Wednesday, November 6, 2019

ಆಹಾರವು ದೈವೀ ಮೂಲ (Aahaaravu daivee moola)

ಲೇಖಕರು: ತಾರೋಡಿ ಸುರೇಶ


ಆಹಾರವು ಜೀವಲೋಕದ ಮೂಲಭೂತ ಅಗತ್ಯ. ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಎಂದರು ಪುರಂದರದಾಸರು. ಜೀವಲೋಕದ ಬೆಳವಣಿಗೆಯ ಸಾರವೇ ಆಹಾರ. ಇದನ್ನು ಕುರಿತು ಋಷಿಗಳ ಚಿಂತನೆಯನ್ನು ಅರ್ಥಮಾಡಿಕೊಳ್ಳುವುದು ನಮ್ಮ ಉದ್ದೇಶವಾಗಿದೆ. ಹಿಂದಿನ ಎರಡು ಲೇಖನಗಳಲ್ಲಿ ಆಹಾರದ ಬಗ್ಗೆ ದೃಷ್ಟಿಕೋಣ ಮತ್ತು ವಿಧಿನಿಷೇಧಗಳ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ಗಮನಿಸಿದೆವು.

ಋಷಿಗಳ ನೋಟದಲ್ಲಿ ಆಹಾರದ ಸ್ವರೂಪ, ಉತ್ಪತ್ತಿ, ಶುದ್ಧಿ, ಸಂಗ್ರಹ, ರಸದೃಷ್ಟಿ, ತಯಾರಿಕೆಯ ಹಾಗೂ ಸೇವನೆಯ ಕ್ರಮ, ವಿಧಿನಿಷೇಧಗಳು, ಕಾಲದೇಶಾನುಗುಣವಾದ ಕ್ರಮ, ದೇವತಾಪ್ರೀತಿಕರವಾದ ಆಹಾರಗಳು, ತ್ರಿಗುಣಾನುಗುಣ ವಿಭಾಗ, ಆರೋಗ್ಯದೃಷ್ಟಿ ಹೀಗೆ ಅನಂತವಾದ ಚಿಂತನೆಗಳನ್ನು ಭಾರತೀಯರಲ್ಲಿ ನೋಡುತ್ತೇವೆ. ಇವುಗಳೆಲ್ಲದರ ಹಿನ್ನೆಲೆಯಲ್ಲಿ ಯೋಗದೃಷ್ಟಿಯಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದು.

ಮೊದಲನೆಯದಾಗಿ ಆಹಾರ ಅಥವಾ ಅನ್ನದ ಸ್ವರೂಪ ಮತ್ತು ಉತ್ಪತ್ತಿಯನ್ನು ಕುರಿತು ಮಹರ್ಷಿಗಳ ನೋಟವನ್ನು ಸಂಕ್ಷಿಪ್ತವಾಗಿ ನೆನಪಿಸಿಕೊಳ್ಳಬಹುದು. ಅನ್ನವು ಜೀವಿಗಳಿಗಿಂತ ಮೊದಲೇ ಭಗವಂತನಿಂದ ಅರಳಿಬಂದಿದೆ. ಮೊದಲು ಅನ್ನ, ನಂತರ ಜೀವಿಗಳು ಬಂದಿರುವುದು. ಜೀವಿಗಳಿಗೆ ಬೇಕಾದದ್ದನ್ನು ಪ್ರಕೃತಿಯಲ್ಲಿ ಇಟ್ಟ ನಂತರವೇ ಜೀವಿಗಳ ಸೃಷ್ಟಿಯಾಗಿದೆ. ’ಅನ್ನಾತ್ಪುರುಷಃ’, ‘ಅನ್ನಂ ಹಿ ಭೂತಾನಾಂ ಜ್ಯೇಷ್ಠಂ’ ಅನ್ನದಿಂದಲೇ ಜೀವಿಗಳು, ಎಲ್ಲಕ್ಕಿಂತಲೂ ಹಿರಿದಾದದ್ದು ಎಂದು ಋಷಿಗಳು ಘೋಷಿಸಿದ್ದಾರೆ. ನಾವು ಸೇವಿಸುವ ಆಹಾರವೇ ರಕ್ತಾದಿ ಧಾತುರೂಪದಲ್ಲಿಯೂ ಪರಿವರ್ತನೆಗೊಂಡು ಸೃಷ್ಟಿಯು ಬೆಳೆಯುತ್ತದೆ. ಆದ್ದರಿಂದ ಅನ್ನವು ಜೀವಿಗಳಿಗೆ ಆಶ್ರಯವಾದದ್ದಲ್ಲದೇ ಜೀವಿಗಳ ಅಭಿವ್ಯಕ್ತಿಗೂ ಕಾರಣವಾದ ಪದಾರ್ಥವಾಗಿದೆ. ಅಷ್ಟೇ ಅಲ್ಲದೆ, ಜೀವಿಗಳು ಲಯಿಸುವುದೂ ಅನ್ನದಿಂದಲೇ. ಬೆಳೆಸಿ, ಬೆಳೆಸಿ ಸಾವಿನತ್ತ ಮುನ್ನಡಿಸುವುದೂ ಅನ್ನವೇ. ಅನ್ನದ ಮೂಲವನ್ನು,ಋಷಿಗಳು ಕೇವಲ ಸಸ್ಯ-ಪ್ರಾಣಿಗಳಲ್ಲಿ ನೋಡಲಿಲ್ಲ.ಜೀವನಕ್ಕೆ ಯಾವ ಪರಬ್ರಹ್ಮವು ಮೂಲವೋ ಅದೇ ಅನ್ನಕ್ಕೂ ಮೂಲ ಎಂಬ ಸತ್ಯಾರ್ಥವನ್ನು ಮನಗಂಡು, ಅಲ್ಲಿಯವರೆಗೆ ತಮ್ಮ ದೃಷ್ಟಿಹರಿಸಿ, ಅದರ ಸಾಕ್ಷಾತ್ಕಾರಕ್ಕಾಗಿ ಆಹಾರ ವ್ಯವಸ್ಥೆಯನ್ನು ಅಳವಡಿಸಿರುವುದು ಸ್ಪಷ್ಟವಾಗಿದೆ.

