Sunday, January 31, 2021
ಆರ್ಯಸಂಸ್ಕೃತಿ ದರ್ಶನ - 28 (Arya Samskruti Darshana - 28)
Saturday, January 30, 2021
ಸಂಸ್ಕೃತಿಯಲ್ಲಿ ಪ್ರಾಣಾಯಾಮದ ಪಾತ್ರ (Sanskrtiyalli Pranayamada Patra)
ಪ್ರಾಣಾಯಾಮದ ಮುಖ್ಯಾಂಗಗಳು ರೇಚಕ (ಉಸಿರು ಬಿಡುವುದು), ಪೂರಕ (ಉಸಿರು ತೆಗೆದುಕೊಳ್ಳುವುದು) ಮತ್ತು ಕುಂಭಕ (ಉಸಿರು ಕಟ್ಟುವುದು). ಬಲಹೊಳ್ಳೆಯಲ್ಲಿ ಪೂರಕ, ನಂತರ ಕುಂಭಕ, ತದನಂತರ ಎಡಹೊಳ್ಳೆಯಲ್ಲಿ ರೇಚಕ ಮಾಡುವುದನ್ನು ಸೂರ್ಯಭೇದನ ಪ್ರಾಣಾಯಾಮವೆನ್ನುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಎಡಹೊಳ್ಳೆಯಲ್ಲಿ ಪೂರಕ, ನಂತರ ಕುಂಭಕ, ತದನಂತರ ಬಲಹೊಳ್ಳೆಯಲ್ಲಿ ರೇಚಕ ಮಾಡುವುದನ್ನು ಚಂದ್ರಭೇದನ ಪ್ರಾಣಾಯಾಮವೆನ್ನುತ್ತಾರೆ. ಇದಲ್ಲದೇ ಭಸ್ತ್ರಿಕಾ, ಶೀತಲೀ, ಸೀತ್ಕಾರಿ ಮುಂತಾದ ಬೇರೆ ಪ್ರಾಣಾಯಾಮಗಳೂ ರೂಢಿಯಲ್ಲಿವೆ.
ಚಂದ್ರಭೇದನ, ಸೂರ್ಯಭೇದನ ಮುಂತಾದ ಹೆಸರುಗಳು ಬರುವುದಕ್ಕೆ ಕಾರಣವುಂಟು. ಶರೀರದಲ್ಲಿ ಪ್ರಾಣಶಕ್ತಿಯು ಹರಿಯುವ ಮಾರ್ಗಗಳನ್ನು ನಾಡೀ ಎನ್ನುತ್ತಾರೆ. ಇವುಗಳಲ್ಲಿ ಮೂರು ನಾಡಿಗಳು ಮುಖ್ಯವಾದವು - ಚಂದ್ರನಾಡಿ, ಸೂರ್ಯನಾಡಿ ಹಾಗೂ ಸುಷುಮ್ನಾ ನಾಡಿ. ಎಡಹೊಳ್ಳೆಯಲ್ಲಿ ಹೆಚ್ಚು ಉಸಿರಾಟ ನಡೆಯುವಾಗ ಚಂದ್ರನಾಡಿಯಲ್ಲಿ ಪ್ರಾಣಸಂಚಾರವಿದ್ದು ಮನಸ್ಸು ಶಾಂತವಾಗಿದ್ದು ಶರೀರದಲ್ಲಿ ತಂಪಿರುತ್ತದೆ. ಬಲಹೊಳ್ಳೆಯಲ್ಲಿ ಹೆಚ್ಚು ಉಸಿರಾಟ ನಡೆಯುವಾಗ ಸೂರ್ಯನಾಡಿಯಲ್ಲಿ ಪ್ರಾಣಸಂಚಾರವಿದ್ದು ಶರೀರದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ ಮತ್ತು ಮನಸ್ಸು ಹೆಚ್ಚು ಕಾರ್ಯಪ್ರವೃತ್ತವಾಗಿರುತ್ತದೆ. ಎರಡೂ ಹೊಳ್ಳೆಯಲ್ಲಿ ಸಮ ಪ್ರಮಾಣದಲ್ಲಿ ಉಸಿರಾಟವಿದ್ದಾಗ ಪ್ರಾಣಸಂಚಾರವು ಸುಷುಮ್ನಾ ಮಾರ್ಗದಲ್ಲಿ ನಡೆಯುತ್ತಿದ್ದು ಶರೀರ ಮನಸ್ಸುಗಳಲ್ಲಿ ಧ್ಯಾನಕ್ಕೆ ಪೋಷಕವಾದ ಸ್ಥಿತಿಯುಂಟಾಗುತ್ತದೆ.
ಯಾವ ನಾಡಿಯಲ್ಲಿ ಆಗುವ ಪ್ರಾಣಸಂಚಾರ ಯಾವ ಕ್ರಿಯೆ ಅಥವಾ ಸ್ಥಿತಿಗೆ ಪೋಷಕ ಎನ್ನುವ ವಿಜ್ಞಾನವನ್ನು ಆಧರಿಸಿ ಭಾರತೀಯ ಸಂಸ್ಕೃತಿಯ ಅನೇಕ ಆಚರಣೆಗಳು ರೂಪಿತವಾಗಿವೆ. ಉದಾಹರಣೆಗೆ, ಪರಂಪರೆಯಲ್ಲಿ ಬಂದಿರುವ ನಿದ್ರಿಸುವಾಗ ಎಡಮಗ್ಗುಲಲ್ಲಿ ಮಲಗಬೇಕು ಮತ್ತು ಬಲಮಗ್ಗುಲಿನಿಂದ ಏಳಬೇಕು ಎನ್ನುವ ರೂಢಿಯಲ್ಲಿಯೂ ಸಹ ಪ್ರಾಣವಿದ್ಯೆಯ ಹಿನ್ನೆಲೆಯುಂಟು. ಎಡಮಗ್ಗುಲಲ್ಲಿ ಮಲಗಿದ್ದಾಗ ಬಲಹೊಳ್ಳೆಯಲ್ಲಿ ಪ್ರಮುಖ ಉಸಿರಾಟ ಮತ್ತು ಸೂರ್ಯನಾಡಿಯಲ್ಲಿ ಪ್ರಾಣಸಂಚಾರವಿದ್ದು ಜೀರ್ಣಪ್ರಕ್ರಿಯೆಗೆ ಪೋಷಕವಾಗಿರುತ್ತದೆ. ಏಳಬೇಕಾದರೆ ಬಲ ಮಗ್ಗುಲಲ್ಲಿ ಮಲಗಿ ನಂತರ ಎದ್ದರೆ ಪ್ರಮುಖ ಉಸಿರಾಟ ಎಡಹೊಳ್ಳೆಯಲ್ಲಿದ್ದು, ಪ್ರಾಣಸಂಚಾರ ಚಂದ್ರನಾಡಿಯಲ್ಲಿದ್ದು ಮನಸ್ಸು ಶಾಂತವಾಗಿರುತ್ತದೆ. ಶಾಂತಮನಸ್ಸಿನಿಂದ ದಿನಚರಿಯು ಆರಂಭವಾಗಬೇಕೆಂಬುದು ಈ ರೂಢಿಯ ಆಶಯ. ಇದೇ ರೀತಿ, ಗೃಹಪ್ರವೇಶ ಮಾಡಬೇಕಾದರೆ ಬಲಗಾಲನ್ನು ಮೊದಲು ಇಟ್ಟು ಪ್ರವೇಶ ಮಾಡುವುದು, ಯುದ್ಧರಂಗವನ್ನು ಪ್ರವೇಶ ಮಾಡಬೇಕಾದರೆ ಎಡಗಾಲನ್ನು ಮೊದಲಿಟ್ಟು ಪ್ರವೇಶ ಮಾಡುವುದು, ಯಜ್ಞದಲ್ಲಿ ಎರಡೂ ಕೈಗಳನ್ನು ಬಳಸಿ ಕ್ರಿಯೆಗಳನ್ನು ಮಾಡುವುದು ಮುಂತಾದ ಎಲ್ಲ ಆಚರಣೆಗಳಲ್ಲೂ ಪ್ರಾಣವಿದ್ಯೆಯ ಮರ್ಮವು ಹಿನ್ನೆಲೆಯಲ್ಲಿರುತ್ತದೆ. ಹೀಗೆ ಪ್ರಾಣಾಯಾಮದ ವಿಜ್ಞಾನವನ್ನು ಮಹರ್ಷಿಗಳು ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿ ಅಳವಡಿಸಿದ್ದಾರೆ.
ಸೂಚನೆ : 30/1/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.
Thursday, January 28, 2021
ಸಾಮರಸ್ಯಕ್ಕೊಂದು ಸರಳ ಸೂತ್ರ (Samarasyakkondu Sarala Sutra)
ಮಹಾಭಾರತದಲ್ಲಿ ಹೀಗೊಂದು ಉದ್ಬೋಧಕ ಪ್ರಸಂಗವಿದೆ-
ವನವಾಸದ ಅವಧಿಯಲ್ಲಿ ಪಾಂಡವರೊಮ್ಮೆ ದ್ವೈತವನದಲ್ಲಿದ್ದರು. ಅವರ ಹೊಟ್ಟೆ ಉರಿಸಬೇಕೆಂಬ ಉದ್ದೇಶದಿಂದ, ಬಂಧು-ಮಿತ್ರರೊಡಗೂಡಿ ವೈಭವೋಪೇತವಾದ ಸಜ್ಜುಗಳೊಡನೆ ದುರ್ಯೋಧನನು ದ್ವೈತವನದಲ್ಲಿದ್ದ ಸರೋವರದ ಬಳಿಗೆ ಹೋದನು. ದುರ್ಯೋಧನನ ಅಪ್ಪಣೆಯಂತೆ ಅಲ್ಲಿ ಕ್ರೀಡಾಸ್ಥಾನವನ್ನು ಸಿದ್ಧಪಡಿಸುವುದಕ್ಕೆ, ಅವನ ಸೇವಕರು ಆ ಸರೋವರದ ಬಳಿ ಹೋದಾಗ, ಆ ವೇಳೆಗೆ ಅಲ್ಲಿ ಬೀಡುಬಿಟ್ಟಿದ್ದ ಗಂಧರ್ವರು, ಇವರನ್ನು ತಡೆದರು. ದುರ್ಯೋಧನಾದಿಗಳೇ ಗಂಧರ್ವರನ್ನು ಎದುರಿಸಲು ಬಂದು, ಕಡೆಗೆ ಅವರಿಂದ ಬಂಧಿತರಾದರು. ಕೌರವರ ಕಡೆಯವರು ಧರ್ಮರಾಜನನ್ನು ಕಂಡು ತಮ್ಮ ರಾಜನನ್ನು ಬಿಡಿಸಿಕೊಡಬೇಕೆಂದು ಆರ್ತರಾಗಿ ಬೇಡಿಕೊಂಡರು. ಅದನ್ನು ಕೇಳಿ ಭೀಮನು, "ನಾವು ಮಾಡಬೇಕಾದದ್ದನ್ನು ಗಂಧರ್ವರೇ ಮಾಡಿದರು; ಅಧರ್ಮಾಚರಣೆಗೆ ತಕ್ಕ ಶಾಸ್ತಿಯಾಯಿತು" ಎಂದನು. ಧರ್ಮರಾಜನು ಅವನನ್ನು ತಡೆದು,
"ಪರಸ್ಪರ ವಿರೋಧೇ ತು ವಯಂ ಪಂಚ ಚ ತೇ ಶತಮ್I
ಅನ್ಯೇಭ್ಯಶ್ಚ ವಿರೋಧೇ ತು ವಯಂ ಪಂಚಾಧಿಕಂ ಶತಮ್II
(ನಮ್ಮ ನಮ್ಮಲ್ಲಿ {ಪಾಂಡವ ಕೌರವರಲ್ಲಿ ವಿರೋಧವಿದ್ದಾಗ ನಾವೈದು ಮಂದಿ; ಅವರು ನೂರು. ಇತರರೊಡನೆ ವಿರೋಧ ಬಂದಲ್ಲಿ ನಾವು ನೂರೈದು ಮಂದಿ}). "ಜ್ಞಾತಿಗಳಲ್ಲಿ ಅಭಿಪ್ರಾಯಭೇದಗಳು ಇರುತ್ತವೆ. ಆದರೆ, ಹೊರಗಿನವರು ಬಂದು ಮೇಲೆ ಬಿದ್ದಾಗ, ಅದನ್ನು ನೋಡಿಕೊಂಡು ಸುಮ್ಮನಿರುವುದೇ? ಶರಣಾಗತರಿಗೆ ಸಹಾಯ ಮಾಡಬೇಕು. ದುರ್ಯೋಧನನಿಗೆ ಆಗಿರುವ ಅವಮಾನವು ನಮಗೂ ಆದಂತೆಯೇ ಸರಿ" ಎಂದು ಹೇಳುತ್ತಾನೆ. ಧರ್ಮರಾಜನ ತಮ್ಮಂದಿರು ಗಂಧರ್ವರೊಡನೆ ಹೋರಾಡಿ, ದುರ್ಯೋಧನಾದಿಗಳನ್ನು ಗಂಧರ್ವರ ಸೆರೆಯಿಂದ ಬಿಡಿಸುತ್ತಾರೆ.
