Sunday, November 24, 2019

ಭಾರತೀಯರ ಆಹಾರವ್ಯವಸ್ಥೆಯಲ್ಲಿ ಷಡ್ರಸಗಳು (Bharatheeyara aahara vyavastheyalli shadrasagalu)

ಲೇಖಕರು: ತಾರೋಡಿ ಸುರೇಶ


ರಸವನ್ನು ರುಚಿ ಎಂದೂ ಹೇಳುತ್ತಾರೆ. ಸಾಹಿತ್ಯದಲ್ಲಿ ನವರಸಗಳ ಆಸ್ವಾದನೆ ಇದ್ದರೆ ಸೌಹಿತ್ಯವು(ಅಡುಗೆಯು) ಷಡ್ರಸಗಳಿಗೆ ವಿಷಯ. ಶ್ರೀರಂಗಮಹಾಗುರುಗಳು “ರಸಭರಿತವಾದ ಕಾವ್ಯ ಓದಿ ರಸಭರಿತವಾಗಿ ಊಟಮಾಡಿ ಜೀವನಕ್ಕೆ ಒಳ್ಳೆಯ ಟೆಕ್ಷ್ಟ್-ಸಾಹಿತ್ಯ ಇರಲಿ, ಹಾಗೆಯೇ ಒಳ್ಳೆಯ ಟೇಸ್ಟ್- ಸೌಹಿತ್ಯ ಇರಲಿ” ಎನ್ನುತಿದ್ದರು.

ಆಧುನಿಕ ವೈದ್ಯಶಾಸ್ತ್ರವು ಟೇಸ್ಟ್ ಬಡ್ಸ್ ಎಂಬುದಾಗಿ ನಾಲ್ಕು ರುಚಿಕೇಂದ್ರಗಳನ್ನು ಗಮನಿಸಿದೆ. ಭಾರತೀಯರು ಮಧುರ(ಸಿಹಿ), ಆಮ್ಲ(ಹುಳಿ), ಕಟು(ಕಾರ), ಲವಣ(ಉಪ್ಪು), ಕಷಾಯ(ಒಗರು), ತಿಕ್ತ(ಕಹಿ) ಎಂಬ ಆರು ರಸಗಳನ್ನು ಗುರುತಿಸಿ, ತಮ್ಮ ಆಹಾರವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿದ್ದಾರೆ.

ರಸಗಳ ಬಗ್ಗೆ ರುಚಿ ಎಂಬಷ್ಟೇ ಪರಿಚಯವನ್ನು ನಾವು ಇಂದಿನ ಆಹಾರತಜ್ಞರಲ್ಲಿ ಕಾಣುತ್ತೇವೆ. ಆದರೆ ಮಹರ್ಷಿಗಳಲ್ಲಿ ರಸದ ಚಿಂತನೆಯು ಭೂ-ಸಗ್ಗಗಳನ್ನು ವ್ಯಾಪಿಸಿದೆ.
ರಸವು ದ್ರವ್ಯಗಳಲ್ಲಿ ಸಂಗ್ರಹಿತವಾಗಿರುವುದು. ಈ ದ್ರವ್ಯಕ್ಕೆ ರಸಗಳು ಬಂದದ್ದಾದರೂ ಹೇಗೆ? ಹೀಗೆ ರಸದ ಮೂಲವನ್ನು ಅರಸುತ್ತಾ ಜ್ಞಾನಿಗಳ ಅನ್ವೇಷಣೆ ಆಹಾರದ ಪರರೂಪವಾದ ಪರಬ್ರಹ್ಮವಸ್ತುವಿನವರೆಗೂ ಸಾಗಿತು. ಅಲ್ಲಿ ಪರಬ್ರಹ್ಮನನ್ನೂ ಅವರು ಮೊಟ್ಟಮೊದಲನೆಯ ಮತ್ತು ಜೀವನದಲ್ಲಿ ಇನ್ನೆಲ್ಲೂ ಕಾಣಸಿಗದ ಆಸ್ವಾದನೆಯ ರಸರೂಪಿಯನ್ನಾಗಿ ಅರ್ಥಮಾಡಿಕೊಂಡರು. ಭಗವಂತನೇ ರಸರೂಪಿಯು. ಎಲ್ಲ ರಸಗಳಿಗೂ ಬೀಜಭೂತನಾದವನು ಎಂದು ಅರಿತು “ ರಸೋ ವೈ ಸಃ” ಎಂಬುದಾಗಿ ಅವನನ್ನು ಕರೆದು ನಮಿಸಿದರು. ಅವನತನ ಇದ್ದರೆ ಮಾತ್ರ ಆನಂದವನ್ನು ಜೀವಿಯು ಅನುಭವಿಸಬಲ್ಲುದು ಎಂಬುದನ್ನು ಸಂದೇಹಕ್ಕೆಡೆಯಿಲ್ಲದೆ ಅರಿತರು. ‘ಪರಮಾತ್ಮನೇ ಸರ್ವ ರಸಾಶ್ರಯನು, ಎಲ್ಲ ರಸಗಳ ತವರುಮನೆ, ಅವನೇ ರಸ’ ಎಂದು ಸಾರಿದರು.
ಮುಂದೆ ಪರಮಾತ್ಮನೇ ತನ್ನನ್ನು ಪುರುಷಪ್ರಕೃತಿ ರೂಪಗಳಾಗಿಯೂ, ಅನ್ಯಾನ್ಯ ದೇವತಾಶಕ್ತಿಗಳಾಗಿಯೂ ಬೆಳೆಸಿಕೊಂಡನು. ಅದರಲ್ಲಿ ಅಗ್ನಿದೇವತೆಯಿಂದ ಮೂರು ಆಗ್ನಿಪ್ರಧಾನರಸಗಳಾದ ಕಟು, ಹುಳಿ ಮತ್ತು ಲವಣರಸಗಳೂ ಸೋಮದೇವತೆಯಿಂದ ಮಧುರ-ತಿಕ್ತ-ಕಷಾಯಗಳೆಂಬ ಸೌಮ್ಯರಸಗಳೂ ಹುಟ್ಟಿಕೊಂಡವು. ಸ್ಥೂಲವಿಶ್ವದಲ್ಲಿ ಇವು ದ್ರವ್ಯಗಳಲ್ಲಿ ಆಶ್ರಯ ಪಡೆಯುವ ಪ್ರಕ್ರಿಯೆಗಳ ವಿವರಗಳೂ ಆರ್ಷಸಾಹಿತ್ಯಗಳಲ್ಲಿ ಲಭ್ಯವಿದೆ.

