ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ದೇವರನ್ನು ಕಾಣಬೇಕೆಂದು ಅದೆಷ್ಟು ಮಂದಿ ಹುಡುಕಾಟವನ್ನು ಮಾಡುತ್ತಾರೆ! ಆದರೆ ಅದೇನು ಸುಲಭವೇ? ಅತ್ಯಂತ-ಕಷ್ಟವಾದದ್ದೆಂದರೆ ಅದೇ! ಆದರೆ ಅದಕ್ಕೊಂದು ಸುಲಭೋಪಾಯವೂ ಇದೆ. ನಾ ಹೇಳುತ್ತೇನೆ, ಅದನ್ನನುಸರಿಸಿ! - ಎನ್ನುತ್ತಿದ್ದಾನೆ, ಲೀಲಾಶುಕ.
ಯಾವುದು ಕಷ್ಟದ ದಾರಿ, ಶ್ರಮವಿಲ್ಲದ ಮಾರ್ಗವು ಯಾವುದು? - ಎಂಬೆರಡನ್ನೂ ಬಿಡಿಸಿಹೇಳುತ್ತಾನೆ.
ಯಾವುದಾದರೂ ವಸ್ತುವನ್ನು ಅದು ಕಾಡಿನಲ್ಲಿದೆ, ಹುಡುಕಿ ತಾ - ಎಂದರೆ ಅದೇನು ಸುಶಕವೇ? – ಎಂದರೆ ಅತಿಸುಲಭವೆನಿಸುವುದೇ? ಭಗವಂತನನ್ನು ಅರಸುತ್ತಾ ತಪಸ್ವಿಗಳು ಅಟವಿಗೆ ಹೋಗುವುದುಂಟಲ್ಲವೇ? ಇಲ್ಲವೆ, ವೇದಗಳೊಳಗೆ ಮುಳುಗಿ ಹುಡುಕುವುದೂ ಉಂಟಲ್ಲವೆ? ಇಲ್ಲಿ ಕವಿಯು ಇವೆರಡು ಭಾವಗಳನ್ನೂ ಹೆಣೆದು ಒಂದು ರೂಪಕವನ್ನು ಮಾಡಿದ್ದಾನೆ. ನಿಗಮಗಳೇ, ಎಂದರೆ ವೇದಗಳೇ, ಅರಣ್ಯಗಳು. ನಿಗಮ-ವನಗಳಲ್ಲಿ ಭಗವಂತನನ್ನು ಹುಡುಕುವವರನ್ನು, ತಪಸ್ಸು ಮಾಡಿ ಕ್ಲೇಶಪಡುವವರನ್ನು, ಕುರಿತ ಮಾತಿದು.
ಉಪನಿಷತ್ತೆಂದರೆ ವೇದಾಂತವೇ. ಏಕೆ? ವೇದದ ಅಂತವೇ, ಎಂದರೆ ಕೊನೆಯ ಭಾಗವೇ, ವೇದಾಂತ. ಮತ್ತೊಂದು ದೃಷ್ಟಿಯಿಂದ, ವೇದದ ಸಾರವೇ ವೇದಾಂತ - ಎಂಬುದೂ ನಿಜವೇ. ಕೆಲವೊಮ್ಮೆ ಉಪನಿಷತ್ತುಗಳನ್ನು ವೇದ-ಶಿರಸ್ ಎಂದು ಹೇಳುವುದೂ ಉಂಟು. ನಮ್ಮ ಶರೀರದಲ್ಲಾದರೂ ಶಿರಸ್ಸೇ ಮುಖ್ಯತಮವಾದ ಭಾಗವಲ್ಲವೇ?