ಮಹಾಭಾರತದ ಈ ಕಥೆ ಎಲ್ಲಾ ಕಾಲಕ್ಕೂ ಪ್ರಸ್ತುತವೇ. ಇಂದು ಎಲ್ಲ ಕ್ಷೇತ್ರಗಳಲ್ಲೂ ದ್ವೇಷಾಸೂಯೆಗಳಿಂದ ಸಂಘರ್ಷಕ್ಕೆ ಇಳಿಯುವವರು ಬಹು ಮಂದಿ. ಭಾರತ ದೇಶದಲ್ಲಿ ಈ ಹಿಂದೆ ಪೃಥ್ವೀರಾಜ-ಜಯಚಂದ್ರರ ನಡುವಿನ ವೈರ, ಅಧರ್ಮಿಗಳಾದ ಪರಕೀಯರ ದಾಳಿಗೆ ಎಡೆ ಮಾಡಿಕೊಟ್ಟಿತು. ಭಾರತ ಪರಾಕ್ರಾಂತವಾಗಿ ಅತ್ಯಾಚಾರ, ಅನಾಚಾರಗಳು ಯಥೇಚ್ಛವಾಗಿ ನಡೆದವು.
ಇಂದೂ ಕೋಮುಗಲಭೆಗಳು ನಿಂತಿಲ್ಲ. ಇತ್ತೀಚಿನ ದಿನಗಳಲ್ಲೂ ಎಷ್ಟೋ ದೇವಾಲಯಗಳು ನಾಶವಾಗುತ್ತಿರುವುದಕ್ಕೆ ನಾವು ಮೂಕಪ್ರೇಕ್ಷಕರಾಗುತ್ತಿದ್ದೇವೆ. ಅಚ್ಚರಿಯ ಸಂಗತಿಯೆಂದರೆ, ಧರ್ಮವನ್ನು ಬೋಧಿಸ ಹೊರಡುವ ಆಚಾರ್ಯರು ತಮ್ಮ ಮತವೇ ಸರ್ವೊತ್ಕೃಷ್ಟವೆಂದು ಪ್ರತಿಪಾದಿಸುವ ಭರಾಟೆಯಲ್ಲಿ ಮಾಡುವ ಇತರ ಮತಗಳ ಖಂಡನೆ ತಾರಕಕ್ಕೇರಿ, ವಿಷಾಗ್ನಿ ಜ್ವಲಿಸಿ ಎಲ್ಲರನ್ನೂ ಸುಡುತ್ತಿದೆ.
ಮತಭೇದಗಳೇನೇ ಇರಲಿ; ಸಮಾನವಾದ ಅಭಿಪ್ರಾಯಗಳೂ ಸಾಕಷ್ಟಿವೆಯಷ್ಟೆ. ಭಾರತದ ಎಲ್ಲ ಆಸ್ತಿಕ ಗುರುಗಳೂ, ಭಗವತ್ಸ್ಮರಣೆ, ಪೂಜೆ, ಸರ್ವಭೂತಹಿತರೂಪವಾದ ಧರ್ಮಾಚರಣೆಗಳನ್ನು ಬೋಧಿಸಿಯೇ ಇದ್ದಾರೆ. ತಮ್ಮ ತಮ್ಮ ಮನೆಗಳಲ್ಲಿ, ತಮ್ಮ ಮತಾಚಾರ್ಯರ ಮಾತುಗಳನ್ನು ಆಚರಿಸಬಹುದು; ಆದರೆ ಮನೆಯಿಂದ ಕಾಲನ್ನು ಹೊರಗಿಟ್ಟ ಕೂಡಲೇ "ಭಾರತವಿಡೀ ಸರ್ವಹಿತಪರರಾದ ಋಷಿಮುನಿಗಳ ನಾಡು; ಧರ್ಮಾತ್ಮರಾಗಿ ರಾಜ್ಯವಾಳಿದ ಅರಸರ ನೆಲೆವೀಡು" ಎಂಬ ಪ್ರಜ್ಞೆ ಮೂಡಿಬಿಟ್ಟರೆ ನಮಗಿಂತಲೂ ಸುಖಿಗಳು ಯಾರಿದ್ದಾರೆ? ದೇಶಪ್ರೇಮ ಜಾಗೃತವಾಗಲು ಭೌಗೋಳಿಕ ಪ್ರಜ್ಞೆಯಷ್ಟೇ ಸಾಲದು; ಸಾಂಸ್ಕೃತಿಕವಾಗಿ ಸಮಾನಧರ್ಮಗಳೇನೆಂಬುದನ್ನು ಹುಡುಕಬೇಕು. "ಹುಟ್ಟುವಾಗ ಅಣ್ಣತಮ್ಮಂದಿರು; ಬೆಳೆಯುವಾಗ ದಾಯಾದಿಗಳು" ಎಂದು ಹೇಳುವುದುಂಟು. ಇದು ಲೋಕವನ್ನು ಗಮನಿಸಿ ಆಡಿರುವ ಅನುಭವದ ಮಾತೇ ಸರಿ. ಆದರೆ ದಾಯಾದಿಗಳಾಗಿದ್ದರೂ ಸರಿ; ಸಮಾಜ, ದೇಶಗಳ ರಕ್ಷಣೆಯ ವಿಷಯ ಬಂದಾಗ ನಾವು ಅಣ್ಣ-ತಮ್ಮಂದಿರು ಎಂದು ಭಾವಿಸುವುದು ವಿವೇಕಯುತವಾದ ನಡೆ. ಇಂತಹ ನಡೆ ಭಾರತೀಯರಿಗೆ ಅಸಾಧ್ಯವೇನೂ ಅಲ್ಲ. ಬಹುಶಃ ಉದಾರಗುಣಗಳನ್ನು ಮೆರೆದವರ ವೃತ್ತಾಂತಗಳ ಇತಿಹಾಸದ ಪುಟಗಳನ್ನು ನೋಡಿದಾಗ, ಭಾರತಕ್ಕೆ ಸರಿಸಮಾನ ರಾಷ್ಟ್ರ ಮತ್ತೊಂದಿರಲಾರದು.
"ಇತಿಹಾಸದಲ್ಲಿ ಎಲ್ಲಾ ದೇಶಗಳ ಜೀವನ ನಾವೆಗಳೂ ಆಗಿಂದಾಗ್ಗೆ ಬದಲಾಗುತ್ತಿದ್ದರೂ, ಭಾರತದಲ್ಲಿ ಈವರೆವಿಗೂ ಅನೇಕ ದಾಳಿಗಳು ನಡೆದಿದ್ದರೂ, ಒಂದೇ ರೀತಿಯಾದ ನಾವೆಯಲ್ಲಿ ಭಾರತವು ಪ್ರಯಾಣ ಮಾಡುತ್ತಿದೆ. ಈ ತರಹದ ಜೀವನದ ಧ್ಯೇಯನಿಷ್ಕರ್ಷೆ ಮತ್ತು ಅದರ ಸಾಧನಾವಿಧಾನ ಇವುಗಳನ್ನು ಮತ್ತಾವ ದೇಶದ ಇತಿಹಾಸದಲ್ಲೂ ನಾವು ಕಾಣಲಾಗುವುದಿಲ್ಲ" ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ.
ಭ್ರಾತೃಪ್ರೇಮವನ್ನು ಬಿಂಬಿಸುವ ರಾಮಾಯಣದಂತಹ ಆರ್ಷಕಾವ್ಯಗಳು, ಭರತ-ಬಾಹುಬಲಿಗಳ ಸಹೋದರ ಸೌಹಾರ್ದದ ಇತಿಹಾಸ- ಮುಂತಾದ ನಿದರ್ಶನಗಳು ಅನೇಕ. ಮಹಾಭಾರತವು ಜ್ಞಾತಿಕಲಹದ ವೈಭವೀಕರಣದಂತೆ ಕಂಡರೂ, ಮೂಲತಃ ಧರ್ಮಕ್ಕೆ ಜಯವಾಗಬೇಕೆಂದು ಹೋರಾಡಿದವರ ಕಥೆಯೇ ಆಗಿದೆ. ಮೂಲಮಹಾಭಾರತದಲ್ಲಿ ಅನೇಕ ಕಥೆಗಳು ಬಂದಿದ್ದರೂ, ವಿಷಯದ ದೃಷ್ಟಿಯಿಂದ ಧರ್ಮಕ್ಕೆ ಹಾಗೂ ತತ್ತ್ವಕ್ಕೇ ಪ್ರಾಧಾನ್ಯ. ಇಂದಾದರೂ ನಮ್ಮ ಪೂರ್ವಜರ ಮಾತುಗಳಲ್ಲಿ ಕಂಡುಬರುವ ಸಮಾನಧರ್ಮಗಳನ್ನು ಹುಡುಕಿ ಸೌಮನಸ್ಯದಿಂದ ಒಗ್ಗಟ್ಟಾದರೆ, ನಾವು ಮೊದಲಿಗೆ ಭಾರತೀಯರು; ನಂತರ ಇಂತಹ ಒಳಪಂಗಡದವರು ಎನ್ನುವಂತಾದರೆ, ಭಾರತದಲ್ಲಿ ಸುವರ್ಣಯುಗ ಪ್ರಾರಂಭವಾಗುವ ದಿನಗಳು ದೂರವಿಲ್ಲ.
ಸೂಚನೆ: 28/01/2021 ರಂದು ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.
Wednesday, January 27, 2021
ಬೇಸರವಿಲ್ಲದ ಜೀವನ ಉಂಟೆ? (Besaravillada Jivana Unte?)
