ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಅಷ್ಟಾಕ್ಷರದರ್ಶನದ ನೂರನೆಯ ಕಂತು ಇದು! ಎಂದೇ, ನೂರಾಯುಸ್ಸಿನ ಆಸೆಯನ್ನು ಕುರಿತೊಂದು ಜಿಜ್ಞಾಸೆ.
ನೀವೇನನ್ನು ಬಯಸುತ್ತೀರಿ? ಎಲ್ಲಕ್ಕಿಂತಲೂ ಮುಖ್ಯವಾದ ತಮ್ಮ ಆಸೆ ಯಾವುದು? - ಎಂದು ಹತ್ತು ಮಂದಿಯನ್ನು ಕೇಳಿದರೆ ಏನೇನು ಉತ್ತರಗಳು ಬರಬಹುದು? ಅದಿರಲಿ; ಎಲ್ಲರ ಪರವಾಗಿ ಎಲ್ಲರ ಉತ್ತರಗಳಿಗಿಂತ ಮುಖ್ಯವಾದ ಉತ್ತರಗಳನ್ನು ದಾಸರೇ ಕೊಟ್ಟುಬಿಟ್ಟಿದ್ದಾರೆನ್ನಬಹುದು.
ಬಹುಮಂದಿಗೆ ತೋರುವ ಉತ್ತರಗಳೇನು? ತುಂಬಾ ಸಂಪತ್ತಿರಬೇಕು, ವೈಭವದ ಜೀವನವಿರಬೇಕು, ಸುಖ-ಭೋಗಗಳ ಸೊಗಸಿರಬೇಕು, ಇತ್ಯಾದಿ. ಆದರೆ ಇನ್ನೂ ಮುಖ್ಯವಾದುದನ್ನೂ, ಯಾರೂ ಕಡೆಗಾಣಿಸಲಾಗದುದನ್ನೂ, ತಾಳಬದ್ಧವಾಗಿಯೂ ಪ್ರಾಸಬದ್ಧವಾಗಿಯೂ ಚಿಕ್ಕದಾಗಿಯೂ ಚೊಕ್ಕವಾಗಿಯೂ ಹೇಳಿದ್ದಾರೆ, ಕನಕದಾಸರು : "ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ!"
ಅದಕ್ಕೆ ಪ್ರತಿಯಾಗಿ ನಾವು, "ಏನು, ಹೊಟ್ಟೆ-ಬಟ್ಟೆಗಳಿಗಾಗಿಬಿಟ್ಟರಷ್ಟೆ ಸಾಕೆ?" ಎನ್ನಬಹುದು, ಸರಿಯೇ. ಆದರೆ ಅವರ ಮಾತನ್ನು ಕೇವಲ ವಾಚ್ಯಾರ್ಥದಲ್ಲಿ ತಿಳಿದುಕೊಳ್ಳುವುದಲ್ಲ; ಅದರ ತಾತ್ಪರ್ಯವನ್ನು ಹಿಡಿಯಬೇಕು. ಹೊಟ್ಟೆಯೆಂದರೆ ಹೊಟ್ಟೆ ಮಾತ್ರವಲ್ಲ; ಬಟ್ಟೆಯೆಂದರೆ ಬಟ್ಟೆ ಮಾತ್ರವಲ್ಲ. ಹೊಟ್ಟೆಯೆಂಬುದು ಬದುಕುಳಿದಿರುವುದನ್ನು ಸೂಚಿಸುತ್ತದೆ; ಬಟ್ಟೆಯೆಂಬುದು ಮಾನವನ್ನು ಸೂಚಿಸುತ್ತದೆ.
ಬದುಕಿರಬೇಕು, ಸರಿಯೇ. ಎಷ್ಟು ದಿನ ಬದುಕಿರಬೇಕು? ಮಾನವ ಜೀವಮಾನದಲ್ಲಿ ಸಾಧಿಸಬೇಕಾದ ಆ ಮಾನವಾವುದು? ಯಾರದ್ದಾದರೂ ಜೀವಮಾನವು ಚೆನ್ನಾಗಿ ಕಳೆಯಿತು - ಎಂದು ಹೇಳಲು ಮಾನದಂಡವಾವುದು? ಎಲ್ಲವೂ ಯುಕ್ತಪ್ರಶ್ನೆಗಳೇ ಅಲ್ಲವೇ?
ಎಷ್ಟೋ ಜನಕ್ಕೆ ಜೀವನವೇ 'ಬೋರ್' ಆಗುವುದಲ್ಲವೇ?: ಎಂದರೆ ನೀರಸ-ನಿರರ್ಥಕವಾಗಿ ತೋರಿ ಬೇಸರವನ್ನೇ ತರಿಸೀತಲ್ಲವೆ? ಯಾಕಾಗಿ ಬದುಕಿರಬೇಕೋ? - ಎನಿಸುವ ಪ್ರಸಂಗಗಳು ಯಾರ ಜೀವನದಲ್ಲಾದರೂ ಬಂದಾವೇ.
