ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ನಾನು ಕೃಷ್ಣನನ್ನು ಭಜಿಸುತ್ತೇನೆ - ಎನ್ನುವುದು ಕೃಷ್ಣಕರ್ಣಾಮೃತದ ಹಲವು ಶ್ಲೋಕಗಳಲ್ಲಿ ಬಂದಿದೆಯಷ್ಟೆ. ಆದರೆ ಈ ಶ್ಲೋಕದಲ್ಲಿ, ವೃಂ(ಬೃಂ)ದಾವನದ ಬಗ್ಗೆಯೂ ಲೀಲಾಶುಕನು ಹೇಳುತ್ತಾನೆ.
ಬೃಂದಾವನ ಎನ್ನುವುದಕ್ಕಿಂತ ಅಲ್ಲಿಯ ಕಾಡನ್ನು ಕುರಿತೇ ಹೇಳುತ್ತಿದ್ದಾನೆ - ಎನ್ನುವುದೇ ಸರಿಯಾದದ್ದು. ಅದೇನು ಬರೀ ಕಾಡೇ? ಅದು ಕಲ್ಪಕ-ದ್ರುಮ-ವನ.
ಕಲ್ಪಕವೆಂದರೂ ಕಲ್ಪವೆಂದರೂ ಒಂದೇ. ಏಕೆ? ಯಾವುದೇ ಪದಕ್ಕೂ "ಸ್ವಾರ್ಥ"ದಲ್ಲಿ 'ಕ' ಎಂಬ ಪ್ರತ್ಯಯವನ್ನು ಸೇರಿಸಬಹುದು – ಎಂಬೊಂದು ನಿಯಮ ಸಂಸ್ಕೃತದಲ್ಲಿದೆ. ಇಲ್ಲಿ ಸ್ವಾರ್ಥ ಎಂದರೆ "ತನ್ನದೇ ಅರ್ಥ" ಎಂದರ್ಥ. ಉದಾಹರಣೆಗೆ, 'ಬಾಲ' ಎಂಬ ಪದಕ್ಕೆ ಏನರ್ಥವೋ, 'ಬಾಲಕ' ಎನ್ನುವುದಕ್ಕೂ ಅದೇ ಅರ್ಥ: ಬಾಲಕ ಎಂಬಲ್ಲಿಯ 'ಕ'ವು ಸ್ವಾರ್ಥಕವಾದುದು. ಆದ್ದರಿಂದ ಕಲ್ಪ ಎಂದರೂ ಕಲ್ಪಕ ಎಂದರೂ ಒಂದೇ.
ದ್ರುಮವೆಂದರೆ ಮರ; ಕಲ್ಪಕ-ದ್ರುಮವೆಂದರೆ ಕಲ್ಪವೃಕ್ಷ ಎಂಬರ್ಥ. ಒಂದು ಕಲ್ಪವೃಕ್ಷವಿದ್ದರೇ ಅದಕ್ಕೆ ಬಹಳವಾದ ಬೆಲೆಯುಂಟು: ಕೇಳಿದ್ದನ್ನೆಲ್ಲಾ ಕೊಡುವುದೇ ಕಲ್ಪವೃಕ್ಷ. ಇದಂತೂ ಕಲ್ಪತರುಗಳ ವನವೇ ಆಗಿದೆಯೆಂದರೆ ಅದರ ಹಿರಿಮೆ ಎಷ್ಟೆಂದು ಬೇರೆ ಹೇಳಬೇಕಿಲ್ಲವಷ್ಟೆ?
ಎಂದೇ ಆ ವನವನ್ನೇ, ಜೊತೆಗೆ ಅಲ್ಲಿಯ ಕಿಶೋರ(ಕೃಷ್ಣ)ನನ್ನೇ, ನಾನು ಭಜಿಸುವುದು – ಎಂಬುದಾಗಿ, ಎರಡೂ ಸಮವೋ ಎಂಬಂತೆ, ಹೇಳುತ್ತಿದ್ದಾನೆ, ಲೀಲಾಶುಕ. ವನವನ್ನೂ ಭಜಿಸುವುದೇ? - ಎಂಬ ಪ್ರಶ್ನೆಯೇ? ಅದಕ್ಕೆ ಮೂರು ಕಾರಣಗಳನ್ನು ಕೊಡುತ್ತಾನೆ.
