Saturday, February 7, 2026

ಅಷ್ಟಾಕ್ಷರೀ 99 ಪರಾಂಚಿ ಖಾನಿ ವ್ಯತೃಣತ್ (Astakshara 99)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


 ನಮ್ಮಇಂದ್ರಿಯಗಳು ಬಹಿರ್ಮುಖವಾಗಿರುವುದೇಕೆ?

ಜೀವನದಲ್ಲಿ ತಪ್ಪು ಮಾಡದವರಾರು?

ಹಾಗೆಂದು ಹೇಳುವುದು ನಮ್ಮ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳಲು ಬಳಸುವ ಅಸ್ತ್ರವಾಗಬಾರದಲ್ಲವೇ? ಮುಂದೆ ಮಾಡುವ ತಪ್ಪುಗಳಿಗೂ ಮೊದಲೇ ಮಾಡಿಟ್ಟುಕೊಳ್ಳುವ "ಶ್ರೀರಕ್ಷೆ"ಯೂ ಆಗಿಬಿಡಬಾರದಷ್ಟೆ? ಸ್ವ-ರಕ್ಷಣೆಯೋ ಸ್ವಕೀಯ-ರಕ್ಷಣೆಯೋ - ಎಲ್ಲಾ ಒಂದೇ!

ಇದಿರಲಿ, ಎಷ್ಟೋ ವೇಳೆ ನಮ್ಮಿಂದಾದ ತಪ್ಪಿಗೆ ನಾವು ಬೇರೆಯವರನ್ನು ಹೊಣೆಮಾಡುವ ತವಕವೂ ಒಂದಿಷ್ಟು ಹುಟ್ಟುಕೊಳ್ಳುವುದುಂಟು. "ನಾನೇನು ಮಾಡಲಿ, ಅವರೆಲ್ಲಾ ಹಾಗೆ ಮಾಡಿಬಿಟ್ಟಿದ್ದರೆಂದೇ ನಾನು ಹೀಗೆ ಮಾಡಬೇಕಾಯಿತು!" ಎಂದು ಬೇರೆಯವರೆದುರಿಗೆ ಹೇಳುವುದೋ, ನಮ್ಮ ಮನಸ್ಸಿನೊಳಗೇ ಸಮರ್ಥಿಸಿಕೊಳ್ಳುವುದೋ, ನಡೆದಿರುತ್ತದೆ. ಅಲ್ಲೊಮ್ಮೆ ಇಲ್ಲೊಮ್ಮೆ ಇದು ವಾಸ್ತವವಾಗಿರುವುದೂ ಶಕ್ಯವಿದೆಯೆನ್ನಿ.

ಹಾಗೆಯೇ ನಮಗೆ ಭಗವತ್ಸಾಕ್ಷಾತ್ಕಾರವು ಇನ್ನೂ ಆಗಿಲ್ಲದಿರುವುದಕ್ಕೂ ಮತ್ತಾರನ್ನಾದರೂ ಹೊಣೆ ಮಾಡಲಾಗುವುದಾದರೆ ಅದೆಷ್ಟು "ಅನುಕೂಲ"ವಲ್ಲವೇ? "ಮಾಡಲಾಗುವುದಾದರೆ" ಎನ್ನುವುದೇನು? ಮಾಡಿಯೇ ಆಗಿದೆ! ಆತ್ಮಸಾಕ್ಷಾತ್ಕಾರವಾಗದಿರಲು ಯಾರು ಕಾರಣವಂತೆ, ಹಾಗಾದರೆ? ಯಾರಿಗೂ ಸಾಕ್ಷಾತ್ಕಾರವಾಗದಂತಾಗಲು ಕಾರಣ-ಭೂತನಾದವನು ಒಬ್ಬನಿದ್ದಾನೆ. ಆ ಏಕೈಕ-ಪುರುಷನೇ ಕಾರಣ.

ಯಾರವನು? ಸಾಕ್ಷಾದ್ ಬ್ರಹ್ಮನೇ! ತಾನೇ ತಾನಾಗಿ ಹುಟ್ಟಿಕೊಂಡ ಸ್ವಯಂಭುವೇ!  ಹಾಗೆಂದು ಹೇಳಿರುವುದು ಯಾರು? ಯಾರೋ ಅವರಿವರಲ್ಲ. ಅದನ್ನು ಹೇಳಿರುವುದು ಸಾಕ್ಷಾದ್ ಉಪನಿಷತ್ತೇ! ಉಪನಿಷತ್ತಿನ ಮಾತನ್ನು ಎತ್ತಿಹಾಕುವುದುಂಟೇ?

ಯಾವ ಉಪನಿಷತ್ತು? ಎಲ್ಲಿ ಹೇಳಿದೆ? ಇದು ಕಠೋಪನಿಷತ್ತಿನಲ್ಲಿದೆ. ಅಲ್ಲಿಯ ನಾಲ್ಕನೆಯ ವಲ್ಲಿಯ ಮೊದಲ ಮಂತ್ರವೇ ಅದು. ಸ್ವಯಂಭುವೆನಿಸುವ ಬ್ರಹ್ಮನು ಏನು ಮಾಡಿದ? ಚುಚ್ಚಿದ, ಅಥವಾ ಕೊರೆದನೆಂದರೂ ಆಯಿತು. ಏನನ್ನು? ನಮ್ಮ ಇಂದ್ರಿಯಗಳನ್ನು.

