Monday, August 16, 2021

ಪದ ಮತ್ತು ಅರ್ಥ (Pada Mattu Artha)

ಲೇಖಕರು : ವಿಜಯಾನಂದಕಂದರು

.

ಪದ ಮತ್ತು ಅರ್ಥ ಇವುಗಳಿಗಿರುವ ಸಂಬಂಧ ಎಷ್ಟು ನಿಕಟವಾದುದು ಎಂಬ ಅಂಶ  ಎಲ್ಲರಿಗೂ ತಿಳಿದದ್ದೇ ಆಗಿದೆ. ಈ ಎರಡೂ ಪದಗಳ ಪರಿಚಯ ಯಾರಿಗೆ ತಾನೆ ಇಲ್ಲ? ಹೀಗಿದ್ದರೂ ಇಂದು ಎಷ್ಟೋ ಪದಗಳು ಅರ್ಥದ ಪರಿಚಯವೇ ಇಲ್ಲದೆ ಬಳಸಲ್ಪಡುತ್ತಿವೆ. ಅವುಗಳ ಲ್ಲಿ 'ಅರ್ಥ' ಎಂಬ ಪದವೂ ಒಂದು. ಪದವೊಂದರ ಅರ್ಥವೇನು ಎಂದು ಕೇಳಿದಾಗ, ಅದೇ ಭಾಷೆಯ ಅಥವಾ ಇತರ ಭಾಷೆಯ ಮತ್ತೊಂದು ಪರ್ಯಾಯ ಪದವನ್ನು ಹೇಳಿ ಅದರ ಅರ್ಥವೆಂದು ಹೇಳುವುದನ್ನು ಎಲ್ಲರೂ ಬಲ್ಲರು. ಉದಾಹರಣೆಗೆ "ವಾರಿ" ಎಂಬ ಪದದ ಅರ್ಥವೇನು ಎಂಬುದಾಗಿ ಅಧ್ಯಾಪಕರೊಬ್ಬರು ಕೇಳಿದಾಗ, ವಿದ್ಯಾರ್ಥಿಯು ಕೂಡಲೇ "ಜಲಂ, ನೀರ, ಉದಕಂ" ಎಂಬುದಾಗಿ ಉತ್ತರವನ್ನು ಕೊಡುತ್ತಾನೆ ಎನ್ನೋಣ. ಅಧ್ಯಾಪಕರು ಆ ಉತ್ತರವನ್ನು "ಸರಿ" ಎಂದು ಒಪ್ಪಿಕೊಂಡು ಆ ವಿದ್ಯಾರ್ಥಿಯನ್ನು ಭೇಷ್ ಎಂದು ಬೆನ್ನು ಚಪ್ಪರಿಸಲೂ ಬಹುದು ಅಥವಾ ಆ ಪದದ ಅರ್ಥವು ಗೊತ್ತಿಲ್ಲವೆಂದು ಹೇಳಿದಾಗ, ಅವರು ಅದನ್ನು "Water", "ನಿಳ್ಳು", "ಪಾನಿ", "ತಣ್ಣಿ" ಇತ್ಯಾದಿ ಆಯಾ ವಿದ್ಯಾರ್ಥಿಗಳಿಗೆ ತಿಳಿದಿರುವ ಇತರ ಭಾಷೆಯ ಪದಗಳನ್ನು ಹೇಳಿ, ಅದೇ ಆ ಪದದ ಅರ್ಥವೆಂದು ತಿಳಿಸುವುದನ್ನೂ ನೋಡಿದ್ದೇವೆ. ಆದರೆ ಇಲ್ಲಿ ಒಂದು ಪದಕ್ಕೆ ಮತ್ತೊಂದು ಪದವನ್ನೋ ಅಥವಾ ಇತರ ಭಾಷೆಯ ಸಮಾನಾರ್ಥಕ ಪದಗಳನ್ನೋ ಪರಿಚಯ ಮಾಡಿಕೊಟ್ಟಂತಾಯಿತೇ ವಿನಾ, ಅದರ ಅರ್ಥವನ್ನು ತೋರಿಸಿದಂತಾಗಲಿಲ್ಲ.