ಆ ವೃಂದಾವನದ ವನದಲ್ಲಿ ಕೃಷ್ಣನಿಗೆ ಸಂಬಂಧಿಸಿದ ಮೂರು ಚಟುವಟಿಕೆಗಳುಂಟು; ಮೂರೂ ಮಹಾಪ್ರಭಾವವುಳ್ಳವುಗಳು; ಎಂದೇ ವಂದನೆ, ಎರಡಕ್ಕೂ - ಒಟ್ಟಿಗೆಯೇ.
ಕೃಷ್ಣನ ವೇಣು-ನಾದವು ಗೋವೃಂದಕ್ಕೆ ಆನಂದವನ್ನು ತಂದಿತೆಂದೂ ಮೃಗಗಳಿಗೆ ವಿವಶತೆಯನ್ನು ಉಂಟುಮಾಡಿತೆಂದೂ ಕೇಳುವೆವಲ್ಲವೇ? ಆದರೆ ಇಲ್ಲಿ ಕೊಳಲಿನ ಬಗ್ಗೆ ಮಾತನಾಡಿಲ್ಲ.
ನವಿಲು-ಗೂಳಿ-ಆನೆಗಳ ಮೇಲೆ ಬೇರೆ ಬೇರೆ ಕಾರಣಗಳಿಂದಾಗಿ ಆದ ಪರಿಣಾಮವನ್ನು ಹೇಳಿದೆ. ಅವಾದರೂ ಸಾಧಾರಣವಾದ ಮಯೂರ-ವೃಷಭ-ವಾರಣಗಳಲ್ಲ. ಅವು ದೈವಿಕವಾದವು! ಷಣ್ಮುಖನ ನವಿಲು, ಶಿವನ ನಂದಿ, ಇಂದ್ರನ ವಾರಣಗಳು! ಆ ನವಿಲು ಕುಣಿಯುತ್ತದೆ, ವೃಷಭವು ಮದಿಸುತ್ತದೆ, ಆನೆಯು ಆಸೆಪಡುತ್ತದೆ - ಎಂಬಿವೇ ಆ ಪರಿಣಾಮಗಳು.
ಇವೆಲ್ಲಾ ಆಗುತ್ತಿರುವುದು ಏತಕ್ಕಾಗಿ ಅಥವಾ ಯಾವುದರಿಂದಾಗಿ? ಒಂದೊಂದಾಗಿ ನೋಡೋಣ.
ಕೃಷ್ಣನು ತನ್ನ ಶೇಖರದಲ್ಲಿ, ಎಂದರೆ ತಲೆಯ ಜುಟ್ಟಿನ ಮೇಲೆ, ನವಿಲುಗರಿಯನ್ನು ಧರಿಸಿದ್ದಾನಲ್ಲವೇ? ಗರಿಯೆಂದರೆ ಒಂದೇ ಗರಿಯೆಂದುಕೊಳ್ಳಬೇಕಿಲ್ಲ. ಎಂದೇ ಕವಿಯು ಶೇಖರ-ಭರೈಃ - ಎಂದು ಬಹುವಚನವನ್ನೇ ಬಳಸಿದ್ದಾನೆ.
ಹೀಗೆ ಅನೇಕ ಮಯೂರ-ಪಿಂಛಗಳನ್ನು ಧರಿಸಿರುವ ಕೃಷ್ಣನನ್ನು ಬೃಂದಾವನದಲ್ಲಿ ಕಂಡೊಡನೆಯೇ, ಸುಬ್ರಹ್ಮಣ್ಯ-ಸ್ವಾಮಿಯ ವಾಹನವಾದ ನವಿಲಿಗೆ ಸಂತೋಷವೋ ಸಂತೋಷ. ಒಂದು ನವಿಲಿಗೆ ಮತ್ತೊಂದು ನವಿಲನ್ನು ಕಂಡರೆ ತೋಷವೇ. ಗರಿಯನ್ನು ಕಂಡೊಡನೆ, "ಇದೋ ಮತ್ತೊಂದು ನವಿಲು!" - ಎಂಬ ಭಾವನೆ ಬಂದಿದೆ, ಅದಕ್ಕೆ. ಅಷ್ಟಕ್ಕೇ ಹರ್ಷ. ಆ ಆನಂದದಿಂದಲೇ ಕುಣಿತ.
