ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೫೨ - ಮಿತ್ರನಾರು ?
ಉ. ಪಾಪವನ್ನು ನಿವಾರಿಸುವವ
ಈ ಪ್ರಶ್ನೋತ್ತರದಲ್ಲಿ 'ಪಾಪ ಎಂದರೇನು?' ಎಂಬ ವಿಷಯವನ್ನು ವಿಶೇಷವಾಗಿ ಚಿಂತಿಸಬೇಕಾದ ಅಗತ್ಯ ಇದೆ. ಆಗ ಅಂತಹ ಪಾಪವನ್ನು ನಿವಾರಿಸುವವನು ಹೇಗೆ ಮಿತ್ರನಾಗುತ್ತಾನೆ? ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ಆ ಚಿಂತನೆಗೆ ಈ ಉತ್ತರ ಮೀಸಲಾಗಿದೆ.
ಪಾಪ- ಪುಣ್ಯ, ಸತ್ಯ- ಅಸತ್ಯ, ಋತ-ಅನೃತ ಹೀಗೆ ನಾವು ಈ ವಿರುದ್ಧ ಪದಗಳನ್ನು ಗಮನಿಸಿದ್ದೇವೆ. ಇಲ್ಲಿ ಒಂದು ಅನುಕೂಲಕರವಾದ ಸಂಗತಿಯನ್ನು ಹೇಳುವ ಪದವಾದರೆ, ಇನ್ನೊಂದು ಅದಕ್ಕೆ ವಿರೋಧವಾದ ಸಂಗತಿಯನ್ನು ಹೇಳುವ ಪದವಾಗಿದೆ. ಪುಣ್ಯ ಎಂದರೆ ಅನುಕೂಲಕರವಾದರೆ ಪಾಪ ಎಂಬುದು ಪ್ರತಿಕೂಲಸಂಗತಿ ಎಂದರ್ಥ. ನಾವಿಲ್ಲಿ ವಿಚಾರಿಸಬೇಕಾಗಿದ್ದು ಯಾವುದು ನಿಜವಾಗಿಯೂ ಪುಣ್ಯ? ಯಾವುದು ನಿಜವಾಗಿಯೂ ಪಾಪ? ಎಂದು. ಅದಕ್ಕೆ ಮೊದಲು, ಅದು ಹೇಗೆ ಪುಣ್ಯ? ಹೇಗೆ ಪಾಪ? ಎಂಬುದನ್ನೂ ತಿಳಿಯಬೇಕು. ಉದಾಹರಣೆಗೆ 'ಪುಣ್ಯ-ಅಪುಣ್ಯ-ವಿವರ್ಜಿತ-ಪಂಥಃ' ಎಂಬುದಾಗಿ ಶ್ರೀಶಂಕರ ಭಗವತ್ಪಾದರು ತಮ್ಮ ಮೋಹಮುದ್ಗರ ಸ್ತೋತ್ರದಲ್ಲಿ ಹೀಗೆ ಹೇಳುತ್ತಾರೆ. ಅಂದರೆ ನಮ್ಮ ನಡೆ ಪುಣ್ಯವಾಗಿಯೂ ಅಪುಣ್ಯವಾಗಿಯೂ ಇರಬಾರದು. ಸಾಮಾನ್ಯವಾಗಿ ಲೋಕದಲ್ಲಿ ಪುಣ್ಯಕ್ಕಾಗಿಯೇ ಎಲ್ಲಾ ಕಾರ್ಯವನ್ನು ಮಾಡುವುದನ್ನು ಕಾಣುತ್ತೇವೆ. ಪುಣ್ಯ ಬೇಡವೇ? ಪಾಪು ಬೇಡ ಎಂಬ ಸಂಗತಿ ನಿಜ. ಆದರೆ ಪುಣ್ಯವೂ ಬೇಡ ಎಂಬ ಸಂಗತಿ ಅತ್ಯಂತ ವಿಸ್ಮಯ ಎಂಬುದಾಗಿ ತಿಳಿಯಬೇಕಾಗುತ್ತದೆ. ಯಾವುದಕ್ಕೂ ಅಂಟಿಕೊಳ್ಳದ ಜೀವನ ನಮ್ಮದಾಗಬೇಕು ಎಂಬುದನ್ನು ನಾವು ತಿಳಿಯಬೇಕಾಗಿದೆ. ಅಂದರೆ ನಮ್ಮ ಜೀವನದ ಉದ್ದೇಶ ಹೇಗಿದ್ದಾಗ? ಇವು ಹೇಯವಾಗುತ್ತವೆ ಎಂಬುದು.
