Thursday, November 28, 2019

ಕಲೆಯ ನೆಲೆ ಮತ್ತು ಬೆಲೆ (Kaleya nele mattu bele)

ಲೇಖಕರು: ತಾರೋಡಿ ಸುರೇಶ   


ಯಾವುದೇ ಪದಾರ್ಥವಾದರೂ ಅದರ ವಿಶಿಷ್ಟತೆ-ಲಕ್ಷಣಗಳ ಜ್ಞಾನವಿದ್ದರೆ ಅದು ಎಲ್ಲಿದ್ದರೂ ಪತ್ತೆಹಚ್ಚಬಹುದು. ಅದರಂತೆಯೇ ಇರುವ ಹತ್ತು ವಸ್ತುಗಳನ್ನು ತಂದಿಟ್ಟರೂ ತರತಮಜ್ಞಾನದಿಂದ ಗುರುತಿಸಬಹುದು. ಶ್ರೀರಂಗಮಹಾಗುರುಗಳು ಇದರ ಬಗ್ಗೆ ಒಂದು ಕಥೆ ಹೇಳುತ್ತಿದ್ದರು.

ಒಬ್ಬ ಹಸುವಿನಂತೆ ವೇಷಧರಿಸಿ, ಜನರಿಗೆ ಹಸುವಿನ ಆಟಗಳನ್ನು ತೋರಿಸುತ್ತಾ ಅದರಿಂದಲೇ ಜೀವನ ನಡೆಸುತ್ತಿದ್ದ. ಈ ವೇಷ ಹಾಕುವುದರಲ್ಲಿ ಅವನಿಗೆ ವಿಶೇಶವಾದ ನೈಪುಣ್ಯವಿತ್ತು. ಹಸುವಿನ ತೊಗಲು ಹೊದ್ದುಕೊಂಡು, ಹಸುವಿನಂತೆಯೇ ಆಡಿ, ಅದನ್ನು ನೋಡಿ ಸಂತೋಷಗೊಂಡ ಜನರಿಂದ ಬರುವ ಹಣದಿಂದ ಜೀವನ ನಡೆಸುತ್ತಿದ್ದ. ಇವನ ಖ್ಯಾತಿ ರಾಜನ ಆಸ್ಥಾನದವರೆಗೂ ಹೋಯಿತು. ರಾಜನ ಸಮ್ಮುಖದಲ್ಲಿ ಇವನ ಆಟದ ಏರ್ಪಾಟು ನಡೆಯಿತು. ಕಲಾಕಾರನು ಹಸುವಿನಂತೆಯೇ ಆಡಿ ತೋರಿಸಿದ. ನೋಡಿ ಎಲ್ಲರೂ ಸಂತೋಷಪಟ್ಟರು. ತಮ್ಮ ತಮ್ಮ ಅಂತಸ್ತಿಗೆ ತಕ್ಕಂತೆ ಉಂಗುರ, ಪದಕ, ಹಣ ಮೊದಲಾದುವುಗಳನ್ನು ಅವನೆಡೆಗೆಸೆದರು. ಆದರೆ ಅವನು ಅದೊಂದನ್ನೂ ಮುಟ್ಟಲಿಲ್ಲ. ಏಕೆಂದರೆ ಅವರೆಲ್ಲರೂ ತಮ್ಮ ದರ್ಜೆಗನುಗುಣವಾಗಿ ಅವನಿಗೆ ಸಂಭಾವನೆಯನ್ನು ಕೊಟ್ಟರೇ ಹೊರತು, ಹಸುವಿನಲ್ಲಿಯ ವಿಶಿಷ್ಟತೆಯೇನು? ಹಸುವಿನಂತೆಯೇ ಇವನು ಅಭಿನಯಿಸಬಲ್ಲನೇ ಎಂಬುದನ್ನು ಗಮನಿಸಿ, ಕೊಟ್ಟ ಮೆಚ್ಚುಗೆಯಾಗಿರಲಿಲ್ಲ. ನಂತರ ಅಲ್ಲಿಯೇ ಇದ್ದ ಹಳ್ಳಿಯ ಗೌಡನೊಬ್ಬ ನಿಜಕ್ಕೂ ಹಸುವಿನಂತೆ ಆಡುತ್ತಾನೆಯೇ ಏಂದು ಪರೀಕ್ಷಿಸಲು ಒಂದು ಸಣ್ಣ ಕಲ್ಲನ್ನು ಅವನ ಮೈಗೆ ತಾಕುವಂತೆ ಎಸೆದ. ತಕ್ಷಣ ಆ ಕಲಾವಂತ ಆ ಕಲ್ಲು ತಗುಲಿದ ಜಾಗವಷ್ಟನ್ನು ಮಾತ್ರವೇ ಅಲುಗಿಸಿದ. ಆಗ ಆ ಗೌಡನಿಗೆ ತುಂಬಾ ಸಂತೋಷವಾಗಿ ಭೇಷ್ ಎಂದ. ತಾನು ಹೊದ್ದಿದ್ದ ಹರಿದ ಕಂಬಳಿಯನ್ನೇ ಮನಮೆಚ್ಚಿ ಕೊಟ್ಟುಬಿಟ್ಟ.

