ಒಂದೇ ಪರತತ್ತ್ವವು ಮೂರಾಗಿ ತನ್ನನ್ನು ವಿಭಜಿಸಿಕೊಂಡು ಬ್ರಹ್ಮ-ವಿಷ್ಣು-ಮಹೇಶ್ವರರಾಯಿತು. ಈ ತ್ರಿಮೂರ್ತಿಗಳಲ್ಲಿ ಒಂದೊಂದು ಸಂದರ್ಭದಲ್ಲಿ ಒಬ್ಬೊಬ್ಬರಿಗೆ ಪ್ರಾಧಾನ್ಯ ಬರುವ ವಿಷಯವನ್ನು ಕಾಳಿದಾಸನು ತನ್ನ "ಕುಮಾರಸಂಭವ" ಮಹಾಕಾವ್ಯದಲ್ಲಿ ಹೇಳಿರುವನು. ಬ್ರಹ್ಮ-ವಿಷ್ಣುಗಳು ಶಿವನನ್ನು ಅರುಣಾಚಲದಲ್ಲಿ ಪೂಜಿಸಿದ ದಿನವೇ ಈ ಮಹಾಶಿವರಾತ್ರಿ. ಇಂದಿನ ರಾತ್ರಿ ಜಾಗರಣೆ ಮಾಡಿ ಶಿವನನ್ನು ಹೃತ್ಪೂರ್ವಕವಾಗಿ ಪೂಜಿಸುವವರಿಗೆ ಇಡೀ ವರ್ಷ ಶಿವಪೂಜೆ ಮಾಡಿದ ಫಲವು ದೊರೆಯುವುದೆಂದು ಮಹಾಶಿವನೇ ವರ ಕೊಟ್ಟಿದ್ದಾನೆಂದಿದೆ.
ಭಾರತೀಯರ ಮಹಾಪರ್ವಗಳಲ್ಲಿ ಒಂದಾದ ಮಹಾಶಿವರಾತ್ರಿಯನ್ನು ಮಾಘ ಕೃಷ್ಣಚತುರ್ದಶಿಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ, ದೇವತಾಸಂಬಂಧಿಯಾದ ಪೂಜಾದಿಗಳು ರಾತ್ರಿಯ ಹೊತ್ತು ನಿಷಿದ್ಧವಾಗಿದ್ದರೂ, ಶಿವರಾತ್ರಿ ಮಾತ್ರ ರಾತ್ರಿಯೇ ಆಚರಿಸಲ್ಪಡುವಂತಹುದು - ಎಂಬುದು ವಿಶೇಷ.
ಬೇರೆ ಬೇರೆ ವಿಶೇಷ ಹಬ್ಬಗಳಲ್ಲಿ ಆಯಾ ದೇವತೆಗಳಿಗೆ ಪ್ರಿಯವಾದ ತಿಂಡಿ ತಿನಿಸುಗಳನ್ನು ನೈವೇದ್ಯ ಮಾಡಿ ನಾವುಗಳು ಅವನ್ನು ಸ್ವೀಕರಿಸುವುದಾಗುತ್ತದೆ. ಆದರೆ ಶಿವರಾತ್ರಿಯಾದರೋ - ಏಕಾದಶಿಯಂತೆ - ಉಪವಾಸದ ಹಬ್ಬ. ಉಪವಾಸ-ಜಾಗರಣೆ – ಈ ಎರಡು ಶಿವರಾತ್ರಿಯನ್ನು ಶಿವಮಯವಾಗಿಸುವ ಸಾಧನಗಳು.
ಹಬ್ಬವೋ ವ್ರತವೋ?
"ಶಾಸ್ತ್ರೋದಿತೋ ಹಿ ನಿಯಮೋ ವ್ರತಂ ತಚ್ಚ ತಪೋ ಮತಮ್" – ಎಂಬುದು ವ್ರತದ ಶಾಸ್ತ್ರೀಯವಾದ ಲಕ್ಷಣ. ವ್ರತವೆಂಬುದು ನಿಯಮಬದ್ಧವಾಗಿಯೂ ತಪೋರೂಪವಾಗಿಯೂ ಆಗಿದ್ದು, ನಮ್ಮನ್ನು ಪಾವನಗೊಳಿಸುತ್ತವೆ. ಹಬ್ಬಗಳಿಗೂ ನಿಯಮಗಳು ಅನ್ವಯವಾಗುತ್ತವಾದರೂ, ವ್ರತದಲ್ಲಿ ಉಪವಾಸ, ಕ್ರಿಯಾಕಲಾಪಗಳು, ನಿಯಮಗಳು ಹೆಚ್ಚಾಗಿರುತ್ತವೆ. ಶಿವರಾತ್ರಿಯಲ್ಲಿ ಉಪವಾಸ-ಜಾಗರಣೆ-ಪೂಜಾಧ್ಯಾನಾದಿಗಳು ಬಹು ಮುಖ್ಯವಾದ್ದರಿಂದ, ಇದೊಂದು ವ್ರತವೇ ಸರಿ. "ವ್ರತರಾಜ" ಎಂದೂ ಇದಕ್ಕೆ ಹೆಸರು.
