Sunday, February 22, 2026

ವ್ಯಾಸ ವೀಕ್ಷಿತ 176 ಜರಾಸಂಧನನ್ನು ವಧಿಸಲು ಏಕಾಂತವೇ ಯುಕ್ತ ( Vyaasa Vikshita 176)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀಕೃಷ್ಣನು ಜರಾಸಂಧನನ್ನು ವಧಿಸಲು ಬೇಕಾದ ಹಿನ್ನೆಲೆಯನ್ನು ಯುಧಿಷ್ಠಿರನಿಗೆ ತಿಳಿಸಿಕೊಡುತ್ತಿದ್ದಾನೆ. ಜರಾಸಂಧನು ತನ್ನ ಮಹಾಗದೆಯನ್ನು ಮಥುರೆಯತ್ತ ಪ್ರಬಲವಾಗಿ ಬೀಸಿದ ಬಳಿಕ ಆದುದನ್ನು ತಿಳಿಸುತ್ತಾನೆ.

ಆಗ ಬಲಶಾಲಿಗಳಾದ ಕುಕ್ಕುರ-ಅಂಧಕ-ವೃಷ್ಣಿ – ಈ ವಂಶಗಳ ವೀರರೂ ಇದ್ದರು. ಆದರೂ ರಾಜನೀತಿಯ ಲೆಕ್ಕದ ಮೇರೆಗೆ ಅವರು ಜರಾಸಂಧನನ್ನು ಉಪೇಕ್ಷಿಸಿದರು. ಹಾಗೆಂದರೆ, ಆ ಕಾರಣಕ್ಕಾಗಿ, ಆತನ ಮೇಲೆ ಸಮರ ಮಾಡಲು ಹೋಗಲಿಲ್ಲ ಎಂದರ್ಥ.

ಒಟ್ಟಾರೆ ಹೇಳುವುದಾದರೆ, ಹಂಸ-ಡಿಂಭಕರು ಮುಳುಗಿ ಸತ್ತರು. ಕಂಸನೂ ಪರಿವಾರ-ಸಮೇತನಾಗಿ ಹತನಾದನು. ಇನ್ನೀಗ ಜರಾಸಂಧನ ಸಾವಿನ ಸಮಯವೊದಗಿದೆ.

ಸುರರಾಗಲಿ ಅಸುರರಾಗಲಿ, ಈ ಜರಾಸಂಧನನ್ನು ಯುದ್ಧದಲ್ಲಿ ಜಯಿಸಲಾರರು. ಈತನನ್ನು ಬಾಹು-ಯುದ್ಧದಿಂದಲೇ ಸೋಲಿಸಬೇಕೆಂಬುದೇ ತೋರುವುದು.

ಯುಧಿಷ್ಠಿರಾ, ನನ್ನಲ್ಲಿ ರಾಜನೀತಿಯ ಜ್ಞಾನವು ಚೆನ್ನಾಗಿದೆ; ಭೀಮನಲ್ಲಿ ಬಲವಿದೆ; ನಮ್ಮಿಬ್ಬರನ್ನೂ ಜಯನು, ಎಂದರೆ ಅರ್ಜುನನು, ರಕ್ಷಿಸುವವನಾಗಿದ್ದಾನೆ. ನಾವು ಮೂವರು ಹೇಗೆಂದರೆ, ಯಜ್ಞ-ಸಾಧನೆಯಲ್ಲಿ ಮೂರು ಅಗ್ನಿಗಳು - ಎಂದರೆ ದಾಕ್ಷಿಣಾತ್ಯ-ಗಾರ್ಹಪತ್ಯ-ಆಹವನೀಯಗಳೆಂಬ ಹೆಸರಿನವು - ಹೇಗೆ ಭಾಗಿಗಳೋ ಹಾಗೆಯೇ. ನಾವು ಮೂವರೂ ಸೇರಿ ಈ ಮಾಗಧನನ್ನು, ಎಂದರೆ ಜರಾಸಂಧನನ್ನು, ಸಾಧಿಸುವುದಾಗಬೇಕಾಗಿದೆ, ಎಂದರೆ ವಧಿಸಬೇಕಾಗಿದೆ.

ನಾವು ಮೂವರು ಆತನನ್ನು ನಿರ್ಜನಪ್ರದೇಶದಲ್ಲಿ, ಎಂದರೆ ರಹಸ್ಯವಾಗಿ, ಎದುರಿಸುವುದೇ ಯುಕ್ತ. ಏಕೆ ಗೊತ್ತೇ? ಹಾಗೆ ಮಾಡಿದಲ್ಲಿ, ಆತನು ಒಬ್ಬರೊಂದಿಗಾದರೂ ಯುದ್ಧಕ್ಕೆ ಬಂದೇ ಬರುವನು; ಇದರಲ್ಲಿ ಸಂಶಯವಿಲ್ಲ.