ಸಂಹಿತೆ, ಬ್ರಾಹ್ಮಣ, ಆರಣ್ಯಕ, ಉಪನಿಷತ್ತು - ಇವೆಲ್ಲಾ ವೇದದ ಭಾಗಗಳು. ಇವಲ್ಲಿ ಮೊದಲ ಮೂರರಲ್ಲಿ ಭಗವಂತನನ್ನು ಕಿಂಚಿತ್-ಪರೋಕ್ಷವಾಗಿ ತೋರಿಸಿದೆ. ಆದರೆ ಉಪನಿಷತ್ತುಗಳಲ್ಲಿ ಪ್ರತ್ಯಕ್ಷವಾಗಿಯೇ, ವಾಸ್ತವವಾಗಿ ತಾತ್ತ್ವಿಕವಾಗಿಯೇ, ನಿರೂಪಿಸಿದೆ. ಎಂದೇ ಉಪನಿಷದರ್ಥವೆಂದರೆ ಸಾಕ್ಷಾತ್ ಪರಮಾತ್ಮನೇ ಸರಿ.
ಕಾಡಿನಲ್ಲಿ ಅಲೆದಲೆದು ಕಡುಖೇದಪಡುವವರ ಕಂಡು ಕರುಣೆ ಬರುತ್ತದೆಯಲ್ಲವೇ? ಆ ಕರುಣೆಯಿಂದಲೇ ಲೀಲಾಶುಕನು ಈ ಮಾತನ್ನು ಹೇಳುತ್ತಿದ್ದಾನೆ. ಏಕೆ? ಇಲ್ಲಿ ಹೇಳುತ್ತಿರುವ ವಿಪಿನವೆಂದರೆ ವೇದಾಧ್ಯಯನವೇ. ಏಕೆ?
ವೇದಗಳನ್ನು ಅಭ್ಯಸಿಸುವುದೆಂದರೆ ಅದೇನು ಸುಲಭವೇ? ವೈದಿಕ ಶಬ್ದ-ರಾಶಿಯನ್ನು ಮೊದಲು ಕ್ರಮ-ಬದ್ಧವಾಗಿ, ಎಂದರೆ ಸ್ವರ-ಸಹಿತವಾಗಿಯೂ, ಕಂಠಸ್ಥವನ್ನಾಗಿಸಿಕೊಳ್ಳಬೇಕು; ಆಮೇಲೆ ಅದರ ಅರ್ಥದತ್ತ ಗಮನ ಹರಿಸಬೇಕು; ಹೀಗೆ ಶ್ರವಣ-ಮನನ-ನಿದಿಧ್ಯಾಸನಗಳಲ್ಲಿ ಮುಳುಗಬೇಕು.
ಅಲ್ಲದೆ, ವೇದಗಳನ್ನು ಸಾಂಗೋಪಾಂಗವಾಗಿ ಅಭ್ಯಸಿಸಬೇಕು. ವೇದಗಳಿಗೆ ಅಂಗಗಳು ಆರು, ಉಪಾಂಗಗಳು ನಾಲ್ಕು. ಅಂಗ ಮತ್ತು ಉಪಾಂಗಗಳೊಂದಿಗೆ ಕೂಡಿರುವುದೇ ಸಾಂಗೋಪಾಂಗ ಎನಿಸುವುದು. ಶಿಕ್ಷಾ-ವ್ಯಾಕರಣ-ಛಂದಸ್-ನಿರುಕ್ತ-ಜ್ಯೋತಿಷ-ಕಲ್ಪ - ಇವೇ ಆ ಆರು ಅಂಗಗಳು. ಪುರಾಣ-ನ್ಯಾಯ-ಮೀಮಾಂಸಾ--ಧರ್ಮಶಾಸ್ತ್ರ - ಇವೇ ನಾಲ್ಕು ಉಪಾಂಗಗಳು. ಇವುಗಳೆಲ್ಲವನ್ನೂ ಸರಹಸ್ಯವಾಗಿಯೇ ಅಭ್ಯಸಿಸಬೇಕು.