ಶಿವರಾತ್ರಿಯ ಮಾಹಾತ್ಮ್ಯವನ್ನು ಹೇಳುವ ಪ್ರಸಿದ್ಧಕಥೆಯೆಂದರೆ ಬೇಡರ ಕಣ್ಣಪ್ಪನದು. ಶಿವರಾತ್ರಿಯಂದು ತಿಳಿದೋ ತಿಳಿಯದೆಯೋ ಶಿವನಿಗೆ ಬಿಲ್ವಪತ್ರವನ್ನರ್ಪಿಸುವುದು, ಜಲಾಭಿಷೇಕ ಮಾಡುವುದು, ಜಾಗರಣೆ ಮಾಡುವುದು – ಇವೆಲ್ಲ ಆದಲ್ಲಿ ಅದಕ್ಕೆ ಮಹಾಫಲವುಂಟು, ಎಂದು ಈ ಸನ್ನಿವೇಶದಲ್ಲಿ ವರ್ಣಿಸಿದೆ. ಶಂಕರಭಗವತ್ಪಾದರ ಶಿವಾನಂದಲಹರಿಯಲ್ಲಿರುವ "ಮಾರ್ಗಾವರ್ತಿತ-ಪಾದುಕಾ" ಎಂಬ ಶ್ಲೋಕವು ಇದನ್ನು ಬಣ್ಣಿಸುತ್ತದೆ: ಹಾದಿಯಲ್ಲಿ ನಡೆದು ನಡೆದು ಸವೆದ ಪಾದುಕೆಯೇ ಶಿವನ ದೇಹದ ಕೂರ್ಚ(ಎಂದರೆ ಒರೆಸಲು ಬಳಸುವ ಒಂದು ಸಾಧನ)ವಾಯಿತು! ಬಾಯಿಮುಕ್ಕಳಿಸಿದ ನೀರು ಪಶುಪತಿಯ ಅಭಿಷೇಕಜಲವಾಯಿತು! ಕೊಂಚ ಜಗಿದ ಮಾಂಸದ ತುತ್ತೇ ನಿವೇದನವಾಗಿಹೋಯಿತು! ಭಕ್ತಿಯೆಂಬುದು ಬಲವಾಗಿದ್ದರೆ, ವನಚರನೂ ಭಕ್ತೋತ್ತಮನಾಗಿಬಿಡುವನು! – ಎಂಬುದು ಈ ಶ್ಲೋಕದ ತಾತ್ಪರ್ಯ.
ಇಂತಹ ಪರಮಭಾಗವತರ ಕಥೆಯನ್ನು ಕೇಳಿಕೊಂಡು, "ಶಾಸ್ತ್ರವಿಹಿತವಾದ ಆಚರಣೆಗಳನ್ನು ಮಾಡದಿದ್ದರೂ ಆಯಿತು" - ಎಂದು ನಾವು ಎಣಿಸಬಾರದು! ಭಕ್ತೋತ್ತಮರಲ್ಲಿ ಗೂಢವಾಗಿ ಕೂಡಿಟ್ಟಿರುವ ಗಾಢವಾದ ತಪೋಧನಕ್ಕೆ ಒಂದು ಸಣ್ಣ ಪ್ರೇರಣೆ ಸಾಕು, ಅವರನ್ನು ಆಧ್ಯಾತ್ಮಿಕ ಔನ್ನತ್ಯಕ್ಕೆ ಕರೆದೊಯ್ಯಲು! ಆದರೆ ನಮ್ಮಂತಹ ಸಾಧಾರಣರಿಗೆ ಕಟ್ಟುಕಟ್ಟಳೆಗಳೂ ಸಾಧನೆಯೂ ಅವಶ್ಯ.
ಶಿವರಾತ್ರಿಯಂದು ನಾವು ಏನೇನು ಮಾಡಬೇಕು?
