Monday, November 18, 2019

ಆಹಾರದಲ್ಲಿ ದೇವತೆಗಳ ಉಪಾಸನೆ (Aaharadalli devathegala upasane)

ಲೇಖಕರು: ತಾರೋಡಿ ಸುರೇಶ


ಅನ್ನದ ಮೂಲವು ಪರಬ್ರಹ್ಮವಸ್ತುವೇ ಆಗಿದೆ ಎಂಬುದನ್ನು ನೋಡಿದೆವು. ಅದರ ಸಮಗ್ರ ಪರಿಚಯವುಳ್ಳ ಜ್ಞಾನಿಗಳು ಪರಬ್ರಹ್ಮವಸ್ತು ಅನಂತವಾದ ಸೃಷ್ಟಿಗೆ ಕಾರಣವಾದ ವಿಧಾನವನ್ನೂ ವರ್ಣಿಸಿದ್ದಾರೆ. ತನ್ನನ್ನೇ ಪ್ರಕೃತಿ ಪುರುಷ ಎಂಬುದಾಗಿ ಎರಡಾಗಿ ವಿಭಾಗಿಸಿಗೊಂಡು ಮುಂದೆ ಮಹತ್ತತ್ವರೂಪದಲ್ಲಿ ತನ್ನನ್ನು ಅರಳಿಸಿಕೊಂಡಿತು. ಮಹತ್ತತ್ವದ ಮೂಲಕವೇ ಸಮಸ್ತವಿಶ್ವದ ಸೃಷ್ಟಿಯನ್ನು ಮಾಡಿತು. ಹೀಗೆ ಸೃಷ್ಟಿವಿಸ್ತಾರಕ್ಕೆ ಆಧಾರವಾದ ಮಹತ್ತತ್ವವೇ ಅನ್ನದ ವಿಸ್ತಾರಕ್ಕೂ ಆಶ್ರಯವಾಯಿತು. ಆದ್ದರಿಂದಲೇ ಇದರ ಪರಿಚಯವುಳ್ಳ ಮಹರ್ಶಿಗಳು “ಮಹ ಇತ್ಯನ್ನಂ” ಎಂಬುದಾಗಿ ಇದು ಅನ್ನದ ಎರಡನೆಯ ಹಂತ ಎಂದು ಸಾರಿದರು.

ಮುಂದೆ ಆತ್ಮಕ್ಷೇತ್ರದಿಂದ ಪರಬ್ರಹ್ಮವಸ್ತುವು ಬಗೆಬಗೆಯ ದೇವತೆಗಳಾಗಿ ವಿಕಾಸಗೊಂಡಿತು. ಆದ್ದರಿಂದಲೇ ಅನ್ನಕ್ಕೆ ಅಧಿದೇವತೆಯಾಗಿ ಪ್ರಜಾಪತಿ ಎಂಬ ದೇವತೆಯನ್ನು ಗುರುತಿಸಿದ್ದಾರೆ.
ಈ ದೇವತಾಕ್ಷೇತ್ರದಲ್ಲಿ ಅನ್ನಪ್ರದರೆಂದು, ಮಹರ್ಷಿಸಂಸ್ಕೃತಿಯಲ್ಲಿ ಇನ್ನೂ ಕೆಲವು ದೇವತೆಗಳು ಪೂಜೆಯನ್ನು ಕೈಗೊಳ್ಳುತ್ತಿವೆ. ಉದಾಹರಣೆಯಾಗಿ ಅನ್ನಪೂರ್ಣಾ, ಧಾನ್ಯಲಕ್ಷ್ಮಿಯರನ್ನೂ ಅನ್ನಾಧಿದೇವತೆಗಳೆಂದು ಗುರುತಿಸಿದ್ದಾರೆ.