ಲೇಖಕಿ: ಪದ್ಮಿನಿ ಶ್ರೀನಿವಾಸನ್
(ಪ್ರತಿಕ್ರಿಯಿಸಿರಿ lekhana@ayvm.in)
ಬೇಸರವೆಂಬುದು ಜೀವನದಲ್ಲಿ ನಾವೆಲ್ಲರೂ ಅನುಭವಿಸಿರುವ ಒಂದು ಸಹಜವಾದ ಭಾವನೆ. ಕಾರಣಗಳು ಹಲವಾರು - ಆಪ್ತರ ಅಗಲಿಕೆ, ಧನವ್ಯಯ, ಅನಾರೋಗ್ಯ, ವೃತ್ತಿ/ಸಂಸಾರಗಳ ಒತ್ತಡ ಇತ್ಯಾದಿ. ನಮ್ಮ ಉತ್ಸಾಹ/ಉತ್ತೇಜನಗಳನ್ನು ಕುಂದಿಸುವ ಸ್ಥಿತಿಯನ್ನು ಬೇಸರವೆಂದು ಕರೆದು, ಆಧುನಿಕ ಸಂಶೋಧಕರು ಹಲವಾರು ಪರಿಹಾರಗಳನ್ನು ಹೇಳಿದ್ದಾರೆ. ನಿಮ್ಮ ಗುರಿ/ಆಸೆ/ಆಕಾಂಕ್ಷೆಗಳನ್ನು ಗುರುತಿಸಿ, ಸವಾಲು ಹಾಕಿಕೊಳ್ಳಿ, ಸಮಾಜದಲ್ಲಿ ಬೆರೆಯಿರಿ, ದಿನಚರಿಯಲ್ಲಿ ಏನಾದರೂ ಹೊಸತನ್ನು ಅಳವಡಿಸಿಕೊಳ್ಳಿ, ವಿಶ್ವ ಪರ್ಯಟನ ಮಾಡಿ, ಹೊಸ ರುಚಿಯನ್ನು ಆಸ್ವಾದಿಸಿ, ಹೊಸ ದೃಶ್ಯಗಳನ್ನು ನೋಡಿ/ಟೀವಿ /ಚಲನ ಚಿತ್ರ ವೀಕ್ಷಿಸಿ, ಹವ್ಯಾಸಗಳು/ಕ್ರೀಡೆ/ಕಲೆಗಳಲ್ಲಿ ಅಭಿರುಚಿ ಬೆಳೆಸಿಕೊಳ್ಳಿ, ಸಂತೋಷದ ಸನ್ನಿವೇಶಗಳನ್ನು ಮೆಲುಕು ಹಾಕುತ್ತಿರಿ ಇತ್ಯಾದಿ ನಾನಾ ರೀತಿಯ ಸಲಹೆಗಳು ಬರುತ್ತವೆ. ಮನಸ್ಸಿನ ಸಾತ್ತ್ವಿಕ ಪ್ರಚೋದನೆಗಳನ್ನು ಪುಷ್ಟೀಕರಿಸಿ, ಸಕಾರಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳುವುದರ ಮೂಲಕ, ಬೇಸರವನ್ನು ಹೋಗಲಾಡಿಸಿಕೊಳ್ಳಿ ಎನ್ನುವುದು ಮನೋವಿಜ್ಞಾನಿಗಳ ಅಭಿಪ್ರಾಯ.
ಸಂತೋಷವನ್ನು ಕೊಡುವುದಾಗಿ ನಾವು ಭಾವಿಸುವ ಸಂಗತಿಗಳು ನಮ್ಮಲ್ಲಿನ ಸಂತೋಷದ ಬಲ್ಬಿನ 'ಸ್ವಿಚ್ ಆನ್' ಮಾಡುತ್ತವೆ ಅಷ್ಟೇ. ಕಾಲವು ಉರುಳುತ್ತಾ, ಸ್ವಿಚ್ಚುಗಳ ಹಿಂದಿನ ತಂತಿಗಳು ಹಳತಾಗಿ ಕೆಟ್ಟು ಹೋಗುವುದು ಸಹಜ. ಆದರೆ ವಸ್ತುಸ್ಥಿತಿ ಅರಿಯದೆ ನಾವು ಹೊಸ ಹೊಸ ಆಸೆಗಳನ್ನು ಮನದುಂಬಿಕೊಂಡು 'ಸ್ವಿಚ್-ಆನ್' ಮಾಡುವ ವ್ಯರ್ಥಪ್ರಯತ್ನ ಮಾಡುತ್ತೇವೆ. ಕಾಲವು ಆಡುತ್ತಿದೆ; ಆಯುಸ್ಸು ಕಳೆಯುತ್ತಿದೆ; ಆದರೆ ಆಶಾವಾಯುವು ಮಾತ್ರ ಬಿಟ್ಟುಹೋಗದಲ್ಲ!" ಎಂದು ಶಂಕರಭಗವತ್ಪಾದರು ಹೇಳಿರುವಂತೆ, ಜೀವನವೆಲ್ಲ ತೀರದ ಆಸೆ, ಬಾರದ ತೃಪ್ತಿ. ಆದರೆ ಸಂತೋಷದ 'ಬಲ್ಬಿ'ಗೆ ಗುಪ್ತವಾದ ಮತ್ತೊಂದು 'ಸ್ವಿಚ್' ಉಂಟು.
ಯೋಗೇಶ್ವರ ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು :"ಭಗವಂತನ ಸಮೀಪದಲ್ಲಿದ್ದ ಚೇತನನು ಭಗವತ್ಸನ್ನಿಧಿಯಿಂದ ಬಹುದೂರ ಬಂದಿದ್ದಾನೇಪ್ಪಾ". ನಮ್ಮೆಲ್ಲ ಚಟುವಟಿಕೆಗಳ ಹಿಂದೆ ಚೈತನ್ಯ ಶಕ್ತಿಯಾಗಿರುವ ಆತ್ಮನು, ಸೃಷ್ಟಿಗಿಳಿದು, ಅವನ ಸ್ವಧಾಮವಾದ ಭಗವಂತನ ಮಡಿಲಿಗೆ ಹಿಂತಿರುಗಲಾಗದ ಬೇಸರದಿಂದ ಕೂಡಿದ್ದಾನೆಂಬ ಅರಿವು ಅವನಿಗಾಗುತ್ತಿಲ್ಲ. ಅಮೋಘವಾದ ಸಂಶೋಧನೆಯಿಂದ, ನಮ್ಮ ಮಹರ್ಷಿಗಳು ಅಂತರಂಗದಲ್ಲಿ ಅಡಗಿರುವ 'ಸ್ವಿಚ್'ನ್ನು ಕಂಡು, ಆತ್ಮ-ಪರಮಾತ್ಮರನ್ನು ನಿತ್ಯವೂ ಒಂದಾಗಿಸಿ ನಿತ್ಯಾನಂದ ಸ್ವರೂಪಿಯಾದ ಆ ಪರಮಾತ್ಮನ ಮೂಲದಿಂದ ಉಕ್ಕುವ ಬ್ರಹ್ಮಾನಂದವನ್ನು ಅನುಭವಿಸಿದರು. ಯೋಗ ಪ್ರಕ್ರಿಯೆಯಿಂದ ಪಡೆದ ಪರಮಾನಂದದ ಗುಟುಕುಗಳನ್ನು ಭೋಗ ಜೀವನಕ್ಕೂ ತಂದುಕೊಂಡು, ಸಮರಸ ಜೀವನ ಮಾಡಿದರು. ಮನುಷ್ಯನ ಉದ್ಧಾರಕ್ಕಾಗಿ, ಭವ್ಯವಾದ ಸಂಸ್ಕೃತಿಯನ್ನು ಜನ ಜೀವನದಲ್ಲಿ ಹಾಸು ಹೊಕ್ಕಾಗಿ ಹೆಣೆದು ಕೊಟ್ಟು, ಆತ್ಮರಂಜನೆಯವರೆಗೆ ಮುಟ್ಟುವ ಮನೋರಂಜನೆಗಳನ್ನೂ ಕೃಪೆಯಿಂದ ತಂದುಕೊಟ್ಟರು. ಸದ್ಗುರುವಿನ ಆಶ್ರಯ ಪಡೆದು, ನಮ್ಮ ಚಿತ್ತವೃತ್ತಿಗಳನ್ನು ಶುದ್ಧಮಾಡಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದರೆ, ಕ್ರಮೇಣ ಆತ್ಮಾನಂದವನ್ನು ನಾವು ಅನುಭವಿಸಬಹುದು.ಇತರ ಸುಖಗಳಿಗಿಂತ ಕೋಟಿ ಕೋಟಿ ಪಾಲು ಮಿಗಿಲಾದ ನಿರಂತರ ಆನಂದದ ಅರಿವು ನಮಗೆ ಬಂದಂತೆ, ಬೇಸರವೆನ್ನಲು ಸಮಯವೇ ಇರಲಾರದು.
ಸೂಚನೆ: 27/1/2021 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.