ಆದರೆ ಆಹಾರದ ಸಸ್ಯ-ಮೂಲವನ್ನೂ ಅವರು ಬಲ್ಲವರೇ. ಒಂದೆಡೆ ಆತ್ಮನಿಂದ ಆಕಾಶ, ಆಕಾಶದಿಂದ ವಾಯು, ವಾಯುವಿನಿಂದ ಅಗ್ನಿ, ಅಗ್ನಿಯಿಂದ ಜಲತತ್ವ, ಜಲದಿಂದ ಪೃಥಿವೀ, ಪೃಥಿವಿಯಿಂದ ಓಷಧಿಗಳು, ಓಷಧಿಗಳಿಂದ ಅನ್ನ ಮತ್ತು ಅನ್ನದಿಂದ ಜೀವ ಎಂಬ ಮಾತನ್ನು ನೋಡುತ್ತೇವೆ. ಅಂದರೆ ಜೀವಿ ಮತ್ತು ಅನ್ನ ಎರಡರ ಮೂಲವೂ ಒಂದೇ. ಪ್ರಕೃತಿಯು ಆಹಾರದ ಭಂಡಾರ. ಜೀವಿಗಳೂ ನಿಸರ್ಗದ ಶಿಶುಗಳೇ. ಆದ್ದರಿಂದಲೇ ಅವರು ತಮ್ಮ ವಾಙ್ಮಯಗಳಲ್ಲಿ ‘ಅನ್ನಂ ಬ್ರಹ್ಮ’ ಎಂದಿದ್ದಾರೆ.

ಆದ್ದರಿಂದಲೇ ಅನ್ನವನ್ನು ನಿಂದಿಸಬಾರದು, ತಿರಸ್ಕರಿಸಬಾರದು, ಇದು ವ್ರತ. ಬಹುವಾಗಿ ಸಂಪಾದಿಸಬೇಕು ಎಂದು ಅರ್ಥವತ್ತಾಗಿ ನುಡಿದಿದ್ದಾರೆ. ಬ್ರಹ್ಮಭಾವದಿಂದ ಸ್ವೀಕರಿಸಿದಾಗ ಜೀವಿಗಳಿಗೆ ಜ್ಞಾನನಿಧಿಯನ್ನು ನೀಡುತ್ತದೆ ಮತ್ತು  ಅನ್ನವು ವಿಶ್ವವೆಲ್ಲವನ್ನೂ ಸುಸ್ಥಿತಿಯಲ್ಲಿರಿಸುವ ವಿಷ್ಣುವಿನ ಶರೀರ ಎಂದಿದ್ದಾರೆ. ಶ್ರೀರಂಗಮಹಾಗುರುಗಳು ‘ಋಷಿಗಳ ಆಚಾರವಾಗಲೀ, ಆಹಾರವಾಗಲೀ ಅಥವಾ ವ್ಯವಹಾರವಾಗಲೀ ಆತ್ಮಮೂಲವಾಗಿ ಬಂದಿದೆಯಪ್ಪಾ’ಎನ್ನುತ್ತಿದ್ದರು.  


ಸೂಚನೆ: 05/11/2019 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.