Thursday, November 14, 2019

ಆದರ್ಶ ಪೂಜೆ (Aadarsha pooje)

ಲೇಖಕರು: ಮೈಥಿಲೀ  ರಾಘವನ್   


ಒಮ್ಮೆ ದುರ್ವಾಸಮುನಿಗಳು ದೇವಲೋಕಕ್ಕೆ ತೆರಳಿದರು. ಅಲ್ಲಿ ದೇವೇಂದ್ರನು ಮಹಾದೇವಿಯ ಪೂಜೆಯನ್ನು ತನ್ನಲ್ಲಿರುವ ಸಂಪತ್ತೆಲ್ಲವನ್ನೂ ಬಳಸಿ ಅತಿ ವಿಜೃಂಭಣೆಯಿಂದ ನಡೆಸುತ್ತಿದ್ದ.  ಆ ದೃಶ್ಯದಿಂದ ಪ್ರಸನ್ನರಾದ ಋಷಿಯು ಅಲ್ಲಿಂದ ಜಗನ್ಮಾತೆಯನ್ನು ಕಾಣಲು ಬಂದರು. ಆಗ ದೇವಿಯು ಅತ್ಯಂತ ನೋವಿನಿಂದ ನರಳುತ್ತಿದ್ದುದನ್ನು ಕಂಡು “ಅಮ್ಮಾ, ನಿನ್ನ ನೋವಿಗೆ ಏನು ಕಾರಣ? ಇದನ್ನು ಪರಿಹರಿಸಲು ಯಾವ ವೈದ್ಯನನ್ನು ಕರೆತರಬೇಕು" ಎಂದು ಚಿಂತಾಕ್ರಾಂತರಾಗಿ ಪ್ರಶ್ನಿಸಿದರು. ಆಗ ದೇವಿಯು “ಇದನ್ನು ಸರಿಪಡಿಸುವ ವೈದ್ಯ ಕಾಶಿಕ್ಷೇತ್ರದ ದೇವಾಲಯದಲ್ಲಿರುವನು” ಎಂದಳು.
ಒಡನೆಯೇ ಮುನಿಗಳು ಕಾಶಿಗೆ ತೆರಳಿದರು. ಆದರೆ ಅಲ್ಲಿಯ ದೇವಾಲಯದಲ್ಲಿ ಯಾವ ವೈದ್ಯನೂ ಕಾಣಸಿಗಲಿಲ್ಲ. ಅಲ್ಲಿದ್ದದ್ದು ವೃದ್ಧನೊಬ್ಬನು ಮಾತ್ರವೇ. ಆತನು ದೇವಿಯನ್ನು ನೆನೆದು ಸ್ತುತಿಸುತ್ತಾ ಆನಂದ ಭಾಷ್ಪವನ್ನು ಸುರಿಸುತ್ತಿದ್ದನು. ಪೂಜೆಗಾದ ಸಲಕರಣಗಳಾವುವೂ ಅಲ್ಲಿ ಕಾಣಲಿಲ್ಲ. ನಿರಾಶರಾಗಿ ಹಿಂತಿರುಗಿ “ಅಮ್ಮ, ನೀನು ಹೇಳಿದಂತೆ ಅಲ್ಲಿ ಯಾವ ವೈದ್ಯನೂ ಇಲ್ಲ” ಎಂದು ಹೇಳಲುಬಂದ ದುರ್ವಾಸರಿಗೆ  ದೊಡ್ಡ ಆಶ್ಚರ್ಯವೇ ಕಾದಿತ್ತು.

ನೋವಿನಿಂದ  ನರಳುತ್ತಿದ್ದ ಮಹಾದೇವಿಯು ಈಗ ಬಹಳ ಪ್ರಸನ್ನಳಾಗಿ ಅವರನ್ನು ಎದುರುಗೊಂಡಳು. ವೈದ್ಯನು ಸಿಗಲಿಲ್ಲವೆಂದ ಆತನನ್ನು ಕುರಿತು ದೇವಿಯು ಎಂದಳು “ಅಲ್ಲಿ ಇದ್ದ ವೈದ್ಯನಿಂದ ಈಗಾಗಲೇ ನನ್ನ ನೋವು ನೀಗಿದೆ.” ದುರ್ವಾಸರಿಗೆ ಏನೂ ಅರ್ಥವಾಗಲಿಲ್ಲ. ದೇವಿಯೇ ಹೇಳಿದಳು “ಭಕ್ತಿಯಿಲ್ಲದ ದೇವೇಂದ್ರನ ಆಡಂಬರದ ಪೂಜೆಯಿಂದ ಪ್ರಸನ್ನತೆಗಿಂತ ನೋವೇ ಹೆಚ್ಚಾಯಿತು. ಕಾಶಿಯ ವೃದ್ಧನು ಮನಃಪೂರ್ವಕವಾಗಿ ಭಕ್ತಿಯಿಂದ ಮಾಡಿದ ಆರಾಧನೆಯು ನನಗೆ ಮನಃಪ್ರಸನ್ನತೆಯನ್ನುಂಟುಮಾಡಿತು.”

