Sunday, August 1, 2021

ಯೋಗತಾರಾವಳಿ - 16 ಕೇವಲ-ಸಂವಿತ್ ( Yogataravali - 16 Kevala-samvit)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)
ಯೋಗತಾರಾವಳೀ (ಶ್ಲೋಕ ೧೬)

ಅಹಂ-ಮಮತ್ವಾ...


ನಾನು-ನನ್ನದು ಎಂಬ…


ಪ್ರಪಂಚದಲ್ಲಾಗುವ ಜಗಳಗಳೆಲ್ಲ, ಬಹುಮಟ್ಟಿಗೆ ಅಹಂಕಾರ-ಮಮಕಾರಗಳಿಂದಲೇ ಆಗತಕ್ಕವು. ಅಹಂ ಎಂದರೆ ನಾನು; ಮಮ ಎಂದರೆ ನನ್ನದು. "ನಾನು-ನನ್ನದು ಎಂಬ ನರಕದೊಳಗೆ ಬಿದ್ದು" ಎಂದು ನಮ್ಮನ್ನೆಚ್ಚರಗೊಳಿಸಲು ಹಾಡಿದರು, ದಾಸರು (ತಮ್ಮ "ಇನ್ನೂ ದಯಬಾರದೆ" ಎಂಬ ಹಾಡಿನಲ್ಲಿ).


'ನನ್ನ ಆಸ್ತಿ' ಎಂಬಲ್ಲಿ ನನಗಿಂತ ಸ್ವಲ್ಪದೂರದಲ್ಲಿರುವ ಆಸ್ತಿಯ ಮೇಲಿನ ಮಮಕಾರ; 'ನನ್ನ ಹೆಂಡತಿ', 'ನನ್ನ ಮಕ್ಕಳು' ಎನ್ನುವಾಗ ನಮಗೆ ಹತ್ತಿರವಾದವರ ಮೇಲಿನ 'ಮಮಕಾರ'; 'ನನ್ನ ಶರೀರ, ನನ್ನ ಕಣ್ಣು' ಎನ್ನುವಾಗ ನಾನು-ನನ್ನದು ಎಂದು ಬಿಡಿಸಿಹೇಳಲಾಗದಷ್ಟು ನಿಕಟವಾದುದರ ಮೇಲಿನ ಮಮಕಾರ. 'ನಾನು-ನಾನು' ಎಂದು ಪದೇ ಪದೇ ಹೇಳುವಾಗ ಏಕೀಭೂತವಾದ ಅಹಂಕಾರ-ಮಮಕಾರಗಳು! 

ಪೋಲೀಸರು-ನ್ಯಾಯಾಧೀಶರು ಎಂಬೆಲ್ಲ ವ್ಯವಸ್ಥೆಯ ಮೂಲವೂ ಜೀವ-ಸ್ವತ್ತುಗಳ (ಎಂದರೆ, ನಾನು-ನನ್ನದುಗಳ) ರಕ್ಷಣೆಯೇ ಸರಿ. ಜೀವನವು ಚೆನ್ನಾಗಿ ನಡೆಯಲು ಧಾರಕವೇ ಆದ ನಾನು-ನನ್ನದುಗಳು, ಅದೆಲ್ಲಿ-ಯಾವಾಗ-ಹೇಗೆ ಮಾರಕಗಳೆಂದಾಗುವುವೋ ಬಲ್ಲವರಾರು? 

ಎಂದೇ, ಇವಿದ್ದರೂ ಹಿಂಸೆ, ಇವಿಲ್ಲದಿದ್ದರೂ ಹಿಂಸೆಯೇ!: ಇವಿದ್ದೇ ಲೋಕಧರ್ಮಕ್ಕೆ ಆಸ್ಪದ, ಇವಿರುವುದರಿಂದಲೇ ಅಧರ್ಮ-ಅನರ್ಥಗಳಿಗೆ ಆಸ್ಪದ. ಬೇರೆಯವರು ಆಸ್ತಿಪಾಸ್ತಿಗಳಿಗಾಗಿ ಹೊಡೆದಾಡುವಾಗ 'ಇದೇನು ಮಿತಿಯಿಲ್ಲದ ಮಮಕಾರವೋ!' ಎನ್ನುವಂತಾಗುತ್ತದೆ. ಹೆಸರಿಗಾಗಿ ಹೊಡೆದಾಡುವಾಗ 'ಇದೆಷ್ಟು ಅಹಂಕಾರವೋ!' ಎಂದುದ್ಗರಿಸುವಂತಾಗುತ್ತದೆ.

