"ಸಾಜ್ಯಂ ತ್ರಿವರ್ತಿಸಂಯುಕ್ತಂ ವಹ್ನಿನಾ ಯೋಜಿತಂ ಮಯಾ | ಗೃಹಾಣ ಮಂಗಲಂ ದೀಪಂ ತ್ರೈಲೋಕ್ಯತಿಮಿರಾಪಹಾ||" ಎಂದು ಭಗವಂತನಿಗೆ ದೀಪದ ಉಪಚಾರವನ್ನು ಮಾಡುತ್ತೇವೆ. ಸತ್ತ್ವ, ರಜಸ್ಸು ಮತ್ತು ತಮಸ್ಸು ಎಂಬ ಮೂರು ಗುಣಗಳ ಪ್ರತೀಕವಾದ ಮೂರು ಬತ್ತಿಗಳಿಂದ; ಒಳ್ಳೆಯ ತುಪ್ಪ ಅಥವಾ ತೈಲವೆಂಬ ಜೀವದ ಪ್ರತೀಕವಾದ ದೀಪದಿಂದ ಭಗವಂತನಿಗೆ ಆರಾಧನೆಯನ್ನು ಮಾಡುವ ಅಭ್ಯಾಸ ಬಂದಿದೆ. ನಮ್ಮ ಒಳಗಿನ ಅಜ್ಞಾನವೆಂಬ ಕತ್ತಲೆಯನ್ನು ತೊಲಗಿಸಲು ಭಗವಂತನಿಗೆ ದೀಪವನ್ನು ತೋರಿಸುತ್ತೇವೆ. ದೀಪಕ್ಕೆ ತಾನೂ ಬೆಳಗಿ ಮತ್ತೊಂದನ್ನು ಬೆಳಗಿಸುವ ಸ್ವಭಾವವಿದೆ.
ದೀಪದಿಂದ ಉಳಿದ ಪದಾರ್ಥಗಳ ದರ್ಶನವಾಗುತ್ತದೆ. ದೀಪವನ್ನು ನೋಡಲು ಮತ್ತೊಂದು ದೀಪದ ಅವಶ್ಯಕತೆಯಿಲ್ಲ. ಆದ್ದರಿಂದ ದೀಪವನ್ನು ಭಗವಂತನ ನಿರ್ವಿಕಾರವಾದ ಪ್ರತಿರೂಪ ಎನ್ನುತ್ತಾರೆ. ಭಗವಂತನಿಗೆ ದೀಪಕ್ಕಿಂತ ಮಿಗಿಲಾದ ಸ್ಪಷ್ಟವಾದ ಪ್ರತಿನಿಧಿ ಬೇರೊಂದಿಲ್ಲ. ದೀಪವು ಭಗವಂತನ ವರ್ಣವಾದ ಸುವರ್ಣದ ಬಣ್ಣವನ್ನು, ನಿರ್ಮಲತೆಯನ್ನು ಪ್ರತಿನಿಧಿಸುತ್ತದೆ. ಶ್ರೀರಂಗಮಹಾಗುರುಗಳು ಪ್ರತಿನಿಧಿ ಎಂದರೇನು? ಎಂಬುದನ್ನು ಈ ರೀತಿಯಾಗಿ ವಿವರಿಸಿದ್ದರು. "ಒಂದು ಪ್ರತಿನಿಧಿ ಆಗಬೇಕಾದರೆ ಅದರ ಹಿಂದೆ ನಿಧಿ ಇರಬೇಕು. ಆ ನಿಧಿಗೆ ಪ್ರತಿಯಾಗಿ; ಆ ನಿಧಿಯ ಬಳಿಗೆ ಕರೆದೊಯ್ಯುವುದಕ್ಕೆ ಸಾಧನವಾಗಿರುವುದು ಪ್ರತಿನಿಧಿ" ಎಂದು. ಆದ್ದರಿಂದ ಭಗವಂತನ ಪ್ರತಿನಿಧಿಯಾಗಿ ದೀಪವನ್ನು ಭಾವಿಸಿ ಅದರಿಂದ ಭಗವಂತನನ್ನು ಪೂಜಿಸುತ್ತೇವೆ. ದೀಪವನ್ನೇ ಭಗವಂತ ಎಂದೂ ಪೂಜಿಸುತ್ತೇವೆ.