ಇದಲ್ಲದೆ, ನಮ್ಮ ದೇಶಕ್ಕೇ ವಿಶಿಷ್ಟವಾದ ಸಂಪ್ರದಾಯಗಳು ಕೆಲವಿವೆ. ಯಾರೇ ನಮಸ್ಕರಿಸಿದರೂ, ಹಿರಿಯರು ಮಾಡುವ/ತ್ತಿದ್ದ ಆಶೀರ್ವಾದವೇನು? ಆರೇ ಅಕ್ಷರಗಳ ನುಡಿ - ದೀರ್ಘಾಯುಷ್ಮಾನ್ ಭವ : "ಚಿರಕಾಲ ಬಾಳು!" ಹೆಂಗಸರಿಗೆ ಸಲ್ಲುವ ಆಶೀರ್ವಾದದಲ್ಲೂ ಈ ದೀರ್ಘಾಂಶವಿಲ್ಲದಿಲ್ಲ.
ಹಾಗಾದರೆ ಬಹುವರ್ಷ ಬದುಕಿರುವುದೇ ಹಿರಿದಾದುದೆಂದೇ? ಚಿರಕಾಲ ಬದುಕಿರುವವರೆಲ್ಲ ಮಹತ್ತಾದ ಸಾಧನೆಯನ್ನೇ ಮಾಡಿಬಿಡು/ಟ್ಟಿರುವರೇ? "ಹುಟ್ಟಿದ ಮೇಲೆ ಸಾಯೋ ತನಕ ಗಂಡಾಗುಂಡಿ" - ಎಂದಷ್ಟೇ ಜೀವನವಾದರೆ ಏನು ಬಂದಂತಾಯಿತು?
ಈ ಪ್ರಶ್ನೆಗಳಿಗೆ ನಮ್ಮ ಆರ್ಷ-ಪರಂಪರೆಯಲ್ಲಿ ಏನಾದರೂ ಉತ್ತರ ಸಿಗಬೇಕಲ್ಲವೇ? ಏಕೀ ಪ್ರಶ್ನೆ? ಜಗತ್ತಿನ ಎಷ್ಟೋ ನಾಗರಿಕತೆಗಳು ಅಲ್ಪಾಯುಗಳಾಗಿ ಹೇಳಹೆಸರಿಲ್ಲದಂತೆ ಹಳಸಿ ಅಳಿದುಹೋದವು. ಋಷಿನಿರ್ಮಿತ-ನಾಗರಿಕತೆಯೊಂದೇ ಸುದೀರ್ಘಕಾಲ ಸುಚೈತನ್ಯದಿಂದ ಸೊಗಯಿಸಿರುವುದು! ಚಿರ-ಸ್ಥಾಯಿಯಾದ ಈ ಸಂಸ್ಕೃತಿಯೇ ಚಿರ-ಜೀವಿತದ ಮರ್ಮವನ್ನೂ ಅರುಹುವುದು.
ಏತಕ್ಕಾಗಿ ಬಾಳಿದರೆ ಜೀವನವು ಸಾರ್ಥಕವಾದೀತು? ಹಾಗೂ ಅದಕ್ಕಾಗಿ ಅದೆಷ್ಟು ಕಾಲ ಬಾಳಬಯಸಬೇಕು – ಎಂಬೆರಡು ಪ್ರಶ್ನೆಗಳಿಗೂ ಒಂದೇ ಮಂತ್ರದಲ್ಲಿ ಉತ್ತರವನ್ನು ಕೊಟ್ಟಿದೆ, ಉಪನಿಷತ್ತುಗಳಲ್ಲಿ ಮೊದಲನೆಯದೂ ಚಿಕ್ಕದೂ ಆದ ಈಶಾವಾಸ್ಯೋಪನಿಷತ್ತು. ಅದರ ಎರಡನೆಯ ಮಂತ್ರದ ಎರಡನೆಯ ಪಾದವೇ "ಜಿಜೀವಿಷೇತ್ ಶತಂ ಸಮಾಃ"! "ನೂರು ವರ್ಷ ಬದುಕಬಯಸಬೇಕು" – ಎಂದು.
ಎಂದೇ, ಯಾವುದೇ ಕಾರಣಕ್ಕೂ ಜೀವನವನ್ನು ಮೊಟಕುಗೊಳಿಸಲು ಪ್ರಯತ್ನಿಸುವುದಿರಲಿ, ಬಯಸಲೂಬಾರದು - ಎಂಬ ಸಂದೇಶವಿಲ್ಲಿದೆ! ಅರ್ಥಾತ್, ಆತ್ಮಹತ್ಯೆಗೆ ಶಾಸ್ತ್ರಗಳಲ್ಲಿ ಅನುಮತಿಯಿಲ್ಲವೇ ಇಲ್ಲ. ಆತ್ಮಹತ್ಯೆ ಮಾಡಿಕೊಂಡವರು ಅಂಧಂತಮಸ್ಸಿನಲ್ಲಿ ನರಳುವರು – ಎಂದೂ ಎಚ್ಚರಿಸಿದೆ, ಅಲ್ಲೇ!
