Tuesday, February 3, 2026

ವ್ಯಾಸ ವೀಕ್ಷಿತ 173 ಗೃಹದೇವಿಯೇ ಆದ ಜರಾ ಎಂಬ ರಾಕ್ಷಸಿ! ( Vyaasa Vikshita 173)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಜರಾ ಎಂಬ ರಾಕ್ಷಸಿಯು ಅರ್ಧರ್ಧವಾಗಿ ಜನಿಸಿದ ಆ ಶಿಶುಗಳೆರಡರ ಮೈಗಳನ್ನು ಜೋಡಿಸಿದಳಷ್ಟೆ? ಆ ಮಗುವು ಹೇಗಿತ್ತು?

ಅದರ ಅಂಗೈ ತಾಮ್ರವರ್ಣವುಳ್ಳದ್ದಾಗಿತ್ತು. ಅದನ್ನು ಮುಷ್ಟಿ ಮಾಡಿಕೊಂಡು ಬಾಯಲ್ಲಿಟ್ಟುಕೊಂಡಿತು, ಅದು. ಅತಿರೋಷದಿಂದ ಗೋಳಾಡಿತು! ನೀರುಂಡ ಮೋಡದ ಗರ್ಜಿತದಂತಿತ್ತು ಅದರ ಧ್ವನಿ!

ಅದರ ಆ ಶಬ್ದಕ್ಕೆ ಗಾಬರಿಗೊಂಡರು, ಅಂತಃಪುರದ ಮಂದಿಯೆಲ್ಲಾ! ಹಾಗೂ ರಾಜನೊಂದಿಗೇ ಹೊರಬಂದರು. ಇನ್ನು ಆ ಇಬ್ಬರು ರಾಜಪತ್ನಿಯರೋ, ಬಾಡಿದ ಮುಖವುಳ್ಳವರಾಗಿದ್ದರು. ಆದರೂ ಅವರ ಮೊಲೆಗಳಲ್ಲಿ ಹಾಲು ತುಂಬಿಕೊಂಡಿತ್ತು. ಪುತ್ರಲಾಭವು ತಮಗಾಗದೆಂದು ಕಂಗೆಟ್ಟಿದ್ದ ಅವರು, ಈಗ ಥಟ್ಟನೆ ಹೊರಬಂದು ಆ ಶಿಶುವನ್ನು ಸಮೀಪಿಸಿದರು.

ಇನ್ನು ಆ ರಾಕ್ಷಸಿಯಂತೂ ಆ ರಾಣಿಯರಿಬ್ಬರೂ ಬಂದುದನ್ನು ಕಂಡಳು. ತನ್ನ ಸಂತಾನವನ್ನು ಅಷ್ಟೊಂದು ಇಷ್ಟಪಟ್ಟಿದ್ದ ರಾಜನನ್ನೂ ಕಂಡಳು. ಆ ಬಾಲನಂತೂ ಆಗ ಮಹಾಬಲಶಾಲಿಯಂತೆ ಕಂಡನು.

ಇಷ್ಟನ್ನೂ ಗಮನಿಸಿಕೊಂಡ ಆ ರಾಕ್ಷಸಿಯು ಮನಸ್ಸಿನಲ್ಲಿ ಹೀಗೆಂದು ಹೇಳಿಕೊಂಡಳು: ಧಾರ್ಮಿಕನೂ ಮಹಾತ್ಮನೂ ಆಗಿರುವ ರಾಜನಿವನು. ಈತನ ರಾಜ್ಯದಲ್ಲೇ ವಾಸವಿದ್ದುಕೊಂಡಿರುವ ನಾನು, ಈ ಮಗುವನ್ನು ಕೊಲ್ಲುವುದು ಸರಿಯಲ್ಲ.

ಹೀಗೆಂದುಕೊಂಡವಳೇ, ಆ ಬಾಲಕನನ್ನು ಎತ್ತಿಕೊಂಡಳು. ಮೇಘ-ಲೇಖೆಯು, ಎಂದರೆ ಮೋಡಗಳ ಸಾಲು, ಸೂರ್ಯನನ್ನು ಎತ್ತಿಕೊಳ್ಳುವ ಹಾಗಿತ್ತು, ಅದು. ಅವಳೂ ಮಾನುಷರೂಪವನ್ನು ಆಗ ತಳೆದಳು. ಮತ್ತು ರಾಜನಿಗಿಂತು ನುಡಿದಳು.

"ಬೃಹದ್ರಥನೇ, ನಿನಗೆ ನಾನಿತ್ತ ಮಗನಿವನು. ಇವನನ್ನು ಸ್ವೀಕರಿಸು. ನಿನ್ನ ಇಬ್ಬರು ಪತ್ನಿಯರಿಗೆ ಹುಟ್ಟಿದ ಮಗುವಿದು – ಆ ಬ್ರಾಹ್ಮಣನ ವರದ ಮೇರೆಗೆ. ಆದರೆ ದಾದಿಯಿಂದ ಪರಿತ್ಯಕ್ತವಾದದ್ದು. ನಾನು ರಕ್ಷಿಸಿರುವ ಮಗುವಿದೆಂದು ತಿಳಿ."