ಪಂಚತಂತ್ರವು ಹೇಳುವಂತೆ ವ್ಯಾಕರಣವೊಂದಕ್ಕೇ ಹನ್ನೆರಡು ವರ್ಷಗಳ ಅಧ್ಯಯನವು ಬೇಕಾಗಬಹುದು! ಇನ್ನು ಉಳಿದ ಶಾಸ್ತ್ರಗಳ ಅಧ್ಯಯನವೂ ನಡೆಯಬೇಕು! ಹೀಗಾಗಿ, ವರ್ಷಗಟ್ಟಲೆ ಸಾಧಿಸಬೇಕಾದ ಇವೆಲ್ಲಾ ಒಂದು ದೊಡ್ಡ ಕಾಡೇ, ಅವುಗಳ ಒಳ ಹೊಕ್ಕರೆ ದೊಡ್ಡ ಕಾಡನ್ನು ಹೊಕ್ಕಂತೆಯೇ ಸರಿ!
ಬೆಂಗಾಡಿನಲ್ಲಿ ಅಷ್ಟೊಂದು ಅಂಡಲೆದು ಬೆಂಡಾಗಿರತಕ್ಕವರೇ! – ಎಂಬುದಾಗಿ ಆ ಮಾರ್ಗವನ್ನು ಅನುಸರಿಸುವವರನ್ನು ಸಂಬೋಧಿಸುತ್ತಿದ್ದಾನೆ, ಕವಿ. ಹಾಗೆ ಬಳಲುವುದರ ಬದಲು, ಸಾರಭೂತವಾದ ಉಪನಿಷದರ್ಥವನ್ನೇ ಸುಲಭವಾಗಿ ಕಂಡುಕೊಳ್ಳುವ ಹೊಸ ಉಪಾಯವಿದೆಯೆನ್ನುತ್ತಿದ್ದಾನೆ, ಲೀಲಾಶುಕ.
ಏನದು ಉಪಾಯ? ಗೋಕುಲದ ನಾರಿಯರಿರುವರಲ್ಲವೇ? ಆ ವಲ್ಲವಿಯರ ಮನೆಗಳಿಗೆ ಹೋಗಿರಿ; ಒಳಹೊಕ್ಕು ಅವರ ಮನೆಯಲ್ಲಿಯ ಒರಳನ್ನು ಹೋಗಿ ಕಾಣಿರಿ; ಅದಕ್ಕೆ ಕಟ್ಟಿಹಾಕಿದೆ, ಉಪನಿಷದರ್ಥವನ್ನು- ಎನ್ನುತ್ತಾನೆ, ಲೀಲಾಶುಕ!
ಏನು ಹಾಗೆಂದರೆ? ಬಾಲಕೃಷ್ಣನು ಬೆಣ್ಣೆ ಕದಿಯುತ್ತಾ ತುಂಬ ಗಲಾಟೆ ಮಾಡಿದನೆಂದೂ, ಅದಕ್ಕೇ ಆತನನ್ನು ಒರಳುಕಲ್ಲಿಗೆ ಕಟ್ಟಿಹಾಕಿದಳು ಯಶೋದೆ – ಎಂದೂ ಪ್ರಸಿದ್ಧವಲ್ಲವೇ ಕಥೆ? ಮುಂದೆ ಆ ಒರಳು ಕಲ್ಲುಗಳನ್ನೇ ಎಳೆದುಕೊಂಡು ಹೋಗಿ ಕೃಷ್ಣನು ಮಾಡಿದ್ದೇನು?: ಅಲ್ಲಿದ್ದ ಎರಡು ಅರ್ಜುನ-ವೃಕ್ಷಗಳನ್ನು ಬೀಳಿಸಿದುದು. ಆ ಮರಗಳೇನು? ಶಾಪ-ಗ್ರಸ್ತರಾಗಿ ಆ ವೃಕ್ಷಗಳಾಗಿದ್ದವರು ಕುಬೇರನ ಪುತ್ರರು. ಒಬ್ಬನ ಹೆಸರು ಮಣಿಗ್ರೀವ. ಮತ್ತೊಬ್ಬನ ಹೆಸರು ನಳಕೂಬರ. ಇಬ್ಬರೂ ಯಕ್ಷರೇ. ವೃಕ್ಷಜನ್ಮದಿಂದ ಈಗ ಇಬ್ಬರೂ ವಿಮೋಚನೆಯನ್ನು ಪಡೆದರು - ಎಂಬೀ ಕಥೆಗಳು ಶ್ರೀಮದ್ಭಾಗವತದಲ್ಲಿ ನಿರೂಪಿತವಾಗಿವೆ.