ಆ ವಿದ್ಯಾರ್ಥಿಗೆ ಸಂಸ್ಕೃತ, ಇಂಗ್ಲೀಷು, ಕನ್ನಡ, ಹಿಂದಿ, ತೆಲಗು, ತಮಿಳು ಇಷ್ಟು ಭಾಷೆಗಳು ಬಾರದಿದ್ದಲ್ಲಿ ಅವನಿಗೆ ಆ ಪದದ ಅರ್ಥ ಮನಸ್ಸಿಗೆ ಬರುವುದಿಲ್ಲವೆಂಬುದು ಸ್ಪಷ್ಟ. ಹೀಗೆ ಅನೇಕ ಪದಗಳನ್ನು ಮುಂದಿಟ್ಟು ಹೇಳುವುದರ ಬದಲು ಹೊಳೆಗೋ, ಬಾವಿಗೋ, ಕೆರೆಗೋ ಕರೆದುಕೊಂಡು ಹೋಗಿ, ಆ ನೀರನ್ನೇ ತೋರಿಸಿದಲ್ಲಿ, ಆಗ ಮಾತ್ರ "ವಾರಿ" ಎಂಬುದರ  ಅರ್ಥವನ್ನು ತಿಳಿಸಿದಂತಾಗುತ್ತದೆ. ಅದೇ ಆ ಪದದ ನಿಜವಾದ ಅರ್ಥ. ಅಷ್ಟೇ ಅಲ್ಲ, ಎಲ್ಲಾ ಸಮಾನಾರ್ಥಕ ಪದಗಳ ನಿಜವಾದ ಅರ್ಥ. ಅಂತೆಯೇ ವಸ್ತುವಿಗೆ ಪದಾರ್ಥ (ಪದದ ಅರ್ಥ) ಎಂಬ ಅನ್ವರ್ಥವಾದ ಹೆಸರು ಬಂದಿದೆ. ಆ ಪದಾರ್ಥವನ್ನು ನೋಡಿದಾಗಲೇ ಆ ಪದಗಳೆಲ್ಲದರ ಅರ್ಥ ಮನಸ್ಸಿಗೆ ಬರಲು ಸಾಧ್ಯ. ಇಲ್ಲವಾದರೆ ಆ ಪದಗಳೆಲ್ಲವೂ ಪದಭ್ರಷ್ಟ (ಸ್ಥಾನಭ್ರಷ್ಟ) ವಾಗಿರುತ್ತದೆ. ಅರ್ಥವಿಹೀನವಾಗಿರುತ್ತದೆ.


ಲೋಕದಲ್ಲಿ ಹೀಗೆ ಇಂದ್ರಿಯಗಳಿಗೆ ಗೋಚರವಾಗುವ ವಸ್ತುಗಳನ್ನಾದರೆ ಅವನ್ನು ಸಾಕ್ಷಾತ್ತಾಗಿ ಸುಲಭವಾಗಿ ತೋರಿಸಿ, ಆ ಪದಗಳ ಅರ್ಥವನ್ನು ಮನಸ್ಸಿಗೆ ಬರುವಂತೆ ಮಾಡಬಹುದು. ಆದರೆ ಇಂದ್ರಿಯಗಳಿಗೆ ನಿಲುಕದ ಜೀವ, ಆತ್ಮ, ಧರ್ಮ, ಕರ್ಮ, ಬ್ರಹ್ಮ ಇತ್ಯಾದಿ ಪದಗಳ ಅರ್ಥವನ್ನು ಹೇಗೆ ತಾನೇ ಸಾಮಾನ್ಯರು ತಿಳಿಸಿಯಾರು? ಅದನ್ನು ತಾನು ಕಂಡು, ಅನುಭವಿಸಿ, ಮತ್ತೊಬ್ಬರಿಗೆ ತೋರಿಸಿಕೊಡಬಲ್ಲ ಧೀರನು ತಾನೇ ಅದರ ಅರ್ಥವನ್ನು ಮನಸ್ಸಿಗೆ ಬರುವಂತೆ ಮಾಡಲು ಸಾಧ್ಯ. ಇದನ್ನು ಇಂದಿನ ಅಧ್ಯಾಪಕರು, ಬೋಧಕರು, ಉಪನ್ಯಾಸಕರು ಎಲ್ಲರೂ ಮನಗಾಣಬೇಕಾಗಿದೆ. ಈ ರೀತಿ ಪದ ಮತ್ತು ಅರ್ಥಗಳ ನಿಜವಾದ ಪರಿಚಯವನ್ನೂ, ವಾಗರ್ಥಗಳಂತೆ ಸೇರಿಕೊಂಡಿರುವ ಆ ಜಗಜ್ಜನನೀಜನಕರ ಪರಿಚಯವನ್ನೂ ಮಾಡಿಸಿಕೊಟ್ಟ ಆ ತಾಯಿತಂದೆಗಳಿಗೆ ನಮೋ ನಮಃ.