ಲೇಖಕರು: ರಾಜಗೋಪಾಲನ್. ಕೆ .ಎಸ್.
ಗುರುಗಳು ಶಿಷ್ಯರಿಗೆ ತಿಳಿಹೇಳುತ್ತಿದ್ದರು- “ಮಾನವ ಜನ್ಮ ದುರ್ಲಭವಾದದ್ದು; ಇದು ಸಿಕ್ಕಾಗ ನಮ್ಮೊಳಗೆ ಬೆಳಗುವ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಬೇಕು; ಆಗಷ್ಟೇ ಮನುಷ್ಯನಾಗಿ ಹುಟ್ಟಿದ್ದಕ್ಕೆ ಸಾರ್ಥಕ. ನಾಳೆ ಹೇಗೋ ಗೊತ್ತಿಲ್ಲ. ಇಂದು ಕೈಕಾಲು ಗಟ್ಟಿ ಇರುವಾಗಲೇ ಆತ್ಮಸಾಧನೆ ಮಾಡಿ”. ಈ ಮಾತುಗಳಿಂದ ಶಿಷ್ಯರು ಪ್ರಭಾವಿತರಾಗಿದ್ದರು. ಮರುಕ್ಷಣದಿಂದ ಆತ್ಮೋದ್ಧಾರದ ಮಾರ್ಗ ಹಿಡಿಯಬೇಕೆಂದುಕೊಂಡರು. ಎಲ್ಲಾ ಒಳ್ಳೆಯ ಕೆಲಸಗಳಿಗೂ ವಿಘ್ನಗಳು ಬಹಳ. ಅಂತೆಯೇ ಇಲ್ಲೂ ಆಯಿತು. ದೊಡ್ಡ ಪಂಡಿತರೊಬ್ಬರು ಆ ಸ್ಥಳಕ್ಕೆ ಆಗಮಿಸಿದರು. ಗುರುಗಳ ಖ್ಯಾತಿ, ಪಂಡಿತರನ್ನು ಮುಟ್ಟಿತ್ತು. ಈ ಗುರುಗಳನ್ನು ಮಟ್ಟ ಹಾಕಿದ ಹೊರತು ತಮ್ಮ ಕೀರ್ತಿಗೆ ಉಳಿಗಾಲವಿಲ್ಲವೆಂದು ಭಾವಿಸಿದರು. ತೋರಿಕೆಯ ವಿನಯದಿಂದ, “ಗುರುಗಳೇ ತಾವು ತಪ್ಪು ತಿಳಿಯದಿದ್ದರೆ ಒಂದು ಮಾತು ಕೇಳಲೇ?” ಎಂದರು. ಗುರುಗಳು ಸಮ್ಮತಿಸಿದರು. ಪಂಡಿತರ ವಾಗ್ವೈಖರಿ ಆರಂಭವಾಯಿತು. “ತಾವು ಎಷ್ಟೋ ಪುರಾತನ ಗ್ರಂಥಗಳನ್ನೆಲ್ಲ ಅಧ್ಯಯನ ಮಾಡಿದವರು; ತಾವು ಕೇಳಿಲ್ಲವೇ?
“ಜನ್ಮಾಂತರ ಸಹಸ್ರೇಷು ಯಾ ಬುದ್ಧಿಃ ಭಾವಿತಾ ಪುರಾI
ತಾಮೇವ ಭಜತೇ ಜಂತುಃ ಉಪದೇಶೋ ನಿರರ್ಥಕಃII”
(ಹಿಂದಿನ ಸಹಸ್ರಾರು ಜನ್ಮಗಳಿಂದ ಯಾವುದು ಸಂಸ್ಕಾರರೂಪವಾಗಿ ಬಿದ್ದು, ಬುದ್ಧಿಯಾಗಿ ಬೆಳೆದಿದೆಯೋ, ಅದನ್ನೇ ಜೀವಿಯು ಸೇವಿಸುತ್ತಾನೆ. ಇಂದಿನ ಉಪದೇಶವು ಅವನಿಗೆ ನಿರರ್ಥಕವಾಗುವುದು.)
ಇಷ್ಟೆಲ್ಲಾ ತಿಳಿದೂ ಏಕೆ ಉಪದೇಶ ಮಾಡುತ್ತೀರಿ? ಇದು ನಿಮಗೂ, ಶಿಷ್ಯರಿಗೂ ಕಾಲಹರಣ ಆದಂತಲ್ಲವೇ?