Sunday, January 24, 2021
ಪ್ರಾಣಾಯಾಮ (Pranayama)
ಉಸಿರಾಟದ ನಿಯಂತ್ರಣದ ಮೂಲಕ ಪ್ರಾಣಶಕ್ತಿಗಳನ್ನು ನಿಯಂತ್ರಿಸುವುದು ಅಷ್ಟಾಂಗಯೋಗದ ನಾಲ್ಕನೇ ಮೆಟ್ಟಿಲಾದ ಪ್ರಾಣಾಯಾಮ. ನಮ್ಮ ಶ್ವಾಸಕೋಶವು ತಿದಿಯಂತೆ ಹಿಗ್ಗುವುದು, ಕುಗ್ಗುವುದು ಆಗುತ್ತಾ ಇರುವುದರಿಂದ ನಾವು ಗಾಳಿಯನ್ನು ಒಳಗೆ ತೆಗೆದುಕೊಳ್ಳುವ, ಪುನಃ ಹೊರಗೆ ಬಿಡುವ ರೂಪದಲ್ಲಿ ಉಸಿರಾಟ ಮಾಡುತ್ತಾ ಇರುತ್ತೇವೆ. ಶ್ವಾಸಕೋಶವು ಹೀಗೆ ಕೆಲಸ ಮಾಡಲು ಅದರ ಹಿಂದೆ ಒಂದು ಶಕ್ತಿ ಇದ್ದಾಗ ಮಾತ್ರ ಸಾಧ್ಯ. ಈ ಶಕ್ತಿಯೇ ಪ್ರಾಣಶಕ್ತಿ. ಪ್ರಾಣಶಕ್ತಿಯು ಎರಡು ವಿಭಾಗವಾಗಿ ಅಂದರೆ ಪ್ರಾಣ ಮತ್ತು ಅಪಾನ ಎಂಬ ಎರಡು ವಾಯುಗಳಾಗಿ ಒಂದು ಮೇಲ್ಮುಖವಾಗಿ ಮತ್ತೊಂದು ಕೆಳಮುಖವಾಗಿ ಕೆಲಸ ಮಾಡುವುದರಿಂದ ಶ್ವಾಸಕೋಶದ ಮೇಲೆಯೂ ಒತ್ತಡವುಂಟಾಗಿ ಅದು ಹಿಗ್ಗುವುದು-ಕುಗ್ಗುವುದು ಆಗಿ ಉಸಿರಾಟ ನಡೆಯುತ್ತಿರುತ್ತದೆ. ಸುಲಭವಾಗಿ ಅರ್ಥ ಮಾಡಿಕೊಳ್ಳಲು ಪ್ರಾಣವಾಯುವನ್ನು ಒಂದು ಶಕ್ತಿ(force) ಎಂದೂ ಕರೆಯಬಹುದು. ಆಳವಾಗಿ ಉಸಿರಾಡುತ್ತಾ ನಮ್ಮ ಶರೀರವನ್ನು ಗಮನಿಸಿದರೆ ಈ ವಾಯುಗಳ ಪರಿಚಯವನ್ನು ಪಡೆಯಬಹುದು. ಉಸಿರನ್ನು ತೆಗೆದುಕೊಂಡಾಗ ಕ್ರಮೇಣ ಎದೆಯಭಾಗವು ಹಿಗ್ಗುತ್ತಾ ಕೊನೆಗೆ ಹೊಟ್ಟೆಯೂ ಹಿಗ್ಗುತ್ತದೆ. ಮತ್ತು ದೀರ್ಘವಾಗಿ ಉಸಿರನ್ನು ಬಿಡುತ್ತಾ ಬಂದರೆ ಹೊಟ್ಟೆಯು ಒಳಗೆ ಹೋಗುತ್ತದೆ. ಶರೀರ ರಚನೆಯಲ್ಲಿ ಮೂಗಿನ ಹೊಳ್ಳೆಗಳು ಸಂಪರ್ಕ ಹೊಂದಿರುವುದು ಎದೆಯ ಭಾಗದಲ್ಲಿರುವ ಶ್ವಾಸಕೋಶಗಳ ಜೊತೆ. ಆದರೂ ಹೊಟ್ಟೆಯು ಏಕೆ ಹಿಗ್ಗುವುದು ಕುಗ್ಗುವುದು ಆಗುತ್ತದೆಯೆಂದರೆ ಇಲ್ಲಿ ಒಂದು ಶಕ್ತಿ ಕೆಲಸ ಮಾಡುತ್ತದಾದುದರಿಂದ. ಈ ಮೇಲ್ಮುಖ ಹಾಗೂ ಕೆಳಮುಖವಾಗಿ ಕೆಲಸ ಮಾಡುವ ಶಕ್ತಿಗಳನ್ನೇ ಪ್ರಾಣವಾಯು, ಅಪಾನವಾಯು ಎನ್ನುವುದು. ಉಸಿರಾಟವನ್ನು ನಿಯಂತ್ರಿಸಿದರೆ ಪ್ರಾಣಶಕ್ತಿಯೂ ನಿಯಂತ್ರಣಕ್ಕೆ ಬರುತ್ತದೆ. ಪ್ರಾಣವು ನಿಯಂತ್ರಣಗೊಂಡರೆ ಅದು ಅನೇಕ ವಿಧವಾದ ರೋಗಗಳಿಗೆ ಪರಿಹಾರವನ್ನುಂಟು ಮಾಡಿ ಆರೋಗ್ಯ ಸಿದ್ಧಿಯಾಗುವುದಷ್ಟೇ ಅಲ್ಲದೇ ಮನಸ್ಸೂ ಸಹ ನಿಯಂತ್ರಣಗೊಂಡು ಏಕಾಗ್ರವಾಗುತ್ತದೆ.
ಪ್ರಾಣಾಯಾಮಗಳಲ್ಲಿರುವ ಸಾಮಾನ್ಯ ಅಂಶಗಳೆಂದರೆ ಪೂರಕ, ರೇಚಕ, ಕುಂಭಕಗಳು. ಪೂರಕವೆಂದರೆ ಉಸಿರನ್ನು ಒಳಗೆ ತೆಗೆದುಕೊಳ್ಳುವುದು, ರೇಚಕವೆಂದರೆ ಉಸಿರನ್ನು ಹೊರಗೆ ಬಿಡುವುದು ಮತ್ತು ಕುಂಭಕವೆಂದರೆ ಉಸಿರನ್ನು ಕಟ್ಟುವುದು. ಮೂಗಿನ ಯಾವ ಹೊಳ್ಳೆಯಲ್ಲಿ ಪೂರಕ, ಯಾವ ಹೊಳ್ಳೆಯಲ್ಲಿ ರೇಚಕ ಮತ್ತು ಯಾವಾಗ ಕುಂಭಕವೆಂಬ ವಿಭಿನ್ನತೆಯು ಪ್ರಾಣಾಯಾಮದ ನಾನಾ ವಿಧಗಳನ್ನು ರೂಪಿಸುತ್ತದೆ.
ಚಿತ್ತ ಹಾಗೂ ಪ್ರಾಣಗಳ ಪರಸ್ಪರ ಸಂಬಂಧವಿರುವುದರಿಂದ ಒಂದನ್ನು ತಡೆಗಟ್ಟಿದರೆ ಮತ್ತೊಂದರ ಸ್ಪಂದನಿರೋಧವಾಗುತ್ತದೆಯೆಂಬ ಅಂಶ ಶ್ರೀರಂಗಮಹಾಗುರುಗಳ ಪಾಠಗಳಲ್ಲಿ, ಎತ್ತಿ ಹೇಳಲ್ಪಟ್ಟಿದೆ.
ಸೂಚನೆ : 24/1/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.
ಆರ್ಯಸಂಸ್ಕೃತಿ ದರ್ಶನ - 27 (Arya Samskruti Darshana - 27 )
ಅನಾದಿಕಾಲದಿಂದ ಸಂಸ್ಕೃತಿಯ "ನೆಲೆವೀಡಾದ ಭಾರತದೇಶವೂ ಸಹ ತನ್ನ ಸಂಸ್ಕೃತಿ, ಕಲೆ ಇತ್ಯಾದಿಗಳ ಗಾಂಭೀರ್ಯಕ್ಕೆ ಅನುಗುಣವಾಗಿ ಆಭರಣಗಳ ಪರಂಪರೆಯನ್ನು ನಿರ್ಮಿಸಿಕೊಂಡಿರುತ್ತದೆ. ಈ ಆಭರಣಗಳ ಹಿಂದೆ ದೀರ್ಘಕಾಲದ ಚರಿತ್ರೆ ಇದೆ ಎಂಬುವುದನ್ನು ನಮ್ಮ ದೇಶದ ಸಾಹಿತ್ಯ ಹಾಗೂ ಶಿಲ್ಪಗಳು ನಮಗೆ ತಿಳಿಯಗೊಡುತ್ತವೆ. ಅವುಗಳಲ್ಲಿ ಅಲ್ಲಲ್ಲಿ ವ್ಯತ್ಯಾಸಗಳುಂಟಾಗಿದ್ದರೂ, ಅವು ಬಹಳ ಪುರಾತನ ಕಾಲದಿಂದ ನಮ್ಮವರೆಗೆ ಅನುಸ್ಯೂತವಾಗಿ ಬಂದಿರುತ್ತವೆಂಬುದು ಗಮನಾರ್ಹವಾದ ವಿಷಯ.
ವಿಜ್ಞಾನ, ವಿಚಾರ ಮತ್ತು ಆದರ್ಶಗಳೆಲ್ಲವೂ ಅದರಲ್ಲಿರುವುದು ಕಂಡುಬರುತ್ತದೆ. ಇದಕ್ಕೆ ನಮ್ಮ ದೇಶದ ಸ್ತ್ರೀಯರು ತೊಡುವ ಮಂಗಳಾಭರಣಗಳು ಒಳ್ಳೆಯ ನಿದರ್ಶನಗಳೆಂದು ಹೇಳಬಹುದು. ಅವು ಒಂದು ಕಡೆ ಅಲಂಕಾರ ಸಾಮಗ್ರಿಗಳು, ಮತ್ತೊಂದು ಕಡೆ ಅವುಗಳನ್ನು ನಿರ್ಮಿಸುವ ದ್ರವ್ಯಗಳ ಕಾರಣದಿಂದ ಶರೀರದ ಮೇಲೆ ಸತ್ಪರಿಣಾಮವನ್ನುಂಟು ಮಾಡುವ, ಶರೀರ ದೋಷಗಳನ್ನು ನಿವಾರಿಸುವ, ಯುಕ್ತಿಯುಕ್ತವಾದ ತೊಡಿಗೆಗಳು. ಜೊತೆಗೆ ಅವು ಆಳವಾದ ಆಧ್ಯಾತ್ಮಿಕ ಅರ್ಥದಿಂದ ಕೂಡಿರುವ ಭೂಷಣಗಳೂ ಸಹ ಆಗಿರುತ್ತವೆ. ಒಂದು ಮಾತಿನಲ್ಲಿ ಹೇಳುವುದಾದರೆ ಅವುಗಳಲ್ಲಿ ಸೌಂದರ್ಯ, ಆರೋಗ್ಯ ಮತ್ತು ಜ್ಞಾನ ಈ ಮೂರೂ ಒಂದೆಡೆ ಸೇರಿವೆಯೆಂದು ಹೇಳಬಹುದು.
ದೇಗುಲದಲ್ಲಿ ಪ್ರತ್ಯಕ್ಷ ಮಾಡಿಕೊಂಡು, ಅದರ ಸವಿನೆನೆಪಿನಿಂದ ಕೂಡಿ, ಜೀವನ ಮಾಡಲು ಎಳೆಸಿದರು ಎಂಬುದನ್ನು ನಾವು ನಮ್ಮ ಪತ್ರಿಕೆಯಲ್ಲಿ ಬಗೆ ಬಗೆಯಾಗಿ ವಿವರಿಸಲು ಯತ್ನಿಸುತ್ತೇವೆ. ಅಂತಹ ಜೀವನವನ್ನು ಮಾಡಲು ಸಹಾಯ ಮಾಡುವುದರಲ್ಲಿ ಈ ಮಂಗಳಾಭರಣಗಳ ಪಾತ್ರ ತುಂಬ. ಅವುಗಳನ್ನು ಹಾಕಿಕೊಳ್ಳುವ ಸ್ಥಾನಗಳೆಲ್ಲವೂ ಶರೀರದ ಮುಖ್ಯವಾದ ಮರ್ಮಸ್ಥಾನಗಳು. ಯೋಗಿಯಾದವನು ಬಂಧ, ಮುದ್ರೆ ಮುಂತಾದ ಯೋಗಕ್ರಿಯೆಗಳಿಂದ ಏನನ್ನು ಸಾಧಿಸುತ್ತಾನೆಯೋ ಅದನ್ನು ಸಾಧ್ವೀಮಣಿಯಾದ ಸ್ತ್ರೀಯು ಆಯಾ ಮರ್ಮಸ್ಥಾನಗಳಲ್ಲಿ ಧರಿಸಿದ ತನ್ನ ಆಭರಣಗಳಿಂದ ಸಾಧಿಸುತ್ತಾಳೆ. " ಪತಿಯೇ ಪರದೈವ" ಎಂಬ ಮಾತನ್ನು ಕೇಳುತ್ತೇವೆ. ತನಗೆ, ತನ್ನ ಪತಿಗೆ ಹಾಗೇ ಎಲ್ಲರಿಗೂ ದೇವನಾದ ಪ್ರಭುವು ತಾನೆ ನಿಜವಾದ ಪರದೈವ. ಪತಿಯನ್ನೇ ಪರದೈವವಾಗಿ ಭಾವಿಸುವುದರ ಮೂಲಕ ಅವಳು ಪರದೈವವನ್ನೇ ಕಡೆಗೆ ಸಾಕ್ಷಾತ್ಕರಿಸಿಕೊಳ್ಲುವ ದಾರಿಯಲ್ಲಿ ಹೋಗುವ ನಾರೀಮಣಿಯಾಗಿರುತ್ತಾಳೆ. ಅವಳು ಧರಿಸುವ ಕುಂಕುಮ, ಅರಿಶಿನ, ತ್ರಿವೇಣಿ, ಬೈತಲೆ, ಮಂಗಳಾಭರಣ ಇತ್ಯಾದಿಗಳೆಲ್ಲವೂ ಆ ದಾರಿಯನ್ನೇ ಸೂಚಿಸುತ್ತವೆ. ಅದರ ಸ್ಮರಣೆಯನ್ನು ಹೊಂದಿರುತ್ತವೆ. ಆ ದಾರಿಯಲ್ಲಿರಬೇಕಾದರೆ ಆವಶ್ಯಕವಾದ ಶಾರೀರಿಕ ಮತ್ತು ಮಾನಸಿಕ ಸ್ಥಿತಿಗತಿಗಳನ್ನು ಉಂಟುಮಾಡುತ್ತವೆ. ಅವಳ ಶರೀರ ಸೌಂದರ್ಯದ ಜೊತೆಗೆ ಅವಳ ಆತ್ಮ ಸೌಂದರ್ಯವನ್ನು ಎತ್ತಿ ಹೇಳುತ್ತವೆ. ಒಟ್ಟಿನಲ್ಲಿ ಅವು ಕೇವಲ ಶರೀರ ಸೌಂದರ್ಯವನ್ನೇ ಇಟ್ಟುಕೊಂಡು ಮಾಡಿಕೊಳ್ಳುವ ಅಲಂಕಾರಗಳಲ್ಲ.