ಶ್ರೀಶಂಕರಭಗವತ್ಪಾದರು ಅನ್ನಪೂರ್ಣೆಯನ್ನು ಆನ್ನಪೂರ್ಣೇ ಸದಾಪೂರ್ಣೇ ಶಂಕರಪ್ರಾಣವಲ್ಲಭೇ! ಜ್ಞಾನವೈರಾಗ್ಯ(ಸೌಭಾಗ್ಯ) ಸಿದ್ಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತಿ!!. ಎಂದು ಸ್ತುತಿಸಿದ್ದಾರೆ. ಜ್ಞಾನವೆಂದರೆ ಜೀವಿಗಳ ಸಹಜಧ್ಯೇಯವಾದ ಪರಮಾತ್ಮಸಾಕ್ಷಾತ್ಕಾರ. ಅದಕ್ಕೆ ಸೋಪಾನದಂತಿರುವ ವೈರಾಗ್ಯ ಎಲ್ಲನನ್ನು ಅರ್ಥಹೀನವಾಗಿ ದೂರತಳ್ಳುವ ಪ್ರವೃತ್ತಿಯಲ್ಲ. ಪರಮಾತ್ಮಸಾಕ್ಷಾತ್ಕಾರಕ್ಕೆ ವಿರೋಧವಾದ ರಾಗದ್ವೇಷಗಳಿಗೆ ಅಂಟಬಾರದು. ನಿದ್ರೆಯನ್ನು ಬಯಸುವವನು ಅದಕ್ಕೆ ವಿರೋಧವಾದದೆಲ್ಲವನ್ನೂ ಬಿಡಬೇಕು.ತನ್ನ ಹೆಂಡತಿ ಮಕ್ಕಳನ್ನೂ ಎಲ್ಲವನ್ನು ಬಿಟ್ಟೇ ಹೋಗಬೇಕು.ಈ ಎಲ್ಲದರ ಸಂಗವನ್ನು ತೊರೆಯುವುದೇ ನಿದ್ರೆಗೆ ಬೇಕಾದ ವೈರಾಗ್ಯ ಎಂದು ಎಲ್ಲರಿಗೂ ಪರಿಚಯವುಳ್ಳ ನಿದ್ರೆಯ ಉದಾಹರಣೆಯಿಂದ ವಿಷಯವನ್ನು ಶ್ರೀರಂಗಮಹಾಗುರುಗಳು ಮನಗಾಣಿಸುತ್ತಿದ್ದರು.

ಇಲ್ಲಿ ಜಗನ್ಮಾತೆಯಲ್ಲಿ ಸೌಭಾಗ್ಯವನ್ನು ಪ್ರಾರ್ಥಿಸುವುದೂ ಸರಿಯಾಗಿಯೇ ಇದೆ. ಸೌಭಾಗ್ಯ ವೈರಾಗ್ಯಗಳು ಪರಸ್ಪರ ವಿರುದ್ಧವಲ್ಲ. ಜ್ಞಾನವೇ ಜೀವನದಲ್ಲಿ ಪಡೆಯಬೇಕಾದ ಮಹಾಭಾಗ್ಯ. ಅದಕ್ಕಾಗಿಯೇ ಧನ-ಧಾನ್ಯ ಮೊದಲಾದ ಸೌಭಾಗ್ಯಗಳು.

ಧಾನ್ಯಲಕ್ಷ್ಮಿಯು ವೈಷ್ಣವೀಶಕ್ತಿಯಾದ ಮಹಾಕ್ಷ್ಮಿಯ ಒಂದು ರೂಪವೇ. ಲಕ್ಷ್ಮಿ ಎಂದರೆ ಭಗವಂತನ ಲಕ್ಷ್ಮ-ಗುರುತುಗಳಿಂದ ಕೂಡಿದವಳು ಎಂದರ್ಥ. ಅವಳನ್ನು  “ಭುಕ್ತಿ-ಮುಕ್ತಿ ಪ್ರದಾಯಿನೀ” ಎಂದು ವರ್ಣಿಸಿದ್ದಾರೆ. ಕೇವಲ ಭುಕ್ತಿಯಾಗದೆ ಮುಕ್ತಿಯೂ ಬೇಕು. ಲಕ್ಷ್ಮೀ, ಪಾರ್ವತೀ ಇವರೆಲ್ಲರೂ ಪ್ರಕೃತಿಮಾತೆಯ ವಿವಿಧ ರೂಪಗಳೇ. ನಾರಾಯಣನೊಡನೆ ಲಕ್ಷ್ಮಿಯಾಗಿಯೂ, ಶಿವನೊಡನೇ ಶಕ್ತಿಯಾಗಿಯೂ ರಮಿಸುವ, ಮತ್ತು ಅವರ ಆಶಯವನ್ನು ವಿಸ್ತರಿಸುವ ಮಹಾದೇವತೆಗಳಿವರು. ಆಯಾ ಕಾರ್ಯಕ್ಷೇತ್ರಗಳಲ್ಲಿ ಅಲ್ಲಿಗೆ ಉಚಿತ ನಾಮರೂಪಗಳನ್ನು ಧರಿಸುತ್ತಾರೆ ಅಷ್ಟೆ.
ಆಹಾರದ ಸ್ಥೂಲರೂಪ, ಅದರ ಸೂಕ್ಷ್ಮವಾದ ದೇವತಾರೂಪ ಮತ್ತು ಪರಸ್ತರದಲ್ಲಿನ ಪರಬ್ರಹ್ಮರೂಪ ಹೀಗೆ ಮೂರೂ ಹಂತಗಳನ್ನು ಜ್ಞಾನಿಗಳು ಗಮನಿಸಿದ್ದಾರೆ. ಇನ್ನು ಅನ್ನಸೇವನೆಯ ಸಂದರ್ಭದಲ್ಲಿ ಋಷಿಗಳ ವಿಜ್ಞಾನವನ್ನು ಸ್ವಲ್ಪ ವಿಶದವಾಗಿ ನೋಡೋಣವಂತೆ.


ಸೂಚನೆ: 05/11/2019 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.