ಹೀಗಾಗಿ, "ಒರಳಿಗೆ ಕಟ್ಟಿಹಾಕಿರುವ ಉಪನಿಷದರ್ಥ" – ಎಂದು ಹೇಳಿದರೆ ಸಾಕ್ಷಾದ್ ಬಾಲಕೃಷ್ಣನೇ. ಆತನನ್ನು ಕಂಡರಾಯಿತು! – ಎನ್ನುತ್ತಿದ್ದಾನೆ, ಕವಿ. ಅಲ್ಲಿಗೆ, ದೊರೆಯಬೇಕಾದದ್ದು ದೊರೆತಂತೆಯೇ.
ಎಂದೇ ನನ್ನೀ ಉತ್ಕೃಷ್ಟವಾದ ಉಪದೇಶವನ್ನು ಆಲಿಸಿ, ಆದರಿಸಿ - ಎಂಬುದಾಗಿ ಕವಿಲೀಲಾಶುಕನ ಉದ್ಗಾರ. ಅಲ್ಲಿಗೆ, ಶ್ರೀಕೃಷ್ಣನ ದಿವ್ಯಲೀಲೆಗಳ ಅನುಸಂಧಾನದಿಂದಲೂ ಸಹ, ವೇದ-ವೇದಾಂತ-ಪ್ರತಿಪಾದಿತವದ ಪರತತ್ತ್ವವನ್ನೇ ಪಡೆಯಬಹುದು - ಎಂಬುದೇ ಈ ಶ್ಲೋಕದ ತಾತ್ಪರ್ಯವಾಗಿದೆ.
ಕಡುಕಷ್ಟಪಟ್ಟು ಒಂದು ಫಲವನ್ನು ಪಡೆಯುವುದೇನು? ಅದೇ ಫಲವನ್ನೇ ಶ್ರಮವಿಲ್ಲದೆ ಪಡೆಯುವುದೇನು?
ಶ್ರೀಮದ್ಭಾಗವತವನ್ನು ನಿಗಮ-ಕಲ್ಪತರುವಿನ ಕಳಿದ ಹಣ್ಣೆಂದು ಹೇಳುವುದುಂಟಲ್ಲವೇ? ವೇದಗಳೇ ಕಲ್ಪ-ವೃಕ್ಷಗಳು. ಮತ್ತು ಫಲವೆಂದರೆ ವೃಕ್ಷ-ಸಾರವೇ ಸರಿ. ಅದೂ ಕಳಿತದ್ದೇ ಆದರೆ ತಿನ್ನಲೂ ಶ್ರಮಿಸಬೇಕಿಲ್ಲ!
ಹೀಗಾಗಿ, ವೇದ-ಸಾರಭೂತವಾದುದು ಈ ಭಾಗವತ - ಎಂಬ ತತ್ತ್ವವನ್ನು ಈ ಶ್ಲೋಕವು ಹೃದಯಂಗಮವಾಗಿ ಮನದಟ್ಟು ಮಾಡಿಕೊಡುತ್ತದೆ.
ಶ್ಲೋಕ ಹೀಗಿದೆ:
ಪರಂ ಇಮಂ ಉಪದೇಶಂ ಆದ್ರಿಯಧ್ವಂ /
ನಿಗಮ-ವನೇಷು ನಿತಾಂತ-ಚಾರ-ಖಿನ್ನಾಃ |
ವಿಚಿನುತ ಭವನೇಷು ವಲ್ಲವೀನಾಂ /
ಉಪನಿಷದರ್ಥಂ ಉಲೂಖಲೇ ನಿಬದ್ಧಂ ||
ಮತ್ತೊಂದು ಪದ್ಯ
ನಂದನ ತನಯನೆಂದರೆ ನಂದ-ಪುತ್ರನಾದ ಶ್ರೀಕೃಷ್ಣ. ಆತನು ನನ್ನ ಹೃದಯಕ್ಕೆ ಮುದವೀಯುತ್ತಿದ್ದಾನೆ, ಎನ್ನುತ್ತಾನೆ ಲೀಲಾಶುಕ.
