ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೫೧ - ಯಾವುದು ದಾನ ?
ಉ. ಯಾವುದರಿಂದ ಪ್ರತ್ಯುಪಕಾರವನ್ನು ಅಪೇಕ್ಷೆಪಡದಿರುವುದು.
ಪ್ರಕೃತ ಈ ಉತ್ತರದಲ್ಲಿ, 'ಯಾವ ದಾನವು ಅತ್ಯಂತ ಶ್ರೇಷ್ಠವಾಗುತ್ತದೆ' ಎಂಬ ವಿವರಣೆ ಇಲ್ಲಿದೆ. ಅಂದರೆ ದಾನವನ್ನು ಮಾಡಬೇಕು; ಆದರೆ ನಾವು ಯಾರಿಗೆ ದಾನವನ್ನು ಮಾಡುತ್ತೇವೆಯೋ, ಅವರಿಂದ ಯಾವುದೇ ಬಗೆಯ ಪ್ರತ್ಯುಪಕಾರವನ್ನು ಬಯಸಬಾರದು. ಬಯಸಿದರೆ ಅದು ದಾನವಾಗುವುದಿಲ್ಲ ಎಂಬ ಅರ್ಥ ಇಲ್ಲಿದೆ. ದಾನ ಮಾಡುವಾಗ ಯಾವ ಭಾವದಿಂದ ದಾನ ಮಾಡಬೇಕು ಎಂಬ ವಿಷಯ ಇಲ್ಲಿದೆ.
ವಸ್ತುತಃ ದಾನವನ್ನು 'ನ ಮಮ' ಎಂಬ ಬುದ್ಧಿಯಿಂದ ಮಾಡಬೇಕಾಗುತ್ತದೆ. ದಾನ ಮಾಡುವ ವಸ್ತುವು ದಾನ ಮಾಡುವ ಪೂರ್ವದಲ್ಲಿ ನಮ್ಮ ಸ್ವಾಮಿತ್ವವನ್ನು ಪಡೆದಿರುತ್ತದೆ. ಆ ವಸ್ತುವು ನಮ್ಮ ಪ್ರಾಮಾಣಿಕವಾದ ಧನಾರ್ಜನೆಯಿಂದ ಪಡೆದಿದ್ದಾಗಿರಬೇಕು. ಆಗ ಆ ಸ್ವತ್ತಿಗೆ ಅಥವಾ ಆ ಪದಾರ್ಥಕ್ಕೆ ನಾವು ಸ್ವಾಮಿಯಾಗುತ್ತೇವೆ. ಆಗ ಅದು ನಮ್ಮ ಪ್ರಯೋಜನಕ್ಕೆ ಬಳಸಲು ಅನುಕೂಲವಾಗುತ್ತದೆ. ಅದರ ಬಳಕೆಯಿಂದ ಶರೀರದ ಧಾತುಸಾಮ್ಯವನ್ನು ಉಂಟುಮಾಡುತ್ತದೆ. ಆ ಪದಾರ್ಥವನ್ನು ಮತ್ತೊಬ್ಬರಿಗೆ ದಾಟಿಸುವಾಗ ಅದರಲ್ಲಿರುವ ನಮ್ಮತನವನ್ನು ಪರಿಪೂರ್ಣವಾಗಿ ಕಳೆದುಕೊಳ್ಳಬೇಕು. ಆ ಪದಾರ್ಥದಿಂದ ಯಾವುದೇ ಬಗೆಯ ಪ್ರಯೋಜನವನ್ನು ಬಯಸಿರಬಾರದು. ಹಾಗೆ 'ಇದು ನನ್ನದಲ್ಲ' ಎಂಬ ಭಾವನೆಯಿಂದ ಮತ್ತೊಬ್ಬರಿಗೆ ದಾನವಾಗಿ ಕೊಡಬೇಕು. ಇದು 'ಅತ್ಯಂತ ಶ್ರೇಷ್ಠವಾದ ದಾನ' ಎಂಬುದಾಗಿ ಪರಿಗಣಿಸಲ್ಪಡುತ್ತದೆ. ಇದನ್ನೇ ಭಗವದ್ಗೀತೆಯಲ್ಲಿ ಹೀಗೆ ಹೇಳಲಾಗಿದೆ "ದಾತವ್ಯಮ್ ಇತಿ ಯದ್ದಾನಂ ದೀಯತೇ ಅನುಪಕಾರಣೇ। ದೇಶೇ ಕಾಲೇ ಚ ಪಾತ್ರೇ ಚ ತದ್ದಾನಂ ಸಾತ್ತ್ವಿಕಂ ಸ್ಮೃತಮ್" ಎಂಬುದಾಗಿ. ಅಂದರೆ 'ಕೊಡಬೇಕು' ಎಂಬ ಮನಸ್ಸನ್ನು ಮಾಡಿ, ಯಾರು