ನಾವು "ತಲೆಬುರುಡೆ" ಎಂಬ ಪದವನ್ನು ಬಳಸುತ್ತೇವಲ್ಲವೇ? ಆ ದುಂಡನೆಯ ಆಕಾರದ ಬುರುಡೆಯನ್ನೇ ಒಂದು ಮಡಕೆಯೆಂದುಕೊಳ್ಳಿ. ತಲೆಕೆಳಕಾದ ಮಡಕೆಯ ಹಾಗಿರುವುದಲ್ಲವೇ ಅದು? ಈ ಮಡಕೆಯಲ್ಲೊಂದು ವಿಶೇಷವಿದೆ. ಅದರಲ್ಲಿ ೭ ರಂಧ್ರಗಳಿವೆ. ಕಣ್ಣುಗಳೆಂಬ ಎರಡು ರಂಧ್ರಗಳು, ಕಿವಿಗಳೆಂಬ ಎರಡು ರಂಧ್ರಗಳು, ಮೂಗಿನ ಹೊಳ್ಳೆಗಳೆರಡು, ಹಾಗೂ ಬಾಯಿಯೊಂದು. ಇವಿಷ್ಟೂ ಇಂದ್ರಿಯಗಳೇ. ಹೀಗಾಗಿ ಇಂದ್ರಿಯಗಳೆಂಬ ರಂಧ್ರಗಳಿವು.

ಇವೆಲ್ಲವೂ ಹೇಗೆ ಕಾಣುತ್ತವೆ? ಯಾರೋ ಒಳಗಿನಿಂದ ಹೊರಮುಖವಾಗಿ ಚುಚ್ಚಿ ರಂಧ್ರಮಾಡಿರುವಂತಿವೆ ಅಲ್ಲವೇ? ಏಕೆ? ಕಣ್ಣು ತನ್ನಾಚೆಯಿರುವುದನ್ನು, ಹೊರಜಗತ್ತನ್ನು, ಎಲ್ಲವನ್ನೂ ಕಾಣುತ್ತದೆ. ಆದರಿದೋ, ತನ್ನನ್ನೇ ತಾನು ನೋಡಿಕೊಳ್ಳಲಾರದು; ತನ್ನ ಹಿಂದಿರುವುದನ್ನಂತೂ ನೋಡಿಕೊಳ್ಳಲೇ ಆರದು! ಹೊರಗೆ ಅತಿದೂರದಲ್ಲಿರುವ ವಸ್ತುವನ್ನಾದರೂ ಕಂಡೀತು, ತನ್ನೊಳಗೇ ಇರುವ ಸಣ್ಣವಸ್ತುವನ್ನೋ ಅತಿಸಣ್ಣವಲ್ಲದ್ದನ್ನೋ ಕೂಡ ಅದು ಕಾಣಲಾರದು!

ಕಣ್ಣಿಗೆ ಹೇಳಿದುದೇ ಕಿವಿಗೂ ಅನ್ವಯಿಸುತ್ತದೆ. ಕಿವಿಯು ಬಾಹ್ಯ-ಶಬ್ದಗಳನ್ನು ಗ್ರಹಿಸುವುದೇ ವಿನಾ ಹೃದಯದ ಬಡಿತವೇ ಮುಂತಾದ ಅಂತಶ್ಶಬ್ದಗಳನ್ನಲ್ಲ. ಮೂಗು-ಬಾಯಿಗಳ ಕಥೆಯೂ ಅಷ್ಟೇ. ಇವೆಲ್ಲವೂ ಬಾಹ್ಯ-ಸ್ಪರ್ಶಗಳಿಗೆ ಪ್ರತಿಕ್ರಿಯಿಸುವಂತಹವು. ಕಣ್ಣು-ಕಿವಿಗಳು ದೂರಗ್ರಾಹಿಗಳೂ ಆಗಬಲ್ಲವು. ಮೂಗು ಕಿಂಚಿದ್ದೂರದ ಗಂಧವನ್ನು ಗ್ರಹಿಸೀತು. ಬಹುತೇಕ, ಗಂಧವು ದೂರದ್ದಾದರೂ ಮೂಗಿಗೆ ತಿಳಿದುಬರುವ ಕಾರಣವೇನೆಂದರೆ, ವಾಸನೆಯುಳ್ಳ ಅಲ್ಲಿಯ ಪದಾರ್ಥಕ್ಕೆ ಸೋಂಕಿಬರುವ ಗಾಳಿಯು ಆ ಗಂಧವನ್ನು ಮೂಗಿನವರೆಗೂ ತಂದಿರುವುದು. ನಾಲಿಗೆಗೆ ರಸವು ಗೋಚರಿಸಲಂತೂ ಸಾಕ್ಷಾತ್-ಸ್ಪರ್ಶವೇ ಬೇಕಾಗುವುದು.