ಇದೇ ಅಭಿಪ್ರಾಯವನ್ನೇ ನಾದೋಪಾಸಕರಾದ ಶ್ರೀ ತ್ಯಾಗರಾಜಸ್ವಾಮಿಗಳೂ ಸಾರಿದ್ದಾರೆ – “ಮನಸ್ಸು ಭಗವಂತನಲ್ಲಿ ನಿಲ್ಲದಿದ್ದರೆ ಮಧುರವಾದ ಘಂಟಾವಾದನ ಮುಂತಾದವುಗಳಿಂದ ಪೂಜೆ ಮಾಡಿದರೇನು ಪ್ರಯೋಜನ?” ದಾಸಶ್ರೇಷ್ಠರೂ ಹೇಳುತ್ತಾರೆ – “ತಾಳಮೇಳಗಳಿದ್ದು ಪ್ರೇಮವಿಲ್ಲದ ಗಾನ ಕೇಳನೊ ಹರಿ ತಾಳನೊ “

ಶ್ರೀರಂಗಮಹಾಗುರುಗಳು ‘ದೇವೋಭೂತ್ವಾ ದೇವಮರ್ಚಯೇತ್’ ಎಂಬ ವಾಣಿಯನ್ನು ಅನೇಕಬಾರಿ ಉದಹರಿಸುತ್ತಿದ್ದರು. “ತ್ವಾಂ ಚಿಂತಯನ್ ತ್ವನ್ಮಯತಾಂ ಪ್ರಪನ್ನಃ” ಎಂಬಂತೆ  ಭಗವದ್ಭಾವದಲ್ಲಿ ಮುಳುಗಿ, ಅವನ ಚಿಂತನೆಯಿಂದ ಅವನಲ್ಲೇ ಒಂದಾಗಿ, ಪೂಜೆಯನ್ನು ಸಲ್ಲಿಸಬೇಕು. ಇಂತಹ ಪೂಜೆಯು ಸಿದ್ಧಭಕ್ತರಿಗೆ ಮಾತ್ರವೇ ಸಾಧ್ಯವಾಗುವುದು. ಆದರೆ ಮಹಾತ್ಮರಿಗೆ ಸಹಜವಾದದ್ದು ಸಾಧಕರಿಗೆ ಆದರ್ಶ.

 ಭಗವಂತನ ಪೂಜೆಯಲ್ಲಿ ಪ್ರಧಾನವಾಗಿರಬೇಕಾದ ಅಂಶವೆಂದರೆ ಅವನಲ್ಲಿ ಭಕ್ತಿ, ಅನುರಕ್ತಿ. ಅಂದಮಾತ್ರಕ್ಕೆ ಹೊರಸಾಮಗ್ರಿಗಳಾವುವೂ ಬೇಡವೆಂದಲ್ಲ. ಸನ್ಮಾರ್ಗದಿಂದ ಒದಗಿಬರುವ ಪದಾರ್ಥಗಳನ್ನು ಭಗವಂತನಿಂದಲೇ ಒದಗಿಬಂದವುಗಳಾಗಿ ಭಾವಿಸಿ ‘ಕೆರೆಯೆನೀರನು ಕೆರಗೆ ಚೆಲ್ಲಿ’ ಎಂಬ ಮನಸ್ಸಿನಿಂದ ಆತನ ಪೂಜೆಯಲ್ಲಿ ಬಳಸುವುದು ತಪ್ಪಲ್ಲವೆಂಬುದು ಮೇಲೆ ಸೂಚಿತವಾದ ಮಹಾತ್ಮರ ವಾಕ್ಯಗಳ ಆಶಯ. ಹೊರ ಸಾಮಗ್ರಿಗಳನ್ನು ಹೆಚ್ಚು ಹರಡಿಕೊಂಡಷ್ಟೂ ಮನಸ್ಸು ಹೊರಮುಖವಾಗುವುದು ಅನಿವಾರ್ಯ. ಆದ್ದರಿಂದ ಮನಸ್ಸು ಭಗವಂತನೆಡೆ ಸಾಗಲು ತಡೆಯಿಲ್ಲದಷ್ಟರಲ್ಲಿಯೇ ಹೊರ ವೈಭವವನ್ನು ಸೀಮಿತಗೊಳಿಸಿಕೊಳ್ಳ ಬೇಕೆನ್ನುವುದು  ಮಹಾತ್ಮರ ಆದೇಶ.

ನಾವು ಮಾಡುವ ಪುಜೆಯಲ್ಲಿ ಈ ಅಂಶವನ್ನು ಅರಿತು ಆಚರಿಸಿದರೆ ಮಹಾತ್ಮರ ಹಾದಿಯಲ್ಲಿ ಸಾಗಿ ಪೂಜೆಯು ಸಾರ್ಥಕವಾಗುವುದು.  

ಸೂಚನೆ:  11/11/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.