Sunday, August 22, 2021

ಶ್ರೀರಾಮನ ಗುಣಗಳು - 19 ತ್ಯಾಗಮಯೀ - ಶ್ರೀರಾಮ (Sriramana Gunagalu - 19 Thyagamayi Shrirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)


ತ್ಯಾಗದಲ್ಲಿದೆ ಸುಖ;  ತ್ಯಾಗದಲ್ಲಿದೆ ಯೋಗ!  ಆದ್ದರಿಂದ ತ್ಯಾಗವು ಅತ್ಯಂತ ಶ್ರೇಷ್ಠವಾದ ಗುಣ. ತ್ಯಾಗದಲ್ಲಿ ಎಷ್ಟು ಸುಖವಿದೆ? ಎಂಬುದಕ್ಕೆ ನಿದ್ದೆಯೇ ಸಾಕ್ಷಿ. ನಿದ್ದೆಯನ್ನು ಮಾಡುವುದಕ್ಕೆ ಏನೆಲ್ಲ ಪ್ರಯತ್ನ ಮಾಡುತ್ತೇವೆ! ಏನೆಲ್ಲ ನಿದ್ದೆಗೆ ಬೇಕಾದ ಸಾಧನೋಪಾಯಗಳನ್ನು ಸಂಗ್ರಹಿಸುತ್ತೇವೆ! ಜಾಗ್ರತ್ತಿನಲ್ಲಿ ನಮಗೆ ಸುಖವನ್ನು ಕೊಡುವ ಎಷ್ಟೆಲ್ಲಾ ಸಂಗತಿಗಳು ಇರುತ್ತವೆ! ಆದರೆ ಇವೆಲ್ಲದರ ಮೇಲಿನ ಮಮತೆಯನ್ನು ಬಿಟ್ಟಾಗ ಮಾತ್ರವೇ ನಿದ್ದೆಗೆ ಜಾರುತ್ತೇವೆ. 'ಅತ್ಯಂತ ಪ್ರೀತಿಗೆ ಪಾತ್ರಳಾದ ಪತ್ನಿಯನ್ನು ಮರೆಯಲು ಸಾಧ್ಯವೇ?' ಎಂದು ಒಮ್ಮೆ ಯೋಚಿಸಿದರೂ ನಿದ್ದೆ ಎಂಬ ಸುಖದಿಂದ ವಂಚಿತರಾಗುತ್ತೇವೆ. ಹೀಗೆ ಎಲ್ಲವನ್ನೂ ಮರೆತಾಗ, ಎಲ್ಲವನ್ನೂ ಬಿಟ್ಟಾಗ ಮಾತ್ರ ನಿದ್ದೆ ಎಂಬ ಪರಮಸುಖವನ್ನು ಅನುಭವಿಸುತ್ತೇವೆ. ಆದ್ದರಿಂದ ಸುಖವನ್ನು ಪಡೆಯಲು ಇರುವ ಒಂದೇ ಒಂದು ಸಾಧನ 'ತ್ಯಾಗ'. 'ತ್ಯಾಗ' ಎಂಬ ಗುಣಕ್ಕೆ ಶ್ರೀರಾಮನನ್ನು ಬಿಟ್ಟು ಬೇರೊಂದು ಉತ್ತಮ ನಿದರ್ಶನ ಸಿಗಲು ಸಾಧ್ಯವೇ! ದಶರಥನು ಅಯೋಧ್ಯೆಯಲ್ಲಿ ಶುಭಮುಹೂರ್ತದಲ್ಲಿ ಶ್ರೀರಾಮನನ್ನು ಪಟ್ಟವೇರಿಸಲು ಸಂಕಲ್ಪಿಸಿದ್ದಾನೆ.  