ಇಲ್ಲಿ ಸುಬ್ರಹ್ಮಣ್ಯನನ್ನು ಕ್ರೌಂಚ-ದ್ವೇಷಿಯೆಂದಿದೆ. ಕ್ರೌಂಚ-ಪರ್ವತವನ್ನು ತನ್ನ ಶಕ್ತ್ಯಾಯುಧದಿಂದ ಆತನು ಭೇದಿಸಿದನಷ್ಟೆ? "ಕುಮಾರಃ ಕ್ರೌಂಚ-ದಾರಣಃ" ಅಲ್ಲವೇ? ಹಾಗೆಯೇ, ನವಿಲನ್ನು ಚಂದ್ರಕಿಯೆಂದಿದೆ. ಚಂದ್ರಕವನ್ನುಳ್ಳದ್ದು ಚಂದ್ರಕಿ. ಚಂದ್ರಕವೆಂದರೆ ನವಿಲುಗರಿ.
ಎರಡನೆಯದು, ಧೂರ್ಜಟಿಯ ವೃಷಭ, ಎಂದರೆ ಶಿವನ ವಾಹನವಾದ ಭಾರಿ ಎತ್ತು. ಬೃಂದಾವನದಲ್ಲಿಯ ಗೋಸಮೃದ್ಧಿಯನ್ನು ಕೇಳಬೇಕೆ? ಘೋಷ-ಸುರಭಿಗಳು ಅಲ್ಲಿ ಬಹಳವೇ ಉಂಟು. ಗೋಪಾಲಕರ ಹಳ್ಳಿಗೆ ಘೋಷವೆಂದು ಹೆಸರು. ಸುರಭಿಯೆಂದರೆ ದೇವಲೋಕದ ಧೇನು ಎಂದರ್ಥ; ವಸಿಷ್ಠರ ಹೋಮಧೇನುವಾದ ನಂದಿನಿಯ ತಾಯಿಯೆಂದರ್ಥ. ಇವು ಪ್ರಸಿದ್ಧಾರ್ಥಗಳು. ಇವಲ್ಲದೆ,'ಗೋವು' ಎಂಬ ಸಾಮಾನ್ಯಾರ್ಥವೂ ಒಂದುಂಟು. ಅದನ್ನಿಲ್ಲಿ ಬಳಸಿದೆ.
ಸುರಭಿಯೆಂಬ ಪದಕ್ಕೇ "ಒಳ್ಳೇ ಗಂಧವುಳ್ಳದ್ದು" - ಎಂಬ ಅರ್ಥವೂ ಇದೆಯಷ್ಟೆ? ಗೋಸಂಪತ್ತಿಗೆ ಹೆಸರಾದ ವೃಂದಾವನದಲ್ಲಿ ಗೋವುಗಳಿಗೆ ಪುಷ್ಟಿ-ತುಷ್ಟಿಪ್ರದವಾದ ಆಹಾರವೂ ಪ್ರೀತಿಯೂ ಹೇರಳವಾಗಿ ದೊರೆಯುತ್ತಿದ್ದುದರಿಂದಾಗಿ ಬಹಳ ಆರೋಗ್ಯವಾಗಿರುವ ಅವುಗಳನ್ನು ಸಮೀಪಿಸಿದರೇ ಸಾಕು; ಅವುಗಳ ಮೈಯ ಸುಗಂಧವು ಮೂಗಿಗೆ ಮುಟ್ಟುವುದು!
ಮನುಷ್ಯರಿಗೇ ಗೋಗಂಧವು ಮೆಚ್ಚುಗೆ ತರುವಂತಿರಲು, ಈ ಸುರಭಿ-ಗಂಧವು ಆ ವೃಷಭಕ್ಕೆ ಮುದ ತರುವಲ್ಲಿ ಆಶ್ಚರ್ಯವಿಲ್ಲ. ಮುದವಿದ್ದೆಡೆ ಮದವುಕ್ಕುವುದು. ಇಲ್ಲಿಯ ಉತ್ತಮಜಾತಿಯ ಸುರಭಿಗಳ ಸುಗಂಧವನ್ನು ಆಘ್ರಾಣಿಸಿ, ಎಂದರೆ ಮೂಸಿನೋಡಿ, ಶಿವನ ಎತ್ತಿಗೇ ಮತ್ತು ಹತ್ತುತ್ತಿತ್ತಂತೆ!