'ಪಾತಿ ರಕ್ಷತಿ ಅಸ್ಮಾತ್ ಆತ್ಮಾನಮ್ ಇತಿ' ಆತ್ಮನನ್ನು ಯಾವುದರಿಂದ ರಕ್ಷಿಸಿಕೊಳ್ಳಬೇಕಾಗುತ್ತದೆಯೋ ಅದನ್ನು 'ಪಾಪ' ಎಂದು ಕರೆಯುತ್ತಾರೆ. ಅಂದರೆ ನಿಷಿದ್ಧವಾದುದನ್ನು ಮಾಡುವುದರಿಂದ, ವಿಹಿತವಾದುದನ್ನು ಬಿಡುವುದರಿಂದ ಮನುಷ್ಯನು ಯಾವುದರಿಂದ ಕ್ಲೇಶವನ್ನು ಅನುಭವಿಸುತ್ತಾನೋ ಅದನ್ನು ಪಾಪ ಎನ್ನುತ್ತಾರೆ. ಯಾವುದರಿಂದ ನರಕವು ನಿಶ್ಚಿತವೋ ಅದೇ ಪಾಪ ಎನ್ನಬಹುದು. ಮಾನವನ ಜೀವನವು ಮೋಕ್ಷಕ್ಕೆ ಇರುವಂತಹದ್ದು ಎಂಬುದು ಎಲ್ಲರಿಗೂ ತಿಳಿದ ವಿಷಯ. ಅದಕ್ಕೆ ಆತ್ಮೋನ್ನತಿ ಎಂದೂ ಕರೆಯುತ್ತಾರೆ. ಇಂತಹ ಆತ್ಮೋನ್ನತಿಯನ್ನು ಹಾಳುಗೆಡಹುವುದೇ ಪಾಪ. ಈ ಪಾಪದ ಬಗೆಗೆ ಶ್ರೀರಂಗ ಮಹಾಗುರುಗಳು ಹೇಳಿದ ಮಾತು ಹೀಗಿದೆ - "ಪ್ರತಿಯೊಂದು ಪದವೂ ಹುಟ್ಟುವಾಗ ಅರ್ಥದೊಡನೆ ಕೂಡಿತ್ತು. ಆದರೆ ಕೈದಾಟಿ ಬಂದಾಗ ಅದರ ಅರ್ಥ ಮರೆಯಾಯಿತು. ಅದರ ಮೂಲದೊಡನೆ ಉಳಿಯಲಿಲ್ಲ. ಸನ್ಮಾರ್ಗದಿಂದ ಜಾರಿತು. ಮಹರ್ಷಿಗಳು ಅಂತರಂಗದ ಮನೋಭೂಮಿಕೆಯಲ್ಲಿ ಕಂಡ ಋತ-ಸತ್ಯಕ್ಕೆ ಅವಿರೋಧವಾಗಿ ನಡೆಯುವ ಮಾರ್ಗವೇ ಸನ್ಮಾರ್ಗ. ಇದಕ್ಕೆ ಹೊಂದುವ ರೀತಿಯಲ್ಲಿ ನಡೆದರೆ ಅದೇ ಸತ್ಕೃತ. ಇದಕ್ಕೆ ವಿರೋಧವಾಗಿದ್ದರೆ ದುಷ್ಕೃತ. ಪಾಪಕ್ಕೆ ಪರ್ಯಾಯಪದಗಳೇ ಇವುಗಳು 'ಅಂಹೋ-ದುರಿತ-ದುಷ್ಕೃತಂ' ದುಷ್ಕೃತ ಎಂದರೆ ಮಾಡಬಾರದ್ದು, ಹೇಳಬಾರದ್ದು. ಹೇಳಬೇಕಾದ್ದನ್ನೇ ಹೇಳಲು ಹೊರಟು ಹೇಳಬೇಕಾದದ್ದು ಹಿಂದೆ ಉಳಿಯಿತು. ಹೇಳಬಾರದ್ದು ಹೊರಗೆ ಬಂದಿತು. ಒಳಗಿರುವ ರಾಗ ಬೇರೆ. ಹೊರಗೆ ಬರುವಾಗ ವಿರಾಗವಾಯಿತು. ಆತ್ಮದಲ್ಲಿದ್ದಂತೆ ವ್ಯವಹರಿಸಬೇಕು" ಎಂದು. ಇಂತಹ ಪಾಪವನ್ನು ಮಾಡದಂತೆ ಎಚ್ಚರಿಸುವವನೇ 'ಮಿತ್ರ' ಎಂದು ಕರೆಯಬೇಕು ಎಂಬುದು ಈ ಉತ್ತರದಲ್ಲಿದೆ.