ಇಡೀ ಅಯೋಧ್ಯಾನಗರವು ಸಿಂಗರಿಸಲ್ಪಟ್ಟಿದೆ. ಪುರಜನರಿಗೆ ಹೊಸತನ ಮಡುಗಟ್ಟಿದೆ. ಅರಮನೆಯ ಮಹಾಜನರಿಗೂ 'ಪ್ರಿಯದರ್ಶನ' ಶ್ರೀರಾಮನನ್ನು ಸಿಂಹಾಸನದಲ್ಲಿ ನೋಡಬೇಕೆಂಬ ಆಸೆ. ತಾಯಂದಿರಿಗೆ ಮಗನನ್ನು ರಾಜನಾಗಿ ಕಾಣುವ ಹಂಬಲ. ಇಷ್ಟೆಲ್ಲಾ ಸಂತೋಷದ ಕ್ಷಣವನ್ನು ಅನುಭವಿಸಲು ಶ್ರೀರಾಮನ ಮನಸ್ಸೂ ಕೂಡ ಸನ್ನದ್ಧವಾಗಿರಲೂ ಸಾಕು. ಆದರೆ ಹಾಗೆ ಸಿದ್ಧವಾಗಿಲ್ಲದಿದ್ದುದು ಮಾರನೆಯ ದಿನದ ಸೂರ್ಯೋದಯ ಮಾತ್ರ. ಅಂದು ಶ್ರೀರಾಮನ ರಾಜ್ಯತ್ಯಾಗ. ಸಿಂಹಾಸನದ ಯೋಗದ ವಾರ್ತೆ ಒಂದು ದಿನವಾದರೆ; ಮಾರನೆಯ ದಿನದಲ್ಲಿ ರಾಜ್ಯತ್ಯಾಗದ ಸಮಾಚಾರ. ಕಾನನ ಆವಾಸ. ಯೋಗ ಮತ್ತು ತ್ಯಾಗ ಎರಡೂ ವಿರುದ್ಧಧರ್ಮವುಳ್ಳ ಪದಗಳು. ಆದರೆ ಯೋಗಕ್ಕೆ ತ್ಯಾಗವೇ ಮೂಲ. ಶ್ರೀರಾಮನು ಈ ಎರಡೂ ಕ್ಷಣಗಳಲ್ಲಿ ಸಮನಾಗಿದ್ದ. ಸುಖ ಮತ್ತು ದುಃಖದಲ್ಲಿ ಸಮವಾಗಿರುವ ವ್ಯಕ್ತಿತ್ವ ಶ್ರೀರಾಮನದ್ದಾಗಿತ್ತು. ಈ ಎರಡೂ ಸಂದರ್ಭಗಳಲ್ಲಿ ಶ್ರೀರಾಮನ ನಡವಳಿಕೆಯಲ್ಲಿ ಯಾವ ವ್ಯತ್ಯಾಸವೂ ಇರಲಿಲ್ಲ. ಶ್ರೀರಾಮನ ಈ ಸಮತ್ವಕ್ಕೆ ತ್ಯಾಗವೇ ಮೂಲ. ಯುದ್ಧದಲ್ಲಿ ಶ್ರೀರಾಮನು ದುರುಳ ರಾವಣನನ್ನು ಸಂಹರಿಸಿ, ರಾವಣನ ತಮ್ಮನಾದ ವಿಭೀಷಣನಿಗೆ ರಾಜ್ಯದ ಭಾರವನ್ನು ವಹಿಸುತ್ತಾನೆ. ಇಲ್ಲೂ ಶ್ರೀರಾಮನ ತ್ಯಾಗವನ್ನು ಕಾಣಬಹುದು. ಬಯಸಿದ್ದರೆ ರಾಮನೇ ಲಂಕೆಯ ಅಧಿಪತಿಯಾಗಬಹುದಿತ್ತು. ಲಕ್ಷ್ಮಣನೂ, ಒಮ್ಮೆ ಶ್ರೀರಾಮನಲ್ಲಿ ಕೇಳಿದ್ದೂ ಆಯಿತು. ಅದಕ್ಕೆ ಶ್ರೀರಾಮನ ಉತ್ತರವು ಅವನ ತ್ಯಾಗಕ್ಕೆ ಸಾಕ್ಷಿ. "ಹೇ!ಲಕ್ಷ್ಮಣ! ಈ ಲಂಕೆಯು ಸ್ವರ್ಣಮಯವಾಗಿದ್ದರೂ  ನನಗೆ ರುಚಿಸುವುದಿಲ್ಲ. ಜನನೀ ಮತ್ತು ಜನ್ಮಭೂಮಿಯು ಸ್ವರ್ಗಕ್ಕಿಂತಲೂ ಮಿಗಿಲಾದದ್ದು ತಾನೆ" (ಈ ಮಾತು ಮೂಲರಾಮಾಯಣದಲ್ಲಿಲ್ಲದಿದ್ದರೂ ಬಹಳ ಪ್ರಸಿದ್ಧವಾದ ಮಾತೇ ಆಗಿದೆ). 'ಮರಣಾಂತಾನಿ ವೈರಾಣಿ' ಎನ್ನುವಂತೆ ರಾವಣನ ವಧೆಯಾಗುತ್ತಿದ್ದಂತೆಯೇ ವೈರತ್ವವನ್ನೂ ತ್ಯಾಗಮಾಡಿದ ಮಾಹಾನುಭಾವ ಈತ. ರಾಮನದ್ದು ರಾವಣನಲ್ಲಿರುವ ದುರ್ಗುಣದ ವಿರುದ್ಧದ ಸಮರವೇ ಹೊರತು ರಾವಣನೆಂಬ ಒಬ್ಬ ವ್ಯಕ್ತಿಯ ವಿರುದ್ಧವಾದದ್ದಲ್ಲ. ಇದರಿಂದ ಶ್ರೀರಾಮನು ಆದರ್ಶನಾದ. ತ್ಯಾಗದಿಂದಲೇ ಅಮೃತತ್ವಪ್ರಾಪ್ತಿ ಎನ್ನುತ್ತಾರೆ. ಅಮೃತಸ್ವರೂಪನಾದ ಶ್ರೀರಾಮನಲ್ಲಲ್ಲದೆ ಇನ್ನಾರಲ್ಲಿ ತಾನೇ ಈ ತ್ಯಾಗಶೀಲತೆಯನ್ನು ನಿರೀಕ್ಷಿಸೋಣ!

ಸೂಚನೆ : 22/8/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ " ಶ್ರೀರಾಮನ ಗುಣಗಳು " ಅಂಕಣದಲ್ಲಿ ಪ್ರಕಟವಾಗಿದೆ.