Sunday, January 17, 2021
ಆರ್ಯಸಂಸ್ಕೃತಿ ದರ್ಶನ - 26 (Arya Samskruti Darshana - 26)
ಹೀಗೆ ಐಶ್ವರ್ಯ ಎಂಬ ಪದವು ಈಶ್ವರನಿಂದ ಅರಳಿದ ನಿಸರ್ಗದಲ್ಲಿ ತುಂಬಿರುವ ಎಲ್ಲ ಬಗೆಯ ಸಂಪತ್ತುಗಳಿಗೂ ಅನ್ವಯಿಸುವ ವ್ಯಾಪಕ ಪದವಾಗಿದೆ. ಪಂಚಭೂತಗಳ ಪ್ರಪಂಚವನ್ನು ಮಾತ್ರ ನೋಡದೇ ಆತ್ಮ ಪ್ರಪಂಚವನ್ನೂ ತುಂಬಿಕೊಂಡು ಹರಿದಿದೆ ಅವರ ಸಂಸ್ಕೃತಿ ಎಂಬುದಕ್ಕೆ "ಐಶ್ವರ್ಯ" ಎಂಬ ಪದವೂ ಸಮರ್ಥವಾದ ಸಾಕ್ಷಿಯಾಗಿದೆ.
Saturday, January 16, 2021
ಆಸನ (Asana)
ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)
ಪತಂಜಲಿಗಳ ಯೋಗಸೂತ್ರವು, ಸ್ಥಿರವೂ ಸುಖಕರವೂ ಆದುದು ಆಸನ ಎಂದು ಹೇಳುತ್ತದೆ. ಅಷ್ಟಾಂಗಯೋಗದ ಅಂತಿಮ ಲಕ್ಷ್ಯವಾದ ಸಮಾಧಿಸ್ಥಿತಿಯು, ಶರೀರವು ದೀರ್ಘಕಾಲ ಒಂದೇ ಸ್ಥಿತಿಯಲ್ಲಿರುವುದನ್ನು ಅಪೇಕ್ಷಿಸುತ್ತದೆ. ಆಸನಾಭ್ಯಾಸವು ಶರೀರಕ್ಕೆ ಬಹಳ ಹೊತ್ತು ಒಂದು ಭಂಗಿಯಲ್ಲಿರುವ ಸಾಮರ್ಥ್ಯವನ್ನು ತಂದುಕೊಡುತ್ತದೆ.
ಸೂರ್ಯನಮಸ್ಕಾರ, ಪಶ್ಚಿಮತಾನಾಸನ, ಪದ್ಮಾಸನ ಮುಂತಾದವು ಇಂದು ಪ್ರಸಿದ್ಧವಾಗಿರುವ ಆಸನಗಳಾಗಿವೆ. ಪ್ರಪಂಚದಲ್ಲಿ ಎಷ್ಟು ಬಗೆಯ ಜೀವಜಾತಿಗಳುಂಟೋ ಅಷ್ಟುಬಗೆಯ ಆಸನಗಳುಂಟೆಂಬ ಶಾಸ್ತ್ರವಾಕ್ಯವನ್ನು ಶ್ರೀರಂಗಮಹಾಗುರುಗಳು ವಿಶೇಷವಾಗಿ ಉಲ್ಲೇಖ ಮಾಡುತ್ತಿದ್ದರು. ಪರಂಪರೆಯಲ್ಲಿ ಜೀವಜಾತಿಗಳು 84 ಲಕ್ಷ ಎಂದು ಪ್ರಸಿದ್ಧವಾಗಿದೆ ಮತ್ತು ಇವುಗಳಲ್ಲಿ 84 ಆಸನಗಳು ಅಭ್ಯಾಸಕ್ಕೆ ಪ್ರಶಸ್ತವಾದ ಆಸನಗಳು ಎಂದು ಯೋಗೋಪನಿಷತ್ತು ಹೇಳುತ್ತದೆ. ಮತ್ತು ಬಾಲಕರಿಗೆ ಸುಲಭಸಾಧ್ಯವೂ, ವಯಸ್ಕರಿಗೆ ಸ್ವಲ್ಪ ಶ್ರಮಸಾಧ್ಯವೂ ಆಗಿರುವ ಆಸನಾಭ್ಯಾಸಕ್ಕೆ ಮತ್ತಾವುದೇ ದ್ರವ್ಯ ಅಥವಾ ಪದಾರ್ಥವನ್ನು ವ್ಯಯ ಮಾಡಬೇಕಾಗಿಲ್ಲದಿರುವುದರಿಂದ ಆಸನಗಳು ಪ್ರತಿಯೊಬ್ಬರೂ ಅಭ್ಯಸಿಸತಕ್ಕುದ್ದಾಗಿದೆ ಎಂದು ಆಸನಗಳನ್ನು ಪ್ರಶಂಸಿಸುತ್ತಿದ್ದರು.
ಮಹರ್ಷಿಗಳು ಯೋಗಾಭ್ಯಾಸದಲ್ಲಷ್ಟೇ ಅಲ್ಲದೇ ನಿತ್ಯಜೀವನದಲ್ಲಿಯೂ ಆಸನ ವಿಜ್ಞಾನದ ಮರ್ಮವನ್ನು ಹಾಸುಹೊಕ್ಕಾಗಿ ಅಳವಡಿಸಿದ್ದಾರೆ. ಯಾವ ಯಾವ ಶರೀರವಿನ್ಯಾಸವು ಯಾವ ಯಾವ ನಾಡಿಗಳಲ್ಲಿ ಪ್ರಾಣಶಕ್ತಿಯು ಹರಿಯುವಂತೆ ಮಾಡುತ್ತದೆ ಎನ್ನುವುದರ ಆಧಾರದ ಮೇಲೆ ಬೇರೆ ಬೇರೆ ಕಾರ್ಯಗಳಿಗೆ ಬೇರೆ ಬೇರೆ ಆಸನಗಳನ್ನು ನಿರ್ದೇಶಿಸಿದ್ದಾರೆ.
ರಾತ್ರಿ ನಿದ್ರಿಸಬೇಕಾದರೆ ಎಡಮಗ್ಗುಲಿಗೆ ತಿರುಗಿ ಮಲಗಬೇಕು, ಮತ್ತು ಏಳಬೇಕಾದರೆ ಬಲಮಗ್ಗುಲಿಗೆ ತಿರುಗಿ ಏಳಬೇಕು ಎನ್ನುವ ಪರಂಪರಾಗತ ರೂಢಿಯು ಆಸನಗಳ ವಿಜ್ಞಾನದ ಆಧಾರದ ಮೇಲೆ ರೂಪಿತವಾಗಿದೆ. ಒಂದೆರಡು ದಶಕಗಳ ಹಿಂದಿನವರೆವಿಗೂ ಹಿರಿಯರು, ಮಕ್ಕಳ ನಿಲುವಿನ ಅಥವಾ ನಡೆಯುವ ಭಂಗಿಗಳನ್ನು ತಿದ್ದುತ್ತಿದ್ದರು. ಯಾರಾದರೂ ಸೊಟ್ಟಗೆ ನಿಂತಿದ್ದರೆ ನೆಟ್ಟಗೆ ನಿಂತುಕೋ ಎಂದೋ ಅಥವಾ ಗೂನಿಕೊಂಡು ನಡೆಯುತ್ತಿದ್ದರೆ ಬೆನ್ನು ನೆಟ್ಟಗಿಟ್ಟುಕೊಂಡು ನಡೆ ಎಂದು ಬೆನ್ನುಮೂಳೆ ನೇರವಾಗಿರುವ ಶರೀರವಿನ್ಯಾಸವನ್ನು ರೂಢಿ ಮಾಡಿಸುತ್ತಿದ್ದರು.
ಇಂದು, ಅಡಿಗೆಯ ಬಹುತೇಕ ಕೆಲಸಗಳನ್ನು ನಿಂತುಕೊಂಡು ಮಾಡುತ್ತಿರುವುದರಿಂದ ಕಾಲುಗಳ ಮತ್ತು ಬೆನ್ನುಮೂಳೆಯ ಕೆಳಭಾಗದ, ಆಧಾರ ವ್ಯವಸ್ಥೆಯ ಹೊರೆ ಜಾಸ್ತಿಯಾಗಿ ಮಧ್ಯವಯಸ್ಕ ಮಹಿಳೆಯರಿಗೆ ಸೊಂಟ ನೋವು, ಬೆನ್ನು ನೋವು ಮತ್ತು ಮಂಡಿ ನೋವುಗಳು ಹೆಚ್ಚಾಗುತ್ತಿವೆಯೆಂದು ಆಧುನಿಕ ವೈದ್ಯರು ಅಭಿಪ್ರಾಯ ಪಡುತ್ತಿದ್ದಾರೆ. ಆದರೆ ಹಿಂದಿನವರು ಅಡಿಗೆ ಮಾಡಬೇಕಾದರೆ ಕುಳಿತೇ ಬಹುತೇಕ ಕೆಲಸಗಳನ್ನು ಮಾಡುತ್ತಿದ್ದಾಗ ಈ ಸಮಸ್ಯೆಗಳು ಹೆಚ್ಚಿರಲಿಲ್ಲ.
ಹೀಗೆ, ಆಸನ ವಿಜ್ಞಾನವು ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿ ಅಳವಡಿಸಲ್ಪಟ್ಟಿವೆ.
ಸೂಚನೆ : 16/1/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.
Tuesday, January 12, 2021
Dayaa - Kindness Towards All Beings
Kannada Article By: Vid. Narasimha Bhat
English Rendering By: MR Bhashyam
Respond to (lekhana@ayvm.in)
In Sanskrit the word dayaa has many synonyms like Krupa, Anukampa, Kaarunya, Ghruna etc just as English has kindness, compassion, pity, benevolence, magnanimity etc. Plants and animals, birds and trees etc have a right to live just as we have. They have a right to live as they please. We have no right to snatch this freedom. And they have to live without fear. Then there will be balance in the ecosystem. The sentiment that there should be conditions conducive for all creation to live harmoniously is termed as dayaa – kindness. When we have this sentiment, there will be no inclination to create trouble, torture or coerce others. When others are in difficulty they should be protected, just as we ourselves would like to be –When this feeling becomes automatic it is termed Anukampa- compassion. Our hearts melt looking at the pain of humans and other beings in the same way when we are tortured by others., Such a condition of mind is described as dayaa. We aspire to have the compassion of the Lord and the kindness of elders.
