ಅವರೇನೂ ಆಢ್ಯರಾದ(ಶ್ರೀಮಂತರಾದ) ವ್ಯಕ್ತಿಯಲ್ಲ. "ಒಂದೂರಿನಲ್ಲಿ ಒಬ್ಬ ಬಡಬ್ರಾಹ್ಮಣನಿದ್ದ" ಎನ್ನುವಂತಹ ಕತೆಗಳಿಗೆ ಸರಿಹೊಂದುವ ವ್ಯಕ್ತಿಯೇ ಆಗಿದ್ದರವರು. ಆದರೆ ಒಂದರ್ಥದಲ್ಲಿ ಅವರು ಸಿರಿವಂತರೂ ಹೌದು. ಅವರಿಗಿದ್ದ ಸಂಪತ್ತು, ತೃಪ್ತಿಸಂಪತ್ತು.


ಮನುಷ್ಯ ಸಾಮಾನ್ಯವಾಗಿ ಎಲ್ಲ ಕೆಲಸಗಳನ್ನೂ ಮಾಡುವುದು ತನ್ನ ಸಂತೋಷಕ್ಕಾಗಿಯೇ. ಅಪರೂಪಕ್ಕೆ, ಇತರರ ಸಂತೋಷಕ್ಕಾಗಿಯೇ ಕೆಲಸ ಮಾಡುವವರೂ ಇರುತ್ತಾರೆ. ಆದರೆ ಒಳಹೊಕ್ಕು ನೋಡಿದರೆ, ಇತರರನ್ನು   ಸಂತೋಷಗೊಳಿಸುವುದರಿಂದಲೇ ಅವರಿಗೆ ಸಂತೋಷ! ಜನ ತಮ್ಮ ಸಂತೋಷಕ್ಕಾಗಿ ಕೆಲಸ ಮಾಡುವುದು ತಪ್ಪಲ್ಲ. ಆದರೆ ಸಂತೋಷವನ್ನು ಅಳೆಯಲು ಯಾವ ಮಾನದಂಡವನ್ನು ಬಳಸಬೇಕೆಂಬುದೇ ಜಿಜ್ಞಾಸೆಗೆ ವಿಷಯ.


