Monday, February 16, 2026

ಪ್ರಶ್ನೋತ್ತರ ರತ್ನಮಾಲಿಕೆ 53 (Prasnottara Ratnamalike 53)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ - ೫೩ - ಅಲಂಕಾರ ಯಾವುದು ?

ಉ. ಶೀಲ

ಪ್ರಕೃತಪ್ರಶ್ನೋತ್ತರದಲ್ಲಿ ಎರಡು ವಿಷಯದ ಬಗ್ಗೆ ಚಿಂತಿಸಬೇಕಾಗಿದೆ. ಅಲಂಕಾರ ಎಂದರೇನು? ಮತ್ತು ಶೀಲವು ಹೇಗೆ ಅಲಂಕಾರವಾಗುತ್ತದೆ? ಎಂಬುದಾಗಿ. ದೇವರನ್ನು ಅಲಂಕರಿಸುತ್ತೇವೆ, ನಾವು ಅಲಂಕಾರ ಮಾಡಿಕೊಳ್ಳುತ್ತೇವೆ, ಕಾವ್ಯದಲ್ಲಿ ಉಪಮಾಲಂಕಾರ ಎಂದು ಕೇಳುತ್ತೇವೆ. ಈ ಅಲಂಕಾರದ ಅರ್ಥವೇನು? ದೇವರೆಂದರೆ ಮೊದಲೇ ಕಾಂತಿಯಿಂದ ಕೂಡಿದವನು. ಅಲಂಕಾರದಿಂದ ದೇವರು ಇನ್ನಷ್ಟು ನೋಡಲು ಆಕರ್ಷಕನಾಗಿ ಕಾಣುತ್ತಾನೆ. ನಾವು ಚೆನ್ನಾಗಿ ಕಾಣಬೇಕೆಂದು ಅಲಂಕರಿಸಿಕೊಳ್ಳುತ್ತೇವೆ. ಅಂತೆಯೇ ಕಾವ್ಯದಲ್ಲಿ ಬರುವ ಶಬ್ದಾಲಂಕಾರವೋ ಅಥವಾ ಅರ್ಥಾಲಂಕಾರವೋ ಕಾವ್ಯವನ್ನು ಇನ್ನಷ್ಟು ಸೊಬಗಾಗಿ ಮಾಡುತ್ತದೆ, ಶೋಭಿಸುವಂತೆ ಮಾಡುತ್ತದೆ. 'ಕಾವ್ಯಶೋಭಾಕರಾನ್ ಧರ್ಮಾನ್ ಅಲಂಕಾರಾನ್ ಪ್ರಚಕ್ಷತೇ' ಎಂಬುದಾಗಿ ಹೇಳಲಾಗಿದೆ. ಅಲಂಕಾರ- ಅಲಂ- ಸಾಕು, ಪರ್ಯಾಪ್ತಿ ಎಂಬ ಅರ್ಥ. ಯಾವುದನ್ನು ಮಾಡಿದರೆ 'ಇನ್ನೂ ಮಾಡಬೇಕು' ಎಂಬುದಾಗಿ ಇಲ್ಲವೋ, ಮಾಡಬೇಕಾದ ಕಾರ್ಯವು ಯಾವಾಗ ಪರಿಸಮಾಪ್ತಿಯನ್ನು ಪಡೆಯುತ್ತದೆಯೋ, ಅಥವಾ ಮೂಲ ಉದ್ದೇಶವನ್ನು ಈಡೇರಿಸುವಂತೆ ಇರುತ್ತದೆಯೋ, ಆ ವಸ್ತುವಿನ ಸಹಜವಾದ ಸ್ವಭಾವವು ಇನ್ನಷ್ಟು ಶೋಭಿಸುವಂತೆ ಇರುತ್ತದೆಯೋ ಅಂತಹ ಕಾರ್ಯವನ್ನು 'ಅಲಂಕಾರ' ಎಂಬುದಾಗಿ ಕರೆಯಲಾಗುತ್ತದೆ.