The outcome of this sentiment is non-violence. The environs around the people who practice non-violence will be rid of enmity. "If one is established in non-violence his proximity will be free of enmity (Ahimsaa pratishtaayaam tattsannidhau vairatyaagah)" so says sage Pataanjali. That was how the hermitages of the sages of yore used to be. The worship and practices in and around the hermitages and the presence of the sages themselves resulted in hostility being rid off in even animals which are natural enemies.
Punishment- Nigraha – is also an act of Kindness:
Punishing the evil can be termed as "benevolence in punishment". Graciousness towards evil is not recommended. Magnanimity towards people who breed sorrow in others should never be practiced. One should never be generous towards people who burn houses and hearths of people, who poison others, who are armed, who occupy one's land, who steal money or women. Killing these types of people even without enquiry has been termed as dayaa by the knowledgeable elderly. Preventing these types from committing criminal deeds is an act of kindness towards the society. "The Lord's act of destroying evil is also benevolence" so Shri ShriRanga Mahaguru used to say. The poet Kaalidaasa in his Raghuvamsha, has subliminally described the act of Shri Rama Killing the lady-demon Taataka even without considering that she was a female as "Rama launched his arrow together with kindness"
The Kindness of Jeemoota Vaahana:
The play Naagaananda of the dramatist Harsha is a great example of the sentiment of kindness – Karunaa Rasa. Jeemoota Vaahana goes to a sea shore for relaxation. There he sees many skeletons of snakes and enquires from his friend MitraaVasu about those. His friend tells him about the agreement between the eagle Garuda and the snakes. As per the agreement, the snakes had to present to Garuda a snake everyday as food. Hearing this, Jeemoota Vaahana, overcome by pity, decides to save the snakes by offering his body itself as food to Garuda. He goes to the sacrificial rock as a substitute for the serpent Shankha Chooda, the only progeny to an old snake. The eagle is wonderstruck by the happy countenance of Jeemota Vaahana even though his body was being devoured. Then goddess Durga appears, sprinkles holy water and brings Jeemoota Vaahana to life again. Garuda himself brings ambrosia from heavens and rains it on the dead snakes. All the snakes come back to life again. This is a famous story of Kindness of Jeemota Vaahana towards all beings.
Note: The Kannada version of this article can be viewed at AYVM blogs.
Sunday, January 10, 2021
ನಿಯಮ - ಸ್ವಾಧ್ಯಾಯ, ಈಶ್ವರ ಪ್ರಣಿಧಾನ (Niyama - Svadhyaya, Isvara Pranidhana)
ಲೇಖಕರು: ಶ್ರೀ ಜಿ ನಾಗರಾಜ
ಪತಂಜಲಿಗಳ ಯೋಗಸೂತ್ರದ ಕೊನೆಯ ಎರಡು ನಿಯಮಗಳು ಸ್ವಾಧ್ಯಾಯ ಮತ್ತು ಈಶ್ವರ ಪ್ರಣಿಧಾನ.
ವ್ಯಾಸಭಾಷ್ಯದ ಅನುಸಾರ ಮೋಕ್ಷಶಾಸ್ತ್ರದ ಅಧ್ಯಯನ ಹಾಗೂ ಪ್ರಣವ ಜಪವೇ ಸ್ವಾಧ್ಯಾಯ. ಸ್ವಾಧ್ಯಾಯದ ನೇರವಾದ ಅರ್ಥ ತನ್ನನ್ನೇ ತಾನು ಅಧ್ಯಯನ ಮಾಡಿಕೊಳ್ಳುವುದು, ಆತ್ಮಾವಲೋಕನ ಮಾಡಿಕೊಳ್ಳುವುದು ಎಂದಾಗುತ್ತದೆ. ಮಹರ್ಷಿಗಳ ಅಭಿಮತದಲ್ಲಿ ಮಾನವ ಶರೀರವು ಇಡೀ ಬ್ರಹ್ಮಾಂಡದ ಸಂಗ್ರಹವಾದ ಮಾದರಿಯಾಗಿದ್ದು ಪಿಂಡಾಂಡ ಎನ್ನಿಸಿಕೊಳ್ಳುತ್ತದೆ. ಹೀಗಾಗಿ ಇಡೀ ಸೃಷ್ಟಿಯ ತತ್ತ್ವಗಳನ್ನು ಮಾನವನು ತನ್ನೊಳಗೇ ಅವಲೋಕಿಸಿಕೊಳ್ಳಬಹುದಾಗಿದೆ. ಮಾನವನಲ್ಲಿ ಭೌತಿಕ, ದೈವಿಕ ಹಾಗೂ ಆಧ್ಯಾತ್ಮಿಕ ಸ್ತರಗಳಿದ್ದು ಕೇವಲ ಭೌತಿಕ ಸ್ತರದಲ್ಲಿಯೇ ಅನೇಕ ವೈದ್ಯಕೀಯ ಶಾಸ್ತ್ರಗ್ರಂಥಗಳಿಗೆ ಸಾಕಾಗುವಷ್ಟು ವಿಷಯಗಳಿವೆ. ಇನ್ನು ದೈವೀ ಕ್ಷೇತ್ರ, ಆಧ್ಯಾತ್ಮಿಕ ಕ್ಷೇತ್ರಗಳನ್ನು ಪರಿಗಣಿಸಿದರೆ, ಮಾನವನ ಒಳಪ್ರಪಂಚ ಬಹಳ ವಿಸ್ತಾರವಾಗಿರುತ್ತದೆ. ಈ ಒಳಪ್ರಪಂಚದಲ್ಲಿ ಸಾಗಿ ಮೂಲನಾದ ಭಗವಂತನನ್ನು ತಲಪುವುದೇ ಯೋಗವಾದುದರಿಂದ ಈ ಒಳಪ್ರಪಂಚದ ವಿಜ್ಞಾನದ ಪರಿಚಯವು ಯೋಗ ಸಾಧನೆಗೆ ಬಹಳ ಪೋಷಕವಾಗಿರುತ್ತದೆ.
ನಂತರ ಈ ಸ್ವಾಧ್ಯಾಯವನ್ನು ಮಾಡುವುದು ಹೇಗೆ ಎನ್ನುವ ಪ್ರಶ್ನೆ ಬರುತ್ತದೆ. ತನ್ನೊಳಗಿನ ಪರಿಚಯ ಹೇಗೆ ಉಂಟಾಗುತ್ತದೆಂದರೆ, ಮೋಕ್ಷಶಾಸ್ತ್ರ( ಉಪನಿಷತ್ತುಗಳು ಮತ್ತು ಭಗವದ್ಗೀತೆಗಳ ಅನುಸಂಧಾನ ಮತ್ತು ಓಂಕಾರ ಜಪ)ದಿಂದ ಉಂಟಾಗುತ್ತದೆ ಎಂದು ವ್ಯಾಸಭಾಷ್ಯ ಹೇಳುತ್ತದೆ. ಪರಂಪರೆಯಲ್ಲಿ ಸ್ವಾಧ್ಯಾಯ ಎಂದರೆ, ವೇದದ ಸ್ವಶಾಖೆಯನ್ನು ಅಧ್ಯಯನ ಮಾಡುವುದು ಅಥವಾ ಅದರ ಸ್ಥಾನದಲ್ಲಿ ಪುರಾಣಗಳನ್ನು ಅಧ್ಯಯನ ಮಾಡುವುದು ಎನ್ನುವ ಅಭಿಪ್ರಾಯಗಳಿದ್ದು ಈ ಅಧ್ಯಯನಗಳಿಂದ ತಮ್ಮನ್ನೇ ತಾವು ಅಧ್ಯಯನ ಮಾಡಿಕೊಂಡಂತಾಗುತ್ತದೆಯೆಂಬುದು ಇಲ್ಲಿನ ಸಾರಾಂಶ.
ಈಶ್ವರನಲ್ಲಿ ಸರ್ವಸ್ವಾರ್ಪಣ ಬುದ್ಧಿಯನ್ನಿಟ್ಟುಕೊಳ್ಳುವುದು ಈಶ್ವರ ಪ್ರಣಿಧಾನ. ಈಶ್ವರ ಪ್ರಣಿಧಾನವು ಸಂಪೂರ್ಣವಾಗಿ ಕೂಡಿಬಂದರೆ ಸಮಾಧಿ ಸ್ಥಿತಿಯೇ ಉಂಟಾಗಿಬಿಡುತ್ತದೆ. ಹೀಗಾಗಿ ಭಕ್ತಿಯೋಗದ ಮಾರ್ಗಗಳಲ್ಲಿ ಈಶ್ವರ ಪ್ರಣಿಧಾನವು ಪ್ರಧಾನ ಅಂಗವಾಗಿರುತ್ತದೆ. ನಾನಾವಿಧವಾದ ಯೋಗಮಾರ್ಗಗಳಲ್ಲಿ ಗಮನಿಸಬೇಕಾದ ಅಂಶವೆಂದರೆ ಅವು ಸಂಪೂರ್ಣವಾಗಿ ವಿವಿಕ್ತವಾದ ಸಾಧನಗಳಿಂದ ಕೂಡಿರದೇ ಅವುಗಳಲ್ಲಿ ಸಾಮಾನ್ಯವಾದ ಅಂಶಗಳೂ ಇದ್ದು ಕೆಲವು ಪ್ರಮುಖವಾಗಿದ್ದು ಮತ್ತಿತರವು ಗೌಣವಾಗಿರುತ್ತವೆ. ಈ ನೀತಿಯು ಈಶ್ವರ ಪ್ರಣಿಧಾನಕ್ಕೂ ಅನ್ವಯಿಸುತ್ತದೆ. ಆಸನ-ಪ್ರಾಣಾಯಾಮಾದಿ ಮೆಟ್ಟಿಲುಗಳನ್ನೇರಿ ಸಮಾಧಿ ಸ್ಥಿತಿ ತಲುಪಲು ಯಥಾಶಕ್ತಿ ಇಟ್ಟುಕೊಳ್ಳುವ ಈಶ್ವರಾರ್ಪಣ ಬುದ್ಧಿಯು ಪೋಷಕವಾದ ನಿಯಮವಾದರೆ, ಮುಖ್ಯವಾದ ಅಂಗವಾದಾಗ ಈಶ್ವರ ಪ್ರಣಿಧಾನವೇ ಒಂದು ಯೋಗಮಾರ್ಗವಾಗುತ್ತದೆ. ಯೋಗಸೂತ್ರದಲ್ಲಿ "ಈಶ್ವರ ಪ್ರಣಿಧಾನಾದ್ವಾ" ಎಂದು ಸಮಾಧಿ ಸ್ಥಿತಿಯನ್ನು ತಲುಪಲು ಇದೊಂದೇ ಸಾಕು ಎಂದೂ ಪತಂಜಲಿಗಳು ಘೋಷಿಸಿದ್ದಾರೆ.
ಸೂಚನೆ : 9/1/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.