ಹೀಗಾದಮೇಲೆ ಆ ರಾಣಿಯರಿಬ್ಬರೂ ಒಡನೆಯೇ ಆ ಮಗುವನ್ನು ಎತ್ತಿಕೊಂಡು ಹಾಲುಣಿಸಿದರು. ಅದೆಲ್ಲವನ್ನೂ ಅರಿತು ರಾಜನಿಗೆ ಆಗ ಬಹಳ ಸಂತೋಷವೇ ಆಯಿತು.

ಸ್ವರ್ಣದ ಕಾಂತಿಯನ್ನು ಹೊಂದಿದ್ದ ಆ ರಾಕ್ಷಸಿಯನ್ನು ರಾಜನು ಕೇಳಿದನು: "ಕಮಲದೊಳಗಣ ಕಾಂತಿಯನ್ನು ಹೊಂದಿರುವವಳೇ! ನನಗೆ ಮಗನನ್ನಿತ್ತವಳೇ! ಯಾರು ನೀನು? ನೀನು ಕಾಮ-ಚಾರಿಣಿಯಾದ, ಎಂದರೆ ಬಯಸಿದಂತೆ ಸಂಚರಿಸುವ, ದೇವತೆಯೇ ಇರಬೇಕೆಂದು ನನಗೆ ತೋರುತ್ತದೆ!" – ಎಂದು.

ಆಗ ಆ ರಾಕ್ಷಸಿಯು ಹೇಳಿದಳು:

"ನಾನು ಜರಾ ಎಂಬ ಹೆಸರಿನ ರಾಕ್ಷಸಿ. ಕಾಮ-ರೂಪಿಣಿಯಾದವಳು, ಎಂದರೆ ಇಚ್ಛೆ ಬಂದಂತೆ ರೂಪವನ್ನು ಧರಿಸಿಕೊಳ್ಳಬಲ್ಲವಳು. ರಾಜನೇ, ನಿನ್ನ ಮನೆಯಲ್ಲಿಯೇ ಪೂಜಿತಳಾಗಿ ಸುಖದಿಂದ ವಾಸಮಾಡುತ್ತಿರುವೆ, ನಾನು. ಮನುಷ್ಯರ ಮನೆಮನೆಗಳಲ್ಲೂ ಸದಾ ವಾಸಿಸುತ್ತಿರುವೆ. ಹಿಂದೆ ಬ್ರಹ್ಮನು ಗೃಹದೇವೀ ಎಂಬ ಹೆಸರಿನಿಂದಲೇ ನನ್ನನ್ನು ಸೃಷ್ಟಿಸಿರುವನು. ದಾನವರ ವಿನಾಶಕ್ಕೆಂದೇ ಸ್ಥಾಪಿಸಲ್ಪಟ್ಟವಳು, ನಾನು. ದಿವ್ಯರೂಪವನ್ನು ಧರಿಸತಕ್ಕವಳು.

ಯಾರು ಭಕ್ತಿ-ಪೂರ್ವಕವಾಗಿ ನನ್ನ ಚಿತ್ರವನ್ನು - ನಾನು ಯೌವನದಲ್ಲಿರುವಂತೆಯೂ ಪುತ್ರಸಹಿತಳಾದಂತೆಯೂ – ತಮ್ಮ ಮನೆಯ ಗೋಡೆಯ ಮೇಲೆ ಬರೆಯುವರೋ, ಅವರ ಮನೆಯಲ್ಲಿ ವೃದ್ಧಿ(ಏಳ್ಗೆ)ಯುಂಟಾಗುವುದು. ಇಲ್ಲವಾದಲ್ಲಿ ವಿನಾಶವೇ ಉಂಟಾಗುವುದು.

ನಿನ್ನ ಗೃಹದಲ್ಲಿಯೂ, ಎಂದರೆ ಅರಮನೆಯಲ್ಲಿಯೂ, ನಾನು ವಾಸವಾಗಿದ್ದು ಸದಾ ಪೂಜೆ ಕೈಗೊಳ್ಳುತ್ತಿದ್ದೇನೆ! ನಿನ್ನ ಮನೆಯ ಗೋಡೆಗಳ ಮೇಲೆ ನಾನು ಬಹುಪುತ್ರರಿಂದ ಸುತ್ತುವರಿಯಲ್ಪಟ್ಟವಳಾಗಿ ಚಿತ್ರಿಸಲ್ಪಟ್ಟಿದ್ದೇನೆ. ಹಾಗೆಯೇ ಗಂಧ-ಪುಷ್ಪ-ಧೂಪಗಳಿಂದಲೂ ಭಕ್ಷ್ಯ-ಭೋಜ್ಯಗಳಿಂದಲೂ ನಾನು ಅರ್ಚಿಸಲ್ಪಟ್ಟಿದ್ದೇನೆ. ಎಂದೇ ನಿನಗೆ ಪ್ರತ್ಯುಪಕಾರಕ್ಕೋಸ್ಕರವಾಗಿ ನಾನು ಸದಾ ಚಿಂತಿಸುತ್ತಿರುತ್ತೇನೆ."

ಸೂಚನೆ : 1/2/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.