Tuesday, August 3, 2021

ಪ್ರಮೆಯಿಂದ ಭ್ರಮೆಯ ನಿವಾರಣೆ (Prameyinda Bhrameya Nivaraṇe)

ಶ್ರೀಮತಿ ರತ್ನಾಸುರೇಶ.
ಪ್ರತಿಕ್ರಿಯಿಸಿರಿ lekhana@ayvm.in


ಆ ರಾಜರಾಣಿಯರಿಗೊಂದು ಚಿಕ್ಕ ಮಗು. ರಾಜನು  ದಿಗ್ವಿಜಯಕ್ಕೆಂದು ಹೊರಡಬೇಕಾಯಿತು. ವಾಪಸ್ಸಾಗುವಾಗ  ಎಷ್ಟೋ ವರ್ಷಗಳೇ ಕಳೆದಿದ್ದವು. ರಾಜ ಅರಮನೆಗೆ ಬಂದವನೇ ರಾಣಿಗೆ ವಿಸ್ಮಯವನ್ನುಂಟು ಮಾಡುವ ಉದ್ದೇಶದಿಂದ ಸೀದಾ  ಅಂತಃಪುರಕ್ಕೆ  ಪ್ರವೇಶಿಸುತ್ತಾನೆ. ರಾಣಿ ಮಂಚದ ಮೇಲೆ ಪವಡಿಸಿದ್ದಾಳೆ. ಇಷ್ಟೇ ಆದರೆ ಏನೂ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಪಕ್ಕದಲ್ಲಿ ತರುಣನೊಬ್ಬ ಮಲಗಿದ್ದನ್ನು ಕಂಡು ರಾಜನ ಬುದ್ಧಿ ಭ್ರಮಿಸಿತು.  ತಕ್ಷಣವೇ ಕುಪಿತಗೊಂಡ ರಾಜನು ತನ್ನ ಖಡ್ಗವನ್ನೆತ್ತಿ ಇಬ್ಬರನ್ನೂ ಸಂಹರಿಸಲೆಂದು ಹೊರಟಾಗ ಖಡ್ಗದ ತುದಿ ಬಾಗಿಲಿನ ಫಲಕದ ಮೇಲೆ ತಾಕಿತು. ಅಲ್ಲೊಂದು ಶ್ಲೋಕ ಬರೆದಿತ್ತು.  ಅದರ ಅಭಿಪ್ರಾಯ ಹೀಗಿತ್ತು. "ವಿಚಾರ ಮಾಡದೇ ಯಾವಕಾರ್ಯವನ್ನೂ ಮಾಡಬಾರದು ಏಕೆಂದರೆ ಪರಿವೆ ಇಲ್ಲದೇ ಮಾಡುವ ಕಾರ್ಯ ಆಪತ್ತಿಗೆ ಕಾರಣವಾಗುವುದು.  ಪರಾಮರ್ಶಿಸಿ ಮಾಡುವವರನ್ನು ಸಂಪತ್ತುಗಳು ತಾನಾಗಿಯೇ ವರಿಸುವುವು.  ಏಕೆಂದರೆ ಅವು ಒಳ್ಳೆಯಗುಣಕ್ಕೆ ಅಧೀನವಷ್ಟೇ." ಇದನ್ನು ಓದಿದ ರಾಜನು ರಾಣಿಯನ್ನು ಎಬ್ಬಿಸಿ ತರುಣನಾರೆಂದು ಕೇಳಿದಾಗ ಅವರ ಮಗನೇ ಎಂದು ತಿಳಿದು ರಾಜನ ಕೈಯಿಂದ ಖಡ್ಗ ಜಾರಿ ಕೆಳಗೆ ಬಿತ್ತು.  ನನ್ನಿಂದ ಅನಾಹುತವಾಗುವುದನ್ನು ಈ ಸೂಕ್ತಿಯೇ ರಕ್ಷಿಸಿತು ಎನ್ನುತ್ತಾನೆ. ಇಂತಹ ಪ್ರಮಾದಗಳು ನಮ್ಮೆಲ್ಲರ ಜೀವನಗಳಲ್ಲೂ ಬರಬಹುದು. ಮನುಷ್ಯನ  ಅಸಾವಧಾನತೆಯಿಂದ ಆದ ಭ್ರಮೆಯಿಂದ  ಹೀಗೆಲ್ಲ ಸಂಭವಿಸುವುದುಂಟು.


ಪ್ರಮೆ ಎಂದರೆ ಯಥಾರ್ಥ ಜ್ಞಾನ. ಶ್ರೀರಂಗಮಹಾಗುರುಗಳು ಭ್ರಮೆ ಪ್ರಮೆಗಳ ವಿಚಾರಗಳನ್ನು ಸೊಗಸಾದ  ಅನೇಕ ದೃಷ್ಟಾಂತಗಳಿಂದ ವಿವರಿಸಿದ್ದಾರೆ. ಉದಾಹರಣೆಗೆ – ರೈಲಿನಲ್ಲಿ  ಪ್ರಯಾಣ  ಮಾಡುವಾಗ ನಮ್ಮೆದುರುರಿನ  ರೈಲು  ಚಲಿಸಿದರೂ ನಮ್ಮ ರೈಲೇ ಚಲಿಸುತ್ತಿದೆ ಎಂಬ ಭ್ರಮೆ ಉಂಟಾಗುತ್ತದೆ. ಚಲಿಸದ ರೈಲು ನಿಲ್ದಾಣವನ್ನು ನೋಡಿದಾಗ  ನಿಜ ತಿಳಿಯುತ್ತದೆ.  ಎಂದರೆ ಶಾಶ್ವತವಾಗಿ ಇರುವುದನ್ನು ಅವಲಂಬಿಸಿದಾಗ ಭ್ರಮೆ ಹೋಗುತ್ತದೆ.  ನಮ್ಮ ಜೀವನದಲ್ಲೂ ಶಾಶ್ವತನಾದ  ಭಗವಂತನನ್ನು ಅವಲಂಬಿಸಿದಾಗ  ಜೀವನದ ಭ್ರಮೆಗಳು ತೊಲಗುತ್ತವೆ, ಇಂದಿದ್ದು, ನಾಳೆ ಹೋಗುವುದು ಯಾವುದು? ಎಂದೆಂದಿಗೂ ಇದ್ದು ನಮ್ಮನ್ನು ಉದ್ಧರಿಸುವುದು ಯಾವುದು ಎಂಬುದರ ಜ್ಞಾನ-ಪ್ರಮೆ ಉಂಟಾಗುತ್ತದೆ. ಆಗ ನೆಮ್ಮದಿ  ಉಂಟಾಗುತ್ತದೆ. ಅಸಾವಧಾನತೆ ಅನೇಕ ಭ್ರಮೆಗಳಿಗೆ ಕಾರಣವಾಗುತ್ತದೆ ಎಂಬುದು ನಮ್ಮ ದೇಶದ ಜ್ಞಾನಿಗಳ ಮಾತು. ನಮ್ಮ ಜೀವನ ಇಂತಹ ಭ್ರಮೆಯಲ್ಲಿ ನಿಲ್ಲದೇ ಪ್ರಮೆಯಲ್ಲಿ ನಿಲ್ಲುವಂತೆ ಆಗಲೆಂದು ಭಗವಂತನಲ್ಲಿ ಪ್ರಾರ್ಥಿಸೋಣ.


ಸೂಚನೆ: 9/7/2020 ರಂದು ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.