ಪ್ರಸ್ತುತ 'ಶೀಲ' ಎಂಬುದನ್ನು ಅಲಂಕಾರ ಎಂಬುದಾಗಿ ಉತ್ತರಿಸಲಾಗಿದೆ. ಅಂದರೆ ಶೀಲವು ಹೇಗೆ ಅಲಂಕಾರವಾಗುತ್ತದ? ಹಾಗಾದರೆ ಇದೊಂದು ಅಲಂಕಾರಕ್ಕೆ ಬೇಕಾದ ಆಭರಣವೋ? ಒಂದು ಹಾರವನ್ನೋ, ನೂಪುರವನ್ನೋ ಧರಿಸಿದರೆ ಹೇಗೆ ವ್ಯಕ್ತಿ ಸುಂದರವಾಗಿ ಕಾಣುತ್ತಾನೋ, ಅಂತೆಯೇ ಈ ಶೀಲವೆಂಬುದು ಒಂದು ಆಭರಣವೇ? ಅದೊಂದು ಪದಾರ್ಥವೇ? ಹೌದು. ಅದೊಂದು ವ್ಯಕ್ತಿಯ ಅಂತಃಕರಣದ ಆಭರಣ. ಈ ಆಭರಣವು ಅವನನ್ನು ಶೋಭಿಸುವಂತೆ ಮಾಡುತ್ತದೆ. ಅವನು ಮಾನ್ಯನಾಗುತ್ತಾನೆ. ಎಲ್ಲರಿಂದ ಆಕರ್ಷಿತನಾಗುತ್ತಾನೆ. ಹಾಗಾಗಿ 'ಶೀಲಂ ಸರ್ವಸ್ಯ ಭೂಷಣಂ' ಎಂಬುದಾಗಿ ಒಂದು ಸುಭಾಷಿತ ಶೀಲದ ಮಹತ್ವವನ್ನು ಸಾರುತ್ತದೆ; ಎಲ್ಲಕ್ಕಿಂತಲೂ ಶೀಲವೇ ಉತ್ತಮವಾದ ಆಭರಣ ಎಂಬುದಾಗಿ. ಹಾಗಾದರೆ ಶೀಲ ಎಂದರೇನು? ವ್ಯಕ್ತಿಯಲ್ಲಿ ಸ್ವಭಾವ ಮತ್ತು ಶೀಲಾ ಎಂಬುದಾಗಿ ಎರಡು ರೀತಿಯ ಲಕ್ಷಣವನ್ನು ಕಾಣಬಹುದು. ಯಾವುದು ಜನ್ಮತಃ ಬಂದಿರುತ್ತದೆಯೋ, ಸ್ವ -ಆತ್ಮ, ತನ್ನ ಜೊತೆಯಲ್ಲಿ ಯಾವುದು, ಭಾವ -ಇರುವುದು, ಅದು ಸ್ವಭಾವವಾಗುತ್ತದೆ. ಶೀಲಾ ಎಂಬುದು ಅವನ ಹುಟ್ಟಿನ ಅನಂತರದಲ್ಲಿ ಬದಲಿಸಬಹುದಾದ ಒಂದು ವಿಶೇಷ ಗುಣ. ಅದನ್ನು 'ಶೀಲ' ಎಂಬುದಾಗಿ ಕರೆದಿದ್ದಾರೆ. ಶೀಲವು ಹದಿಮೂರು ಬಗೆ ಎಂಬುದನ್ನು ಹಾರಿತ ಸ್ಮೃತಿಯು ಹೇಳುತ್ತದೆ. ೧.ಬ್ರಹ್ಮಣ್ಯತಾ- ಎಲ್ಲೆಡೆ ಬ್ರಹ್ಮಭಾವವನ್ನು ಕಾಣುವುದು. ೨.ದೇವಪಿತೃ ಭಕ್ತಿತಾ, ೩,ಸೌಮ್ಯತಾ -ಸೌಮ್ಯವಾದ ನಡೆ, ೪.ಅಪರೋಪತಾಪಿತಾ - ಬೇರೆಯವರಿಗೆ ತೊಂದರೆ ಕೊಡದಿರುವುದು, ೫.ಅನಸೂಯತಾ - ಹೊಟ್ಟೆಕಿಚ್ಚು ಇಲ್ಲದಿರುವುದು, ೬.ಮೃದುತಾ - ಮೃದುಸ್ವಭಾವ, ೭.ಅಪಾರುಷ್ಯ - ಕಠಿಣಹೃದಯಿಯಾಗದಿರುವುದು, ೮.ಮೈತ್ರತಾ -ಎಲ್ಲರಲ್ಲೂ ಮಿತ್ರಭಾವದಿಂದ ಇರುವುದು, ೯.ಪ್ರಿಯವಾದಿತ್ವ - ಪ್ರಿಯವೂ ಹಿತವಾಗುವಂತೆ ಮಾತನಾಡುವುದು ೧೦.ಕೃತಜ್ಞತಾ - ಮಾಡಿದ ಉಪಕಾರದ ಸ್ಮರಣೆ, ೧೧.ಶರಣ್ಯತಾ - ನಮಗಿಂತಲೂ ದೊಡ್ಡ ವಿಷಯಕ್ಕೆ ಮಣಿಯುವುದು, ೧೨.ಕಾರುಣ್ಯ - ದಯೆ, ೧೩.ಪ್ರಶಾಂತಿ - ನೆಮ್ಮದಿ ಎಂಬುದಾಗಿ. ಇಂತಹ ಶೀಲವೆಂಬ ವಿಶಿಷ್ಟವಾದ ಗುಣಗಳಿಂದ ಕೂಡಿದ ವ್ಯಕ್ತಿಯು ಎಲ್ಲೆಡೆ ಆಕರ್ಷಿತನಾಗುತ್ತಾನೆ, ಕಾರಣ ಶೋಭಿಸುತ್ತಾನೆ. ಅವನನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ. ಆದ್ದರಿಂದ ಅವನು ಜಗನ್ಮಾನ್ಯನಾಗುತ್ತಾನೆ. ಹಾಗಾಗಿ 'ಶೀಲ'ವನ್ನು 'ಅಲಂಕಾರ' ಎಂಬುದಾಗಿ ವಿವರಿಸಲಾಗಿದೆ.

ಸೂಚನೆ : 15/2/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.