ಇನ್ನೂ ಮಾಗದ ಶಿಷ್ಯರಿಗೆ ಪಂಡಿತರ ಮಂಡನೆ ಸರಿ ಎನಿಸಿತು. ಆದರೂ ತಮ್ಮ ಗುರುಗಳು ಏನು ಹೇಳುತ್ತಾರೋ ನೋಡೋಣವೆಂದು ಗುರುಗಳ ಮುಖವನ್ನೊಮ್ಮೆ ನೋಡಿದರು. ಗುರುಗಳು ನಸುನಗುತ್ತಾ “ನೀವು ಹೇಳಿದುದು ಸರಿಯಾಗಿಯೇ ಇದೆ ಪಂಡಿತರೇ! ಆದರೆ ನೀವು ಹೇಳುವುದನ್ನೇ ಮುಂದುವರಿಸುವುದಾದರೆ ಹಿಂದಿನ ಜನ್ಮಗಳಲ್ಲಿ ಮಾಡಿದ ಕರ್ಮವು ಇಂದಿನ ಬುದ್ಧಿಯನ್ನು ಪ್ರಭಾವಿಸುವುದಾದಲ್ಲಿ, ಇಂದು ಮಾಡಿದ ಉಪದೇಶವೂ ಮುಂದೊಂದು ಕಾಲಕ್ಕೆ ಬುದ್ಧಿರೂಪವಾಗಬಹುದಲ್ಲವೇ?” ಎಂದರು. ಪಂಡಿತರಿಗೆ ತಮ್ಮ ತಪ್ಪಿನ ಅರಿವಾಯಿತು. ಗುರುಗಳು ಮಾತನ್ನು ಮುಂದುವರೆಸುತ್ತಾ “ಪಂಡಿತರೇ ನೀವು ಬಹುಶ್ರುತರು. ಇದನ್ನೂ ಕೇಳಿರಬೇಕಲ್ಲವೇ?
“ಕರ್ಮಾಯತ್ತಂ ಫಲಂ ಪುಂಸಾಂ ಬುದ್ಧಿಃ ಕರ್ಮಾನುಸಾರಿಣೀI
ತಥಾಪಿ ಸುಧಿಯಾ ಭಾವ್ಯಂ ಸುವಿಚಾರ್ಯೇವ ಕುರ್ವತಾII”
(ಮನುಷ್ಯರಿಗೆ ಅವರ ಕರ್ಮಾನುಗುಣವಾಗಿ ಫಲವು ಸಿಗುತ್ತದೆ. (ಇಂದಿನ) ಬುದ್ಧಿಯು (ಹಿಂದಿನ) ಕರ್ಮವನ್ನೇ ಅನುಸರಿಸಿರುತ್ತದೆ. ಆದರೂ ಬುದ್ಧಿಶಾಲಿಯು ಚೆನ್ನಾಗಿ ವಿಚಾರ ಮಾಡಿಯೇ ಕೆಲಸ ಮಾಡಬೇಕು.) ಎಂದು ತಿಳಿವಳಿಕೆ ಕೊಟ್ಟರು.
ಮನುಷ್ಯನು ಕೊನೆಯುಸಿರು ಇರುವವರೆಗೂ, ಇರುವ ಬುದ್ಧಿಯನ್ನೆಲ್ಲಾ ವ್ಯಯಿಸಿ ಒಳ್ಳೆಯದನ್ನು ಮಾಡಲು ಯತ್ನಿಸಬೇಕು. ಇಂದಿನ ಸತತ ಪ್ರಯತ್ನ ಮುಂದೊಮ್ಮೆ(ಮುಂದಿನ ಜನ್ಮಗಳಲ್ಲಾದರೂ ಸರಿ), ಫಲದ ಬಾಗಿಲನ್ನು ತೆರೆದೀತು.
ಅಪೇಕ್ಷಿತ ಫಲ ಸಿಗದಿದ್ದಾಗ, ಇದನ್ನು ವಿವೇಕಿಯಾದವನು ತನ್ನ ಪೂರ್ವಕರ್ಮದ ಫಲವೆಂದೇ ಎಣಿಸುತ್ತಾನೆ; ಎಲ್ಲವೂ ‘ವಿಧಿ’ ಎಂದು ಕೈಚೆಲ್ಲಿ ಕೂರುವುದಿಲ್ಲ.ಇಂತಹ ಮನೋಭಾವವಿದ್ದರೆ, ನಾವು ಜೀವನೋತ್ಸಾಹ ಕಳೆದುಕೊಳ್ಳುವುದಿಲ್ಲ ಅಲ್ಲವೇ?
(ಶ್ರೀರಂಗಮಹಾಗುರುಗಳು ಉಪದೇಶದ ಪ್ರಾಮುಖ್ಯದ ಬಗ್ಗೆ ಕೊಟ್ಟ ನೋಟದಿಂದ ಆಧಾರಿತ)