ಆರ್ಯಸಂಸ್ಕೃತಿ ದರ್ಶನ - 25 (Arya Samskruti Darshana - 25)
ಇಂಗ್ಲಿಷಿನವರು ಬಂದನಂತರವಂತೂ ಅವರ ಉಡುಪು ಸಮಾಜದ ಅನೇಕ ವಲಯಗಳಲ್ಲಿ ಸ್ವಾಗತ ಪಡೆಯಿತು. ಇಂಗ್ಲಿಷ್ ವಿದ್ಯೆಯನ್ನು ಕಲಿತವರು ಮತ್ತು ಇಂಗ್ಲೀಷಿನವರೊಡನೆ ವ್ಯವಹಾರ ಪಡೆದವರೆಲ್ಲರೂ ಹೆಚ್ಚು ಅಥವಾ ಕಡಿಮೆಯಾಗಿ ಅವರ ಉಡುಪನ್ನು ತಮ್ಮದಾಗಿಸಿಕೊಂಡರು. ಭಾಷೆ, ಸಾಹಿತ್ಯ, ವಿಚಾರ, ವಿಜ್ಞಾನ ಇತ್ಯಾದಿಗಳ ವಿಷಯಗಳಲ್ಲಿ ಹೇಗೋ ಹಾಗೆಯೇ ಉಡುಗೆಯ ವಿಷಯದಲ್ಲಿಯೂ ಅಸಂಖ್ಯಾತ ಜನರು ಪಾಶ್ಚಾತ್ಯರ ಎಂದರೆ ( ಭಾರತದೇಶದ ದೃಷ್ಟಿಯಿಂದ ಹೇಳುವುದಾದರೆ ಇಂಗ್ಲೀಷಿನವರ) ನೇತ್ರೃತ್ವವನ್ನು ಅಂಗೀಕರಿಸಿದರು. ಆದರೂ ನೆಟ್ಟಗೆ ಅವರೊಡನೆ ಸಂಬಂಧವಿಲ್ಲದಿದ್ದವರೂ ಮತ್ತು ತಮ್ಮ ಧರ್ಮ ಮತ್ತು ಸಂಸ್ಕೃತಿಗಳಲ್ಲಿ ವಿಶ್ವಾಸವಿದ್ದವರೂ ಈಗ ಕೆಲವು ದಶಮಾನಗಳ ಹಿಂದಿನವರೆಗೆ ತಮ್ಮ ಪರಂಪರಾಗತವಾದ ಉಡುಪನ್ನೇ ಉಡುತ್ತಿದ್ದರು. ಅವರ ಸಂಖ್ಯೆ ಬಹಳ ಅಧಿಕವಾಗಿಯೇ ಇದ್ದಿತು.
ನಾವು ನಮ್ಮನ್ನು ಸ್ವಲ್ಪ ಸಮಾಧಾನ ಮಾಡಿಕೊಳ್ಳಬಹುದು.
ನಮ್ಮ ಪರಂಪರಾಗತವಾದ ಉಡುಪು ತನ್ನದೇ ಆದ ಸೌಂದರ್ಯ ಮತ್ತು ಗಾಂಭೀರ್ಯಗಳನ್ನಿರಿಸಿಕೊಂಡಿರುತ್ತದೆ ಎಂಬುದನ್ನು ಯಾರೂ ನಿರಾಕರಿಸಲಾಗುವುದಿಲ್ಲ. ಹೊಲಿಯದಿರುವ ಬಟ್ಟೆಯನ್ನು ನಾಜೂಕಾಗಿ ಉಡುವ ಕುಶಲತೆ ಪಂಚೆ ಮತ್ತು ಸೀರೆಗಳನ್ನುಡುವ ಬಗೆಯಲ್ಲಿರುತ್ತದೆ. ಜೊತೆಗೆ ಆ ಉಡುಪಿನಲ್ಲಿ ಸರಳತೆಯಿರುತ್ತದೆ. ಪ್ರಾಯಃ ಇವೆರಡು ಗುಣಗಳನ್ನೂ ಒಂದು ಕಡೆ ಸೇಸಿರಿಕೊಂಡಿರುವ ಉಡಿಗೆಯ ವಿಧಾನವು ಪ್ರಪಂಚದಲ್ಲಿ ಬೇರೆಲ್ಲಿಯೂ ಕಂಡುಬರದು.
ಅಪೇಕ್ಷಿಸುತ್ತದೆ.
(ಉಣ್ಣೆಯಿಂದ ಮಾಡಿದ್ದೇ, ರೇಷ್ಮೆಯದೇ, ಹತ್ತಿಯದೇ ಮುಂತಾಗಿ) ಬಟ್ಟೆಯ ಗುಣ ಅದರ ಆಯ್ಕೆಯಲ್ಲಿ ಪಾತ್ರ ವಹಿಸಿದ್ದರೆ, ಅದರ ಬಣ್ಣವೂ ಸಹ ಅದನ್ನಾರಿಸುವುದರಲ್ಲಿ ಪ್ರಮುಖವಾದ ಪಾತ್ರವಹಿಸಿದ್ದಿತು. ಮನಸ್ಸಿನ ಬಣ್ಣವನ್ನು ನಿಶ್ಚಯಿಸುವುದರಲ್ಲಿ ಬಟ್ಟೆಯ ಬಣ್ಣದ ಪ್ರಭಾವವು ಬಹಳವಿರುತ್ತದೆ ಎಂಬ ಅಂಶವು ನಮ್ಮ ಪೂರ್ವಿಕರಿಗೆ ಚೆನ್ನಾಗಿ ತಿಳಿದಿದ್ದ ವಿಷಯವಾಗಿದ್ದಿತು. ಸ್ಥಳಾವಕಾಶವಿಲ್ಲವಿರುವುದರಿಂದ ಇಲ್ಲಿ ನಾವು ಉದಾಹರಣೆ ಕೊಡುತ್ತಿಲ್ಲ. ಇಂದು ನಮ್ಮ ಬಟ್ಟೆಗಳು ನಮ್ಮ ಮನಸ್ಸು ಒಂದು ಬಣ್ಣವಾಗಿರದೆ ಬಹು ವರ್ಣವಾಗಿರುವುದನ್ನು ಹೊರಗೆ ವ್ಯಕ್ತಪಡಿಸುತ್ತದೆ.
Thursday, January 7, 2021
ಶಿವನ ಅಂತರಂಗ ದರ್ಶನ (Shivana Antaranga Darshana)
ದಕ್ಷಯಜ್ಞಕ್ಕೆ ದಾಕ್ಷಾಯಣಿ ಬಂದಿದ್ದಾಳೆ. ಪತಿ ಪರಮೇಶ್ವರನು ಹೋಗುವುದರಿಂದ ಆಗಬಹುದಾದ ಅನಾಹುತಗಳ ಬಗ್ಗೆ ಎಚ್ಚರಿಸಿದ್ದಾನೆ. ಆದರೂ ಸ್ತ್ರೀ ಸಹಜ ತವರಿನ ಸೆಳೆತ ಅವಳನ್ನು ಬರುವಂತೆ ಮಾಡಿದೆ. ಅಲ್ಲಿ ತಂದೆಯಾದ ದಕ್ಷನಾಗಲೀ ಹತ್ತಿರದ ಇತರ ಬಂಧುಗಳಾಗಲೀ ಇವಳನ್ನು ಆದರದಿಂದ ಬರಮಾಡಿಕೊಂಡಿಲ್ಲ. ಯಜ್ಞದ ಯಶಸ್ಸಿಗೆ ಕಾರಣನಾಗಬೇಕಾದ ಪರಶಿವನಿಗೆ ಆಹ್ವಾನವಿಲ್ಲ. ಒಟ್ಟು ವಾತಾವರಣದಲ್ಲಿ ಶಿವನ ಬಗ್ಗೆ ತಾತ್ಸಾರ ಎದ್ದು ಕಾಣುತ್ತಿದೆ. ಸತೀ-ದಾಕ್ಷಾಯಣಿಗೆ ಇದನ್ನು ಸಹಿಸಿಕೊಳ್ಳಲಾಗಿಲ್ಲ. ತನಗೇ ಆದ ಅವಮಾನಕ್ಕಿಂತ ಜಗತ್ತಿಗೇ ಒಡೆಯನಾದ ಶಿವನಿಗೆ ಆದ ಅವಮಾನ ಅವಳನ್ನು ಹೆಚ್ಚು ಕ್ರುದ್ಧಳನ್ನಾಗಿಸಿತ್ತು. ಈ ಹಿಂದೆ ದಕ್ಷನು ಶಿವನನ್ನು ಸ್ಮಶಾನವಾಸಿ, ಬೂದಿಬಡುಕ, ಜುಗುಪ್ಸಿತವಾದ ವೇಷವುಳ್ಳವನು, ಕುಲ-ಗೋತ್ರ ಇಲ್ಲದವನು ಎಂದೆಲ್ಲ ಮೂದಲಿಸಿರುತ್ತಾನೆ. ತನ್ನ ಅವಮಾನದ ಬೆಂಕಿಯಲ್ಲಿ ಅದನ್ನೆಲ್ಲಾ ನೆನೆದು ತಂದೆಯಾದ ದಕ್ಷನಿಗೆ ಸತಿಯು ಹೇಳುವ ಮಾತುಗಳು ನಮಗೆಲ್ಲರಿಗೂ ಆದರ್ಶ.
" ಜಗದೀಶ್ವರನಾದ ಶಂಕರನ ಮಹಿಮೆಯನ್ನು ನೀನೇನು ಬಲ್ಲೆ? ಎಲ್ಲಾ ದೇಹಿಗಳ ಅಂತರಂಗದಲ್ಲಿ ಬೆಳಗುವ ಆತ್ಮಸ್ವರೂಪನವನು. ಸಮದರ್ಶನನಾದ ಅವನಿಗೆ ಯಾರೂ ಪ್ರಿಯರೂ, ಅಪ್ರಿಯರೂ ಅಲ್ಲ. ಯಾವ ಪ್ರಾಣಿಗಳಲ್ಲೂ ವೈರವಿಲ್ಲದ ಶಾಂತಮೂರ್ತಿ ಅವನು. ಜಗತ್ತಿಗೇ ಮೂಲನಾದ, ತಂದೆಯಾದ ಅವನಿಗೆ ಕುಲ-ಗೋತ್ರಗಳು ಎಲ್ಲಿಂದ ಬರಬೇಕು? ಬ್ರಹ್ಮಾದಿ ದೇವತೆಗಳು ಸ್ಮಶಾನವಾಸಿಯಾದ, ಚಿತಾಭಸ್ಮಗಳನ್ನು ಧರಿಸಿದ ಭಗವಂತನಾದ ಪರಶಿವನ ಪಾದಗಳಿಂದ ಉದುರಿದ ನಿರ್ಮಾಲ್ಯವನ್ನು ತಮ್ಮ ತಲೆಯಲ್ಲಿ ಧರಿಸಿಕೊಳ್ಳುತ್ತಾರೆ. ಇದನ್ನೇ ಮಹಾಕವಿ ಕಾಳಿದಾಸನು ಹೀಗೆ ಹೇಳುತ್ತಾನೆ- 'ಅವನ ಅಂಗದ ಸಂಪರ್ಕವನ್ನು ಹೊಂದಿದ ಚಿತಾಭಸ್ಮದ ಧೂಳು ಸಹ ಪರಮಶುದ್ಧಿಯನ್ನು ಪಡೆಯುತ್ತದೆ.' ಅವನ ನೃತ್ಯಾಭಿನಯದಿಂದ ಅವನ ಮೈಮೇಲಿನ ಚಿತಾಭಸ್ಮವು ಕೆಳಗೆ ಬಿದ್ದಾಗ, ದೇವತೆಗಳೆಲ್ಲ ಅದನ್ನು ಪ್ರಸಾದರೂಪವಾಗಿ ತಮ್ಮ ತಲೆಯಮೇಲೆ ಹಚ್ಚಿಕೊಳ್ಳುತ್ತಾರೆ."