ಮನುಷ್ಯನಿಗೆ ತಾನಂದುಕೊಂಡಂತೆಯೇ ಕೈಕೊಂಡ ಕೆಲಸಕ್ಕೆ ಪ್ರತಿಫಲ ದೊರೆತರೆ, ತೃಪ್ತಿಯು ಸಹಜವಾಗಿ ಬರುತ್ತದೆ. ಆದರೆ ಕೆಲವರು ತಮಗೆ ಎಷ್ಟು ಪ್ರತಿಫಲ ಸಿಕ್ಕರೂ ತೃಪ್ತಿಯನ್ನೇ ಹೊಂದುವುದಿಲ್ಲ. ಇದಕ್ಕೆ ಕಾರಣವೇನೆಂದು ಅನ್ವೇಷಿಸಿದಾಗ ತಿಳಿಯುತ್ತದೆ-ಅವರು ತಮಗೆ ಇಂತಿಷ್ಟು ಪ್ರತಿಫಲ ದೊರೆತರೆ ಸಾಕೆಂದು ಕಾರ್ಯಾರಂಭದಲ್ಲಿ ಯೋಚಿಸಿಯೇ  ಇರುವುದಿಲ್ಲ. ತಮ್ಮ ಸುಖ ಸಂತೋಷಗಳನ್ನು ಅಳೆದುಕೊಳ್ಳುವಾಗ ತಮ್ಮಲ್ಲಿ ಏನು ಸುಖಸಾಮಗ್ರಿಗಳಿವೆಯೆಂದು ಗಮನಿಸದೆ, ಬೇರೆಯವರಲ್ಲಿರುವ ಎಷ್ಟೋ ಸುಖಸಾಧನಗಳು ತಮ್ಮಲ್ಲಿಲ್ಲವೆಂದೇ ಕೊರಗುತ್ತಾರೆ. ಆದರೆ ವಿವೇಕಿಗಳು ಪ್ರಪಂಚವನ್ನು ನೋಡಿಯಾದರೂ ಪಾಠ ಕಲಿಯುತ್ತಾರೆ. ತನ್ನ ಪಾದಗಳಿಗೆ ಧರಿಸಲು ಶೂ ಇಲ್ಲವೆಂದು ಕೊರಗುತ್ತಿದ್ದ ವ್ಯಕ್ತಿಯೊಬ್ಬ, ಕಾಲೇ ಇಲ್ಲದವನನ್ನು ನೋಡಿ ತಾನೇ ಭಾಗ್ಯಶಾಲಿಯೆಂದು ಅರಿತುಕೊಂಡು, ಕೊರಗುವುದನ್ನು ನಿಲ್ಲಿಸಿದನಂತೆ! "ಇರುವ ಭಾಗ್ಯವ ನೆನೆದು ಬಾರನೆಂಬುದನ್ನು ಬಿಡು, ಹರುಷಕ್ಕಿದೆ ದಾರಿ" ಎನ್ನುತ್ತಾರೆ ಮಾನ್ಯ ಡಿ ವಿ ಜಿ ಯವರು. ಇತರರಿಗೆ ಹೋಲಿಸಿಕೊಂಡು  ಕೊರಗದೆ, ಹೇಗೆ ತೃಪ್ತನಾಗಿ ಜೀವಿಸಬೇಕೆಂಬುದರ ಬಗ್ಗೆ ಶ್ರೀರಂಗಮಹಾಗುರುಗಳು ನುಡಿದಿರುವ ಈ ಮಾತುಗಳು ಸ್ಮರಣೀಯ- "ಮನುಷ್ಯನು ಯಾವತ್ತೂ ತನಗಿಂತ ಮೇಲ್ಮಟ್ಟದವರನ್ನು ನೋಡಿ ತಾನು ಹಾಗಾಗಿಲ್ಲವೆಂದು  ಆಲೋಚಿಸಿ  ಇದ್ದದ್ದರಲ್ಲೆಲ್ಲಾ ಅತೃಪ್ತಿಪಟ್ಟುಕೊಂಡು ಸುಖಹೀನನಾಗಬಾರದು. ತನಗಿಂತ ಕೆಳದರ್ಜೆಯವರನ್ನು ನೋಡಿ ಅಪ್ಪಾ ನಾನು ಎಷ್ಟು ಅನುಕೂಲವಾಗಿದೇನೆಪ್ಪ! ದೇವರು ಇದನ್ನು ಕಾಪಾಡಿಕೊಟ್ಟರೆ ಇದೇ ಲಕ್ಷ, ಇದೇ ಕೋಟಿ ಎಂದು ಇದ್ದದ್ದರಲ್ಲಿ ಸಂತೋಷಪಟ್ಟುಕೊಂಡು ಸುಖಿಯಾಗಿ ಬಾಳಬೇಕು. ಇದು ವಿವೇಕ"


ಮನುಷ್ಯ ಕೆಲವು ವಿಷಯಗಳಲ್ಲಿ ಅಲ್ಪತೃಪ್ತನಾಗಿರಬಾರದು. "ಅಜರಾಮರವತ್ ಪ್ರಾಜ್ಞಃ ವಿದ್ಯಾಮರ್ಥಂ ಚ ಸಾಧಯೇತ್I

ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್"II(ತಾನು ಮುಪ್ಪಿಲ್ಲದವನು; ಸಾವಿಲ್ಲದವನು ಎಂದು ಭಾವಿಸಿ ವಿದ್ಯೆಯನ್ನೂ ಧನವನ್ನೂ ಸಂಪಾದಿಸಬೇಕು. ಮೃತ್ಯುವು ತನ್ನ ಜುಟ್ಟನ್ನು ಹಿಡಿದುಕೊಂಡಿದೆ ಎಂದು ಭಾವಿಸಿ ಧರ್ಮವನ್ನಾಚರಿಸಬೇಕು) ಎನ್ನುತ್ತದೆ ಆರ್ಯೋಕ್ತಿ.


ನಮ್ಮ ತೃಪ್ತಿಯನ್ನು ಇತರರಿಗೆ ಹೋಲಿಸಿಕೊಳ್ಳುವ ಮಾನದಂಡದಿಂದ ಅಳೆಯದೆ, ಸತ್ಕಾರ್ಯಗಳಲ್ಲಿ ಶಕ್ತಿಯಿದ್ದಷ್ಟೂ ಶ್ರಮಿಸಿ, ಕೊನೆಗೆ ಕೈಗೆ ಬಂದುದನ್ನು ತೃಪ್ತಿಯಿಂದ ಅನುಭವಿಸೋಣ. 


ಸೂಚನೆ: 2/08/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.