"ಶತಾಯುರ್ವೈ ಪುರುಷಃ" ಎನ್ನುವರಲ್ಲವೇ? ಪೂರ್ಣಾಯುಸ್ಸೆಂದರೆ ಅದೇ: ಪೂರ್ತಿ ನೂರು ವರ್ಷಗಳು ಬಾಳುವುದೇ ಆದರ್ಶ, ಅಪೇಕ್ಷ್ಯ. ಕರ್ಮಗಳನ್ನು ಮಾಡುತ್ತಲೇ ಶತಾಯುಷಿಗಳಾಗಿ ಬಾಳಬೇಕೆಂಬುದನ್ನೂ ಇದೇ ಮಂತ್ರದಲ್ಲೇ ಹೇಳಿದೆ.
ಇದರಲ್ಲೇನಿದೆ ವಿಶೇಷ? ಏನೂ ಮಾಡದೆ ಸುಮ್ಮನಿದ್ದುಬಿಡಲು ಯಾರಿಂದಲಾದರೂ ಸಾಧ್ಯವೇ? - ಒಂದು ಕ್ಷಣವಾದರೂ? - ಎಂದು ಗೀತೆಯೇ ಕೇಳುವುದಲ್ಲವೇ? ಹಾಗಿರುವಾಗ, "ಕರ್ಮಗಳನ್ನು ಮಾಡುತ್ತಲೇ" - ಎಂದು ಹೇಳುವುದರಲ್ಲಿ ವಿಶೇಷವೇನಿದೆ?
ಇದೆ. "ಯೋಗೀ ಭವ" ಎಂಬುದೇ ಅರ್ಜುನನಿಗೆ ಕೃಷ್ಣನು ಹೇಳಿದ ಮಾತು: ಯೋಗಿಗಳೇ ಆದರ್ಶ-ಪುರುಷರು. ಯೋಗಿಯಾದರೇನು ಕರ್ಮವು ಬೇಡವೆಂದೇ? "ಯೋಗಿಗಳೂ ಕರ್ಮ ಮಾಡತಕ್ಕವರೇ" ಎನ್ನುತ್ತಾನೆ, ಕೃಷ್ಣ. ಹೇಗೆ? ಅಂಟಿಸಿಕೊಳ್ಳದೆ ಆತ್ಮಶುದ್ಧಿಗಾಗಿ ಅದನ್ನು ಮಾಡುತ್ತಾರೆ, ಅವರು. ಕರ್ಮಫಲಕ್ಕಂಟಿಕೊಳ್ಳದೆ, ಮನೋಬುದ್ಧಿಗಳನ್ನು ಭಗವಂತನಿಗರ್ಪಿಸಿ, ವಿಹಿತಕರ್ಮಗಳನ್ನಾಚರಿಸುತ್ತಾರೆ.
ಹಾಗೆ ಮಾಡಿದರೇ ಜೀವನವು ಸಾರ್ಥಕವೆನಿಸುವುದು. ಶ್ರೀರಂಗಮಹಾಗುರುಗಳು ಎಚ್ಚರಿಸುವಂತೆ, "ಸತ್ತು ಹೋಗುವುದಕ್ಕಿಂತ ಮುಂಚೆಯೇ, ಇಲ್ಲಿಯೇ, ಜೀವಂತವಾಗಿ ಮುಕ್ತರಾಗಬೇಕು!" ಗೀತೆಯೂ "ಇಹೈವ", "ಇಲ್ಲಿಯೇ" – ಎನ್ನುತ್ತದಲ್ಲವೇ? ಸತ್ಕರ್ಮದಿಂದಲೇ ಸಂಸಿದ್ಧಿಯನ್ನು ಸಂಪಾದಿಸಿದ ಜನಕ-ಮಹರ್ಷಿಯ ಆದರ್ಶವನ್ನು ಗೀತೋಪನಿಷತ್ತುಗಳು ಎತ್ತಿಹಿಡಿದಿರುವುವಲ್ಲವೇ?
ಜೀವನವನ್ನು ಸಂಪನ್ನಗೊಳಿಸಿಕೊಳ್ಳಲು ಸನ್ಮಾರ್ಗ-ದರ್ಶನ ಹಾಗೂ ತದನುಸಾರವಾದ ಸುದೀರ್ಘ-ಸಾಧನೆಗಳು ಸರ್ವಥಾ ಸಂಪಾದ್ಯವಲ್ಲವೇ? ಅವೆಲ್ಲಕ್ಕಾಗಿಯೇ - ಜೀವಿತದ ಸಫಲತೆ-ಸುಫಲತೆಗಳಿಗೋಸ್ಕರವಾಗಿಯೇ - ಶತಾಯುಸ್ಸಿಗಾಗಿ ಹಂಬಲಿಸ(ಲೇ)ಬೇಕಲ್ಲವೇ? ನೂರ್ಕಾಲ ಬಾಳೋಣ!