ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
"ಅರ್ಚಿಸುವವರಿಗೆ ಒಳ್ಳೆಯದನ್ನೇ ಮಾಡುವ ಗೃಹದೇವಿಯಾಗಿಯೇ ಸೃಷ್ಟಿಸಲ್ಪಟ್ಟ ಜರಾ ಎಂಬ ಹೆಸರಿನ ರಾಕ್ಷಸಿ, ನಾನು" – ಎಂದು ತನ್ನ ಪರಿಚಯವನ್ನು ಹೇಳಿಕೊಂಡ ಆ ರಾಕ್ಷಸಿಯು, ತನ್ನ ಮಾತನ್ನು ಮುಂದುವರಿಸಿ ರಾಜನಿಗೆ ಹೀಗೆ ಹೇಳಿದಳು:
"ಧಾರ್ಮಿಕನೇ, ನಿನ್ನ ಪುತ್ರನ ಎರಡು ಶಕಲಗಳನ್ನು, ಎಂದರೆ ಎರಡು ತುಂಡುಗಳನ್ನು, ನಾನು ಕಂಡೆನಯ್ಯಾ! ಅವೆರಡನ್ನೂ ಸೇರಿಸಿಬಿಟ್ಟೆ! ಅದೃಷ್ಟವಶಾತ್ ಅದೊಂದು ಕುಮಾರನಾಯಿತು! ಅದೆಲ್ಲಾ ನಿನ್ನ ಭಾಗ್ಯದಿಂದಲೇ ಆದುದು, ಮಹಾರಾಜ. ನಾನು ಕೇವಲ ನಿಮಿತ್ತ-ಮಾತ್ರವಷ್ಟೆ.
ನೋಡು, ಮೇರು-ಪರ್ವತವನ್ನೇ ತಿಂದುಬಿಡಲು ಸಾಮರ್ಥ್ಯವುಳ್ಳವಳು, ನಾನು! ಹಾಗಿರಲು, ನಿನ್ನ ಮಗುವನ್ನು ತಿಂದುಬಿಡಲಾರೆನೇ? ನೀ ಮಾಡುತ್ತಿರುವ ಗೃಹ-ಸಂಪೂಜನದಿಂದ ಆದ ತುಷ್ಟಿಯಿಂದಲೇ, ಎಂದರೆ ಸಂತೋಷದಿಂದಲೇ, ನಿನಗೇ ಒಪ್ಪಿಸಿಹೋಗುತ್ತಿದ್ದೇನೆ, ಈ ಶಿಶುವನ್ನು. ತೆಗೆದುಕೋ, ಸಾಕಿಕೋ" – ಎಂದಳು.
ಇದನ್ನೆಲ್ಲಾ ಹೇಳುತ್ತಾ ಕೃಷ್ಣನು ತನ್ನ ಮಾತನ್ನು ಮುಂದುವರೆಸಿದನು. "ಯುಧಿಷ್ಠಿರಾ, ಮುಂದೇನಾಯಿತು ಗೊತ್ತೇ? ಹೀಗೆ ಹೇಳಿದವಳೇ, ಅವಳು ಅಲ್ಲಿಯೇ ಅಂತರ್ಧಾನ ಹೊಂದಿದಳು! ಮತ್ತು ಆ ರಾಜನೂ ಆ ಶಿಶುವನ್ನು ತೆಗೆದುಕೊಂಡು ತನ್ನ ಅರಮನೆಯನ್ನು ಹೊಕ್ಕನು.
ಬಳಿಕ, ಆ ಬಾಲಕನಿಗೆ ಯಾವ ಕರ್ಮಗಳನ್ನು ನೆರವೇರಿಸಬೇಕೋ ಅವೆಲ್ಲವನ್ನೂ ಆಚರಿಸಿದನು. ಅಷ್ಟೇ ಅಲ್ಲದೆ, ಮಗಧ-ರಾಜ್ಯದಲ್ಲಿ ಆ ರಾಕ್ಷಸಿಯ ಮಹೋತ್ಸವವನ್ನು ಆಚರಿಸಬೇಕೆಂಬ ಆಜ್ಞೆಯನ್ನೂ ಸಹ ಮಾಡಿದನು.
ಪಿತಾಮಹನಿಗೆ ಸಮನಾದ, ಎಂದರೆ ಬ್ರಹ್ಮನಿಗೆ ಸಮನಾದ, ಈ ತಂದೆಯೂ, ಅರ್ಥಾತ್ ಬೃಹದ್ರಥನೂ, ನಾಮಕರಣವನ್ನು ನೆರವೇರಿಸಿದನು: "ಜರೆಯೆಂಬ ಹೆಸರಿನವಳಿಂದ ಈ ಶಿಶುವು ಸಂಧಿಸಲ್ಪಟ್ಟದ್ದಾದ್ದರಿಂದ, ಎಂದರೆ ಜೋಡಿಸಲ್ಪಟ್ಟವನಾದ್ದರಿಂದ, ಈತನ ಹೆಸರು ಜರಾಸಂಧನೆಂದಾಗುತ್ತದೆ" - ಎಂದನು.