ಹಸುವಿನ ವೇಷ ಹಾಕಿದವನೂ ಬಲು ಸಂತೋಷದಿಂದ “ನೀನು ತಾನೇ ನನ್ನ ಕಲೆಯರಿತು ಗೌರವಿಸಿದೆ. ಇದೇ ನನಗೆ ನಿಜವಾದ ಬಹುಮಾನ” ಎಂದು ಆ ಹರಿದಿರುವ ಕಂಬಳಿಯನ್ನು ಮೊದಲು ಸ್ವೀಕರಿಸಿದ. ಆಗ ಅಲ್ಲಿದ್ದ ಸಭಾಸದರು ಹರಿದ ಕಂಬಳಿಯೇ ನಿನಗೆ ಹೆಚ್ಚಾಯಿತೇ? ಎಂದು ಅವನ ಮೇಲೆ ಆಗ್ರಹ ತೋರಿದರು. ಆಗ ಕಲಾವಂತನು “ತಾವು ಕೋಪಿಸಿಕೊಳ್ಳಬಾರದು. ಬಡವ ಎಂದು ತಾವೆಲ್ಲ ದಯೆ ತೋರಿಸಿದಿರಿ. ಆದರೆ ಅವು ನನ್ನ ಕಲೆಯನ್ನು ಗಮನಿಸಿ ಬಂದ ಮೆಚ್ಚುಗೆಯಾಗಿರಲಿಲ್ಲ. ಆದರೆ ಈ ಗೌಡ ಹಸುವಿನಲ್ಲಿರುವ ವಿಶೇಷಾಂಶವನ್ನು ಬಲ್ಲವನಾದುದರಿಂದ, ಅದನ್ನು ತೋರಿಸಬಲ್ಲ ಆಳ ನನ್ನಲ್ಲಿ ಇದೆಯೇ ಎಂಬುದನ್ನು ಪರೀಕ್ಷಿಸಿ, ಮೆಚ್ಚಿ ಬಹುಮಾನ ಕೊಟ್ಟ. ನಾನು ಕಲೆಗಾಗಿ ಬದುಕುವವನು. ಕಲೆಯನ್ನು ಮೆಚ್ಚಿ ಬಂದ ಬಹುಮಾನವನ್ನು ಮೊದಲು ತೆಗೆದುಕೊಳ್ಳುತ್ತೇನೆ.” ಎಂದು ಹೇಳಿ ಆನಂತರ ಉಳಿದವರು ಕೊಟ್ಟಿದ್ದನ್ನೂ ತೆಗೆದುಕೊಂಡ.

ಹಸುವಿಗೆ ಕಲ್ಲೆಸೆದರೆ ಅಷ್ಟು ಜಾಗವನ್ನು ಮಾತ್ರ ಅದು ಅಲುಗಿಸುತ್ತದೆ. ಆ ಮರ್ಮವನ್ನು ಅರಿತು ಗೌಡ ಬೆಲೆಕೊಟ್ಟ. ಕಲೆ ನೆಲೆಯನ್ನು ಮುಟ್ಟಿಸಬೇಕು. ಅಂಶ ಅಂಶಿಯಲ್ಲಿ ಸೇರಬೇಕು.ಬೀಜವು ವಿಕಾಸಗೊಳ್ಳುವಾಗ ಎಲ್ಲೆಡೆಯಲ್ಲಿಯೂ ತನ್ನತನವನ್ನು ಅರಳಿಸಿಕೊಳ್ಳುತ್ತಲೇ ಬರುವುದು. ಅಂಶಗಳಲ್ಲಿ ಅಂಶಿಯ ಧರ್ಮಗಳಿರುತ್ತವೆ.ಅವನ್ನು ಗುರುತಿಸುವ ಕಣ್ಣು ಬೇಕು. ನಮಗೆಲ್ಲಾ ಲಕ್ಷಣಜ್ಞಾನ ಚೆನ್ನಾಗಿದ್ದರೆ ಲಕ್ಷ್ಯವನ್ನು ಮುಟ್ಟಬಹುದು.


ಸೂಚನೆ:  28/11/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.