ಶಿವನನ್ನು ಇಲ್ಲಿ ಧೂರ್ಜಟಿಯೆಂದಿದೆ. ಏಕೆ ಆ ಹೆಸರು? ಆತನ ಭಾರವಾದ ಜಟೆಯಿಂದಾಗಿ. ಹೀಗೆ ವೃಂದಾವನದಲ್ಲಿರುವ ಕೃಷ್ಣನ ಸುರಭಿಯು ಶಿವವೃಷಭಕ್ಕೇ ಮತ್ತೇರಿಸುವಂತಿದೆ.
ಮತ್ತು ಮೂರನೆಯದು, ಮತ್ತೂ ವಿಶಿಷ್ಟವಾಗಿದೆ. ಕೃಷ್ಣನು ಸಾಕಿದ ಗೋವಿನ ವಿಶೇಷವನ್ನು ಹೇಳಿದ್ದಾಯಿತು, ಕೃಷ್ಣನು ತನ್ನ ಶಿರಸ್ಸಿನಲ್ಲಿ ಧರಿಸಿರುವ ಗರಿಯ ವಿಶೇಷವನ್ನು ಹೇಳಿದ್ದಾಯಿತು. ಈಗ ಮೂರನೆಯದಾಗಿ, ಮತ್ತು ಕೊನೆಯದಾಗಿ, ಶ್ರೀಕೃಷ್ಣನ ಭವ್ಯತೆಯನ್ನೇ ಹೇಳುತ್ತಿದ್ದಾನೆ.
ಶ್ರೀಕೃಷ್ಣನ ನಡೆಯೇ ಅದ್ಭುತವಾದುದು. ಆತನ ನಡೆಯಲ್ಲೇ ಒಂದು ಗಾಂಭೀರ್ಯವಿರುವುದು. ಗಜ-ಗತಿಯೆಂಬುದು ಪುರುಷ-ಶ್ರೇಷ್ಠರ, ರಾಜ-ಶ್ರೇಷ್ಠರ ನಡೆಯೆನ್ನುವರು. ಮಹಾರಾಜನ ನಡೆಯೆಂದರೆ ಮತ್ತ-ಮಾತಂಗಲೀಲೆ - ಎನ್ನುವರು. ಹಾಗಿತ್ತು ಕೃಷ್ಣನ ನಡೆಯೂ. ಅದರಲ್ಲಿ ಗಾಂಭೀರ್ಯ-ಸೌಂದರ್ಯಗಳಿದ್ದುವು. ಆ ವಿಭ್ರಮ-ಗತಿಯು, ಎಂದರೆ ವಿಲಾಸ-ಪೂರ್ಣವಾದ ನಡೆಯು, ಯಾರಾದರೂ ಆಸೆಪಡುವಂತಹುದೇ ಆಗಿತ್ತು. ಅವರಿವರಿರಲಿ, ಯಾವುದನ್ನು ಆದರ್ಶವೆಂದುಕೊಳ್ಳುತ್ತೇವೋ ಅಂತಹ ಇಂದ್ರ-ಗಜಕ್ಕೇ ತನ್ನ ನಡೆಯೂ ಹಾಗಿರಬೇಕೆಂದು ಆಸೆಪಡುವಂತಿತ್ತು! ಎಂದೇ ಇಂದ್ರನ ಆನೆಯೇ ಅದರಲ್ಲಿ ಅಸಕ್ತಿ ತೋರಿಸಿತು! - ಎನ್ನುತ್ತಾನೆ ಲೀಲಾಶುಕ.