ಅಷ್ಟೇ ಅಲ್ಲ. ಅವಮಾನವೆನ್ನುವ ಕಾರಣದಿಂದಲೂ, ಲೋಭ-ನಿಮಿತ್ತವಾಗಿಯೂ, ಸ್ವಬಾಹು-ವೀರ್ಯ-ದರ್ಪದಿಂದಲೂ, ಆತನು ಭೀಮಸೇನನೊಂದಿಗೇ ಯುದ್ಧಕ್ಕೆ ಬರುವನು. ಭೀಮಸೇನನು ಮಹಾಬಾಹು ಹಾಗೂ ಮಹಾಬಲ. ಹಾಗಿರುವುದರಿಂದಲೇ, ಸೊಕ್ಕಿದ ಲೋಕದ ವಿನಾಶಕ್ಕೆ ಹೇಗೆ ಯಮರಾಜನೇ ತಕ್ಕವನೋ, ಹಾಗೆಯೇ ಭೀಮಸೇನನೇ ಇಲ್ಲಿ ತಕ್ಕವನು.

ನನ್ನ ಹೃದಯವನ್ನು ನೀನು ಅರಿಯುವೆಯಾದರೆ, ಹಾಗೂ ನನ್ನ ಮೇಲೆ ನಂಬಿಕೆಯಿರುವುದಾದರೆ, ಯುಧಿಷ್ಠಿರಾ, ನೀನು ಒಡನೆಯೇ ಭೀಮಸೇನ-ಅರ್ಜುನರನ್ನು ನನಗೆ ನ್ಯಾಸ-ರೂಪವಾಗಿ ಕೊಡು. (ನ್ಯಾಸವಾಗಿ ಕೊಡುವುದೆಂದರೆ, ಕೊಟ್ಟಿದ್ದನ್ನು ಆಮೇಲೆ ಯಥಾವತ್ತಾಗಿ ಹಿಂದಿರುಗಿಸುವುದು ಇದ್ದೇ ಇದೆ – ಎಂಬ ಭಾವ)."

ಹೀಗೆಂಬುದಾಗಿ ಕೃಷ್ಣನು ಹೇಳಲಾಗಿ, ಯುಧಿಷ್ಠಿರನು ಭೀಮ-ಅರ್ಜುನರತ್ತ ತನ್ನ ದೃಷ್ಟಿಯನ್ನು ಹಾಯಿಸಿದನು. ಅವರಂತೂ ಸಂಪ್ರಹೃಷ್ಟರಾಗಿದ್ದರು - ಎಂದರೆ ಬಹು-ಹರ್ಷದಿಂದ ಅರಳಿದ ಮುಖವುಳ್ಳವರಾಗಿದ್ದರು.

ಆಗ ಯುಧಿಷ್ಠಿರನು ಹೇಳಿದನು:

"ಅಚ್ಯುತ, ಅಚ್ಯುತ, ಬೇಡ, ಹೀಗೆ ಹೇಳಬೇಡ! ಶತ್ರು-ಸಂಹಾರಕನಾದವನು ನೀನು. ಪಾಂಡವರಿಗೆ ನೀನೇ ಒಡೆಯ! ನಿನ್ನನ್ನು ಆಶ್ರಯಿಸಿರತಕ್ಕವರು, ನಾವು.

ಗೋವಿಂದ, ನೀನೇನನ್ನು ಹೇಳುವೆಯೋ ಅದೆಲ್ಲವೂ ಯುಕ್ತಿ-ಯುಕ್ತವೇ ಆಗಿದೆ. ಯಾರಿಗೆ ಲಕ್ಷ್ಮಿಯು ವಿಮುಖಳಾಗಿರುವಳೋ ಅವರಿಗೆ ನೀನು ಸುಮುಖನಾಗುವವನೇನಲ್ಲ.

ಇತ್ತ ನಿನ್ನ ಆಜ್ಞೆಗೆ ಅನುಸಾರವಾಗಿ ಇವರು ನಿಲ್ಲುತ್ತಿರುವಂತೆಯೇ ಅತ್ತ ಜರಾಸಂಧನು ಹತನಾದಂತೆಯೇ ಸರಿ; ರಾಜರು ಬಿಡುಗಡೆ ಹೊಂದಿದಂತೆಯೇ ಸರಿ; ನನಗೆ ರಾಜಸೂಯವು ಪ್ರಾಪ್ತಿಯಾದಂತೆಯೇ ಸರಿ!

ನರೋತ್ತಮ, ಈ ಕಾರ್ಯವು ಬೇಗನೆ ನೆರವೇರುವ ಹಾಗೆ ಎಚ್ಚರಿಕೆಯಿಂದ ನೀ ಮಾಡಿಬಿಡು, ಜಗನ್ನಾಥ! ಧರ್ಮ-ಅರ್ಥ-ಕಾಮಗಳೆಂಬ ಮೂರೂ ಇಲ್ಲದವನೂ ಜೊತೆಗೆ ರೋಗಾರ್ತನೂ ಆದವನು ಹೇಗೆ ದುಃಖಿತನಾಗಿರುವನೋ, ಹಾಗೆ ನೀವು ಮೂವರಿಲ್ಲದೆ ನಾನು ಜೀವಿಸಲೇ ಇಷ್ಟಪಡಲಾರೆ.

ಶೌರಿಯಿಲ್ಲದೆ, ಎಂದರೆ ಕೃಷ್ಣನಿಲ್ಲದೆ, ಪಾರ್ಥನಿಲ್ಲ; ಪಾಂಡವನಿಲ್ಲದೆ ಶೌರಿಯೂ ಇರುವುದಿಲ್ಲ." – ಎಂದನು, ಯುಧಿಷ್ಠಿರ.

ಸೂಚನೆ : 22/2/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.