ನಮ್ಮ ಕಣ್ಣುಗಳು ದಕ್ಷನಂತೆಯೇ ಹೊರ ಜುಗುಪ್ಸಿತವಾದ ರೂಪವನ್ನು ಮಾತ್ರವೇ ಗ್ರಹಿಸುತ್ತವೆ. ನಮಗೆ ಯಾವುದು ಭಯಂಕರವೋ, ಅವೆಲ್ಲ ಅವನಿಗೆ ಅಲಂಕಾರ. ಸೃಷ್ಟಿಯನ್ನು ಲಯಗೊಳಿಸುವ ಅವನ ಕಾರ್ಯದ ಸಂಕೇತಗಳು/ಚಿಹ್ನೆಗಳು ಅವು. ಆ ರೂಪದ ಹಿಂಬದಿಯ ಅವನ ಪರವಾದ, ಜಗತ್ತಿನ ಚೇತನವಾದ ಬೆಳಕಿನ ರೂಪವನ್ನು ಗ್ರಹಿಸಲು ಸತಿಗಿದ್ದಂತೆ ತಪಸ್ಸಿನ ಕಣ್ಣುಗಳು ಬೇಕು. ಮಹಾದೇವನ ನಿಂದೆಯನ್ನು ಸಹಿಸದೇ, ಯಾವ ದೇಹಾಭಿಮಾನಿಯಾದ ತಂದೆಯಿಂದ ತನ್ನ ಶರೀರವು ಉಂಟಾಯಿತೋ ಆ ಶರೀರವನ್ನೇ ಮೈಲಿಗೆಯಾಗಿ ಭಾವಿಸಿ ಯೋಗದಿಂದ ತನ್ನ ಶರೀರವನ್ನು ಅಗ್ನಿಗಾಹುತಿಗೈಯುತ್ತಾಳೆ.
ಶಿವಸ್ವರೂಪದ ಬಗ್ಗೆ ಶ್ರೀರಂಗಮಹಾಗುರುಗಳು ಎತ್ತಿ ಹೇಳುತ್ತಿದ್ದ ಕಾಳಿದಾಸನ ಕುಮಾರ ಸಂಭವದ ಮಾತು ಇಲ್ಲಿ ಸ್ಮರಣೀಯ. "ಮನೋ ನವದ್ವಾರ ನಿಷಿದ್ಧ ವೃತ್ತಿ: ಹೃದಿ ವ್ಯವಸ್ಥಾಪ್ಯ ಸಮಾಧಿ ವಶ್ಯಂ | ಯಮಕ್ಷರಂ ಕ್ಷೇತ್ರವಿದೋ ವಿದುಸ್ತಂ, ಆತ್ಮಾನಮಾತ್ಮನ್ಯವಲೋಕಯನ್ತಮ್"- ಇಂದ್ರನ ಆದೇಶದಂತೆ ಶಿವನ ತಪಸ್ಸನ್ನು ಭಂಗಗೊಳಿಸಲು ಬಂದ ಮನ್ಮಥನು ಶಿವನನ್ನು ನೋಡಿದಾಗ ಅವನನ್ನು ಭಾವಿಸಿದ ಪರಿ ಇದು. "ಶಿವನ ಮನಸ್ಸು ನವದ್ವಾರಗಳಲ್ಲೂ ವೃತ್ತಿರಹಿತವಾಗಿದೆ. ಸಮಾಧಿವಶನಾಗಿ, ಮನಸ್ಸನ್ನು ಹೃದಯದ ಅನಾಹತವೆಂಬ ಚಕ್ರದಲ್ಲಿ ಬೆಳಗುವ ಪರಮಾತ್ಮನಲ್ಲಿ ನೆಲೆಗೊಳಿಸಿದ್ದಾನೆ. ಯಾವ ಅಕ್ಷರನಾದ ಪರಮಾತ್ಮನನ್ನು ಈ ದೇಹಯಂತ್ರದ ಮರ್ಮವನ್ನರಿತವರು-ಕ್ಷೇತ್ರಜ್ಞರು ತಿಳಿಯುತ್ತಾರೋ ಅಂತಹ ಶಿವನು ತನ್ನಲ್ಲಿಯೇ ತನ್ನನ್ನು ನೋಡಿಕೊಳ್ಳುತ್ತಿದ್ದಾನೆ" ಎಂತಹ ಅದ್ಭುತವಾದ ಶಿವನ ನಿಜರೂಪ ವರ್ಣನೆ!
ಅಂತಹ ಶಿವಸ್ವರೂಪದ ಚಿಂತನೆ, ಸ್ಮರಣೆ ಸದಾ ನಮ್ಮೆಲ್ಲರಿಗೂ ಆಗಲಿ ಎಂದು ಆಶಿಸೋಣ.
ಮಹತ್ಕಾರ್ಯದ ಸಾಧನೆಗೆ ಉಪಾಯದ ಅವಲಂಬನೆ (Mahatkaryada Sadhanege Upayada Avalambane)
ಲೇಖಕರು: ಶ್ರೀಮತಿ ಸೌಮ್ಯಾ ಪ್ರದೀಪ್
(ಪ್ರತಿಕ್ರಿಯಿಸಿರಿ lekhana@ayvm.in)
ಕೆಲವೊಮ್ಮೆ ದೊಡ್ಡ ವಿಷಯವನ್ನು ಕೊಡಬೇಕಾದಾಗ ಉಪಾಯವನ್ನು ಅವಲಂಬಿಸಬೇಕಾಗುತ್ತದೆ ಎಂಬುದಕ್ಕೆ ಶ್ರೀರಂಗಮಹಾಗುರುಗಳು ಒಂದು ಕಥೆಯನ್ನು ಹೇಳುತ್ತಿದ್ದರು. ಹಿಂದೆ ನಾಥಮುನಿಗಳು ಎಂಬ ಯೋಗಿಗಳ ಶಿಷ್ಯರ ಪೈಕಿ ಮಣಕ್ಕಾಲ್ ನಂಬಿ ಎಂಬುವವರಿದ್ದರು, ಅವರ ಕಾಲದಲ್ಲಿ ಮೊಮ್ಮಕ್ಕಳಾದ ಯಾಮುನರು ಇನ್ನೂ ಚಿಕ್ಕವರಾಗಿದ್ದರು. ಆಗ ಅವರು ಜ್ಞಾನವನ್ನು ಮುಂದುವರೆಸುವ ಜವಾಬ್ದಾರಿಯನ್ನು ಮಣಕ್ಕಾಲ್ ನಂಬಿ ಎಂಬ ಶಿಷ್ಯನಿಗೆ ವಹಿಸಿದರು. ಯಾಮುನರು ವಾದದಲ್ಲಿ ಗೆದ್ದು ರಾಜ್ಯಾಧಿಪತಿಗಳಾಗಿದ್ದರು. ರಾಜ್ಯಾಧಿಪತಿಗಳಾದ ಅವರಲ್ಲಿಗೆ ಮಣಕ್ಕಾಲ್ ನಂಬಿಗಳು ಹೋಗುವುದಾದರೂ ಹೇಗೆ? ಆದರೆ ಗುರುಗಳು ತಮ್ಮ ಜ್ಞಾನಸಂಪತ್ತನ್ನು ಅವರಿಗೆ ಕೊಡುವಂತೆ ವಹಿಸಿದ ಜವಾಬ್ದಾರಿಯಿದೆ, ಅದನ್ನು ಹೇಗೆ ನಿರ್ವಹಿಸುವುದು? ಕೊನೆಗೆ ಪ್ರತಿದಿನವೂ ಒಂದು ತರಹದ ಸೊಪ್ಪನ್ನು ರಾಜನಿಗೆ ಅಡಿಗೆ ಮಾಡಿ ಬಡಿಸಲು ತರಕಾರಿಯಾಗಿ ಕೊಂಡೊಯ್ಯುತ್ತಿದ್ದರು. ರಾಜನಿಗೆ ಅದೊಂದು ಹೊಸತಿಂಡಿಯಾಗಿತ್ತು.
ಹೀಗೆ ಪ್ರತಿದಿನವೂ ತಪ್ಪದೇ ಈ ಸೊಪ್ಪಿನ ಪದಾರ್ಥ ರಾಜನಿಗೆ ತಲುಪಿ ಅದು ಚೆನ್ನಾಗಿ ಅವನಿಗೆ ಹಿಡಿಸಿತು. ಒಂದು ದಿನ ಅವರು ಈ ಸೊಪ್ಪನ್ನು ತರಲಿಲ್ಲ, ಆಗ ರಾಜನು ಸೊಪ್ಪು ಏಕೆ ಇಲ್ಲ ಎಂದು ಕೇಳಿದ, ಯಾರೋ ಒಬ್ಬರು ಯಾವ ಪ್ರತಿಧನವನ್ನೂ ತೆಗೆದುಕೊಳ್ಳದೆ ತಂದು ಕೊಡುತ್ತಿದ್ದಾರೆ, ಇಂದು ಅವರು ಬರಲಿಲ್ಲ ಎಂದು ಅಡುಗೆಯವರು ಹೇಳಿದರು. ನಂತರ ಮತ್ತೊಮ್ಮೆ ಅವರು ಬಂದಾಗ ಆಸ್ಥಾನಕ್ಕೆ ಕರೆಸಿದರು. ಆ ಸಮಯಕ್ಕೆ ಸರಿಯಾಗಿ ರಾಜ್ಯಕ್ಕೆ ಧನದ ಅಗತ್ಯವಿತ್ತು. ಆ ಸಂದರ್ಭಕ್ಕೆ ಸರಿಯಾಗಿ ಇವರು ಹೋಗಿ ನಿಮ್ಮ ತಾತನವರು ನನ್ನಲ್ಲಿ ಯಾವುದೋ ಒಂದು ದೊಡ್ಡ ನಿಧಿಯನ್ನು ಇಟ್ಟಿದ್ದಾರೆ; ನನ್ನ ಜೊತೆ ಬಂದರೆ ಅದನ್ನು ಕೊಡುತ್ತೇನೆ ಎಂದು ಹೇಳಿ ರಾಜನನ್ನು ಶ್ರೀರಂಗಕ್ಕೆ ಜೊತೆಯಲ್ಲಿ ಕರೆದೊಯ್ದು, ಶ್ರೀ ರಂಗನಾಥನನ್ನು ತೋರಿಸಿ ಇದೇ ಆ ನಿಧಿಯೆಂದು ಹೇಳಿ ಅದರ ಮರ್ಮದೊಡನೆ ಇತ್ತರು. ಅವರ ತಾತನ ಆಸ್ತಿಯನ್ನು ಅವರಿಗೇ ಕೊಟ್ಟರು; ಅವರ ಜ್ಞಾನಭಂಡಾರವನ್ನೂ ಅವರಿಗೇ ತುಂಬಿಕೊಟ್ಟರು. ಹೀಗೆ, ಇಲ್ಲಿ ಅಪೂರ್ವವಾದ ಜ್ಞಾನಭಂಡಾರವನ್ನು ಧಾರೆಯೆರೆದು ಕೊಡಲು ಈ ರೀತಿಯ ಉಪಾಯವನ್ನು ಮಾಡಿದಾಗ ರಾಜನ ಉದ್ಧಾರವೂ ಆಗಿ ರಾಜ್ಯಕ್ಕೂ ಕ್ಷೇಮವುಂಟಾಯಿತು.
ಸೂಚನೆ: 6/1/2021 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.