Saturday, November 16, 2019

ಮನಸಸ್ಪತಿಯಲ್ಲಿ ಮನೋಲಯ (Manasaspathiyalli manolaya)

ಲೇಖಕರು: ತಾರೋಡಿ ಸುರೇಶ   


ರಾಜನೊಬ್ಬ ಋಷಿಯಲ್ಲಿಗೆ ಹೋಗಿ ನಮಸ್ಕರಿಸಿದ. ‘ತಾನು ಬಯಸಿದ್ದೆಲ್ಲಾ ಈಡೇರುವ ವರ ನೀಡಿ’ ಎಂದು ಪ್ರಾರ್ಥಿಸಿದ. ಋಷಿಯು ಇದೂ ವಿವೇಕಕ್ಕೆ ದಾರಿಯಾಗಲಿ ಎಂದಂದುಕೊಂಡು ತಥಾಸ್ತು ಎಂದ. ‘ನಾನೊಂದು ಮಹಾಭೂತವನ್ನು ಸೃಷ್ಟಿಸಿ ಕೊಡುತ್ತೇನೆ. ಆದರೆ ಅದಕ್ಕೆ ಬಿಡುವಿಲ್ಲದಂತೆ ಕೆಲಸ ಕೊಡುತ್ತಲೇ ಇರಬೇಕು.ಈ ನಿಯಮವನ್ನು ಮುರಿದರೆ ಅವನು ನಿನ್ನನ್ನೇ ಭಕ್ಷಿಸಿಬಿಡುತ್ತಾನೆ. ಆಗಬಹುದೇ? ಎಂದು ಕೇಳಿದ. ಸಂತೋಷದಿಂದ ರಾಜನು ಒಪ್ಪಿದ. ತಕ್ಷಣವೇ ಆ ಮಹಾಭೂತ ರಾಜನ ಎದುರಿಗೆ ಕಾಣಿಸಿಕೊಂಡು ಹೇ ರಾಜನೇ ಏನಪ್ಪಣೆ? ಎಂದು ಕೇಳಿತು. ರಾಜನು ನಿರಂತರವಾಗಿ ಕೆಲಸ ಕೊಡಲು ಆರಂಭಿಸಿದ. ಅವನ ಪಟ್ಟಿಯಲ್ಲಿ ಸಹಸ್ರಾರು ಕೆಲಸಗಳಿದ್ದವು. ಆದರೆ ಅವನು ಹೇಳಿದ ಮರುಕ್ಷಣದಲ್ಲಿ ಆ ಭೂತವು ಕೆಲಸವನ್ನು ಮುಗಿಸಿ ಮುಂದೇನಪ್ಪಣೆ ಎಂದು ಕೈಕಟ್ಟಿ ನಿಲ್ಲುತ್ತಿತ್ತು. ರಾಜನ ಪಟ್ಟಿ ಮುಗಿಯಿತು. ಹೊಸಹೊಸ ಕೆಲಸಗಳನ್ನು ಹುಡುಕಿ, ಹುಡುಕಿ ಹೇಳತೊಡಗಿದನು. ಎಲ್ಲವು ಮುಗಿಯುತ್ತ ಬಂದಿತು. ರಾಜನಿಗೆ ಆತಂಕವಾಗತೊಡಗಿತು. ಕೆಲಸವನ್ನು ನಿರಂತರವಾಗಿ ಕೊಡದಿದ್ದಲ್ಲಿ ಭೂತವು ತನ್ನನ್ನೇ ತಿಂದುಬಿಡುತ್ತದೆ. ರಾಜ್ಯದಲ್ಲೆಲ್ಲಾ ಹಾಹಾಕಾರ. ಮಂತ್ರಿಗಳು, ಪ್ರಜೆಗಳು ಎಲ್ಲರೂ ಕೆಲಸ ಕೊಡತೊಡಗಿದರು. ಆದರೆ ಭೂತಕ್ಕೆ ಅವೆಲ್ಲಾ ಲೆಕ್ಕಕ್ಕಿಲ್ಲ.