ಎಷ್ಟೇ ಆಗಲಿ, ಶಿವನು ಯೋಗಿರಾಜ, ಧ್ಯಾನಪ್ರಿಯ. ಆದುದರಿಂದಲೇ ಅವನನ್ನು ಕುರಿತು ಧ್ಯಾನ ಮಾಡುವುದು ಪ್ರಶಸ್ತ. ಆತ್ಮಗುಣಗಳೊಂದಿಗೆ, ಎಲ್ಲ ವ್ರತಗಳಿಗೆ ಸಲ್ಲುವ ನಿಯಮಗಳನ್ನು ಪಾಲಿಸುತ್ತಾ ಮಾನಸಪೂಜೆಯನ್ನು ಮಾಡುವಂಥದ್ದು ಉತ್ತಮ. ಆ ಅಂತರಂಗಪೂಜೆಯ ಅಭಿವ್ಯಕ್ತಿಯೇ ಬಾಹ್ಯಪೂಜೆ. ಅದನ್ನು ಸಾಂಗವಾಗಿ ಮಾಡುವ ಪೂಜಾಕಲ್ಪದಲ್ಲಿ ಗೋಶೃಂಗದಿಂದ ಅಭಿಷೇಕಪ್ರಿಯನಾದ ಶಿವನಿಗೆ ಅಭಿಷೇಕಮಾಡಿ, ಬಿಲ್ವಪತ್ರೆ, ತುಂಬೇಹೂಗಳಿಂದ ಪೂಜಿಸುವುದರಿಂದ ಅವನನ್ನು ವಿಶೇಷವಾಗಿ ಸಂಪ್ರೀತಿಗೊಳಿಸಬಹುದು. "ಜಪಾಕುಸುಮ, ಎಂದರೆ ಕೆಂಪುದಾಸವಾಳ, ಕೂಡ ಅವನಿಗೆ ಅತ್ಯಂತ ಪ್ರಿಯವಾದದ್ದು" - ಎಂದು ಶ್ರೀರಂಗಮಹಾಗುರುಗಳು ಹೇಳಿದ್ದರು.
ಇನ್ನು ಇದನ್ನಾಚರಿಸಲು, ದೇಹ-ಮನಸ್ಸುಗಳು ಹೇಗಿರಬೇಕು? ಚೆನ್ನಾಗಿ ತಿಂದು, ಹೊಟ್ಟೆಭಾರವಾದರೆ ಧ್ಯಾನ-ಪೂಜೆಗಳು ಸಾಧ್ಯವಾಗುವುವಲ್ಲ. ಆ ಕಾರಣಕ್ಕೇ ಉಪವಾಸವನ್ನು ಉತ್ತಮಕಲ್ಪವಾಗಿ ವಿಧಿಸಿರುವುದು. ಪೂರ್ಣ ಉಪವಾಸ ಸಾಧ್ಯವಿಲ್ಲದಿದ್ದರೆ, ಒಪ್ಪೊತ್ತಾದರೂ ಉಪವಾಸ ಮಾಡುವುದು, ಅದೂ ಸಾಧ್ಯವಿಲ್ಲದಿದ್ದರೆ ಗುರುವಾದ, ಎಂದರೆ ಭಾರವೆನಿಸುವ, ಆಹಾರವನ್ನು (ಎಂದರೆ ಕರಿದ ಪದಾರ್ಥಗಳು ಇತ್ಯಾದಿ) ವರ್ಜ್ಯಮಾಡಿ, ಲಘುವಾದ ಆಹಾರವನ್ನು ಸೇವಿಸುವುದು ವಿಹಿತವಾಗಿದೆ.
ಇನ್ನು ಜಾಗರಣೆಯ ವಿಷಯ. "ಶಿವದರುಶನ ನಮಗಾಯಿತು, ಕೇಳೇ, ಶಿವರಾತ್ರಿಯ ಜಾಗರಣೆ" – ಎಂದು ದಾಸಶ್ರೇಷ್ಠರೂ ಭಾಗವತೋತ್ತಮರೂ ಆದ ಪುರಂದರದಾಸರು ಕೊಂಡಾಡಿದ್ದಾರೆ. ಈ ಪರ್ವದಲ್ಲಿ ಧ್ಯಾನಾದಿಗಳಿಗೆ ಅತ್ಯಂತ ಪ್ರಶಸ್ತವಾದ ಕಾಲವೆಂದರೆ ರಾತ್ರಿಯೇ. ಅಮೂಲ್ಯವಾದ ಈ ಕಾಲವು ನಿದ್ರೆಯಿಂದಾಗಿ ಪೋಲಾಗದಿರಲೆಂದೇ ಜಾಗರಣೆಯ ಸಾಧನವನ್ನು ವಿಧಿಸಿರುವುದು. ಭಗವಂತನ ಧ್ಯಾನ-ಆರಾಧನೆ-ಸ್ಮರಣೆ ಮಾಡಿಕೊಳ್ಳುವುದನ್ನೇ ಜಾಗರಣೆ ಎನ್ನುವುದು.