ಆದ್ದರಿಂದ ನಮ್ಮ ಜೀವನದ ಪ್ರತಿ ಹೆಜ್ಜೆಯಲ್ಲಿಯೂ ದ್ರವ್ಯಗಳನ್ನಾಶ್ರಯಿಸಿ ಬಾಳುವಾಗ ಷಡ್ರಸಗಳ ಪಾತ್ರವಿದೆ. ಉದಾಹರಣೆಗೆ ಒಂದು ಮಿಡಿಮಾವಿನಿಂದ ಹಿಡಿಗಾತ್ರದ ಹಣ್ಣಾಗುವವರೆಗೆ, ಮಿಡಿಯಲ್ಲಿ ಕೊಂಚ ಕಹಿ, ನಂತರ ಸ್ವಲ್ಪ ಒಗಚು, ಹುಳಿ, ಅತ್ಯಲ್ಪಪ್ರಮಾಣದ ಲವಣ ಕಟುಗಳು ಹೀಗೆ ಷಡ್ರಸಗಳ ಪಾತ್ರಗಳನ್ನು ಕಾಣುತ್ತೇವೆ.ಆದರೆ ಕಟ್ಟಕಡೆಯಲ್ಲಿ ಮಧುರರಸ. ಇಂತಹ ಅನೇಕ ಉದಾಹರಣೆಗಳನ್ನು ಪ್ರತ್ಯಕ್ಷ ತೋರಿಸಿ ವಿಷಯಗಳನ್ನು ಶ್ರೀರಂಗಮಹಾಗುರುಗಳು ಮನಗಾಣಿಸುತ್ತಿದ್ದರು.

ಹಾಗೆಯೇ ಬುದ್ಧಿಜೀವಿಯಾದ ಮಾನವನು ಅರಿತು ರಸಗಳನ್ನು ತನ್ನ ಜೀವನದಲ್ಲಿ ಯೋಜಿಸಿಕೊಳ್ಳಬೇಕಾಗುತ್ತದೆ. ಪ್ರಕೃತಿ-ಕಾಲ-ದೇಶ-ವಯಸ್ಸು ಇವುಗಳೆಲ್ಲವನ್ನೂ ಗಮನಿಸಿ ಸೂಕ್ತ ರಸಗಳನ್ನು ಕೊಡಬೇಕಾಗುತ್ತದೆ. ಹೀಗೆ ಪರಬ್ರಹ್ಮಮೂಲದಿಂದ ವಿಕಾಸಗೊಂಡ ಜೀವವು, ಆ ಮೂಲದಿಂದಲೇ ವಿಸ್ತಾರಗೊಂಡ ರಸಗಳನ್ನು ವೈಜ್ಞಾನಿಕವಾಗಿ ಅಳವಡಿಸಿಕೊಂಡಾಗ ಪುನಃ ರಸರೂಪಿಯಾದ ತನ್ನ ನೆಲೆಯನ್ನು ಸೇರಬಹುದು ಎಂಬ ವಿಜ್ಞಾನವನ್ನು ಮಹರ್ಷಿಗಳ ರಸಮೀಮಾಂಸೆಯಲ್ಲಿ ಗಮನಿಸಬಹುದು.


ಸೂಚನೆ: 23/11/2019 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.