ಅಧ್ಯಾತ್ಮದಲ್ಲಿ ಅಹಂ-ಮಮ

ಲೋಕಜೀವನದಲ್ಲಿ ಹೀಗಾದರೆ, ಆಧ್ಯಾತ್ಮಿಕ ಜೀವನದಲ್ಲಿ ಸದಾಕಾಲವೂ ಇನ್ನೂ ಹೆಚ್ಚಿನ ಇನ್ನೂ ಆಳವಾಗಿನ  ತೊಂದರೆಯನ್ನು ಕೊಡತಕ್ಕವೆಂದರೆ - ಮತ್ತೆ ಇವೆರಡೇ!

ಎಷ್ಟೆಷ್ಟರ ಮಟ್ಟಿಗೆ ಪ್ರಪಂಚಕ್ಕೆ ಅಂಟಿಕೊಂಡಿರುತ್ತೇವೋ ಅಷ್ಟಷ್ಟು ಅಹಮ್ಮಿನ ಸಮಸ್ಯೆ. ಎಷ್ಟೆಷ್ಟು ಅಂಟಿಸಿಕೊಂಡಿರುತ್ತೇವೆಯೋ ಅಷ್ಟಷ್ಟು ಮಮದ ಸಮಸ್ಯೆ. ಪ್ರಪಂಚದೊಂದಿಗೆ ಅಂಟು-ನಂಟುಗಳು ಯಾರಿಗೆ ಉತ್ಕಟವೋ ಅಂತಹವರಿಗೆ ಪರದಾಟವೇ. ಅವರು ನೆಮ್ಮದಿಯಾಗಿ ಕುಳಿತುಕೊಳ್ಳಲಾದೀತೇ? ಆದರೆ ಯಾರು ಅಂಟಿಯೂ ಅಂಟರೋ ಅಂತಹವರ ಅಹಂ-ಮಮಗಳು ಅವರನ್ನು ಬಾಧಿಸವು. 

ರಾಜಯೋಗದ ಹಾದಿಯಲ್ಲಿ ಹೆಜ್ಜೆಹಾಕಬಯಸುವವರಿಗೆ ಇದೋ ಈ ಭಾವವು ಅವಶ್ಯವಾಗಿ ಬೇಕು: ಲೋಕಧಾರಣೆಗೆ ಬೇಕಾಗುವಷ್ಟನ್ನು ಮಾತ್ರ ಉಳಿಸಿಕೊಂಡು, ಉಳಿದಂತೆ ಅಹಂಭಾವ-ಮಮಭಾವಗಳನ್ನು ತೊರೆಯುವುದು. 

ಈ ಅಹಂತೆ-ಮಮತೆಗಳು ಕೆಳಗೆ ಸೆಳೆಯತಕ್ಕವೇ. ಜಡಭರತನಿಗೆ ಕೊನೆಗಾಲದಲ್ಲಿ ಮೂಡಿದ ಜಿಂಕೆಯ ಮೇಲಿನ ಮಮತೆಯು ಆತನನ್ನು ಎಲ್ಲಿಗೋ ಕರೆದುಕೊಂಡುಹೋಯಿತು! ಅಪಾತ್ರರಿಗೆ ಧರ್ಮೋಪದೇಶವೆಂಬುದನ್ನು ಮಾಡಲು ಹೋಗಿ ಪಾಡುಪಟ್ಟವರೂ ಉಂಟು! ಆದ್ದರಿಂದ ಇವೆಲ್ಲವನ್ನೂ ಧರ್ಮಾಚರಣೆಗಾಗಿ ಬೇಕಾದಾಗ ಬೇಕಾದಷ್ಟೇ ಇಟ್ಟುಕೊಳ್ಳುವುದನ್ನೂ ಬೇಡವಾದಾಗ ಬಿಟ್ಟುಬಿಡುವುದನ್ನೂ ಸಾಧಿಸಬೇಕು. ಅಹಂತೆಯಾಗಲಿ ಮಮತೆಯಾಗಲಿ ನಮ್ಮನ್ನು ಕಟ್ಟಿಹಾಕುವಂತಿರಬಾರದು; ಅವನ್ನು ತೊರೆದಾಗ ಕಾಡುವಂತಿರಬಾರದು.ಇದೇನು ಸುಲಭವೇ? 