ಜ್ಞಾನಿಗಳು ಅಂತರಂಗದಲ್ಲಿ ಯಾವ ಬೆಳಕನ್ನು ಕಂಡರೋ ಅದರ ಪ್ರತೀಕವೇ ದೀಪ. 'ನಿವಾತದೀಪಾ ಇವ ನಿಶ್ಚಲಾಂಗಃ' ಎಂಬಂತೆ ಅಲ್ಲಿ ಕಾಣುವ ಪರಂಜ್ಯೋತಿಯು ಗಾಳಿ ಇಲ್ಲದಿರುವ ಕಡೆ ಬೆಳಗುವ ದೀಪದಂತೆ ಎಂಬ ಸ್ವಾರಸ್ಯವಾದ ದೃಷ್ಟಾಂತವನ್ನು ನೀಡಿದ್ದಾರೆ. ಕಾಳಿದಾಸನೂ ಕೂಡ 'ನಿವಾತನಿಷ್ಕಂಪಮಿವ ಪ್ರದೀಪಂ'- ಎನ್ನುವುದಾಗಿ ಭಗವಂತನ ಅಸ್ತಿತ್ವವನ್ನು ದೀಪದ ಹೋಲಿಕೆಯೊಡನೆ ವಿವರಿಸಿದ್ದಾನೆ. ಸರ್ವವ್ಯಾಪಕನಾದ ಪರಂಜ್ಯೋತಿಯನ್ನು ಸಾಮಾನ್ಯ ಮಾನವನ ಬುದ್ಧಿಗೆ ಸೀಮಿತಗೊಳಿಸಿ ಅವನನ್ನು ಮೇಲಕ್ಕೆತ್ತಲು ಋಷಿಗಳು ತಂದ ಈ ಸಾಧನವೇ ಈ ದೀಪ.
ದೀಪಕ್ಕೆ ಬಳಸುವ ತುಪ್ಪವು ಶುದ್ಧವಾದ ದೇಸೀ ಹಸುವಿನಿಂದ ಸಿದ್ಧವಾಗಿರಬೇಕು. ಇಂದು ಮಾರುಕಟ್ಟೆಯಲ್ಲಿ ಸಿಗುವ ತುಪ್ಪದ ಲೇಬಲ್ ಇರುವ ಇತರ ತುಪ್ಪಗಳು ನಿಷಿದ್ಧ. ಏಕೆಂದರೆ ಪ್ರತಿಯೊಂದು ಪದಾರ್ಥಕ್ಕೂ ಅದರದ್ದೇ ಆದ ಪರಿಣಾಮವಿರುತ್ತದೆ. ಯಾವುದು ಸಾತ್ತ್ವಿಕ ಪರಿಣಾಮವನ್ನು ಕೊಡುವುದೋ ಅದು ದೇವರಿಗೆ ಪ್ರಶಸ್ತವಾದುದು. ಅಥವಾ ಶುದ್ಧವಾದ ತಿಲದಿಂದ ಮಾಡಿದ ಎಣ್ಣೆಯನ್ನೂ ಬಳಸಬಹುದು. ಅವರವರ ಭಾವ-ಭಕ್ತಿ-ಶಕ್ತಿಗನುಗುಣವಾಗಿ ಮಾಡುವ ದೀಪಾರಾಧನೆಯು ಭಗವಂತನ ಪ್ರಸನ್ನತೆಗೆ ಕಾರಣವಾಗುತ್ತದೆ.
ಸೂಚನೆ : 28/8/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.