ತಾನು ಮಾಡಿರುವ ದಾನಕ್ಕೆ ಪ್ರತ್ಯುಪಕಾರವನ್ನು ಮಾಡಲು ಸಾಧ್ಯವೇ ಇಲ್ಲ ಎಂಬುದನ್ನು ನಿಶ್ಚಯಿಸಿ, ಅಂತಹ ವ್ಯಕ್ತಿಯನ್ನು ಗುರುತಿಸಿ ದಾನವನ್ನು ಮಾಡಬೇಕು ಎಂಬುದಾಗಿ ಶ್ರೀಶಂಕರಭಗವತ್ಪಾದರು ಅವರ ಗೀತಾಭಾಷ್ಯದಲ್ಲಿ 'ಅನುಪಕಾರಿಣೇ' ಎಂಬ ಪದಕ್ಕೆ 'ಪ್ರತ್ಯುಪಕಾರ - ಅಸಮರ್ಥಾಯ, ಸಮರ್ಥಾಯ ಅಪಿ ನಿರಪೇಕ್ಷಿತಾಯ' ಎಂಬುದಾಗಿ ಅರ್ಥಮಾಡಿದ್ದಾರೆ. ಅಂದರೆ ಪ್ರತ್ಯುಪಕಾರಕ್ಕೆ ಸಮರ್ಥನಾಗಿದ್ದರು ಅಂತಹವನಲ್ಲೂ ನಿರಪೇಕ್ಷಿತನಾಗಿ ದಾನವನ್ನು ಮಾಡಬೇಕು. ಹಾಗೆ ಮಾಡಿದ ದಾನವು ಸಾತ್ತ್ವಿಕ ದಾನವಾಗುತ್ತದೆ ಎಂಬುದಾಗಿ ಹೇಳಲಾಗಿದೆ. ಈ ಬಗೆಯ ದಾನಕ್ಕೆ ಅತ್ಯಂತ ಮಹತ್ವವನ್ನು ನೀಡಲಾಗಿದೆ. ಏಕೆಂದರೆ ಪ್ರತ್ಯುಪಕಾರವನ್ನು ಬಯಸಿ ಅಥವಾ ಫಲವನ್ನು ಬಯಸಿ ಮಾಡುವ ದಾನವು 'ರಾಜಸದಾನ' ಎಂಬುದಾಗಿ ಹೇಳಲಾಗಿದೆ. ಸಾತ್ತ್ವಿಕ, ರಾಜಸಿಕ ಮತ್ತು ತಾಮಸಿಕ ಎಂಬ ಮೂರು ಬಗೆಯ ದಾನದಲ್ಲಿ ಸಾತ್ತ್ವಿಕದಾನವು ಶ್ರೇಷ್ಠವಾದದ್ದು ತಾನೆ! ಈ ಸಾತ್ತ್ವಿಕ ದಾನದಲ್ಲಿ ಅಪೇಕ್ಷೆ ಇಲ್ಲವಾಗಿದೆ. ಕೇವಲ ದಾನವನ್ನು ಮಾತ್ರ ಮಾಡುವ 'ಕರ್ಮ'ವಿದಾಗಿದೆ. ಆದ್ದರಿಂದ ಇದೊಂದು 'ನಿಷ್ಕಾಮಕರ್ಮ' ಎಂಬುದಾಗಿ ಹೇಳಬಹುದಾಗಿದೆ. ಇಂತಹ ದಾನವು ಪ್ರಶಂಸಿಸಲ್ಪಟ್ಟಿದೆ. ದಾನ ಎಂಬ ಶಬ್ದಕ್ಕೆ 'ಯಥಾಶಕ್ತಿ - ಸಂವಿಭಾಗಃ - ಸಾಧ್ಯವಾದಷ್ಟು ಪದಾರ್ಥಗಳ ಸಂಬಂಧವನ್ನು ಕಡಿದುಕೊಳ್ಳುವಿಕೆ ಎಂಬ ಅರ್ಥವನ್ನು ಗೀತಾಭಾಷ್ಯದಲ್ಲಿ ಶ್ರೀಶಂಕರ ಭಗವತ್ಪಾದರು ತಿಳಿಸಿದ್ದಾರೆ. ದ್ರವ್ಯತ್ಯಾಗವನ್ನು ಮಾಡಿದಷ್ಟು ನಾವು ಈ ಸಂಸಾರವೆಂಬ ಬಂಧನದಿಂದ ಬಿಡುಗಡೆ ಹೊಂದಲು ಸಾಧ್ಯವಲ್ಲವೇ! ಹೀಗಿದ್ದರೆ ಮಾತ್ರ ಅದು ಪರಿಪೂರ್ಣ ದಾನದ ಫಲವನ್ನು ಪಡೆಯುತ್ತದೆ ಎಂಬುದಾಗಿ ಈ ಉತ್ತರದ ಅರ್ಥವಾಗಿದೆ.
ಸೂಚನೆ : 1/2/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.