ಬಳಿಕ ಮಗಧ-ರಾಜನ ಆ ಪುತ್ರನು ಮಹಾ-ತೇಜಸ್ವಿಯಾಗಿ ಬೆಳೆಯಹತ್ತಿದನು. ಅವನ ಆ ಆಕಾರವೇನು, ಆ ಬಲವೇನು! ಆಹುತಿಯನ್ನು ಸಮರ್ಪಿಸಿದ ಅಗ್ನಿಯು ಹೇಗೆ ಹೆಚ್ಚು ಹೆಚ್ಚಾಗಿ ಜ್ವಲಿಸುವುದೋ ಹಾಗೆ ಬೆಳೆದನು, ಅವನು. ತಂದೆ-ತಾಯಿಗಳಿಗೆ ಅಧಿಕ-ಸಂತೋಷವನ್ನುಂಟುಮಾಡುತ್ತಾ, ಶುಕ್ಲ-ಪಕ್ಷದಲ್ಲಿ ಚಂದ್ರನು ಹೇಗೆ ಬೆಳೆಯುವನೋ ಹಾಗೆ ಬೆಳೆದನು.
ಕೆಲ ಕಾಲ ಕಳೆಯಿತು. ಮಹಾ-ತಪಸ್ವಿಯೂ ಪೂಜ್ಯನೂ ಆದ ಚಂಡಕೌಶಿಕ-ಮುನಿಯು ಮತ್ತೆ ಮಗಧ-ದೇಶದಲ್ಲಿ ಸಂಚರಿಸುತ್ತಾ ಬಂದನು. ಆತನ ಆಗಮನದಿಂದ ಬೃಹದ್ರಥನು ಸಂತೋಷಗೊಂಡನು. ಅಮಾತ್ಯ-ಪುರೋಹಿತರೊಂದಿಗೂ ಪತ್ನೀ-ಪುತ್ರರೊಂದಿಗೂ ಆ ಮುನಿಯನ್ನು ಕಾಣಲು ಬಂದನು. ಪಾದ್ಯ-ಅರ್ಘ್ಯ-ಆಚಮನೀಯಗಳನ್ನಿತ್ತು ಆದರಿಸಿದನು. ತನ್ನ ರಾಜ್ಯವನ್ನು ಆ ಮುನಿಗೆ ಸಮರ್ಪಣೆ ಮಾಡಿದನು. ರಾಜ್ಯದೊಂದಿಗೆ ತನ್ನ ಪುತ್ರನನ್ನೂ ಸಮರ್ಪಿಸಿದನು.
ಪೂಜ್ಯನಾದ ಆ ಋಷಿಯೂ ರಾಜನು ಮಾಡಿದ ಆ ಪೂಜೆಯನ್ನು ಸ್ವೀಕರಿಸಿದನು. ಹಾಗೂ ಬಹಳ ಸಂತೋಷಗೊಂಡ ಅಂತಃಕರಣವುಳ್ಳವನಾಗಿ, ಆ ಮಾಗಧರಾಜನಿಗೆ ಹೀಗೆ ಹೇಳಿದನು:
"ರಾಜನೇ, ನನ್ನ ದಿವ್ಯ-ಚಕ್ಷುಸ್ಸಿಗೆ, ಎಂದರೆ ಜ್ಞಾನ-ನೇತ್ರಕ್ಕೆ, ಇದೆಲ್ಲವೂ ಗೋಚರವಾಗಿಯೇ ಇದೆ! ನಿನ್ನ ಪುತ್ರನು ಎಂತಹವನಾಗುವನು? – ಎಂಬುದನ್ನು ಕೇಳು, ರಾಜನೇ. ಈತನ ರೂಪವೆಂತಹುದು, ಸತ್ತ್ವವೆಂತಹುದು, ಬಲವೆಂತಹುದು, ಊರ್ಜೆಯೆಂತಹುದು – ಎಲ್ಲವನ್ನೂ ನಾ ಬಲ್ಲೆ. ಈ ನಿನ್ನ ಮಗನು ಸಂಪತ್ತಿನೊಂದಿಗೇ ಜನಿಸಿರುವನು. ಇದರಲ್ಲಿ ಸಂಶಯವಿಲ್ಲ. ತನ್ನ ಪರಾಕ್ರಮದಿಂದ ಎಲ್ಲವನ್ನೂ ಸಾಧಿಸುವನು. ವೀರ್ಯಶಾಲಿಯಾದ ಈತನಿಗೆ ಮತ್ತಾವ ರಾಜರೂ ಸಾಟಿಯಾಗರು! ಹಾರುತ್ತಿರುವ ಗರುಡನಿಗೆ ಮತ್ತಾವ ಪಕ್ಷಿಗಳೂ ಸರಿಸಮವಾಗವು, ಅಲ್ಲವೇ? ಇವನ ಶತ್ರುಗಳು ವಿನಾಶವನ್ನೇ ಹೊಂದುವರು! – ಎಂದನು.
ಸೂಚನೆ : 8/2/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.