 ಮಮವನ್ನು ಬಿಟ್ಟಾಗ ಹೊರಜಗತ್ತನ್ನು ಬಿಟ್ಟಂತೆಯೇ ಸರಿ; ಅಹಂ ಅನ್ನು ಬಿಟ್ಟಾಗ ಅಹಂಕಾರತತ್ತ್ವವನ್ನು ಮೀರಿದ ಮಹತ್ತತ್ತ್ವದತ್ತ ಹೆಜ್ಜೆಯಿಟ್ಟಂತೆಯೇ ಸರಿ. ಸಾಧನೆಯು ಮುಂದುವರೆಯುತ್ತಿದ್ದಂತೆ ಮೊದಲು ಮಮತ್ವದ, ಆಮೇಲೆ ಅಹಂತ್ವದ, ತೊರೆಯುವಿಕೆಯು ಉಂಟಾಗುತ್ತದೆ.

ಹೀಗಾಗಿ ರಾಜಯೋಗದಲ್ಲಿ ನೆಲೆಗೊಂಡಿರಲು ಇನ್ನೆರಡಂಶಗಳು ಇಲ್ಲವಾಗುತ್ತವೆ: ಅವೆಂದರೆ ದ್ರಷ್ಟೃತ್ವ ಹಾಗೂ ದೃಶ್ಯತ್ವಗಳು. ದ್ರಷ್ಟೃವೆಂದರೆ ನೋಡುವವನು; ದೃಶ್ಯವೆಂದರೆ ನೋಟಕ್ಕೆ ಒಳಪಡುವಂತಹುದು. ದ್ರಷ್ಟೃವು ಚೈತನ್ಯ; ದೃಶ್ಯವು ಜಡ. ತಾನೇ ದ್ರಷ್ಟಾ.

ಇದೆಂತಹ ನೋಟ! 

ನೋಡುವವ-ನೋಟ-ನೋಡಲ್ಪಡುವುದು - ಇವು ಮೂರೂ ಸಾಧಾರಣವಾಗಿ ಒಟ್ಟಿಗೇ ಇರತಕ್ಕವು; ದ್ರಷ್ಟೃ-ದರ್ಶನ-ದೃಶ್ಯ - ಎಂದರೂ ಇವೇ. ರಾಜಯೋಗದಲ್ಲಿ ಪಳಗಿ ಮುಳುಗಿದವರಿಗೆ ದ್ರಷ್ಟೃತ್ವವೂ ದೃಶ್ಯತ್ವವೂ ಅನುಭವಕ್ಕೇ ಬಾರವು!

ಸಾಮಾನ್ಯವಾಗಿ ಹೀಗಾಗುವುದು ಜಡಸ್ಥಿತಿಯಲ್ಲಿ: ನಿದ್ರೆಯಲ್ಲಿ, ಮೂರ್ಛೆಯಲ್ಲಿ. ಅವು ಅಜ್ಞಾನದ ಸ್ಥಿತಿಗಳು, ತಮಸ್ಸಿನ ಸ್ಥಿತಿಗಳು. ಆದರೆ ರಾಜಯೋಗವು ಸತ್ತ್ವದ ಸ್ಥಿತಿ. ಇದುವೆ ಶುದ್ಧ-ಜ್ಞಾನದ ಸ್ಥಿತಿ. ಶುದ್ಧ-ಜ್ಞಾನವೆಂದರೂ ಕೇವಲ-ಸಂವಿತ್ ಎಂದರೂ ಒಂದೇ. 

ಹೀಗಾಗಿ ಜ್ಞಾತೃತ್ವ-ಜ್ಞೇಯತ್ವಗಳಿಲ್ಲದ ಜ್ಞಾನಮಾತ್ರವು ಬೆಳಗುವುದಿಲ್ಲಿ. ಎಂದೇ ಇದು ಬರೀ ರಾಜಯೋಗವಲ್ಲ, ಶ್ರೀ-ರಾಜಯೋಗ! – ಎಂದಿದೆ ಈ ಶ್ಲೋಕ.

ಅಹಂ-ಮಮತ್ವಾದ್ಯಪಹಾಯ ಸರ್ವಂ

      ಶ್ರೀರಾಜಯೋಗೇ ಸ್ಥಿರ-ಮಾನಸಾನಾಮ್ |

ನ ದ್ರಷ್ಟೃತಾ ನಾಸ್ತಿ ಚ ದೃಶ್ಯ-ಭಾವಃ

      ನ ಜೀವಿತಂ ನೋ ಮರಣಂ ವಿಚಿತ್ರಮ್ !||೧೬||


ಸೂಚನೆ : 1/8/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.