ರಾಜನು ಪುನಃ ಋಷಿಗೇ ಶರಣಾದ. ಕೇಳಬಾರದ್ದನ್ನು ಕೇಳಿದೆ, ಕ್ಷಮಿಸಿ ಕಾಪಾಡಿ ಎಂದ. ಆಗ ಋಷಿಯು ಆ ಭೂತವನ್ನು ಕರೆದು “ ಕೀಳಲಾರದಂತಹ ಕಂಭವೊಂದನ್ನು ಇಲ್ಲಿ ನೆಟ್ಟು ಈ ಕಂಭವನ್ನು ನಿರಂತರವಾಗಿ ಹತ್ತುತ್ತಾ, ಇಳಿಯುತ್ತಾ ಇರಬೇಕು.” ಎಂದು ಆಜ್ಞಾಪಿಸಿದರು. ಅದನ್ನು ಮಾಡುತ್ತಾ ಮಾಡುತ್ತಾ ಕೊನೆಗೆ ಆಯಾಸಗೊಂಡು ಸೋತ ಭೂತವು ಆ ಕಂಭದಲ್ಲಿಯೇ
ಲಯವಾಗಿಹೋಯಿತಂತೆ. 

ಇದರ ತತ್ವಾರ್ಥವೇನು? ಇಲ್ಲಿ ಭೂತವೆಂದರೆ ನಮ್ಮ ಮನಸ್ಸು. ಆ ಭೂತಕ್ಕೆ ಏನಾದರೂ ಆಹಾರವನ್ನು ಕೊಡುತ್ತಲೇ ಇರಬೇಕು. ಅದಕ್ಕೆ ಬೇಕಾದದ್ದು ಸಂಕಲ್ಪ-ವಿಕಲ್ಪಗಳು. ಅದಿಲ್ಲದೆ ಒಂದು ಅರೆ ನಿಮಿಷವೂ ಮನಸ್ಸು ಇರಲಾರದು. ಅಗ್ನಿಗೆ ತುಪ್ಪ ಸುರಿದಂತೆ. ಕೊಟ್ಟಷ್ಟೂ ಪುನಃಪುನಃ ಬೇಡುತ್ತಲೇ ಇರುತ್ತದೆ. ಮನಸ್ಸಿನ ಈ ಸ್ವಭಾವವನ್ನು ಅರಿತೇ ಜ್ಞಾನಿಗಳು ದೇಹದೊಳಗೇ ಇರುವ ಮೇರುದಂಡವನ್ನು ಸುತ್ತುವ ವಿಧಿ-ವಿಧಾನವನ್ನು ಕಲ್ಪಿಸಿಕೊಟ್ಟರು. ಬೆನ್ನುಮೂಳೆಯ ಒಳಪಾರ್ಶ್ವದಲ್ಲಿರುವ ಈ ಮೇರುದಂಡದ ಒಳಗೆ ಸುಷುಮ್ನಾ ಎಂಬ ಪರಮಶ್ರೇಷ್ಠವಾದ ನಾಡಿ ಇದೆ. ಅದರೊಳಗೆ ಸಗುಣವಾದ ಪರಮಾತ್ಮನಿದ್ದಾನೆ. ಅವನನ್ನು ಆಪಾದಮಸ್ತಕನಾಗಿ ಭಾವಿಸಬೇಕು. ಅಡಿಯಿಂದ ಮುಡಿಗೇರಬೇಕು. ಪುನಃ ಅವರೋಹಣ ಮಾಡಬೇಕು. ಹೀಗೆ ಮಾಡುತ್ತಾ ಭಗವಂತನಲ್ಲಿ ಒಂದಾಗುವುದೇ ಮನಸ್ಸಿನ ಸಂಕಲ್ಪವಾಗಿಬಿಡುತ್ತದೆ. ಮನಸಸ್ಪತಿಮೂಲವಾಗಿ ಬಂದಿದ್ದು ಅವನನ್ನೇ ಸೇವಿಸುತ್ತಾ, ಆಸ್ವಾದಿಸುತ್ತಾ ಮನಸಸ್ಪತಿಯಲ್ಲಿಯೇ ಲಯಗೊಳ್ಳುತ್ತದೆ. ಮುಕ್ತಿಗೆ ಮನಸ್ಸೇ ಕಾರಣ ಎನ್ನುತ್ತಾರೆ. ಅಂತಹ ಮನಸ್ಸಿಗೆ ಭಗವಂತನೆಂಬ ವಿಷಯವನ್ನು ನಿರಂತರವಾಗಿ ಕೊಡುತ್ತಾ ಬಂದರೆ ಅದು ಅಲ್ಲಿಗೇ ಸಮರ್ಪಿತವಾಗುತ್ತದೆ.   


ಸೂಚನೆ:  15/11/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.