ಯಾವುದರಿಂದಾಗಿ ಮೋದವಾಗುತ್ತಿದೆ? ಎಂದರೆ ಮೂರು ಅಂಶಗಳಿಂದ - ಅರ್ಥಾತ್ ಕೃಷ್ಣನ ಮೂರು ಕ್ರಿಯೆಗಳಿಂದ. ಮೊದಲನೆಯದು ಕಣ್ಣಂಚಿನ ವಿಲಾಸ. ಅದನ್ನು ನಯನಾಂತ-ವಿಜೃಂಭಿತವೆಂದಿದೆ. ಅದರ ಸೊಬಗನ್ನು ಹೆಚ್ಚಿಸಿರುವುದು ಅದರ ಪರ್ಯಾಕುಲತೆ ಅಥವಾ ಚಂಚಲತೆ.
ಎರಡನೆಯದು ಆತನ ಬಾಯಿ. ಅದರಲ್ಲಿ ದರ-ಸ್ಮಿತ ಅಥವಾ ಅರೆ-ನಗೆಯ ವಿಲಾಸವಿದೆ. ಸಂಸ್ಕೃತದಲ್ಲಿ ದರ ಎಂಬ ವಿಶೇಷಣಕ್ಕೆ ಸ್ವಲ್ಪ ಎಂಬರ್ಥ. ಮತ್ತು ಸ್ಮಿತದಲ್ಲಿ ಕೋಮಲತೆಯೂ ಇದೆ. ಮಾರ್ದವದ ಮೆರುಗು ಮುಖವನ್ನು ಮೋಹಕವಾಗಿಸಿದೆ.
ಮೂರನೆಯದು ಆತನ ಜಲ್ಪಿತಗಳು, ಎಂದರೆ ಸಹಜವಾಗಿ ಹೊಮ್ಮುವ ಸವಿನುಡಿಗಳು. ಅವು ಮಂದ್ರವೂ ಮಂಜುಲತರವೂ ಆಗಿವೆ. ಮಂದ್ರವೆಂದರೆ ಗಂಭೀರ, ಆಳ. ಮಂಜುಲವೆಂದರೆ ಮನೋಜ್ಞ. ಮಂಜುಲತರವೆಂದರೆ ಮತ್ತೂ ಮಂಜುಲ, ಅರ್ಥಾತ್ ಅತ್ಯಂತ-ಹೃದ್ಯ.
"ಹಂತ!" ಎಂದರೆ "ಆಹಾ!" ಎಂಬರ್ಥದ ಹರ್ಷದ ಉದ್ಗಾರ. ಲೀಲಾಶುಕನ ಹಾರ್ದವಾದ ಆಶಂಸನವಿದು. ಅಂತೂ ಕೃಷ್ಣನ ಯಾವ ಅಂಶ ಅಥವಾ ಕ್ರಿಯೆ ತಾನೆ ಸೊಗಯಿಸದು? ಆತನ ಅರೆನೋಟ, ಅರೆನಗೆ, ಇನಿನುಡಿ - ಒಂದೊಂದೂ ಮಾನಸವನ್ನು ತಣಿಸುವಂತಹುದೇ!
ಪರ್ಯಾಕುಲೇನ ನಯನಾಂತ-ವಿಜೃಂಭಿತೇನ /
ವಕ್ರೇಣ ಕೋಮಲ-ದರಸ್ಮಿತ-ವಿಭ್ರಮೇಣ |
ಮಂದ್ರೇಣ ಮಂಜುಲತರೇಣ ಚ ಜಲ್ಪಿತೇನ /
ನಂದಸ್ಯ ಹಂತ ತನಯೋ ಹೃದಯಂ ಧಿನೋತಿ ||