ಅಲ್ಲದೇ ಇಂದ್ರಿಯಗಳಲ್ಲೆಲ್ಲ ಪರಸ್ಪರ-ಸಹಕಾರವುಂಟೆಂಬ ಅಂಶವೂ ಗಮನಿಸಬೇಕಾದದ್ದೇ. ಉದಾಹರಣೆಗೆ ಸ್ವಾದುವಾದ ಭಕ್ಷ್ಯದ ದರ್ಶನವು ದೂರದಿಂದಾದರೂ, ನಾಲಿಗೆಯಲ್ಲಿ ನೀರೊಡೆದೀತು. ಜೊತೆಗೆ, ಅದರೊಂದಿಗೆ ಸುಗಂಧವೂ ಸೇರಿದರಂತೂ ನಾಲಿಗೆಯಲ್ಲಿ ರಸವೊಸರುವುದು ಮತ್ತೂ ಸುಲಭವೇ.

ಹೀಗಾಗಿ ಇಂದ್ರಿಯಗಳು "ಹೊರಹೋಗಿ"ಯೇ ವಸ್ತುಗಳನ್ನು ಗ್ರಹಿಸುವುದು. ಬ್ರಹ್ಮನು ಸೃಷ್ಟಿ ಮಾಡಿದ್ದೇ ಹೀಗೆ – ಎನ್ನುವುದನ್ನೇ, ಬ್ರಹ್ಮನು "ಇಂದ್ರಿಯಗಳನ್ನು ಹೊರಮುಖವಾಗಿ[ಯೇ] ಕೊರೆದನು" - "ಪರಾಂಚಿ ಖಾನಿ ವ್ಯತೃಣತ್" - ಎನ್ನುವ ಉಪನಿಷದುಕ್ತಿಯು ಹೇಳುತ್ತದೆ. ಮತ್ತು ಆ ಕಾರಣದಿಂದಾಗಿಯೇ ಅಂತರಾತ್ಮನನ್ನು ಜೀವನು ನೋಡಲಾರನೆಂದೂ ಅಲ್ಲಿಯೇ ಹೇಳಿದೆ.

ಹಾಗಾದರೆ ಒಳಮುಖವಾಗಿ ಸಾಗಲು ಸಾಧ್ಯವೇ ಇಲ್ಲವೆಂದೇ? ಇಲ್ಲವೆಂದೇನಲ್ಲ. ಅದಕ್ಕೊಂದು "ಧೈರ್ಯ"ವು ಬೇಕಾಗುತ್ತದೆ. "ಆವೃತ್ತ-ಚಕ್ಷು"ವಾದವನು ಮಾತ್ರವೇ ಪ್ರತ್ಯಗಾತ್ಮನನ್ನು ಕಾಣಬಲ್ಲನು - ಎಂದೂ ಹೇಳುತ್ತದೆ, ಅದೇ ಉಪನಿಷತ್ತು.

ಏನು ಹಾಗೆಂದರೆ? ಧ್ಯಾನವನ್ನು ಮಾಡುವವರ ಇಂದ್ರಿಯಗಳು ಒಳಮುಖವಾಗುತ್ತವೆ. ಹಾಗಾದಾಗ ಒಳತತ್ತ್ವವು ಗೋಚರವಾಗುತ್ತದೆ. ಮಾನವಶರೀರದಲ್ಲಿ ವಾಸ್ತವವಾಗಿ ಅದಕ್ಕೂ ಆಸ್ಪದವಿದೆ – ಅದು ಸುಲಭವಲ್ಲವಾದರೂ.

ಹೀಗಾಗಿಯೇ ಆತ್ಮ-ದರ್ಶನ ಅಥವಾ ಪರಮಾತ್ಮ-ಸಾಕ್ಷಾತ್ಕಾರವೆಂಬುದು ಇಂದ್ರಿಯಗಳು ಬಹಿರ್ಮುಖವಾಗಿರುವಾಗ ಸಾಧ್ಯವಾಗಲಾರದು. ಒಳಮುಖವಾದ ಯೋಗ-ಸಾಧನೆಯಿಂದ ಸಾಧ್ಯವಾಗಬಲ್ಲುದು.

"ಆತ್ಮತತ್ತ್ವವನ್ನು ಅನ್ವೇಷಿಸಿ ಅರಿತುಕೊಂಡು ಅದನ್ನೆಲ್ಲರೂ ಸಾಧಿಸಬೇಕೆಂಬ ದಿವ್ಯ-ಸಂದೇಶವನ್ನಿತ್ತ ಧೀರರ ನಾಡಾಗಿದೆ, ಈ ಭರತಭೂಮಿ!" – ಎಂಬ ಶ್ರೀರಂಗಮಹಾಗುರುಗಳ ಸ್ಫೂರ್ತಿ-ಎಚ್ಚರಗಳ ವಾಣಿಯನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಸೂಚನೆ: 7/2//2026 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.