ಹರಿಯ ಸಿಂಧುರವೆಂದರೆ ಇಂದ್ರನ ಗಜ. ಹರಿಯೆಂಬುದಕ್ಕೆ ಹಲವಾರು ಅರ್ಥಗಳಿವೆ ಇಂದ್ರನೆಂಬ ಅರ್ಥ, ಇಲ್ಲಿ. ಗಜಾನನನನ್ನು ಸಿಂಧುರಾನನವೆನ್ನಲು ಕಾರಣ, ಸಿಂಧುರವೆಂದರೆ ಗಜ. ಹೀಗೆ, ಇಂದ್ರವಾಹನವಾದ ಐರಾವತಕ್ಕೇ ಇಷ್ಟವಾಗುವ ಸಂನಿವೇಶ ಅಲ್ಲಿದೆಯೆಂದಾಯಿತು.
ತಾತ್ಪರ್ಯವೇನೆಂದರೆ, ಶ್ರೀಕೃಷ್ಣನು ವೃಂದಾವನದಲ್ಲಿ ಗೋ-ಪಾಲನವನ್ನು ಮಾಡುತ್ತಿರುವಾಗ, ದೇವತೆಗಳೆಲ್ಲ ಬಂದು ಅವನ ದರ್ಶನವನ್ನು ಮಾಡಿ, ತಮ್ಮ ಕಣ್ಣುಗಳನ್ನು ತುಂಬಿಕೊಳ್ಳುತ್ತಿದ್ದರು.
ಅಲ್ಲದೆ, ಅವರು ಬರುವಾಗ ಸಹಜವಾಗಿಯೇ ತಮ್ಮ ವಾಹನಗಳೊಂದಿಗೇ ಬರುತ್ತಿದ್ದುದು. ಹೀಗಾಗಿ ಶಿವ-ಸ್ಕಂದ-ಇಂದ್ರರು ಅಲ್ಲಿಗೆ, ಎಂದರೆ, ಕೃಷ್ಣನು ಪಶುಪಾಲನ ಮಾಡುವ ಎಡೆಯಾದ ವೃಂದಾವನಕ್ಕೆ, ಸವಾಹನರಾಗಿಯೇ ಬರುತ್ತಿದ್ದರು. ಅವರೆಲ್ಲ ಬರುತ್ತಿದ್ದುದು ಕೃಷ್ಣ-ದರ್ಶನಾರ್ಥಿಗಳಾಗಿಯೇ – ಎಂಬುದು ತಾತ್ಪರ್ಯ. ದೇವತಾ-ವಾಹನಗಳಿಗೂ ಮೋದ; ದೇವತೆಗಳಿಗೂ ಮಹಾಮೋದವೇ.
ಎಂದೇ, ತನ್ನ ನಮಸ್ಕಾರವೆಂಬುದು ಆ ಬೃಂದಾವನಕ್ಕೂ ಸಲ್ಲುವುದು; ಅಲ್ಲಿಯ ಗೋಸಂಪತ್ತಿನ ಪ್ರಭುವಾದ ಶ್ರೀಕೃಷ್ಣನಿಗೂ ಸಲ್ಲುವುದು - ಎನ್ನುತ್ತಾನೆ, ಲೀಲಾಶುಕ.
ಶ್ಲೋಕ ಹೀಗಿದೆ:
ಯಸ್ಮಿನ್ ನೃತ್ಯತಿ ಯಸ್ಯ ಶೇಖರ-ಭರೈಃ ಕ್ರೌಂಚ-ದ್ವಿಷಃ ಚಂದ್ರಕೀ /
ಯಸ್ಮಿನ್ ದೃಪ್ಯತಿ ಯಸ್ಯ ಘೋಷ-ಸುರಭಿಂ ಜಿಘ್ರನ್ ವೃಷೋ ಧೂರ್ಜಟೇಃ |
ಯಸ್ಮಿನ್ ಸಜ್ಜತಿ ಯಸ್ಯ ವಿಭ್ರಮ-ಗತಿಂ ವಾಂಛನ್ ಹರೇಃ ಸಿಂಧುರಃ /
ತದ್ ವೃಂದಾವನ-ಕಲ್ಪಕ-ದ್ರುಮ-ವನಂ, ತಂ ವಾ ಕಿಶೋರಂ, ಭಜೇ ||
ಸೂಚನೆ : 21/2/2026 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.