ದೈವಭಕ್ತಿಯನ್ನು ಈಗ ಕಂಡುಕೊಳ್ಳುತ್ತಿರುವ ಕೆಲವರು, "ಜಾಗರಣೆ ಮಾಡಿದರೆ ಪುಣ್ಯ" ಎನ್ನುವುದನ್ನು "ರಾತ್ರಿಯಿಡೀ ಎಚ್ಚರವಾಗಿದ್ದರೆ ಪುಣ್ಯ" ಎಂದು ತಿಳಿಯುವ ತಪ್ಪು ಮಾಡುವುದುಂಟು. ಕೋಸಂಬರಿ-ಪಾನಕ ಇತ್ಯಾದಿಗಳನ್ನೇ ಹೊಟ್ಟೆ ತುಂಬ ತಿಂದು, ಸಂಗೀತವನ್ನು ಜೋರಾಗಿ ಹಾಕಿಕೊಂಡಿದ್ದು, ಇಸ್ಪೀಟು, ಇತ್ಯಾದಿಗಳನ್ನು ಆಡುತ್ತಾ ರಾತ್ರಿಯಿಡೀ ಎದ್ದಿರುವರು: ಇದನ್ನು ಜಾಗರಣೆಯೆನ್ನಲಾಗದು. ರಾತ್ರಿಯಿಡೀ ಎದ್ದಿರಲು ಸಾಧ್ಯವಾಗದಿದ್ದರೂ, ರಾತ್ರಿಯ ಒಂದೆರಡು ಯಾಮಗಳಾದರೂ ಭಗವಂತನನ್ನು ಕೇಂದ್ರದಲ್ಲಿಟ್ಟು, ಪೂಜೆ-ಧ್ಯಾನಗಳನ್ನು ಮಾಡುವುದು, ಸ್ತ್ರೋತ್ರಗಳನ್ನು ಹೇಳಿಕೊಳ್ಳುವುದು – ಇಂಥದ್ದನ್ನು ಮಾಡುವುದು ಉತ್ತಮ.
"ಗಾಳಿ ಬಂದಾಗ ತೂರಿಕೋ" ಎಂಬ ಗಾದೆಯನ್ನು ನೀವು ಕೇಳಿರಬಹುದು. ಏನು ಹಾಗೆಂದರೆ? ಧಾನ್ಯಗಳನ್ನು ಕಟಾವು ಮಾಡಿ ಶುದ್ಧೀಕರಣ ಮಾಡುತ್ತಾರಷ್ಟೆ? ಹೊಟ್ಟು, ಕಸ-ಕಡ್ಡಿಗಳನ್ನು ಧಾನ್ಯದಿಂದ ಬೇರ್ಪಡಿಸಲು ಮೇಲಿನಿಂದ ಮೊರದಲ್ಲಿ ಅವನ್ನು ನಿಧಾನವಾಗಿ ಕೆಳಗೆ ತೂರುತ್ತಾರೆ. ಆಗ ಗಾಳಿಯೂ ಬೀಸಿದರೆ ಕಸ-ಕಡ್ಡಿ ಸುಲಭವಾಗಿ ಬೇರ್ಪಡುತ್ತದೆ. ಗಾಳಿ ಬೀಸುತ್ತಿದ್ದಾಗ ತೂರಿಕೊಂಡರೆ, ಕಡಿಮೆ ಪ್ರಯತ್ನದಿಂದಲೇ ಹೆಚ್ಚು ಫಲ ದೊರೆಯುತ್ತದೆ. ಇದೇ ರೀತಿ "ಧ್ಯಾನಕ್ಕೆ ಪೋಷಕವಾದ ಇಂತಹ ಸಂಧಿಕಾಲಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ ನಮ್ಮ ಆಧ್ಯಾತ್ಮಿಕ ಪ್ರಗತಿಯು ಸುಲಭವಾಗಿಯೂ ಹೆಚ್ಚಾಗಿಯೂ ಆಗುತ್ತದೆ", ಎಂಬುದನ್ನು ಶ್ರೀರಂಗಮಹಾಗುರುಗಳು ಒತ್ತಿ ಹೇಳಿದ್ದರು.
ಸಂಭ್ರಮದ ಉತ್ಸವ ಎನ್ನುವುದಕ್ಕಿಂತಲೂ, ಈ ಪರ್ವ ಆಂತರಂಗಿಕವಾದ ಉತ್-ಸವ ("ಮೇಲ್ಮುಖವಾದ ಯಜ್ಞ"): ಒಳಗೆ ಉನ್ನತವಾದ ಸ್ಥಿತಿಗೆ ಏರಿಸುವಂಥದ್ದು. ಇದನ್ನು ತಿಳಿದು ಆಚರಿಸಿದಾಗ, ಅಮೂಲ್ಯವಾದ ಈ ಕಾಲ ಅಮೋಘವಾಗುತ್ತದಲ್ಲವೇ?
ಸೂಚನೆ : 14/2/2026 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.